ಆನೇಕಲ್‌ನ ಸೂರ್ಯನಗರ 4ನೇ ಹಂತದಲ್ಲಿ ಕರ್ನಾಟಕ ಗೃಹ ಮಂಡಳಿಯು 76,000 ಆಸನ ಸಾಮರ್ಥ್ಯದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾಮಗಾರಿಗೆ ಚಾಲನೆ ನೀಡಲಿದ್ದು, ಇದು ಪೂರ್ಣಗೊಂಡರೆ ಭಾರತದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಲಿದೆ. 

ಬೆಂಗಳೂರು (ಮೇ.22): ಕರ್ನಾಟಕ ಗೃಹ ಮಂಡಳಿ ಆನೇಕಲ್ ತಾಲೂಕು ಸೂರ್ಯನಗರ 4ನೇ ಹಂತದಲ್ಲಿ ಕೆಎಚ್‌ಬಿ ಸೂರ್ಯ ಕ್ರೀಡಾ ಗ್ರಾಮದಲ್ಲಿ ನಿರ್ಮಿಸಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ನಮ್ಮ ಮನೆ’ ಯೋಜನೆಯಡಿ ನಿವೇಶನಗಳು ಹಂಚಿಕೆಗೆ ಚಾಲನೆ, ‘ಸೂರ್ಯ ಶೈನ್’ ಮತ್ತು ‘ಸೂರ್ಯ ಡಿವೈನ್’ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ, ವಸತಿ ಯೋಜನೆಗೆ ಭೂಮಿ ನೀಡಿದ ಭೂಮಾಲೀಕರಿಗೆ ಸಾಂಕೇತಿಕವಾಗಿ ನಿವೇಶನಗಳ ಹಂಚಿಕೆ, ಲಾಟರಿ ಮುಖಾಂತರ ಸಾರ್ವಜನಿಕ ಅರ್ಜಿದಾರರಿಗೆ ನಿವೇಶನಗಳನ್ನು ಇದೇ ವೇಳೆ ಹಂಚಿಕೆ ಮಾಡಲಾಗುತ್ತದೆ ಎಂದು ಕೆಎಚ್‌ಬಿ ತಿಳಿಸಿದೆ.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿ ಇನ್ನಿತರ ಗಣ್ಯರು ಉಪಸ್ಥಿತರಿರುವರು.

ಆನೇಕಲ್‌ನಲ್ಲಿ 76,000 ಸೀಟುಗಳ ಸಾಮರ್ಥ್ಯದ ಬೃಹತ್‌ ಕ್ರೀಡಾಂಗಣ:

76,000 ಸೀಟುಗಳ ಸಾಮರ್ಥ್ಯದ ನೂತನ ಕ್ರೀಡಾಂಗಣವೂ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿರಲಿದೆ. ಸ್ಟೇಡಿಯಂನ ಆಸನಗಳ ವಿನ್ಯಾಸವನ್ನು ಅಮೆರಿಕದ ಪ್ರಸಿದ್ಧ ಟೆಕ್ಸಾಸ್‌ನ ಎಟಿ ಆ್ಯಂಡ್‌ ಟಿ ಸ್ಟೇಡಿಯಂ ಹಾಗೂ ಲ್ಯೂಕಾಸ್ ಆಯಿಲ್ ಸ್ಟೇಡಿಯಂ ಮಾದರಿಯಿಂದ ಪ್ರೇರಣೆ ಪಡೆದು ರೂಪಿಸಲಾಗುತ್ತಿದೆ. ಸ್ಟೇಡಿಯಂನ ಮುಂಭಾಗದ ವಿನ್ಯಾಸ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಹಾಗೂ ಕ್ರಿಕೆಟ್ ಇತಿಹಾಸ ಬಿಂಬಿಸಲಿದೆ. ಜೊತೆಗೆ ದಿಗ್ಗಜ ಆಟಗಾರರ ನೆನಪಿಗಾಗಿ ‘ಹಾಲ್ ಆಫ್ ಫೇಮ್’ ಕೂಡ ಇರಲಿದೆ.

ಎರಡನೇ ಹಂತದಲ್ಲಿ ಒಳಾಂಗಣ ಕ್ರೀಡಾಂಗಣ, ಈಜುಕೊಳ ಮತ್ತು ಬೃಹತ್ ಸಮಾವೇಶ ಸಭಾಂಗಣ ನಿರ್ಮಾಣವಾಗಲಿದ್ದು, ಇದನ್ನು ಕೆಎಚ್‌ಬಿ ಸೂರ್ಯ ಕ್ರೀಡಾಗ್ರಾಮ ಎಂದು ಕರೆಯಲಾಗುತ್ತದೆ. ಈ ಸ್ಟೇಡಿಯಂ ಪೂರ್ಣಗೊಂಡರೆ, ಅಹಮದಾಬಾದ್‌ನ ಮೋದಿ ಸ್ಟೇಡಿಯಂ ನಂತರ ಭಾರತದ ಎರಡನೇ ಅತಿ ದೊಡ್ಡ ಹಾಗೂ ವಿಶ್ವದ ಪ್ರಮುಖ ಬೃಹತ್ ಕ್ರಿಕೆಟ್ ಕ್ರೀಡಾಂಗಣಗಳ ಪಟ್ಟಿಗೆ ಸೇರಲಿದೆ. ಬೊಮ್ಮಸಂದ್ರ ಮತ್ತು ಎಲೆಕ್ಟ್ರಾನಿಕ್ ಸಿಟಿ ಐಟಿ ಕಾರಿಡಾರ್‌ಗೆ ಹತ್ತಿರವಿರುವುದರಿಂದ ಇದು ಬೆಂಗಳೂರಿನ ಕ್ರೀಡಾ ಮೂಲಸೌಕರ್ಯಕ್ಕೆ ಹೊಸ ದಿಕ್ಸೂಚಿಯಾಗಲಿದೆ.