ಬೆಂಗಳೂರು ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರ್ಕಾರವೇ ದರ ಏರಿಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರದಿಂದ ಯಾವುದೇ ಸೂಚನೆ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು (ಫೆ.15): ಬೆಂಗಳೂರಿನ ಸಾರ್ವಜನಿಕ ಸಾರಿಗೆಗಳಲ್ಲಿ ಒಂದಾಗ ನಮ್ಮ ಮೆಟ್ರೋ ದರವನ್ನು ದುಪಟ್ಟು ಹೆಚ್ಚಳ ಮಾಡಲಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲಿಯೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಪರ ವಿರೋಧ ಚರ್ಚೆ ಆರಂಭವಾಗಿದ್ದವು. ಇದೀಗ ದರ ಏರಿಕೆಗೆ ಅಸ್ತು ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಟ್ರೋ ಸಂಬಂಧ ಎಲ್ಲ ಜವಾಬ್ದಾರಿಗಳೂ ರಾಜ್ಯ ಸರ್ಕಾರಕ್ಕೆ ಇರೋದು. ಇದು ಕರ್ನಾಟಕದಲ್ಲಿ ಮಾತ್ರ ಅಲ್ಲ, ಚೆನ್ನೈ, ದೆಹಲಿ, ತೆಲಂಗಾಣ, ಮುಂಬೈಗಳಲ್ಲೂ ಹೀಗೇ ಇರೋದು. ಮೆಟ್ರೋ ಪ್ರಾಜೆಕ್ಟ್ ಗಳು ರಾಜ್ಯ ಸರ್ಕಾರದ ಅಧೀನದಲ್ಲೇ ಬರುತ್ತವೆ. ರಾಜ್ಯ ಸರ್ಕಾರಕ್ಕೆ ಗ್ರೌಂಡ್ ರಿಯಾಲಿಟಿ ಗೊತ್ತಿರುತ್ತದೆ. ಮೆಟ್ರೋ ಕುರಿತು ಎಲ್ಲ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ರಾಜ್ಯ ಸರ್ಕಾರ ಇದೆ ಎಂದು ಹೇಳಿದರು.
ಇನ್ನು ಬೆಂಗಳೂರು ಮೆಟ್ರೋ ದರ ಏರಿಕೆ ಪ್ರಸ್ತಾವನೆ ಕೊಟ್ಟಿದ್ದೇ ರಾಜ್ಯ ಸರ್ಕಾರ. ರಾಜ್ಯ ಸರ್ಕಾರವೇ ದರ ಏರಿಕೆ ಪ್ರಸ್ತಾವನೆ ಸಿದ್ಧಪಡಿಸಿದ್ದು. ರಾಜ್ಯ ಸರ್ಕಾರ ಮೆಟ್ರೋ ಸಂಬಂಧ ಎಲ್ಲ ವಿಚಾರಗಳಿಗೂ ಕಾರಣವಾಗಿರುತ್ತದೆ. ಕೇಂದ್ರ ಸರ್ಕಾರದಿಂದ ದರ ಏರಿಕೆಗೆ ಸೂಚನೆ ಕೊಟ್ಟಿಲ್ಲ, ಇದು ತಪ್ಪು ಆರೋಪ. ಮೆಟ್ರೊ ಜವಬ್ದಾರಿ ರಾಜ್ಯ ಸರ್ಕಾರದ್ದು. ಅದು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ, ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ. ಮೆಟ್ರೋ ಪ್ರಾಜೆಕ್ಟ್ ರಾಜ್ಯ ಸರ್ಕಾರದ್ದಾಗಿರುತ್ತದೆ. ದರ ಏರಿಕೆ ಸಮಿತಿ ಇರೋದು ದೆಹಲಿಯಲ್ಲಿ ಅಲ್ಲ. ಮೆಟ್ರೋ ದರ ಏರಿಕೆ ನಾವು ಮಾಡಿದ್ದೇವೆ ಎನ್ನೋದು ತಪ್ಪು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಇದನ್ನೂ ಓದಿ: ಬೆಲೆ ಇಳಿಸೋ ನಾಟಕ ಮಾಡಿತಾ ಮೆಟ್ರೋ ನಿಗಮ? Metro Price Hike in Bangalore | Suvarna News | Kannada News
ಮೆಟ್ರೋ, ಸಬಬರ್ನ್ ರೈಲ್ವೆಗೆ ತಲಾ 15 ಸಾವಿರ ಕೋಟಿ ರೂ.: ಕರ್ನಾಟಕಕ್ಕೆ ರೈಲ್ವೆ ಅನುದಾನ ಹೆಚ್ಚಿಸಲಾಗಿದೆ. ಕರ್ನಾಟಕಕ್ಕೆ ರೈಲ್ವೆ ಅಭಿವೃದ್ಧಿಗೆ ಯುಪಿಎ ಅವಧಿಗಿಂತ 9 ಪಟ್ಟು ಹೆಚ್ಚು ಮಾಡಲಾಗಿದೆ. 51,479 ಕೋಟಿ ರೂ. ಕರ್ನಾಟಕಕ್ಕೆ ನೀಡಲಾಗಿದೆ. 654 ರೈಲ್ವೆ ಬ್ರಿಡ್ಜ್ ಅಂಡರ್ ಪಾಸ್ ಮಾಡಲಾಗಿದೆ. ಈ ಸಾಲಿನಲ್ಲಿ 7,564 ಕೋಟಿ ಅನುದಾನ ಕೊಡಲಾಗಿದೆ. ಯುಪಿಎ ಅವಧಿಯಲ್ಲಿ ಕೇವಲ 850 ಕೋಟಿ ರೂ. ಕೊಡಲಾಗುತ್ತಿತ್ತು. 51,479 ಕೋಟಿಯಷ್ಟು ರೈಲ್ವೆಯ ವಲಯದಲ್ಲಿ ಬಂಡವಾಳ ಹೂಡಲಾಗಿದೆ. ಅಮೃತ್ ಸ್ಟೇಷನ್ ಯೋಜನೆಯಡಿ 61 ರೇಲ್ವೆ ನಿಲ್ದಾಣಗಳ ಮರು ನಿರ್ಮಾಣ ಆಗಿದೆ. 1652 ಕಿ.ಮೀ ಹೊಸ ರೈಲ್ವೆ ಮಾರ್ಗದ ನಿರ್ಮಾಣ ರಾಜ್ಯದಲ್ಲಾಗಿದೆ. 10 ವಂದೇ ಭಾರತ್ ರೈಲುಗಳು ಕರ್ನಾಟಕದಲ್ಲಿ ಸಂಚರಿಸುತ್ತಿದ್ದು, ಮತ್ತಷ್ಟು ಬರಲಿವೆ. ಇನ್ನು ಬೆಂಗಳೂರಿನ ಸಬರ್ಬನ್ ರೈಲ್ವೆ ಯೋಜನೆಗೆ 15,762 ಕೋಟಿ ಕೊಡಲಾಗಿದೆ. ಮೆಟ್ರೋಗೆ 15,611 ಕೋಟಿ ರೂ. ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ನಮ್ಮ ಮೆಟ್ರೋ ದರ ಏರಿಕೆಗೆ ಜನಾಕ್ರೋಶ ಬೆನ್ನಲ್ಲೇ ಬೇಕಾಬಿಟ್ಟಿ ಬೆಲೆ ತಗ್ಗಿಸಲು ನಿರ್ಧಾರ; ನಾಳೆಯಿಂದ ಹೊಸದರ ಜಾರಿ!
ನಮ್ಮ ದೇಶದಲ್ಲಿ ಮೂರನೇ ಬಾರಿ ಮೋದಿ ನಾಯಕತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಳೆದ 60 ವರ್ಷದಲ್ಲಿ ಆಗದಿರುವ ಕೆಲಸ ನಮ್ಮ ಕಾಲದಲ್ಲಿ ಮಾಡಿದ್ದೇವೆ. ಒಂದು ಮತ್ತು ಎರಡನೇ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ದೇಶದ ಯಾವ ಭಾಗಕ್ಕೆ ಹೋದರು ಕಾಣುತ್ತದೆ. ಐಐಎಂ, ಐಐಟಿ ಇದೆಲ್ಲಾ ಮಿಡಲ್ ಕ್ಲಾಸ್ ಜನರಿಗೆ ಅನುಕೂಲ ಆಗಲಿದೆ. 12 ಲಕ್ಷದ ತನಕ ಟ್ಯಾಕ್ಸ್ ಇಲ್ಲ. ಇದು ಮಧ್ಯಮ ವರ್ಗಕ್ಕೆ ಅನುಕೂಲವಾಗಲಿದೆ. 2014ರಲ್ಲಿ ಹೇಗೆ ಆಡಳಿತ ಇತ್ತು.? ಅಟಲ್ ಬಿಹಾರಿ ವಾಜಪೇಯಿ ಅವಧಿಯ ಬಳಿಕ ಅಧಿಕಾರಕ್ಕೆ ಬಂದ ಯುಪಿಎ ಅವಧಿಯಲ್ಲಿ ಭಾರತದ ಎಕಾನಮಿ ಬಹಳ ಕೆಟ್ಟ ಸ್ಥಿತಿ ಇತ್ತು ನಿಮಗೆ ತಿಳಿದಿರಲಿ. 2014 ಎಲ್ಲಿ ಬ್ಯಾಂಕಿಂಗ್ ವಲಯ ಉತ್ತಮ ಆಗಿರಲಿಲ್ಲ. ಮೋದಿ ಅದಕ್ಕೊಂದು ರೂಪ ನೀಡಿದರು. ಪ್ರತಿ ವರ್ಷ ಹೈವೆ, ರೈಲ್ವೆ, ಏರ್ಪೋಟ್ ಅಭಿವೃದ್ಧಿ ಆಗುತ್ತಿವೆ ಎಂದು ತಿಳಿಸಿದರು.
