ಹೆಬ್ಬಾಳ-ಸರ್ಜಾಪುರ ಸಂಪರ್ಕಿಸುವ ನಮ್ಮ ಮೆಟ್ರೋದ ಕೆಂಪು ಮಾರ್ಗದ ಡಬಲ್‌ ಡೆಕ್ಕರ್‌ ವಿನ್ಯಾಸಕ್ಕೆ ಕೇಂದ್ರ ಸರ್ಕಾರ ಎರಡನೇ ಬಾರಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಈ ವಿನ್ಯಾಸವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು ಎಂದು ಕೇಂದ್ರ ಆತಂಕ ವ್ಯಕ್ತಪಡಿಸಿದೆ.

ಬೆಂಗಳೂರು (ಫೆ.13): ನಮ್ಮ ಮೆಟ್ರೋದ ಕೆಂಪು ಮಾರ್ಗಕ್ಕೆ ಕೇಂದ್ರ ಸರ್ಕಾರ 2ನೇ ಬಾರಿ ರೆಡ್‌ ಸಿಗ್ನಲ್‌ ತೋರಿದೆ.! ಹೆಬ್ಬಾಳ-ಸರ್ಜಾಪುರ ಸಂಪರ್ಕಿಸುವ ಡಬಲ್‌ ಡೆಕ್ಕರ್‌ನ (ರಸ್ತೆ ಕಂ ಮೆಟ್ರೋ ಮಾರ್ಗ) ವಿನ್ಯಾಸ ‘ಸಮೂಹ ಸಾರಿಗೆ ವ್ಯವಸ್ಥೆಯ ಉದ್ದೇಶ ದುರ್ಬಲಗೊಳಿಸಬಹುದು.’ ಹೀಗಾಗಿ ಮರುಪರಿಶೀಲಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

Add Asianetnews Kannada as a Preferred SourcegooglePreferred

ಮೆಟ್ರೋ ಟಿಕೆಟ್‌ ದರ ಏರಿಕೆ ವಿಚಾರಕ್ಕೆ ಸಂಬಂಧಿಸಿ ಕೇಂದ್ರ - ರಾಜ್ಯ ಸರ್ಕಾರಗಳ ಪರಸ್ಪರ ಆರೋಪ ತಣ್ಣಗಾಗಿಲ್ಲ. ಈ ನಡುವೆಯೇ ರಾಜ್ಯದ ಮಹತ್ವಾಕಾಂಕ್ಷಿ ಮೆಟ್ರೋ ಡಬಲ್‌ ಡೆಕ್ಕರ್‌ಗೆ ಕೇಂದ್ರ ಆಕ್ಷೇಪಿಸಿದೆ. ಇದು ಮತ್ತೊಂದು ಸುತ್ತಿನ ಕಿತ್ತಾಟಕ್ಕೆ ಕಾರಣವಾಗುವಂತಿದೆ.

ಈ ಮಾರ್ಗವು ಬೆಂಗಳೂರು ಮೆಟ್ರೋ ರೈಲು ನಿಗಮದ 3ಎ ಹಂತದ ಯೋಜನೆಯಾಗಿದೆ. ಎರಡನೇ ಬಾರಿಗೆ ಕೇಂದ್ರವು ಈ ಯೋಜನೆ ಪುನರ್‌ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. 2024ರ ಡಿಸೆಂಬರ್‌ನಲ್ಲಿ ರಾಜ್ಯ ಸಚಿವ ಸಂಪುಟವು ₹ 28,405 ಕೋಟಿ ಮೊತ್ತದ ಈ ಯೋಜನೆಯ ಡಿಪಿಆರ್‌ಗೆ ಅನುಮೋದನೆ ನೀಡಿತ್ತು. ಪ್ರತಿ ಕಿಮೀ ಗೆ ₹776.3 ಕೋಟಿ ವೆಚ್ಚದ ಈ ಯೋಜನೆ ಬೆಂಗಳೂರು ಮೆಟ್ರೋ ಇತಿಹಾಸದಲ್ಲಿ ಅತ್ಯಂತ ದುಬಾರಿಯಾಗಿತ್ತು. ಇದಕ್ಕೆ ಆಕ್ಷೇಪಿಸಿದ್ದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ವೆಚ್ಚ ಕಡಿಮೆ ಮಾಡುವಂತೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ವೆಚ್ಚದ ಅಂದಾಜನ್ನು ಮರು ಮೌಲ್ಯಮಾಪನ ಮಾಡಲು ಬಿಎಂಆರ್‌ಸಿಎಲ್ ಫ್ರೆಂಚ್ ಬಹುರಾಷ್ಟ್ರೀಯ ಸಲಹಾ ಕಂಪನಿ ಸ್ಯಸ್ಟ್ರಾವನ್ನು ನಿಯೋಜಿಸಿತ್ತು. ಈ ಕಂಪನಿ ಚೆನ್ನೈ ಸೇರಿ ಇತರೆ ಮೆಟ್ರೋವನ್ನು ಅಧ್ಯಯನ ಮಾಡಿ ಭೂಗತ ನಿಲ್ದಾಣಗಳ ಉದ್ದವನ್ನು 210 ಮೀಟರ್‌ಗಳಿಂದ 170 ಮೀಟರ್‌ಗಳಿಗೆ ಇಳಿಸಿತ್ತು. ಈ ಮೂಲಕ ಒಟ್ಟಾರೆ ಅಂದಾಜು ವೆಚ್ಚ ₹ 2,920 ಕೋಟಿ ಕಡಿಮೆಗೊಳಿಸಿ ಪುನಃ ಡಿಪಿಆರ್‌ ಸಲ್ಲಿಸಿತ್ತು. ಇದೀಗ ಮತ್ತೆ ರಾಜ್ಯ ಸರ್ಕಾರ ಸಲ್ಲಿಸಿರುವ ಡಿಪಿಆರ್‌ಗೂ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದ್ದು, ಯೋಜನೆಯನ್ನು ಸಂಪೂರ್ಣವಾಗಿ ಮರುಪರಿಶೀಲಿಸಿ ಹೊಸ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದೆ ಎನ್ನಲಾಗಿದೆ.

ಯೋಜನೆ ಮರುಪರಿಶೀಲಿಸಿ: ಸಂಸದ ಮೋಹನ್‌ ‘ಹೆಬ್ಬಾಳ-ಸರ್ಜಾಪುರ ಮೆಟ್ರೋ ಕಾರಿಡಾರ್‌ಗೆ ಕೇಂದ್ರದ ಅನುಮತಿ ಪಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈ ಯೋಜನೆಯಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಎಚ್ಚರಿಸಿದೆ. ಈ ಯೋಜನೆಯ ಕಾರ್ಯಸಾಧ್ಯತೆ, ವಿನ್ಯಾಸವನ್ನು ಬಿಎಂಆರ್‌ಸಿಎಲ್ ಮರುಪರಿಶೀಲಿಸುವಂತೆ ಪಿ.ಸಿ. ಮೋಹನ್ ‘ಎಕ್ಸ್’ ನಲ್ಲಿ ಹೇಳಿದ್ದಾರೆ.ಆಯ್ದ ಜಂಕ್ಷನ್‌ಗಳಲ್ಲಿ ಡಬಲ್ ಡೆಕ್ಕರ್ ಅನ್ನು ಸಮರ್ಥಿಸಬಹುದು. ಆದರೆ ಇಡೀ ಕಾರಿಡಾರ್‌ನಲ್ಲಿ ಅದನ್ನು ವಿಸ್ತರಿಸುವುದರಿಂದ ಸಮಾನಾಂತರ ಮೂಲಸೌಕರ್ಯ ಸೃಷ್ಟಿ, ಖಾಸಗಿ ವಾಹನ ಬಳಕೆ ಉತ್ತೇಜನ, ಮೆಟ್ರೋ ಪ್ರಯಾಣಿಕರ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ಮಾಲಿನ್ಯ ಸೇರಿ ನಿರೀಕ್ಷಿತ ಸಾಮಾಜಿಕ ಪ್ರಯೋಜನ ದುರ್ಬಲಗೊಳಿಸುವ ಅಪಾಯವಿದೆ ಎಂದು ಕೇಂದ್ರ ಹೇಳಿರುವುದಾಗಿ ಸಂಸದರು ಮಾಹಿತಿ ನೀಡಿದ್ದಾರೆ.

ಯೋಜನೆ ವಿಳಂಬಕ್ಕೆ ಕಾರಣ

22.14ಕಿಮೀ ಎತ್ತರಿಸಿದ ಮಾರ್ಗ, 14.15ಕಿಮೀ ಸುರಂಗ ಮಾರ್ಗ ಸೇರಿ ಒಟ್ಟು 36.59 ಕಿ.ಮೀ ಉದ್ದದ ಯೋಜನೆ ಇದು. ಎತ್ತರಿಸಿದ 17, ಸುರಂಗ 11 ಸೇರಿ ಒಟ್ಟು 28 ನಿಲ್ದಾಣಗಳನ್ನು ಹೊಂದಲಿದೆ. ಐಟಿ ಕಾರಿಡಾರ್ ಮತ್ತು ಉತ್ತರ ಬೆಂಗಳೂರನ್ನು ಸಂಪರ್ಕಿಸುವ ಈ ಮೆಟ್ರೋ ಮಾರ್ಗ 4 ಪ್ರಮುಖ ಇಂಟರ್‌ಚೇಂಜ್ ಮಾರ್ಗಗಳನ್ನು ಸಂಪರ್ಕಿಸಲಿದೆ. 2031ರ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತಾದರೂ ಈಗ ಕೇಂದ್ರ ಸರ್ಕಾರ ಯೋಜನೆಯ ಡಿಪಿಆರ್​​ಗೆ ಆಕ್ಷೇಪ ತೆಗೆದ ಕಾರಣ, ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಪರಿಣಾಮ ಯೋಜನಾ ವೆಚ್ಚವೂ ಹೆಚ್ಚಲಿದೆ ಎನ್ನಲಾಗಿದೆ.

ಕಳೆದ ವರ್ಷ ಅಕ್ಟೋಬರ್ ಆರಂಭದಲ್ಲಿ ಈ ಯೋಜನೆಗೆ ನಾಲ್ಕು ಪ್ಯಾಕೇಜ್‌ಗಳಲ್ಲಿ ಜಿಯೋ ಟೆಕ್ನಿಕಲ್ ಸರ್ವೆ ನಡೆಸಲು ಬಿಎಂಆರ್‌ಸಿಎಲ್‌ ₹ 6.86 ಕೋಟಿ ಮೌಲ್ಯದ ಟೆಂಡರ್‌ನ್ನು ನೀಡಿ ವರದಿ ಪಡೆದಿದೆ.

ಡಬಲ್‌ ಡೆಕ್ಕರ್‌ ಅತ್ಯುತ್ತಮ ಆಯ್ಕೆ: ಡಿಕೆ ಸಮರ್ಥನೆ

ಡಬಲ್‌ ಡೆಕ್ಕರ್‌ ಯೋಜನೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮರ್ಥಿಸಿದ್ದಾರೆ. ಬೆಂಗಳೂರಿನಲ್ಲಿ ಈಗ ರಸ್ತೆ ಅಗಲೀಕರಣ ಅತ್ಯಂತ ಕಷ್ಟ ಮತ್ತು ದುಬಾರಿ. ಹೀಗಾಗಿ ಒಂದೇ ಜಾಗದಲ್ಲಿ ಕೆಳಗೆ ರಸ್ತೆ, ಮೇಲೆ ಫ್ಲೈ ಓವರ್ ಮತ್ತು ಅದರ ಮೇಲೆ ಮೆಟ್ರೋ (ಡಬಲ್ ಡೆಕ್ಕರ್) ನಿರ್ಮಿಸುವುದು ಅತ್ಯುತ್ತಮ ಆಯ್ಕೆ ಎಂದು ಪ್ರತಿಪಾದಿಸಿದ್ದಾರೆ.

ಈ ಯೋಜನೆಯ ವೆಚ್ಚವನ್ನು ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್ 50:50 ಅನುಪಾತದಲ್ಲಿ ಹಂಚಿಕೊಳ್ಳಲಿವೆ. ಇದರಿಂದ ಕೇಂದ್ರಕ್ಕೆ ಹೆಚ್ಚಿನ ಹೊರೆಯಾಗುವುದಿಲ್ಲ. ರಸ್ತೆಯಲ್ಲಿ ಓಡಾಡುವ ವಾಹನ ಸವಾರರೇ ಬೇರೆ, ಮೆಟ್ರೋ ಬಳಸುವವರೇ ಬೇರೆ. ಫ್ಲೈ ಓವರ್ ಇರುವುದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವುದಿಲ್ಲ. ಈ ಬಗ್ಗೆ ಕೇಂದ್ರ ಸಚಿವರ ಜತೆಗೆ ಮಾತನಾಡಲಿದ್ದೇವೆ ಎಂದಿದ್ದಾರೆ.

YouTube video player