ಹೆಬ್ಬಾಳ-ಸರ್ಜಾಪುರ ನಮ್ಮ ಮೆಟ್ರೋ ಕೆಂಪು ಮಾರ್ಗದ ₹28,405 ಕೋಟಿ ವೆಚ್ಚದ ಅಂದಾಜನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚಿಸಿದೆ. 36.59 ಕಿ.ಮೀ ಉದ್ದದ ಈ ಮಾರ್ಗದಲ್ಲಿ 28 ನಿಲ್ದಾಣಗಳಿದ್ದು, ಭೂಸ್ವಾಧೀನ ಪ್ರಕ್ರಿಯೆ ಹಾಗೂ ಯೋಜನೆಯ ಮರುಮೌಲ್ಯಮಾಪನ ಈಗ ಆರಂಭವಾಗಿದೆ.

 ಬೆಂಗಳೂರು: 2024ರ ಡಿಸೆಂಬರ್‌ನಲ್ಲಿ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಪಡೆದಿದ್ದರೂ, ಹೆಬ್ಬಾಳ–ಸರ್ಜಾಪುರ ನಮ್ಮ ಮೆಟ್ರೋ ಕೆಂಪು ಮಾರ್ಗದ ಯೋಜನೆಯ ವೆಚ್ಚ ಅಂದಾಜುಗಳನ್ನು ಮತ್ತೆ ಪರಿಶೀಲನೆ ಮಾಡಿ ಎಂದು ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ವಿವರವಾದ ಯೋಜನಾ ವರದಿ (DPR) ಪ್ರಕಾರ, 36.59 ಕಿಲೋಮೀಟರ್ ಉದ್ದದ ಈ ಮೆಟ್ರೋ ಮಾರ್ಗದಲ್ಲಿ 28 ನಿಲ್ದಾಣಗಳು ನಿರ್ಮಾಣಗೊಳ್ಳಲಿದ್ದು, ಇದರ ಆರಂಭಿಕ ವೆಚ್ಚ ₹28,405 ಕೋಟಿ ಎಂದು ಅಂದಾಜಿಸಲಾಗಿದೆ. ಈ ಪ್ರಕಾರ ಲೆಕ್ಕ ಹಾಕಿದರೆ ಪ್ರತಿ ಕಿಲೋಮೀಟರ್‌ಗೆ ಸರಾಸರಿ ₹776.3 ಕೋಟಿ ವೆಚ್ಚವಾಗುತ್ತದೆ. ಆದರೆ ನಿಯಮದಂತೆ ಕೇಂದ್ರ ಸರ್ಕಾರದ 50% ಹೂಡಿಕೆ ಮಾಡಲಿದ್ದು, ಅದರ ಪಾಲು ಬಿಡುಗಡೆ ಮಾಡುವ ಮುನ್ನ, ನಿಖರ ವೆಚ್ಚ ಮೌಲ್ಯಮಾಪನ ಅಗತ್ಯವಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಹೀಗಾಗಿ ಬಿಎಮ್‌ಆರ್‌ಸಿಎಲ್ (BMRCL) ಅಧಿಕಾರಿಗಳು ಬಹಿರಂಗಪಡಿಸಿರುವ ಪ್ರಕಾರ ಈಗಾಗಲೇ ಸ್ವತಂತ್ರ ಸಲಹೆಗಾರರನ್ನು ನೇಮಿಸಿ ಮರುಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಲಾಗಿದೆ.

ಸುರಂಗ ಮಾರ್ಗದ ವಿನ್ಯಾಸ

ರೆಡ್‌ ಲೈನ್ ಮಾರ್ಗದಲ್ಲಿ 22.14 ಕಿಮೀ ಎತ್ತರಿಸಿದ ನಿಲ್ದಾಣ ಹಾಗೂ 14.45 ಕಿಮೀ ಭೂಮಿಯ ಒಳಗಿನ ಸುರಂಗ ಮಾರ್ಗಗಳು ನಿರ್ಮಾಣವಾಗಲಿವೆ. ಅಂದರೆ 11 ಸುರಂಗ, 17 ಎತ್ತರಿಸಿದ ನಿಲ್ದಾಣ ಇರಲಿದೆ. ಈ ಯೋಜನೆಗಾಗಿ ಭೂಸ್ವಾಧೀನ ಮತ್ತು ಸಂಬಂಧಿತ ವೆಚ್ಚಗಳೂ ₹8,080 ಕೋಟಿ ಎಂದು ಅಂದಾಜಿಸಿದ್ದು, ಅದರಲ್ಲಿ ₹1,224 ಕೋಟಿ ಖಾಸಗಿ ಭೂಸ್ವಾಧೀನಕ್ಕಾಗಿ ಮೀಸಲಿಡಲಾಗಿದೆ. ಯೋಜನೆಯ ನೀಲಿ ನಕಾಶೆಯಂತೆ ಒಟ್ಟಾರೆ 161.65 ಎಕರೆ ಭೂಮಿ ಸ್ವಾಧೀನಗೊಳ್ಳಬೇಕಿದ್ದು, ಇದರಲ್ಲಿ ಸರ್ಜಾಪುರ ಸರ್ಕಲ್ ಹತ್ತಿರ 55.69 ಎಕರೆ ಪ್ರದೇಶದಲ್ಲಿ ಮೆಟ್ರೋ ಡಿಪೋ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ.

ಆಸ್ತಿಗಳ ಮೇಲೆ ಪರಿಣಾಮ

ಈ ಮಾರ್ಗದ ನಿರ್ಮಾಣದಿಂದ 836 ಆಸ್ತಿಗಳು ಸ್ವಾಧೀನವಾಗುವ ನಿರೀಕ್ಷೆಯಿದ್ದು, ಅವುಗಳಲ್ಲಿ 314 ವಸತಿ ಮನೆಗಳು, 37 ವಾಣಿಜ್ಯ ಕಟ್ಟಡಗಳು ಮತ್ತು 63 ಕೈಗಾರಿಕಾ ಘಟಕಗಳು ಸೇರಿವೆ. ಪ್ರಾಥಮಿಕ ಅಧಿಸೂಚನೆ ಹೊರಬಂದ ಬಳಿಕ, ಭೂಸ್ವಾಧೀನದ ನಿಖರ ವ್ಯಾಪ್ತಿ ಹಾಗೂ ಸ್ಥಳಾಂತರದ ವಿವರಗಳು ಸ್ಪಷ್ಟವಾಗಲಿವೆ.

28 ನಿಲ್ದಾಣಗಳ ಪಟ್ಟಿ ಇಂತಿದೆ

ಪ್ರಸ್ತಾಪಿತ 28 ನಿಲ್ದಾಣಗಳು ಬೆಂಗಳೂರಿನ ಅತ್ಯಂತ ಗಿಜಿಗುಡುವ ಮತ್ತು ವ್ಯಾಪಾರಿಕ ಪ್ರದೇಶಗಳನ್ನು ಸಂಪರ್ಕಿಸಲಿವೆ. ಸರ್ಜಾಪುರ, ಸೋಮಪುರ, ದೊಮ್ಮಸಂದ್ರ, ಮುತ್ತಾನಲ್ಲೂರು ಕ್ರಾಸ್‌, ಸೂಲಿಕುಂಟೆ, ಕೊಡತಿ ಗೇಟ್‌, ಅಂಬೇಡ್ಕರ್‌ನಗರ, ಕಾರ್ಮೆಲರಾಂ, ದೊಡ್ಡಕನ್ನಳ್ಳಿ, ಕೈಕೊಂಡ್ರಹಳ್ಳಿ, ಬೆಳ್ಳಂದೂರು ಗೇಟ್‌, ಇಬ್ಬಲೂರು, ಅಗರ, ಜಕ್ಕಸಂದ್ರ, ಸಿಪಿಡಬ್ಲ್ಯುಡಿ ಕ್ವಾರ್ಟರ್ಸ್‌, ಸೇಂಟ್‌ ಜಾನ್ಸ್‌ ಆಸ್ಪತ್ರೆ, ಸುದ್ದಗುಂಟೆಪಾಳ್ಯ, ಡೇರಿ ಸರ್ಕಲ್‌, ನಿಮ್ಹಾನ್ಸ್‌, ವಿಲ್ಸನ್‌ ಗಾರ್ಡನ್‌, ಟೌನ್‌ ಹಾಲ್‌, ಕೆ.ಆರ್‌.ಸರ್ಕಲ್‌, ಚಾಲುಕ್ಯ ಸರ್ಕಲ್‌, ಪ್ಯಾಲೇಸ್‌ ಗುಟ್ಟಹಳ್ಳಿ, ಮೇಖ್ರಿ ಸರ್ಕಲ್‌, ವೆಟರ್ನರಿ ಕಾಲೇಜ್‌, ಗಂಗಾನಗರ, ಹೆಬ್ಬಾಳ. ಹೀಗೆ ಈ ಪ್ರಮುಖ ಸ್ಥಳಗಳು ಸೇರಿವೆ.

ಯಾವೆಲ್ಲಾ ನಿಲ್ದಾಣದ ಜತೆ ಇಂಟರ್‌ ಕನೆಕ್ಟ್ ಆಗಲಿದೆ

  • ಇಬ್ಬಲೂರು ನೀಲಿ ಬಣ್ಣದ ನಿಲ್ದಾಣ ಮಾರ್ಗದ ರೇಷ್ಮೆ ಮಂಡಳಿಯಿಂದ ಕೆಆರ್‌ ಪುರವರಗೆ
  • ಅಗರ ನೀಲಿ ಬಣ್ಣದ ನಿಲ್ದಾಣ ಮಾರ್ಗದ ರೇಷ್ಮೆ ಮಂಡಳಿಯಿಂದ ಕೆಆರ್‌ ಪುರವರೆಗೆ
  • ಡೇರಿ ಸರ್ಕಲ್‌ ಗುಲಾಬಿ ಬಣ್ಣದ ನಿಲ್ದಾಣ ಮಾರ್ಗದ ಕಾಳೇನ ಅಗ್ರಹಾರದಿಂದ ನಾಗವಾರವರೆಗೆ
  • ಹೆಬ್ಬಾಳ ಕಿತ್ತಳೆ-ನೀಲಿ ಬಣ್ಣದ ನಿಲ್ದಾಣ ಮಾರ್ಗದ ಕೆಂಪಾಪುರ - ಜೆಪಿ ನಗರದಿಂದ ಕೆಆರ್‌ ಪುರ - ಬೆಂಗಳೂರು ವಿಮಾನ ನಿಲ್ದಾಣದವರೆಗೆ

ಮರುಮೌಲ್ಯಮಾಪನದ ಅಗತ್ಯತೆ

ವೆಚ್ಚದ ನಿರಂತರ ಏರಿಕೆ ಮತ್ತು ಸ್ವತಂತ್ರ ದೃಢೀಕರಣದ ಅವಶ್ಯಕತೆ ಹಿನ್ನೆಲೆ, ಕೇಂದ್ರ ಸರ್ಕಾರ ಈ ಯೋಜನೆಯ ಮರುಮೌಲ್ಯಮಾಪನ ಪ್ರಕ್ರಿಯೆ ಮಾಡಲು ಒತ್ತಾಯಿಸಿದೆ. ತಜ್ಞರ ಪ್ರಕಾರ, ಇದು ಯೋಜನೆ ಮುಂದುವರಿಯಲು ಅತ್ಯಂತ ಮುಖ್ಯ ಹಂತವಾಗಿದೆ. ಹೆಬ್ಬಾಳ–ಸರ್ಜಾಪುರ ರೆಡ್‌ ಲೈನ್ ಪೂರ್ಣಗೊಂಡ ನಂತರ, ಇದು ದಕ್ಷಿಣ–ಉತ್ತರ ಬೆಂಗಳೂರು ನಡುವೆ ದೈನಂದಿನ ಸಂಚಾರ ಸುಗಮವಾಗುವುದಲ್ಲದೆ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ.