ಬೆಂಗಳೂರಿನ ಆರ್‌.ವಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ, ನಿಗದಿತ ಸಮಯಕ್ಕಿಂತ ಮುಂಚಿತವಾಗಿ ರೈಲು ಬಿಡಲು ಒತ್ತಾಯಿಸಿ ಪ್ರಯಾಣಿಕರ ಗುಂಪೊಂದು ರೈಲನ್ನು ತಡೆದು ಪ್ರತಿಭಟನೆ ನಡೆಸಿದೆ. ಈ ಗಲಾಟೆಯಿಂದಾಗಿ ಹಳದಿ ಮಾರ್ಗದ ಮೆಟ್ರೋ ಸಂಚಾರವು ಸುಮಾರು ಅರ್ಧ ಗಂಟೆಗಳ ಕಾಲ ವಿಳಂಬ. ಪ್ರತಿಭಟನಾಕಾರರ ವಿರುದ್ಧ ಎಫ್‌ಐಆರ್‌

ಬೆಂಗಳೂರು (ನ.19): ನಗರದ ಆರ್‌.ವಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ನಿಗದಿತ ಅವಧಿಗಿಂತ ಮೊದಲೇ ರೈಲು ಆರಂಭಿಸಲು ಒತ್ತಾಯಿಸಿ ಸುಮಾರು 15 ಜನರ ಗುಂಪು ರೈಲನ್ನು ತಡೆದು ಗಲಾಟೆ ಮಾಡಿದ್ದರಿಂದ ಹಳದಿ ಮೆಟ್ರೋ ಮಾರ್ಗದ ಸಂಚಾರ ಅರ್ಧ ಗಂಟೆ ವಿಳಂಬವಾದ ಘಟನೆ ಸೋಮವಾರ ನಡೆದಿದೆ.

ಯೆಲ್ಲೋ ಮೆಟ್ರೋದಲ್ಲಿ ನಡೆದ ಘಟನೆ:

ರಾಷ್ಟ್ರೀಯ ವಿದ್ಯಾಲಯ ಹಳದಿ ಮೆಟ್ರೋ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಹೊರಡಬೇಕಿದ್ದ ರೈಲು 6.35ಕ್ಕೆ ಹೊರಟಿತು. ಇದರಿಂದ ಹಳದಿ ಮಾರ್ಗದ ಉಳಿದ ಪ್ರಯಾಣಿಕರು ತೊಂದರೆಗೀಡಾದರು. ರೈಲು ತಡೆದ ಗುಂಪಿನ ವಿರುದ್ಧ ಬೆಂಗಳೂರು ಮೆಟ್ರೋ ರೈಲು ನಿಗಮ ಜಯನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಹಸಿರು ಮಾರ್ಗದ ಮೂಲಕ ಬಂದ ಪ್ರಯಾಣಿಕರು ಹಳದಿ ಮಾರ್ಗದ ಪಥ ಬದಲಾವಣೆಗಾಗಿ ಕಾಯುತ್ತಿದ್ದರು. ಈ ಪ್ರಯಾಣಿಕರ ಪೈಕಿ ಸುಮಾರು 10-15 ಜನರ ಗುಂಪು ಹಳದಿ ಮಾರ್ಗದಲ್ಲಿ ರೈಲು ಬರದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ನಿಗದಿತ 6 ಗಂಟೆಗೆ ಪ್ಲಾಟ್‌ಫಾರ್ಮ್‌ ನಂ. 3 ರಿಂದ ಬೊಮ್ಮಸಂದ್ರ ಕಡೆಗೆ ಹೊರಡಲು ರೈಲು 5.55ಕ್ಕೆ ಬಂದಿದೆ. ಆದರೆ, ಜನರ ಗುಂಪು ಮೆಟ್ರೋ ರೈಲು ಸಂಚರಿಸಲು ಬಿಡದೇ ಬಾಗಿಲಿನಲ್ಲಿ ಕಾಲಿಟ್ಟು ಅಡಚಣೆ ಮಾಡಿ ತಡೆದಿದ್ದಾರೆ.

ಈ ವೇಳೆ ಟ್ರೈನ್‌ ಆಪರೇಟರ್ ಬಂದು ರೈಲು ಚಾಲನೆಗೆ ಅನುವು ಮಾಡಿಕೊಡುವಂತೆ ಕೇಳಿದರೂ ರೈಲು ಬಾಗಿಲು ಮುಚ್ಚಲು ಬಿಟ್ಟಿಲ್ಲ. ಸ್ಟೇಷನ್ ನಿಯಂತ್ರಕರು, ಭದ್ರತಾ ಸಿಬ್ಬಂದಿ ಮನವೊಲಿಸಿದರೂ ಮಾತು ಕೇಳಿಲ್ಲ. ಅಂತಿಮವಾಗಿ ಸ್ಥಳಕ್ಕೆ ಪೊಲೀಸರು ಬಂದು ರೈಲಿನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಬಿಎಂಆರ್‌ಸಿಎಲ್‌ ಎಫ್‌ಐಆರ್

ಈ ನಡುವೆ ಬಿಎಂಆರ್‌ಸಿಎಲ್‌ ಪ್ರಯಾಣಿಕರ ಅನುಕೂಲಕ್ಕೆ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಲ್ಲಿ ಶಾರ್ಟ್‌ಲೂಪ್‌ ರೈಲನ್ನು ಸಂಚರಿಸಿ ಪ್ರಯಾಣಿಕರಿಗೆ ಉಂಟಾಗುತ್ತಿದ್ದ ತೊಂದರೆ ನಿವಾರಿಸುವ ಪ್ರಯತ್ನ ಮಾಡಿದೆ. ಮೆಟ್ರೋ ರೈಲು ಕಾರ್ಯಾಚರಣೆ ತಡೆಯುವುದು 2002ರ ಮೆಟ್ರೋ ನಿಯಮಾವಳಿ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಸಜೆ-ದಂಡ ವಿಧಿಸಲು ಅವಕಾಶವಿದೆ. ಪ್ರಯಾಣಿಕರು ಇಂತದ್ದಕ್ಕೆ ಮುಂದಾಗಬಾರದು ಎಂದು ಎಚ್ಚರಿಕೆ ನೀಡಿದೆ.