ಬೆಂಗಳೂರಿನ ಹಳದಿ ಮಾರ್ಗದ ಮೆಟ್ರೋವನ್ನು 10 ರಿಂದ 12 ಕಿ.ಮೀ. ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ಬೊಮ್ಮಸಂದ್ರದಿಂದ ಚಂದಾಪುರ ಅಥವಾ ಹೊಸೂರಿನವರೆಗೆ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ಪ್ರಯಾಣಿಕರ ದಟ್ಟಣೆ ನಿವಾರಣೆಯಾಗಲಿದೆ.

ಬೆಂಗಳೂರು (ಆ.21): ಬೆಂಗಳೂರಿನ ದಕ್ಷಿಣ ಭಾಗದ ಜನರಿಗೆ ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆಯಾದ ಬೆನ್ನಲ್ಲೇ ಮತ್ತೊಂದು ಸಿಹಿಸುದ್ದಿ ದೊರಕಿದೆ. ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಮತ್ತು ಮತ್ತಷ್ಟು ಜನರಿಗೆ ಅನುಕೂಲ ಕಲ್ಪಿಸಲು ಹಳದಿ ಮಾರ್ಗದ ಮೆಟ್ರೋ ಲೈನ್ ಅನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದು, ಈಗಾಗಲೇ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಚರಿಸುತ್ತಿರುವ ಹಳದಿ ಮಾರ್ಗವನ್ನು ಸುಮಾರು 10 ರಿಂದ 12 ಕಿಲೋಮೀಟರ್‌ನಷ್ಟು ವಿಸ್ತರಿಸಲು ಯೋಜಿಸಲಾಗಿದೆ. ಹೆಚ್ಚುವರಿ ವಿಸ್ತರಣೆಗಾಗಿ ಡಿಪಿಆರ್ (ವಿವರವಾದ ಯೋಜನಾ ವರದಿ) ಸಿದ್ಧಪಡಿಸಲಾಗುತ್ತಿದೆ.

ಪ್ರಸ್ತುತ, ಹಳದಿ ಮಾರ್ಗದಲ್ಲಿ ನಿತ್ಯ 60 ಸಾವಿರಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದಾರೆ. ಈ ಮಾರ್ಗವನ್ನು ಬೊಮ್ಮಸಂದ್ರದಿಂದ ಮುಂದಕ್ಕೆ ಚಂದಾಪುರ ಅಥವಾ ಹೊಸೂರಿನವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಇದು ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾಗುತ್ತಿರುವ ನಿರ್ಧಾರವಾಗಿದೆ. ಮೆಟ್ರೋ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದ ಇನ್ನಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಸ್ತರಣೆಯಿಂದ ಬೆಂಗಳೂರು-ಹೊಸೂರು ಸಂಪರ್ಕ ಮತ್ತಷ್ಟು ಸುಗಮಗೊಳ್ಳುವ ಸಾಧ್ಯತೆ ಇದೆ.