ಪಡಿತರ ಚೀಟಿದಾರರಿಗೆ ಇ-ಕೆವೈಸಿ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಸೈಬರ್ ವಂಚಕರು ನಕಲಿ ಲಿಂಕ್ ಕಳುಹಿಸಿ ಹಣ ದೋಚುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದು, ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಸೂಚಿಸಿದ್ದಾರೆ. ಅಲ್ಲದೆ, ಇ-ಕೆವೈಸಿ ಗಡುವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಲಾಗಿದೆ.
ಬೆಂಗಳೂರು (ಸೆ.28): ರಾಜ್ಯದ ಪಡಿತರ ಚೀಟಿದಾರರಿಗೆ (Ration Card) ಇ-ಕೆವೈಸಿ (e-KYC) ಮಾಡಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ, ಇದೀಗ ಸೈಬರ್ ವಂಚಕರು (Cyber Criminals) ಜನಸಾಮಾನ್ಯರನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಇ-ಕೆವೈಸಿ ಮಾಡಲು ಪರದಾಡುತ್ತಿರುವ ಜನರಿಗೆ ನಕಲಿ ಲಿಂಕ್‌ಗಳನ್ನು ಕಳುಹಿಸಿ ಹಣ ದೋಚುವ ಜಾಲ ಸಕ್ರಿಯಗೊಂಡಿದೆ.
ನೀವು ನಿಮ್ಮ ರೇಷನ್ ಕಾರ್ಡ್‌ನ 'ಇ-ಕೆವೈಸಿ (e-KYC) ಪೂರ್ಣಗೊಳಿಸದಿದ್ದರೆ ನಿಮ್ಮ ಪಡಿತರ ಚೀಟಿ ರದ್ದಾಗುತ್ತದೆ' ಎಂದು ಮೊಬೈಲ್‌ಗೆ ಬರುವ ನಕಲಿ ಸಂದೇಶಗಳು ಹಾಗೂ ಲಿಂಕ್‌ಗಳ ಬಗ್ಗೆ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸೈಬರ್ ಕಳ್ಳರ ಬಲೆಗೆ ಬೀಳದಿರಲು ಪೊಲೀಸರ ಪ್ರಮುಖ ಸಲಹೆಗಳು:
- ಅಪರಿಚಿತ ಲಿಂಕ್‌ಗಳ ಮೂಲಕ ಎಂದಿಗೂ ಇ-ಕೆವೈಸಿ ಮಾಡಬೇಡಿ.
- OTP, UPI PIN, ಬ್ಯಾಂಕ್ ಖಾತೆ ಅಥವಾ ಕಾರ್ಡ್ ವಿವರಗಳನ್ನು ಯಾರಿಗೂ ಫೋನ್ ಮೂಲಕ ನೀಡಬೇಡಿ.
- ಯಾವುದೇ ಅಪರಿಚಿತ APK ಫೈಲ್‌ಗಳು ಅಥವಾ ಸ್ಕ್ರೀನ್-ಶೇರಿಂಗ್ ಆ್ಯಪ್‌ಗಳನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಡಿ.
- ಇ-ಕೆವೈಸಿ ಮಾಹಿತಿಯನ್ನು ಕೇವಲ ಅಧಿಕೃತ ಸರ್ಕಾರಿ ಮೂಲಗಳು ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಪರಿಶೀಲಿಸಿ.
- ಲಿಂಕ್ ಅನ್ನು ಓಪನ್ ಮಾಡುವ ಮೊದಲು ನಿಲ್ಲಿಸಿ, ಪರಿಶೀಲಿಸಿ ಮತ್ತು ಸುರಕ್ಷಿತವಾಗಿರಿ.
ಇ-ಕೆವೈಸಿ ಮಾಡಲು ಅಕ್ಟೋಬರ್ 20 ರವರೆಗೆ ಗಡುವು ವಿಸ್ತರಣೆ!
ಇತ್ತೀಚೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಪಡಿತರ ಚೀಟಿಯ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ತೆರಳಿದ ಜನರಿಗೆ ತಾಂತ್ರಿಕ ಅಡಚಣೆಗಳು ಹಾಗೂ ಸರ್ವರ್ ಸಮಸ್ಯೆ ಎದುರಾಗಿತ್ತು. ಗಂಟೆಗಟ್ಟಲೆ ಸರತಿಯಲ್ಲಿ ನಿಂತರೂ ಕೆಲಸವಾಗದೆ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದರು. ಈ ವಿಷಯ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳ ಮೂಲಕ ಸರ್ಕಾರದ ಗಮನಕ್ಕೆ ಬಂದ ತಕ್ಷಣ, ಸಚಿವ ರಿಜ್ವಾನ್ ಅರ್ಷದ್ ಅವರು ತುರ್ತು ಆದೇಶ ಹೊರಡಿಸಿದ್ದಾರೆ.
'ಜನರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸುವುದು ಸರ್ಕಾರದ ಆದ್ಯ ಕರ್ತವ್ಯ. ತಾಂತ್ರಿಕ ಕಾರಣಗಳಿಂದ ರಾಜ್ಯದ ಯಾವುದೇ ಬಡ ಕುಟುಂಬವೂ ತನ್ನ ಹಕ್ಕಿನ ಆಹಾರಾನ್ನದಿಂದ ವಂಚಿತವಾಗಬಾರದು' ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಫಲಾನುಭವಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇ-ಕೆವೈಸಿ ಪೂರ್ಣಗೊಳಿಸಲು ಇದ್ದ ಅಂತಿಮ ಗಡುವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಲಾಗಿದೆ. ತಾಂತ್ರಿಕ ಸಮಸ್ಯೆಯನ್ನು ತಕ್ಷಣವೇ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಐಟಿ ತಂಡಕ್ಕೆ ಸೂಚಿಸಲಾಗಿದ್ದು, ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಸರಳವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.


