ಬೆಂಗಳೂರಿನಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಇಂಜಿನಿಯರ್ ಮನೆಯಲ್ಲಿ ಲಕ್ಷಾಂತರ ರೂ. ಹಣ, ಚಿನ್ನಾಭರಣ ಪತ್ತೆಯಾಗಿದೆ. ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ ಮುಂದುವರೆದಿದೆ.
ಬೆಂಗಳೂರು (ಮಾ.06): ರಾಜ್ಯ ಸರ್ಕಾರದ ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಚೀಫ್ ಇಂಜಿನಿಯರ್ ನಂಜುಂಡಪ್ಪ ಮನೆಯ ಮೇಳೆ ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಬರೋಬ್ಬರಿ ಬರೋಬ್ಬರಿ 60 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕೆಜಿಗಟ್ಟಲೆ ಬೆಳ್ಳಿ ಹಾಗೂ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.
ಡಿಪಿಎಆರ್ ಚೀಫ್ ಇಂಜಿನಿಯರ್ ನಂಜುಂಡಪ್ಪ ಅವರ ಬಸವೇಶ್ವರ ನಗರದಲ್ಲಿರುವ ಮನೆಗೆ ಒಟ್ಟು 14 ಜನ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ದಾಳಿ ವೇಳೆ ಅಧಿಕಾರಿ ನಂಜುಂಡಪ್ಪ ಮನೆಯಲ್ಲಿಯೇ ಇದ್ದರು. ಈ ದಾಳಿಯ ವೇಳೆ ಮನೆಯಲ್ಲಿ ಮದ್ಯದ ಬಾಟಲ್ ಗಳು ಪತ್ತೆಯಾಗಿದ್ದವು. ಮನೆಯಲ್ಲಿ ಮದ್ಯದ ಬಾಟಲ್ ಗಳು ಪತ್ತೆಯಾದ ಬೆನ್ನಲ್ಲೇ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು. ಹೀಗಾಗಿ, ನಂಜುಂಡಪ್ಪ ಮನೆಗೆ ಎರಡು ಜೀಪ್‌ಗಲ್ಲಿ ಬಂದ ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದರು. ಮಿತಿಗಿಂತ ಹೆಚ್ಚಾಗಿದ್ದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ನಂಜುಂಡಪ್ಪ ನಿವಾಸದಲ್ಲಿ ಲೋಕಾಯುಕ್ತ ದಾಳಿಯ ವೇಳೆ ನಂಜುಂಡಪ್ಪ ಸಾಕಷ್ಟು ಆಸ್ತಿ ಪತ್ತೆಯಾಗಿದೆ. ಬರೋಬ್ಬರಿ 51.38 ಲಕ್ಷ ರೂ. ಮೌಲ್ಯದ 841.49 ಗ್ರಾಂ ಚಿನ್ನ ಪತ್ತೆಯಾಗಿದೆ. 4.66 ಲಕ್ಷ ಮೌಲ್ಯದ 5 ಕೆಜಿ 936 ಗ್ರಾಂ ಬೆಳ್ಳಿ ಪತ್ತೆಯಾಗಿದೆ. 3,91,079 ರೂ. ನಗದು ಹಾಗೂ 60 ಸಾವಿರ ರೂ. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಒಟ್ಟಾರೆಯಾಗಿ 60,56,557 ರೂ. ಮೌಲ್ಯದ ವಸ್ತುಗಳು ಹಾಗೂ ನಗದು ಪತ್ತೆಯಾಗಿದೆ. ಇದರ ಜೊತೆಗೆ, ಸ್ತಿರಾಸ್ತಿಯ ಭಾಗವಾಗಿ 39 ಲಕ್ಷ ರೂ. ಮೌಲ್ಯದ ನಾಲ್ಕು ಕಾರುಗಳು ಹಾಗೂ 5 ಕೋಟಿ ಮೌಲ್ಯದ 2 ಮನೆಗಳು ಪತ್ತೆಯಾಗಿವೆ.
ಇದನ್ನೂ ಓದಿ: ತುಮಕೂರು: ಲಂಚ ಕೇಳಿದ ಭ್ರಷ್ಟ ಅಧಿಕಾರಿಯ ಟೇಬಲ್ ಮೇಲೆ ಚಿಲ್ಲರೆ ಸುರಿದು ಪ್ರತಿಭಟಿಸಿದ ರೈತರು!
ರಾಜ್ಯದಾದ್ಯಂತ 8 ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
- ಡಿಪಿಎಆರ್ ಚೀಫ್ ಇಂಜಿನಿಯರ್ ಟಿಡಿ ನಂಜುಂಡಪ್ಪ.
- ಕ್ವಾಲಿಟಿ ಕಂಟ್ರೋಲ್ ಹಾಗೂ ಕ್ವಾಲಿಟಿ ಅಶ್ಯುರೇನ್ಸ್ ನ ಬಿಬಿಎಂಪಿ ಎಕ್ಸೀಕ್ಯೂಟಿವ್ ಇಂಜಿನಿಯರ್ ಹೆಚ್.ಬಿ ಕಲ್ಲೇಶಪ್ಪ.
- ಕೋಲಾರ ಟೌನ್ ಬೆಸ್ಕಾಂ ಎಇಇ ಜಿ ನಾಗರಾಜ್.
- ಕರುಬುರುಗಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೂನಿಟ್ ನ ಅಧಿಕಾರಿ ಜಗನ್ನಾಥ.
- ದಾವಣಗೆರೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗದ ಡಿಸ್ಟಿಕ್ ಸ್ಟ್ಯಾಟಿಕಲ್ ಆಧಿಕಾರಿ ಜಿ.ಎಸ್. ನಾಗರಾಜು.
- ತುಮಕೂರು ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಚೀಫ್ ಮೆಡಿಕಲ್ ಆಫೀಸರ್ ಡಾ.ಜಗದೀಶ್.
- ಬಾಗಲಕೋಟೆ ಜಿಲ್ಲೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಎಫ್ ಡಿಎ ಮಲ್ಲಪ್ಪ ಸಾಬಣ್ಣ.
- ವಿಜಯಪುರ ಹೌಸಿಂಗ್ ಬೋರ್ಡ್ ಎಫ್ ಡಿ ಎ ಶಿವಾನಂದ್ ಶಿವಶಂಕರ್ ಕಂಬಾವಿ.
ಇದನ್ನೂ ಓದಿ: ಮೈಸೂರಲ್ಲಿ ಜನನ, ಪ್ಯಾರಿಸ್‌ನಲ್ಲಿ ಪ್ರೇಮ; ಬೆಂಜ್ ಕಾರು ಕೊಡಿಸದ್ದಕ್ಕೆ ತಾಳಿ ಕಟ್ಟದೆ ಓಡಿಹೋದ ಅಳಿಮಯ್ಯ!
ಒಟ್ಟು 8 ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಎಲ್ಲ ವಸ್ತುಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇದೀಗ ಬೆಂಗಳೂರಿನ ಅಧಿಕಾರಿ ನಂಜುಂಡಪ್ಪ ಮನೆಯಲ್ಲಿನ ವಸ್ತುಗಳ ಮಾಹಿತಿ ಮಾತ್ರ ಲಭ್ಯವಾಗಿದೆ.
