2019ರ ಭೀಕರ ಮಳೆಗೆ ಮನೆ-ಮಠ ಕಳೆದುಕೊಂಡ ಚಿಕ್ಕಮಗಳೂರಿನ ಮೂಡಿಗೆರೆ ಸಂತ್ರಸ್ತರು ಆರು ವರ್ಷಗಳಿಂದ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ ಕೇರಳಿಗರಿಗೆ ವಸತಿ ಕಲ್ಪಿಸಲು ಸರ್ಕಾರ ತೋರುತ್ತಿರುವ ಆಸಕ್ತಿಯು, ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂಬ ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.30): ಸರ್ಕಾರ ಬೆಂಗಳೂರಿನ ಕೋಗಿಲುನಲ್ಲಿರುವ ಕೇರಳಿಗರ ಮೇಲೆ ತೋರುತ್ತಿರುವ ಪ್ರೀತಿ-ಕಾಳಜಿಯನ್ನ ಮಲೆನಾಡಿಗರ ಮೇಲೆ ಏಕೆ ತೋರುತ್ತಿಲ್ಲ ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನೆರೆ ಸಂತ್ರಸ್ತರು ಪ್ರಶ್ನೆ ಮಾಡುತ್ತಿದ್ದಾರೆ.2019ರಲ್ಲಿ ಮನೆ ಕೃಷಿಭೂಮಿ ಗ್ರಾಮದ ದೇವಸ್ಥಾನಗಳನ್ನು ಕಳೆದುಕೊಂಡ ಜನರಿಗೆ ಸರ್ಕಾರ ಈವರೆಗೂ ಮನೆ , ಪರ್ಯಾಯ ಕೃಷಿ ಭೂಮಿಯನ್ನು ಕೊಡಲು ಮನಸ್ಸು ಮಾಡುತ್ತಿಲ್ಲ ಇದರ ನಡುವೆ ಅಕ್ರಮವಾಗಿ ಬಂದು ನೆಲೆಸಿದ ಜನರಿಗೆ ವಸತಿ ಕಲ್ಪಿಸಲು ಮುಂದಾಗಿರುವ ಸರ್ಕಾರದ ಕ್ರಮ ಇದೀಗ ಮಲೆನಾಡಿನಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ
ಸರ್ಕಾರದ ವಿರುದ್ದ ಆಕ್ರೋಶ :
ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ-ಮುದುಗುಂಡಿ ಗ್ರಾಮದ ಜನ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 2019ರ ಆಗಸ್ಟ್ 9 ರಂದು ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ತಪ್ಪಲಿನಲ್ಲಿ ಒಂದೇ ರಾತ್ರಿಗೆ 22 ಇಂಚು ಮಳೆ ಸುರಿದಿತ್ತು. ಇದರಿಂದ ಮಲೆಮನೆ-ಮುದುಗುಂಡಿ ಗ್ರಾಮಗಳು ಗುಡ್ಡದ ಮಣ್ಣು ಕುಸಿದು ಸಂಪೂರ್ಣ ನಾಶವಾಗಿದ್ದವು. ಶತಮಾನದ ಬದುಕು ಕಣ್ಣೆದುರೇ ಕೊಚ್ಚಿ ಹೋಗಿ ಮನೆಯ ಒಂದು ಸಣ್ಣ ಚಮಚ ಕೂಡ ಸಿಕ್ಕಿರಲಿಲ್ಲ. ಅಂದಿನಿಂದಲೂ ಜನ ಸರಕಾರಕ್ಕೆ-ಶಾಸಕರಿಗೆ-ಅಧಿಕಾರಿಗಳಿಗೆ ಮನವಿ ಮಾಡ್ತಾನೆ ಇದ್ದಾರೆ. ಆದರೆ, ಕಣ್ಣೀರು ಇಂದಿಗೂ ಸರ್ಕಾರಕ್ಕೆ ಕಂಡಿಲ್ಲ. ಅಂದಿನ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ , ವಿಪಕ್ಷ ನಾಯಕ ಸಿದ್ದರಾಮಯ್ಯ ಮೂಡಿಗೆರೆ , ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಭರವಸೆಯನ್ನು ಕೂಡ ಕೊಟ್ಟಿದ್ರು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೂ ವಿಪಕ್ಷ ನಾಯಕರಾಗಿ ನೀಡಿದ್ದ ಭರವಸೆ ಈವರೆಗೂ ಕೂಡ ನೆನಪಾಗಿಲ್ಲ, ಬದಲಿ ಮನೆ ,ಕೃಷಿ ಭೂಮಿ ನೀಡುವಲ್ಲಿ ಸರ್ಕಾರ ,ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ.ಆದ್ರೀಗ, ಕೇರಳಿಗರ ಮೇಲೆ ಒಂದೇ ರಾತ್ರಿಗೆ ಸರ್ಕಾರಕ್ಕೆ ಬಂದಿರೋ ಪ್ರೀತಿ ಕಂಡು ಮಲೆನಾಡಿಗರು ರೆಬಲ್ ಆಗಿದ್ದಾರೆ.ಆರು ವರ್ಷದಿಂದ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ. ನಮ್ಮ ನೋವಿನ ಕೂಗು ಸರ್ಕಾರಕ್ಕೆ ಏಕೆ ಕೇಳಿಲ್ಲ ಎಂದು ಕಿಡಿಕಾರಿದ್ದಾರೆ.
ಬ್ಲ್ಯಾಕ್ ಡೇ ಆಚರಿಸಿದರೂ ನೋ ಯೂಸ್ :
ಕೇರಳಿಗರಿಗೆ ತಕ್ಷಣ ಸ್ಪಂದಿಸಿ ಮನೆ ಕಟ್ಟಿಕೊಡಲು ಮುಂದಾಗಿರುವ ಸರ್ಕಾರಕ್ಕೆ ಆರು ವರ್ಷಗಳಿಂದ ಸ್ವಂತ ಸೂರಿಲ್ಲದೆ ಅಲೆಯುತ್ತಿರುವ ತನ್ನದೇ ರಾಜ್ಯದ ಮಲೆನಾಡಿಗರ ಅಳಲು ಕೇಳಿಸುತ್ತಿಲ್ಲವೇ ಎಂಬ ಆಕ್ರೋಶ ವ್ಯಕ್ತವಾಗಿದೆ. ಒಂದೇ ರಾತ್ರಿ ಸುರಿದ ಮಳೆಗೆ 11 ಮನೆಗಳು ಹಾಗೂ 2 ದೇವಸ್ಥಾನಗಳು ನೆಲಸಮವಾಗಿದ್ದವು. ದುರಂತದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಮಂತ್ರಿಗಳಾದ ಮಾಧುಸ್ವಾಮಿ, ಸಿ.ಟಿ.ರವಿ ಮತ್ತು ಆರ್. ಅಶೋಕ್ ಮನೆ-ಜಾಗ ಹಾಗೂ ಬಾಡಿಗೆ ನೀಡುವುದಾಗಿ ಭರವಸೆಗಳ ನೀಡಿದ್ದರು. ಆದರೆ ಕಳೆದ ಆರು ವರ್ಷಗಳಲ್ಲಿ ಸರ್ಕಾರದಿಂದ ಸಂತ್ರಸ್ತರಿಗೆ ಸಿಕ್ಕಿದ್ದು ಕೇವಲ ಐದು ತಿಂಗಳ ಬಾಡಿಗೆ ಮತ್ತು ಕೆಲವರಿಗೆ ಕೇವಲ ಒಂದು ಲಕ್ಷ ಹಣವಷ್ಟೆ. ಅಂದು ಬೀದಿಗೆ ಬಿದ್ದವರು ಪ್ರತಿ ಸರ್ಕಾರದ ಶಾಸಕರು-ಅಧಿಕಾರಿಗಳು-ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ನೋ ಯೂಸ್. ಮಲೆನಾಡಿಗರು ಅಂದಿನ ಆಗಸ್ಟ್ 9ನೇ ತಾರೀಖನ್ನ ಬ್ಲ್ಯಾಕ್ ಡೇ ಎಂದೇ ಸ್ಮರಿಸುತ್ತಿದ್ದಾರೆ. ತಮ್ಮದೇ ನಾಡಿನ ನಿರಾಶ್ರಿತರು ಕಳೆದ ಆರು ವರ್ಷಗಳಿಂದ ಮನೆಗಾಗಿ ಅಂಗಲಾಚುತ್ತಿದ್ದರೂ ಸ್ಪಂದಿಸದ ಸರ್ಕಾರ, ಈಗ ಕೇರಳಿಗರ ಮೇಲೆ ತೋರುತ್ತಿರುವ ಅತಿಯಾದ ಪ್ರೀತಿ ಕಾಫಿನಾಡಿನ ಸಂತ್ರಸ್ತರ ಕೆಂಗಣ್ಣಿಗೆ ಗುರಿಯಾಗಿದೆ.


