Asianet Suvarna News Asianet Suvarna News

Bengaluru News : ಜಾಲಹಳ್ಳಿ ಕ್ರಾಸ್‌ ಕೆಳಸೇತುವೆ ಕಾಮಗಾರಿ 3 ತಿಂಗಳಲ್ಲಿ ಶುರು

ಕಳೆದ ಮೂರು ನಾಲ್ಕು ವರ್ಷಗಳಿಂದ ಭೂಸ್ವಾಧೀನ ಪ್ರಕ್ರಿಯೆಯಿಂದ ನೆನೆಗುದಿಗೆ ಬಿದ್ದಿದ್ದ ಜಾಲಹಳ್ಳಿ ಕ್ರಾಸ್‌ ಕೆಳಸೇತುವೆ ಕಾಮಗಾರಿ 3 ತಿಂಗಳಲ್ಲಿ ಶುರುವಾಗಲಿದೆ. 

Bengaluru Jalahalli cross underbridge work to start in 3 months rav
Author
Bengaluru, First Published Aug 8, 2022, 7:28 AM IST

ಬೆಂಗಳೂರು (ಆ.8) : ಕಳೆದ ಮೂರು ವರ್ಷದಿಂದ ಭೂಸ್ವಾಧೀನ ಪ್ರಕ್ರಿಯೆಯಿಂದ ನೆನೆಗುದಿಗೆ ಬಿದ್ದಿರುವ ಜಾಲಹಳ್ಳಿ ಕ್ರಾಸ್‌ ಜಂಕ್ಷನ್‌ನ ಅಂಡರ್‌ ಪಾಸ್‌ ನಿರ್ಮಿಸುವ ಕಾಮಗಾರಿ ಇನ್ನೂ ಮೂರು ತಿಂಗಳಲ್ಲಿ ಆರಂಭಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ 4ರ ಜಾಲಹಳ್ಳಿ ಕ್ರಾಸ್‌(Jalahalli Cross) ಜಂಕ್ಷನ್‌ ಬಳಿ ಭಾರೀ ಪ್ರಮಾಣ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಪೀಣ್ಯ ಕೈಗಾರಿಕಾ ಪ್ರದೇಶ ಎರಡನೇ ಹಂತದ ರಿಂಗ್‌ ರಸ್ತೆ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸುಬ್ರತೋ ಮುಖರ್ಜಿ ರಸ್ತೆ (ಎಂ.ಎಸ್‌.ರಸ್ತೆ)ಯಲ್ಲಿ ಸಾರ್ವಜನಿಕರು ಪ್ರತಿನಿತ್ಯ ಭಾರೀ ಸಂಚಾರ ದಟ್ಟನೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ 57 ಕೋಟಿ ರು. ಅನುದಾನದಲ್ಲಿ ಗ್ರೇಡ್‌ ಸಪರೇಟರ್‌ (ಅಂಡರ್‌ ಪಾಸ್‌) ನಿರ್ಮಿಸುವ ಕಾಮಗಾರಿ ಕೈಗೊಳ್ಳುವುದಕ್ಕೆ ತೀರ್ಮಾನಿಸಿತ್ತು.

Bengaluru News: ವಾಹನ ಸವಾರರನ್ನು ಅನಾವಶ್ಯಕ ತಡೆದು ನಿಲ್ಲಿಸದಂತೆ ಡಿಜಿ & ಐಜಿಪಿ ಸೂಚನೆ

ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷದಿಂದ ಕಾಮಗಾರಿ ಆರಂಭಿಸಲು ಆಗಿರಲಿಲ್ಲ. ಇದೀಗ ಭೂ ಸ್ವಾಧೀನ ಪ್ರಕ್ರಿಯೆ ಅಗತ್ಯವಿರುವ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

14 ಆಸ್ತಿ ಪಾಲಿಕೆ ವಶಕ್ಕೆ: ಅಂಡರ್‌ ಪಾಸ್‌ ನಿರ್ಮಾಣಕ್ಕೆ ಅವಶ್ಯಕವಾಗಿರುವ ಭೂಮಿಯನ್ನು ಬಿಬಿಎಂಪಿ(BBMP) ಗುರುತಿಸಿದ್ದು, 48 ಆಸ್ತಿ ಮಾಲೀಕರಿಗೆ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಅಯ್ಯಪ್ಪ ಸ್ವಾಮಿ ದೇವಸ್ಥಾನದ ಭಾಗದ 14 ಆಸ್ತಿಗಳನ್ನು ಈಗಾಗಲೇ ಬಿಬಿಎಂಪಿ ವಶಕ್ಕೆ ಪಡೆದುಕೊಂಡಿದೆ. ಉಳಿದ ಮಾಲೀಕರು ಭೂಮಿ ನೀಡುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಪಾಲಿಕೆ ಯೋಜನಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭೂ ಸ್ವಾಧೀನಕ್ಕೆ .139 ಕೋಟಿ: ಅಂಡರ್‌ ಪಾಸ್‌ ನಿರ್ಮಾಣದಿಂದ ಆಸ್ತಿ ಕಳೆದುಕೊಳ್ಳುವ 48 ಮಾಲೀಕರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಒಟ್ಟು 139 ಕೋಟಿ ರು. ನೀಡಲಿದ್ದು, ಈಗಾಗಲೇ 60 ಕೋಟಿ ರು. ಬಿಡುಗಡೆ ಮಾಡಿದೆ. ಉಳಿದ ಹಣ ನೀಡಿದ ತಕ್ಷಣ ಮಾಲೀಕರಿಗೆ ಪರಿಹಾರ ವಿತರಿಸಿ ಆಸ್ತಿ ವಶಕ್ಕೆ ಪಡೆಯಲಾಗುವುದು. ಪ್ರತಿ ಚದರ ಅಡಿಗೆ 50 ಸಾವಿರ ರು. ನಿಂದ 78 ಸಾವಿರ ರು. ವರೆಗೆ ಪರಿಹಾರ ನೀಡಲಾಗುತ್ತಿದೆ. ಒಟ್ಟು 10,432.78 ಚದರ ಅಡಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ.

Peenya Flyover: ಕಾಮಗಾರಿ ಮುಗಿದಿದ್ದರೂ ಸಂಚಾರಕ್ಕಿಲ್ಲ ಅವಕಾಶ, ಸಾರ್ವಜನಿಕರ ಆಕ್ರೋಶ

2019ರಲ್ಲಿ ಕಾಮಗಾರಿ ಆರಂಭಿಸುವುದಕ್ಕೆ ಟೆಂಡರ್‌ ಆಹ್ವಾನಿಸಲಾಗಿತ್ತು. ಯೋಜನಾ ವೆಚ್ಚದಲ್ಲಿ ಯಾವುದೇ ಬದಲಾವಣೆ ಇಲ್ಲ. ಭೂಸ್ವಾಧೀನ ಪ್ರಕ್ರಿಯೆಗೆ ಸರ್ಕಾರ ಅನುದಾನ ನೀಡಿದ್ದು, ಮೂರು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು.

- ನಂದೀಶ್‌, ಅಧೀಕ್ಷಕ ಎಂಜಿನಿಯರ್‌, ರಸ್ತೆ ಮೂಲ ಸೌಕರ್ಯ ವಿಭಾಗ, ಆರ್‌.ಆರ್‌.ನಗರ ವಲಯ

ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗ: ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರಿಸುವ ಪರ್ಯಾಯ ಮಾರ್ಗಗಳ ಅಭಿವೃದ್ಧಿ ಉದ್ದೇಶದಿಂದ ಸಹ ಈ ಅಂಡರ್‌ ಪಾಸ್‌ ನಿರ್ಮಾಣ ಪ್ರಮುಖವಾಗಿದೆ. ನಗರದ ಪಶ್ಚಿಮ ಭಾಗದ ಜನರು ವಿಮಾನ ನಿಲ್ದಾಣಕ್ಕೆ ತೆರಳಲು ಅನುಕೂಲವಾಗಲಿದೆ.

ಯೋಜನೆಯ ವಿವರ ಇಂತಿದೆ:

  • ಯೋಜನಾ ಮೊತ್ತ: .57.22 ಕೋಟಿ
  • ಒಟ್ಟು ಪಥ: 4
  • ಅಂಡರ್‌ ಉದ್ದ: 70 ಮೀ.
  • ಅಂಡರ್‌ ಪಾಸ್‌ ಎತ್ತರ: 4.5 ಮೀ.
  • ಅಂಡರ್‌ ಪಾಸ್‌ ರಾರ‍ಯಂಪ್‌ ಒಟ್ಟು ಉದ್ದ: 306.16 ಮೀ.
  • ಇತರೆ: 4 ಬಸ್‌ ನಿಲ್ದಾಣ, 2 ಶೌಚಾಲಯ, ಎರಡು ಭಾಗದಲ್ಲಿ ಸರ್ವಿಸ್‌ ರಸ್ತೆ.

ವಾಹನ, ಪಾದಚಾರಿಗಳ ಸಮೀಕ್ಷೆ ವಿವರ:

  • ಬೆಳಗ್ಗೆ 9-10ರವರೆಗೆ ಗಂಟೆಗೆ 15,457 ವಾಹನ, 4,832 ಪಾದಚಾರಿಗಳು ಸಂಚಾರ
  • ಸಂಜೆ 6-7ರವರೆಗೆ 15,934 ವಾಹನ, ಸಾವಿರಕ್ಕೂ ಹೆಚ್ಚು ಪಾದಚಾರಿಗಳು ಸಂಚಾರ
  • ಬೆಳಗ್ಗೆ 6-ರಾತ್ರಿ 10ರವರೆಗೆ ಗಂಟೆಗೆ 10 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚಾರ
  • ಪೀಕ್‌ ಅವಧಿಯಲ್ಲಿ ಜಂಕ್ಷನ್‌ನಲ್ಲಿ ವಾಹನ ವೇಗ ಗಂಟೆಗೆ 15 ರಿಂದ 20 ಕಿ.ಮೀ. ಇಳಿಕೆ
  • ಕೇವಲ 150 ರಿಂದ 180 ಮೀಟರ್‌ ಉದ್ದ ರಸ್ತೆಯಲ್ಲಿ ಗಂಟೆಗೆ 2,803 ವಾಹನಗಳು ಸಂಚಾರ
Follow Us:
Download App:
  • android
  • ios