Asianet Suvarna News Asianet Suvarna News

ಹೈದರಾಬಾದ್‌-ಯಶವಂತಪುರ ನಡುವೆ ರಾಜ್ಯದ 3ನೇ ವಂದೇಭಾರತ್‌ ರೈಲು, ಸೆ.24ಕ್ಕೆ ಲೋಕಾರ್ಪಣೆ

ಹೈದರಾಬಾದ್‌-ಯಶವಂತಪುರ ಮಧ್ಯೆ ಸಂಚಾರ. ಇಂದು ರೈಲಿನ ಪ್ರಾಯೋಗಿಕ ಸಂಚಾರ. ಸೆ.24ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ

Bengaluru-Hyderabad Vande Bharat express from September 24th gow
Author
First Published Sep 22, 2023, 9:12 AM IST

ಬೆಂಗಳೂರು (ಸೆ.22): ರಾಜ್ಯದ ಮೂರನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಸೆ.24ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಹೈದರಾಬಾದ್‌ನ ಕಾಚೇಗುಡ-ಯಶವಂತಪುರ ನಿಲ್ದಾಣದ ನಡುವೆ ರೈಲು ಸಂಚರಿಸಲಿದೆ.

ಈ ನಿಮಿತ್ತ ರೈಲಿನ ಮೊದಲ ಪ್ರಾಯೋಗಿಕ ಸಂಚಾರ ಗುರುವಾರ ನಡೆಯಲಿದೆ. ಇದು ದಕ್ಷಿಣ ಭಾರತದ ಎರಡು ಐಟಿ ನಗರಗಳ ನಡುವಿನ ಮೊದಲ ವಂದೇ ಭಾರತ್‌ ಎನ್ನಿಸಿಕೊಂಡಿದೆ.

ಪ್ರಯೋಗಾರ್ಥವಾಗಿ ಈ ರೈಲು ಗುರುವಾರ ಬೆಳಗ್ಗೆ ಕಾಚೇಗುಡದಿಂದ ಹೊರಟು ಮಧ್ಯಾಹ್ನ 2ಗಂಟೆಗೆ ಯಶವಂತಪುರ ನಿಲ್ದಾಣ ತಲುಪುವ ನಿರೀಕ್ಷೆಯಿದೆ. ಪುನಃ ಇಲ್ಲಿಂದ 2.45ಕ್ಕೆ ಇಲ್ಲಿಂದ ಕಾಚೇಗುಡಕ್ಕೆ ತೆರಳಲಿದೆ ಎಂದು ಬೆಂಗಳೂರು ನೈಋತ್ಯ ರೈಲ್ವೇ ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.

ಬಳ್ಳಾರಿ–ಗುಂತಕಲ್ ಮಾರ್ಗವಾಗಿ ಬೆಂಗಳೂರಿಗೆ ವಂದೇ ಭಾರತ ರೈಲು, ಹೊಸಪೇಟೆಯಲ್ಲಿ ಪರಿಶೀಲನೆ

ಸುಮಾರು 610 ಕಿಮೀ ಅಂತರವನ್ನು 7 ಗಂಟೆಯಲ್ಲಿ ಈ ರೈಲು ಕ್ರಮಿಸಬಹುದು. ಯಶವಂತಪುರದಿಂದ ಧರ್ಮಾವರಂ, ದೋನ್‌, ಕರ್ನೂಲ್‌ ನಗರ, ಗಡ್ವಾಲ ಜಂಕ್ಷನ್‌, ಮೆಹಬೂಬ ನಗರ, ಶಾದ್‌ನಗರ ಮೂಲಕ ಕಾಚೇಗುಡಕ್ಕೆ ಈ ರೈಲು ಸಂಚರಿಸಲಿದೆ.

ರಾಜ್ಯಕ್ಕೆ ಹೆಚ್ಚು ಉಪಯೋಗವಿಲ್ಲ: ಆದರೆ, ಈ ರೈಲು ಕರ್ನಾಟಕದಲ್ಲಿ ಕೇವಲ 80-85 ಕಿ.ಮೀ. ಮಾತ್ರ ಸಂಚರಿಸಲಿದೆ. ಇದರಿಂದ ರಾಜ್ಯದ ಜನತೆಗೆ ಹೆಚ್ಚಿನ ಪ್ರಯೋಜನ ಆಗುವ ನಿರೀಕ್ಷೆಯಿಲ್ಲ. ಯಶವಂತಪುರ ದಾಟಿದೊಡನೆ ಹಿಂದುಪುರ ರೈಲ್ವೆ ನಿಲ್ದಾಣ (ಆಂಧ್ರಪ್ರದೇಶ ಪ್ರವೇಶ) ಬಂದುಬಿಡುತ್ತದೆ. ವಂದೇ ಭಾರತ್‌ ರೈಲು ಬೆಂಗಳೂರಿಂದ ಹೈದರಾಬಾದ್‌ ಹೋಗುವವರಿಗೆ, ಎರಡು ಐಟಿ ಸಿಟಿಗಳ ಉದ್ಯೋಗಿಗಳಿಗೆ ಮಾತ್ರ ಅನುಕೂಲ ಕಲ್ಪಿಸಲಿದೆ ಎಂಬುದು ರೈಲ್ವೆ ಹೋರಾಟಗಾರರ ಅನಿಸಿಕೆ.

ಬೈಯ್ಯಪ್ಪನಹಳ್ಳಿ- ಕೆ.ಆರ್‌.ಪುರ ಮೆಟ್ರೋ ಮಾರ್ಗದಲ್ಲಿ ಚಲಿಸುವ ಐಟಿ ಉದ್ಯೋಗಿಗಳಿಗೆ ಮತ್ತೆ ನಿರಾಸೆ

ಮೈಸೂರು- ಚೆನ್ನೈ, ಬೆಂಗಳೂರು-ಧಾರವಾಡ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಬಳಿಕ ರಾಜ್ಯದಲ್ಲಿ ಓಡಾಡಲಿರುವ ಮೂರನೇ ವಂದೇಭಾರತ್‌ ರೈಲು ಇದಾಗಿದೆ. ಈ ರೈಲನ್ನು ದಕ್ಷಿಣ ಮಧ್ಯ ರೈಲ್ವೆ ವಲಯ ನಿರ್ವಹಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಸೆ.24 ರಂದು ಒಂದೇ ದಿನ ಬರೋಬ್ಬರಿ 9 ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಜೊತೆಗೆ ಮೊದಲ ಬಾರಿಗೆ ಕೇಸರಿ ಬಣ್ಣದ ಒಂದು ವಂದೇ ಭಾರತ್‌ ರೈಲಿಗೂ ಚಾಲನೆ ನೀಡಲಾಗುವುದು. ಕೇರಳದ ಕಾಸರಗೋಡು- ತ್ರಿರುವನಂತರಪುರ ನಡುವೆ ಈ ಹೊಸ ಕೇಸರಿ ಬಣ್ಣದ ರೈಲು ಚಲಿಸಲಿದೆ. ಉಳಿದ 8 ರೈಲುಗಳು ಈ ಮೊದಲಿನಂತೆ ನೀಲಿ ಮತ್ತು ಬಿಳಿ ಬಣ್ಣದ ರೈಲುಗಳಾಗಿರಲಿವೆ. ವಂದೇ ಭಾರತ್‌ ಪ್ರಾರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಇಷ್ಟೊಂದು ರೈಲುಗಳನ್ನು ಒಮ್ಮೆಗೇ ಬಿಡುಗಡೆ ಮಾಡಲಾಗುತ್ತಿದ್ದು ದೆಹಲಿಯಿಂದಲೇ ಮೋದಿ ವಿಡಿಯೋ ಕಾನ್ಫ್‌ರೆನ್ಸ್‌ ಮೂಲಕ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಈ ಪೈಕಿ ಇಂದೋರ್‌- ಜೈಪುರ್‌, ಜೈಪುರ್‌- ಉದಯ್‌ಪುರ್‌, ಪುರಿ- ರೌರ್ಕೆಲಾ, ಪಟನಾ- ಹೌರಾ ಮತ್ತು ಜೈಪುರ್‌- ಚಂಡೀಗಢ ಮಾರ್ಗವಾಗಿ ಚಲಿಸಲಿವೆ.

Follow Us:
Download App:
  • android
  • ios