ಬೈಯ್ಯಪ್ಪನಹಳ್ಳಿ- ಕೆ.ಆರ್.ಪುರ ಮೆಟ್ರೋ ಮಾರ್ಗದಲ್ಲಿ ಚಲಿಸುವ ಐಟಿ ಉದ್ಯೋಗಿಗಳಿಗೆ ಮತ್ತೆ ನಿರಾಸೆ
ಐಟಿ ಉದ್ಯೋಗಿಗಳ ಬಹುನಿರೀಕ್ಷಿತ ಬೈಯ್ಯಪ್ಪನಹಳ್ಳಿ- ಕೆ.ಆರ್.ಪುರ ಮೆಟ್ರೋ ಮಾರ್ಗದ ತಪಾಸಣೆಯನ್ನು ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಪರಿಶೀಲಿಸುವುದನ್ನು ಅನಿರೀಕ್ಷಿತವಾಗಿ ಮುಂದೂಡಲಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ತಪಾಸಣೆಯ ಹೊಸ ದಿನಾಂಕವನ್ನು ಇನ್ನೂ ದೃಢಪಡಿಸಿಲ್ಲ.
ಮೆಟ್ರೋ ರೈಲ್ವೇ ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಸೆ.13 ಹಾಗೂ 14ರಂದು ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಪರಿಶೀಲನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈಗ ಅದನ್ನು ಸ್ಥಗಿತಗೊಳಿಸಲಾಗಿದೆ.
ನೇರಳೆ ಮಾರ್ಗದ ಕೆ.ಆರ್. ಪುರ ಹಾಗೂ ವೈಟ್‌ಫೀಲ್ಡ್ ನಡುವಣ 13.71 ಕಿ.ಮೀ. ಮೆಟ್ರೋ ಉದ್ಘಾಟನೆಯಾಗಿ ಆರು ತಿಂಗಳ ಬಳಿಕ ಬೈಯಪ್ಪನಹಳ್ಳಿ-ಕೆ.ಆರ್.ಪುರ ನಡುವಿನ 2 ಕಿ.ಮೀ ಕಾಮಗಾರಿ ಮುಗಿದಿದೆ. ಹೀಗಾಗಿ ಬೆಣ್ಣಿಗಾನಹಳ್ಳಿ ನಿಲ್ದಾಣದಲ್ಲಿ ಬೆಳಿಗ್ಗೆ 9:45 ಕ್ಕೆ ತಪಾಸಣೆ ಪ್ರಾರಂಭವಾಗಬೇಕಿತ್ತು.
ಬೆನ್ನಿಗಾನಹಳ್ಳಿಯಿಂದ ಬೈಯಪ್ಪನಹಳ್ಳಿವರೆಗೆ ತಪಾಸಣೆ ಮುಗಿಸಿ ರೋಲಿಂಗ್ ಸ್ಟಾಕ್ ತಪಾಸಣೆ ನಡೆಸಿದ ಬಳಿಕ ಸಂಜೆ 6:30ರ ಸುಮಾರಿಗೆ ಮೆಜೆಸ್ಟಿಕ್ ನ ನಾಡಪ್ರಭು ಕೆಂಪೇಗೌಡ ನಿಲ್ದಾಣಕ್ಕೆ ಲಘು ಓಟದ ಮೂಲಕ ಸಿಎಂಆರ್ ಎಸ್ ತಪಾಸಣೆ ಮುಗಿಸಲು ನಿರ್ಧರಿಸಲಾಗಿತ್ತು.
ಇದರ ಕೆಂಗೇರಿ-ಚಲ್ಲಘಟ್ಟದ ನಡುವೆ 1.9 ಕಿ.ಮೀ. ಕಾಮಗಾರಿ ಮುಗಿದಿರುವ ಕಾರಣ ಏಕಕಾಲಕ್ಕೆ ಎರಡೂ ವಿಸ್ತರಿತ ಮಾರ್ಗವನ್ನು ಜನಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಇದಕ್ಕಾಗಿ ಬೈಯ್ಯಪ್ಪನಹಳ್ಳಿ- ಕೆ.ಆರ್.ಪುರ ಮೆಟ್ರೋ ಮಾರ್ಗವು ಪ್ರಯಾಣಿಕರ ಸಂಚಾರಕ್ಕಾಗಿ ಸುರಕ್ಷಿತವಾಗಿದೆಯೇ ಎಂಬುದರ ಕುರಿತು ಸುರಕ್ಷತಾ ಆಯುಕ್ತರ ತಂಡ ಎರಡು ದಿನಗಳ ಕಾಲ ತಪಾಸಣೆಯನ್ನು ನಡೆಸಲು ನಿರ್ಧರಿಸಲಾಗಿತ್ತು.
ಸುಮಾರು ಹತ್ತು ಅಧಿಕಾರಿಗಳ ಸಿಎಂಆರ್‌ಎಸ್ ತಂಡ ಎರಡು-ಮೂರು ಗುಂಪಾಗಿ ಈ ಮಾರ್ಗದಲ್ಲಿ ವಿವಿಧ ತಪಾಸಣೆ ನಡೆಸಲು ಯೋಚಿಸಲಾಗಿತ್ತು. ಸಂಪೂರ್ಣ 43ಕಿಮೀ ನೇರಳೆ ಮಾರ್ಗ ತೆರೆದುಕೊಳ್ಳಲಿರುವ ಕಾರಣದಿಂದ ರೈಲುಗಳ ಸಮಯ, ಸಿಗ್ನಲಿಂಗ್ ವ್ಯವಸ್ಥೆ ಸೇರಿದಂತೆ ಹಲವು ಮಾಹಿತಿಗಳನ್ನು ಬಿಎಂಆರ್‌ಸಿಎಲ್ ಅಧಿಕಾರಿಗಳಿಂದ ಸಿಎಂಆರ್‌ಎಸ್ ತಂಡ ಪಡೆದುಕೊಳ್ಳಲು ಯೋಚಿಸಿತ್ತು.
ಕೆ.ಆರ್.ಪುರ-ವೈಟ್‌ಫೀಲ್ಡ್ ಮೆಟ್ರೊ ವಾಣಿಜ್ಯ ಸಂಚಾರ ಮಾರ್ಚ್‌ನಲ್ಲೇ ಆರಂಭಗೊಂಡಿತ್ತು. ಆದರೆ, ಬೈಯಪ್ಪನಹಳ್ಳಿ-ಕೆ.ಆರ್.ಪುರದ ನಡುವೆ ಮೆಟ್ರೊ ಸಂಚರಿಸದ ಕಾರಣಕ್ಕೆ ನೇರಳೆ ಮಾರ್ಗದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ವೈಟ್‌ಫೀಲ್ಡ್‌ಗೆ ತೆರಳಬೇಕಾದವರು ಬೈಯಪ್ಪನಹಳ್ಳಿಯಲ್ಲೇ ಇಳಿದು ಅಲ್ಲಿಂದ ಫೀಡರ್ ಬಸ್ ಅವಲಂಬಿಸಿ ಕೆ.ಆರ್.ಪುರದವರೆಗೆ ತೆರಳುತ್ತಿದ್ದಾರೆ.
ವಿಸ್ತರಿತ ಮಾರ್ಗದಲ್ಲಿ ಸಂಚಾರ ಆರಂಭವಾದರೆ ಚಲ್ಲಘಟ್ಟದಿಂದಲೇ ನೇರವಾಗಿ ಪ್ರಯಾಣಿಕರು ವೈಟ್‌ಫೀಲ್ಡ್‌ನತ್ತ ತೆರಳಬಹುದು. ಕೆಂಗೇರಿ- ಚಲ್ಲಘಟ್ಟ ನಡುವೆ ಮೆಟ್ರೊ ಆರಂಭದಿಂದ ಮೈಸೂರು ಕಡೆಗೆ ತೆರಳುವ ಪ್ರಯಾಣಿಕರಿಗೂ ಅನುಕೂಲವಾಗಲಿದೆ.