ತಡ ರಾತ್ರಿ ಹೊಟೆಲ್ ಮುಚ್ಚಿದ ಬಳಿಕ ಊಟ ಕೊಟ್ಟಿಲ್ಲ ಎಂದು ಕಿಡಿಗೇಡಿಗಳು ಧಮ್ಕಿ ಹಾಕಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಸಹಾಯಕ್ಕಾಗಿ ಇನ್ಸ್‌ಪೆಕ್ಟರ್‌ಗೆ ಮಾಲೀಕ ಕರೆ ಮಾಡಿದರೆ, ಮಧ್ಯರಾತ್ರಿ ಕಾಲ್ ಮಾಡ್ತಿಯಾ ಕಾಮನ್ ಸೆನ್ಸ್ ಇಲ್ವಾ ಎಂದು ಕೆಂಡಾಮಲವಾದ ಘಟನೆ ನಡೆದಿದೆ.

ಬೆಂಗಳೂರು (ಜೂ.27) ತಡರಾತ್ರಿ ಹೊಟೆಲ್ ಬಾಗಿಲು ಮುಚ್ಚಿದ ಬಳಿಕ ನುಗ್ಗಿದ ಕಿಡಿಗೇಡಿಗಳು ಊಟ ನೀಡಿಲ್ಲ ಎಂದು ದಾಂಧಲೆ ನಡೆಸಲು ಮುಂದಾದ ಘಟನೆ ನಡೆದಿದೆ. ಹೊಟೆಲ್‌ಗೆ ಬೆಂಕಿ ಹಾಕುತ್ತೇವೆ ಎಂದು ಬೆದರಿಸಲಾಗಿದೆ. ಪರಿಣಾಮ ಹೊಟೆಲ್ ಮಾಲೀಕ ಸಹಾಯಕ್ಕಾಗಿ ಕೆಂಗೇರಿ ಇನ್ಸ್‌ಪೆಕ್ಟರ್ ಕರೆ ಮಾಡಿದರೆ, ಇನ್ಸ್‌ಪೆಕ್ಟರ್ ಕೆಂಡಾಮಂಡಲವಾದ ಘಟನೆ ನಡೆದಿದೆ. ಮಧ್ಯರಾತ್ರಿ ಕರೆ ಮಾಡುತ್ತೀಯಾ? ಕಾಮನ್ ಸೆನ್ಸ್ ಇಲ್ವಾ ಎಂದು ಇನ್ಸ್‌ಪೆಕ್ಟರ್ ಪ್ರಶ್ನಿಸಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಇನ್ಸ್‌ಪೆಕ್ಟರ್ ಕೆಂಡಾಮಂಡಲದ ಆಡಿಯೋ ಕ್ಲಿಪ್ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಂಗೇರಿ ಬಳಿ ಹೊಟೆಲ್‌ನಲ್ಲಿ ನಡೆದ ಘಟನೆ

ಜೂನ್ 26ರಂದು ರಾತ್ರಿ 11.30ರ ವೇಳೆಗೆ ಕೆಂಗೇರಿಯ ರಾಜರತ್ನ ಹೊಟೆಲ್ ಮುಚ್ಚಲಾಗಿತ್ತು. ಹೊಟೆಲ್ ಮುಚ್ಚಿ ಕ್ಲೀನಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಹೊಟೆಲ್‌ಗೆ ನುಗ್ಗಿದ ಕೆಲ ಕಿಡಿಗೇಡಿಗಳು ಊಟಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ಅದಾಗಲೇ ಹೊಟೆಲ್ ಮುಚ್ಚಿ ಕಿಚಿನ್ ರೂಂ ಕ್ಲೀನಿಂಗ್ ಕೆಲಸದಲ್ಲಿದ್ದ ಕಾರಣ ಹೊಟೆಲ್ ಸಿಬ್ಬಂದಿಗಳು ಹೊಟೆಲ್ ಕ್ಲೋಸ್ ಆಗಿದೆ ಎಂದಿದ್ದಾರೆ. ಇದರಿಂದ ಕೆರಳಿದ ಕಿಡಿಗೇಡಿಗಳು, ಧಮ್ಕಿ ಹಾಕಿದ್ದಾರೆ. ಹೊಟೆಲ್‌ಗೆ ಬೆಂಕಿ ಹಾಕುತ್ತೇವೆ, ನಾಳೆಯಿಂದ ಹೊಟೆಲ್ ನಡೆಸಲು ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ.

ಕಿಡಿಗೇಡಿಗಳ ಬೆದರಿಕೆ ತೀವ್ರಗೊಳ್ಳುತ್ತಿದ್ದಂತೆ ಹೊಟೆಲ್ ಮಾಲೀಕ ಮಧುಕಿರಣ್ ನೇರವಾಗಿ 112ಕ್ಕೆ ಕರೆ ಮಾಡಿದ್ದಾನೆ. ಕೆಲ ಹೊತ್ತಲ್ಲಿ ಹೊಯ್ಸಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಆಗಮಿಸಿದರೂ ಕಿಡಿಗೇಡಿಗಳು ಗಲಾಟೆ ಮುಂದುವರಿಸಿದ್ದಾರೆ. ಪೊಲೀಸರು ಕೆಲ ಕಿಡಿಗೇಡಿಗಳನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಕೆಂಗೇರಿ ಪೊಲೀಸ್ ಠಾಣಗೆ ತೆರಳಿದ ಮಾಲೀಕ ಮಧುಕಿರಣ್, ದೂರು ನೀಡಲು ಮುಂದಾಗಿದ್ದಾರೆ. ಇದೇ ವೇಳೆ ಕೆಂಗೇರಿ ಇನ್ಸ್‌ಪೆಕ್ಟರ್ ಜಗದೀಶ್‌ಗೆ ಕರೆ ಮಾಡಿದ ಹೊಟೆಲ್ ಮಾಲೀಕ ಮಧುಕಿರಣ್ ವಿರುದ್ಧ ಇನ್ಸ್‌ಪೇಕ್ಟರ್ ಜಗದೀಶ್ ಕೆಂಡಾಮಂಡಲರಾಗಿದ್ದಾರೆ. ಮಧ್ಯರಾತ್ರಿ ಕರೆ ಮಾಡುತ್ತೀಯಾ, ಕಾಮನ್ ಸೆನ್ಸ್ ಇಲ್ವಾ ಎಂದು ಬೈಗುಳದ ಸುರಿಮಳೆಗೈದಿದ್ದಾರೆ.

ಪೊಲೀಸರು ಸರಿಯಾಗಿ ದೂರು ದಾಖಲಿಸಿಲ್ಲ, ಎಲ್ಲಾ ಆರೋಪಿಗಳನ್ನು ಬಿಟ್ಟುಕಳುಹಿಸಿದ್ದಾರೆ. ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಹೊಟೆಲ್ ಮಾಲೀಕ ಮಧುಕಿರಣ್ ಆರೋಪಿಸಿದ್ದಾರೆ.