ಮೆಟ್ರೋದಲ್ಲಿ ಮಹಿಳೆಯರ ಶರೀರದ ಭಾಗಗಳನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದ ಆರೋಪಿಯೊಬ್ಬನ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಸಾರ್ವಜನಿಕ ಸಾರಿಗೆಯು ಎಲ್ಲರಿಗೂ ಸುರಕ್ಷಿತ ತಾಣವಾಗಿರಬೇಕು ಮತ್ತು ಇಂತಹ ಕೃತ್ಯಗಳು ಮಹಿಳೆಯರ ಘನತೆಗೆ ಧಕ್ಕೆ ತರುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಬೆಂಗಳೂರು: ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವ ಮಹಿಳೆಯರ ಶರೀರದ ಭಾಗಗಳನ್ನು ಚಿತ್ರೀಕರಿಸುವ ಆರೋಪಿಯ ಕಿಡಿಗೇಡಿ ಕೃತ್ಯ ಕ್ಷಮೆಗೆ ಅರ್ಹವಾದುದಲ್ಲ. ಇಂತಹ ಪ್ರಕರಣದ ವಿಚಾರಣೆಗೆ ತಡೆ ನೀಡಿದರೆ ಕಾನೂನು ಉಲ್ಲಂಘನೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಕಿಡಿಗೇಡಿಗೆ ಖಡಕ್ ವಾರ್ನಿಂಗ್ ಕೊಟ್ಟ ಹೈಕೋರ್ಟ್

ಇದೇ ವೇಳೆ, ‘ಸಾರ್ವಜನಿಕ ಸಾರಿಗೆ ಎಂಬುದು ಯಾರಿಗೂ ಭಯವನ್ನು ಉಂಟು ಮಾಡುವ ಮತ್ತು ಶೋಷಣೆಯ ಸ್ಥಳವಾಗಿರಬಾರದು. ಈ ಜಾಗಗಳು ಎಲ್ಲರ ಪಾಲಿಗೆ ಸದಾ ಸುರಕ್ಷತೆ ಹೊಂದಿದ ಘನತೆಯ ತಾಣಗಳಾಗಿ ಕಂಗೊಳಿಸಬೇಕು’ ಎಂದು ಹೇಳಿದೆ.

ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರನ್ನು ಹಿಂಬಾಲಿಸಿ ಅವರ ಶರೀರದ ಭಾಗಗಳನ್ನು ಮೊಬೈಲ್‌ ಫೋನ್‌ನಲ್ಲಿ ಸೆರೆಹಿಡಿದು ಅಂತಹ ವಿಡಿಯೋಗಳನ್ನು ತನ್ನ ‘ಮೆಟ್ರೊ_ಚಿಕ್ಸ್’ ಹೆಸರಿನ ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುತ್ತಿದ್ದ ಆರೋಪಿ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಹಾಗೂ ವಿಚಾರಣೆಯನ್ನು ರದ್ದುಪಡಿಸುವಂತೆ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. ಪ್ರಕರಣದ ಆರೋಪಿಯು, ದೂರು ಅಥವಾ ದೋಷಾರೋಪ ಪಟ್ಟಿಯಲ್ಲಿ ಕಂಡುಬರುವ ಎಲ್ಲ ಆರೋಪಗಳು ಕಳಪೆ ಮತ್ತು ಅಸ್ಪಷ್ಟವಾಗಿವೆ. ಸಾಕ್ಷಿಗಳು ವಿಶ್ವಾಸಾರ್ಹವಾಗಿಲ್ಲ. ಆದ್ದರಿಂದ, ಪ್ರಕರಣ ರದ್ದುಗೊಳಿಸಬೇಕು ಎಂದು ತನ್ನ ಅರ್ಜಿಯಲ್ಲಿ ಮನವಿ ಮಾಡಿದ್ದರು.

ಇದನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ನ್ಯಾಯಪೀಠ, ಅನಾಮಧೇಯ ಮಹಿಳಾ ಪ್ರಯಾಣಿಕರ ಚಿತ್ರಗಳು ಮತ್ತು ವಿಡಿಯೋಗಳನ್ನು ಒಪ್ಪಿಗೆಯಿಲ್ಲದೆ ಸೆರೆಹಿಡಿದಿರುವುದು ಆತಂಕಕಾರಿಯಾಗಿದೆ. ತನಿಖೆಯ ಸಮಯದಲ್ಲಿ ಸಂಗ್ರಹಿಸಲಾಗಿರುವ ವಸ್ತುಗಳ ಸಾಕ್ಷ್ಯರೂಪವನ್ನು ಗಮನಿಸಿದರೆ ಈ ಪ್ರಕರಣದ ವಿಚಾರಣೆ ಮುಂದುವರಿಯಲು ಅರ್ಹವಾಗಿದೆ ಎಂದು ಹೇಳಿದೆ.

ಮಹಿಳೆಯರ ಘನತೆ ಮತ್ತು ಮಾನಕ್ಕೆ ಕುಂದುಂಟು ಮಾಡಿರುವುದು ನಿಸ್ಸಂದೇಹವಾಗಿ ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹ ಕೃತ್ಯ. ಆದ್ದರಿಂದ, ಪೂರ್ಣ ಪ್ರಮಾಣದ ವಿಚಾರಣೆಗೆ ಒಳಪಟ್ಟು ದೋಷಮುಕ್ತರಾಗಿ ಹೊರಬರುವುದು ಅರ್ಜಿದಾರರ ಜವಾಬ್ದಾರಿಯಾಗಿದೆ ಎಂದು ನ್ಯಾಯಪೀಠ ಸ್ಪಷ್ಪಪಡಿಸಿದೆ.

ಪ್ರಕರಣದ ವಿವರ

ಕರಿಹೋಬನಹಳ್ಳಿ ತಿಗಳರಪಾಳ್ಯ ಮುಖ್ಯರಸ್ತೆಯ ನಿವಾಸಿ ಬಿ.ಕೆ. ದಿಗಂತ್‌ (28) ತನ್ನ ವಿರುದ್ಧದ ಎಫ್‌ಐಆರ್‌ ಹಾಗೂ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ನ್ಯಾಯಿಕ ವಿಚಾರಣೆ ರದ್ದುಪಡಿಸಬೇಕು ಎಂದು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಬನಶಂಕರಿ ಪೊಲೀಸ್‌ ಠಾಣೆ ಪೊಲೀಸರು ಸ್ವಯಂಪ್ರೇರಿತ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ‘ತನ್ನ ಇನ್‌ಸ್ಟಾಗ್ರಾಂ ಖಾತೆ ಮೆಟ್ರೊ_ಚಿಕ್ಸ್‌ ಪುಟವನ್ನು ಹೆಚ್ಚು ಜನರು ಫಾಲೋ ಮಾಡಬೇಕು. ಅತಿ ಹೆಚ್ಚು ಲೈಕ್‌ಗಳು ಹಾಗೂ ಕಮೆಂಟ್‌ಗಳು ಬರಬೇಕು ಎಂಬ ಉದ್ದೇಶದಿಂದ ಆರೋಪಿಯು ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗಿ ಅವರ ಅಂಗಾಂಗಗಳನ್ನು ರಹಸ್ಯವಾಗಿ ಸೆರೆಹಿಡಿದು ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ಇಂತಹ 14 ವಿಡಿಯೊಗಳು ಆರೋಪಿಯ ಪುಟದಲ್ಲಿ ಬಿತ್ತರವಾಗಿರುವುದು ಕಂಡುಬಂದಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.