ಮತದಾರಪಟ್ಟಿ ವಿಶೇಷ ಪರಿಷ್ಕರಣೆ-2023ರ ಭಾಗವಾಗಿ ಬುಧವಾರ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಕರಡು ಮತದಾರಪಟ್ಟಿಪ್ರಕಟಿಸಲಾಗಿದ್ದು, ನಗರ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 91,15,805 ಮತದಾರರಿದ್ದಾರೆ.
ಬೆಂಗಳೂರು (ನ.10): ಮತದಾರಪಟ್ಟಿ ವಿಶೇಷ ಪರಿಷ್ಕರಣೆ-2023ರ ಭಾಗವಾಗಿ ಬುಧವಾರ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಕರಡು ಮತದಾರಪಟ್ಟಿಪ್ರಕಟಿಸಲಾಗಿದ್ದು, ನಗರ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 91,15,805 ಮತದಾರರಿದ್ದಾರೆ. ಕಳೆದ ಜನವರಿಯಲ್ಲಿ ಪ್ರಕಟಿಸಿದ ಮತದಾರ ಪಟ್ಟಿಗೆ ಹೋಲಿಕೆ ಮಾಡಿದಲ್ಲಿ 3.76 ಲಕ್ಷ ಮತದಾರರು ಕಡಿಮೆಯಾಗಿದ್ದಾರೆ.
ಈ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್, ಕಳೆದ ಜನವರಿಯಲ್ಲಿ ಬಿಡುಗಡೆ ಮಾಡಿದ ಅಂತಿಮ ಮತದಾರ ಪಟ್ಟಿಯಲ್ಲಿ ಬೆಂಗಳೂರು ನಗರದಲ್ಲಿ ಒಟ್ಟು 94.92 ಲಕ್ಷ ಮತದಾರರಿದ್ದರು. ಪರಿಷ್ಕರಣೆ ವೇಳೆ ಮರಣ ಹೊಂದಿರುವ, ಬೇರೆ ಕ್ಷೇತ್ರದಲ್ಲಿ ಮತದಾರ ಹಕ್ಕು ಹೊಂದಿ ರುವ ಸೇರಿದಂತೆ ಒಟ್ಟು 6,69,652 ಮತದಾರರನ್ನು ಕರಡು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಹೀಗಾಗಿ, 2022ರ ಜನವರಿಯಲ್ಲಿ ಪ್ರಕಟಿಸಲಾದ ಪಟ್ಟಿಗಿಂತ 3.76 ಲಕ್ಷ ಮತದಾರರು ಇದೀಗ ಕಡಿಮೆಯಾಗಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿದ್ದಾರೆ 5.09 ಕೋಟಿ ಮತದಾರರು: ಆಯೋಗದಿಂದ ಮತದಾರರ ಕರಡು ಪಟ್ಟಿ ಬಿಡುಗಡೆ
ಇನ್ನು ಕರಡು ಮತದಾರ ಪಟ್ಟಿಗೆ ಹೊಸದಾಗಿ 3,07,535 ಮತದಾರರು ಸೇರ್ಪಡೆಯಾಗಿದ್ದಾರೆ. ಹಾಗೆಯೇ 57,517 ಮತದಾರರು ಹೆಸರು, ವಿಳಾಸ ಬದಲಾವಣೆ ಸೇರಿ ಇನ್ನಿತರ ಮಾಹಿತಿಯಲ್ಲಿ ಬದಲಾವಣೆ ಕುರಿತು ಅರ್ಜಿ ಸಲ್ಲಿಸಿದ್ದರು ಎಂದರು. ಇದೀಗ ಬಿಡುಗಡೆ ಮಾಡಿದ ಕರಡು ಮತದಾರ ಪಟ್ಟಿಯಲ್ಲಿ 47,35,952 ಪುರುಷ ಮತದಾರರು, 43,79,853 ಮಹಿಳಾ ಮತದಾರರು, 925 ಇತರೆ ಮತದಾರರು ಸೇರಿದಂತೆ ಒಟ್ಟು 91,15,805 ಮತದಾರರಿದ್ದಾರೆ. ಮತದಾರರ ಕರಡು ಪಟ್ಟಿಯಲ್ಲಿ ಲೋಪಗಳಿದ್ದರೆ ಆಕ್ಷೇಪಣೆ ಸಲ್ಲಿಸಲು 1 ತಿಂಗಳ (ಡಿ. 8) ಕಾಲಾವಕಾಶ ನೀಡಲಾಗಿದೆ ಎಂದರು.
ಪಟ್ಟಿಯನ್ನು ವಿಎಚ್‌ಎ ಮೊಬೈಲ್ ಆ್ಯಪ್ ಮತ್ತು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (ಎನ್‌ವಿಎಸ್‌ಪಿ) ವೆಬ್‌ಸೈಟ್‌ನಲ್ಲಿ ಮತದಾರರು ಮಾಹಿತಿಯನ್ನು ಪರೀಕ್ಷಿಸಿಕೊಳ್ಳಬಹುದು. ಅದರಲ್ಲಿ ತಪ್ಪುಗಳಿದ್ದರೆ ಚುನಾವಣಾಧಿಕಾರಿಗಳ ಕಚೇರಿ, ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ನೋಂದಣಾಧಿಕಾರಿಗಳ ಕಚೇರಿ, ವಾರ್ಡ್ ಕಚೇರಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳ ಬಳಿ ನಮೂನೆ 6, 7 ಮತ್ತು 8ರಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. 2023ರ ಜನವರಿ 1ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ವಿವರಿಸಿದರು.
17 ವರ್ಷ ತುಂಬಿದ ಯುವ ಮತದಾರರ ಸೇರ್ಪಡೆ: ಪ್ರಸಕ್ತ ಸಾಲಿನಲ್ಲಿ 17 ವರ್ಷ ಪೂರ್ಣಗೊಂಡಿರುವವರು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅರ್ಜಿ ಸಲ್ಲಿಸಬಹುದು. ಅವರು 18 ವರ್ಷ ಪೂರ್ಣಗೊಂಡ ಕೂಡಲೇ ಅವರನ್ನು ಮತದಾರರ ಪಟ್ಟಿಗೆ ಸೇರಿಸ ಲಾಗುವುದು. ಅದರ ಜತೆಗೆ 2023ರ ಜ. 1ರಂದು 18 ವರ್ಷ ಪೂರ್ಣಗೊಳ್ಳುವವರಿಂದಲೂ ಅರ್ಜಿ ಸ್ವೀಕರಿಸಲಾಗುತ್ತಿದೆ. ಹಾಗೆಯೇ, ಮುಂದಿನ ದಿನಗಳಲ್ಲಿ 2023ರ ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1ಕ್ಕೆ 18 ವರ್ಷ ಪೂರ್ಣವಾಗುವವರ ಅರ್ಜಿಯನ್ನು ಪರಿಷ್ಕರಿಸಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ಚುನಾವಣೆ ಘೋಷಣೆಯಾಗಿ ಅಭ್ಯ ರ್ಥಿಗಳು ನಾಮಪತ್ರ ಸಲ್ಲಿಸುವವರೆಗೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
ಯುವಕರ ನಿರಾಸಕ್ತಿ: ಜನಸಂಖ್ಯೆ ಆಧಾರಿತವಾಗಿ ರಾಜ್ಯದಲ್ಲಿ 2.55 ನಷ್ಟು18 ರಿಂದ 19 ವರ್ಷ ಯುವಕರಿದ್ದಾರೆ. ಈ ಪೈಕಿ ಕೇವಲ 1.39 ರಷ್ಟುಯುವ ಮತದಾರರು ತಮ್ಮ ಹೆಸರುಗಳನ್ನು ಮತದಾರ ಪಟ್ಟಿಗೆ ನೋಂದಣೆ ಮಾಡಿಕೊಂಡಿದ್ದಾರೆ. ಯುವ ಮತದಾರರು ಆಸಕ್ತಿಯಿಂದ ತಮ್ಮ ಹೆಸರುಗಳನ್ನು ಮತದಾರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಜತೆಗೆ, 30 ರಿಂದ 49 ವರ್ಷದೊಳಿಗೆ ಮತದಾರ ಪಟ್ಟಿಯನ್ನು ವ್ಯವಸ್ಥಿತವಾಗಿ ಪರಿಷ್ಕರಣೆ ಮಾಡಬೇಕಾಗಿದೆ. ಈ ವಯೋಮಿತಿಯಲ್ಲಿ ಜನಸಂಖ್ಯೆಗಿಂತ ಹೆಚ್ಚಿನ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ಜನಸಂಖ್ಯೆ ಮತ್ತು ಮತದಾರ ಸಂಖ್ಯೆಯಲ್ಲಿ ವ್ಯತ್ಯಾಸ: ಬೆಂಗಳೂರಿನಲ್ಲಿ ಸದ್ಯ ಜನಸಂಖ್ಯೆಗೆ ಅನುಗುಣವಾಗಿ ಮತದಾರರ ಸಂಖ್ಯೆ ಕಡಿಮೆಯಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿನ ಜನಸಂಖ್ಯೆಯ ಶೇ.65 ಮಂದಿ ಮತದಾರರಾಗಿರಬೇಕಿತ್ತು. ಆದರೆ, ಶೇ.55.2 ಮಂದಿ ಮಾತ್ರ ಮತದಾರರಾಗಿದ್ದಾರೆ. ಹೀಗಾಗಿ ಅರ್ಹ ಮತದಾರರು ಪಟ್ಟಿಗೆ ಸೇರ್ಪಡೆಯಾಗುವಂತೆ ಪ್ರೇರೇಪಿಸಲು ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜಕೀಯ ಪಕ್ಷದ ಮುಖಂಡರು ಬೂತ್ ಮಟ್ಟದಲ್ಲಿ ನೇಮಿಸಿರುವ ಏಜೆಂಟ್‌ಗಳ ಮೂಲಕ ಪ್ರಚಾರ ಮಾಡಲಾಗುವುದು. ಅದರ ಜತೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಆಧಾರ್ ಜೋಡಣೆಗೆ ಹಿನ್ನಡೆ: ಬೆಂಗಳೂರಿನ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆಗೆ ಆಸಕ್ತಿ ತೋರುತ್ತಿಲ್ಲ. ಈವರೆಗೆ ಕೇವಲ ಶೇ.26 ಮತದಾರರು ಮಾತ್ರ ಆಧಾರ್ ಸಂಖ್ಯೆ ಜೋಡಣೆ ಮಾಡಿಕೊಂಡಿದ್ದಾರೆ. ಈ ಪೈಕಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.13.09 ಮತದಾರರು ಆಧಾರ್ ಸಂಖ್ಯೆ ಜೋಡಣೆ ಮಾಡಿಕೊಂಡರೆ, ಚಾಮರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಲ್ಲಿ ಅತಿಹೆಚ್ಚು ಶೇ.52.74 ಮತದಾರರು ಆಧಾರ ಜೋಡಣೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಮತದಾರ ವಿವರ
ಮತದಾರ ಪಟ್ಟಿ ಪುರುಷ ಮಹಿಳೆ ಇತರೆ ಒಟ್ಟು
ಅಂತಿಮ ಪಟ್ಟಿ (ಜ.13.2022) 49,34,769 45,57,770 924 94,92,539
ಕರಡು ಪಟ್ಟಿ (ನ.9.2022) 47,35,952 43,79,853 925 91,15,805
ಕಡಿಮೆಯಾದ ಮತದಾರರು 1,98,817 1,77,917 01 3,76,734
ಹೊಸ ಸೇರ್ಪಡೆ, ವಿಳಾಸ ಬದಲಾವಣೆ ಮತ್ತು ತೆಗೆದು ಹಾಕಿದ ಮತದಾರರ ವಿವರ (ಜ.13 ರಿಂದ ನ.9)
ವಿವರ ಪುರುಷ ಮಹಿಳೆ ಇತರೆ ಒಟ್ಟು
ಹೊಸ ಸೇರ್ಪಡೆ 1,50,940 1,56,441 154 3,07,535
ಪಟ್ಟಿಯಿಂದ ತೆಗೆದು ಹಾಕಿದ ಸಂಖ್ಯೆ 3,41,570 3,27,923 159 6,69,652
ವಿಳಾಸ ಬದಲಾವಣೆ 31,961 25,546 10 57,517
ಅತಿ ಹೆಚ್ಚು/ಕಡಿಮೆ ಮತದಾರ ಸೇರ್ಪಡೆ ವಿಧಾನಸಭಾ ಕ್ಷೇತ್ರ ವಿವರ
ಅತಿ ಹೆಚ್ಚುಸೇರ್ಪಡೆ ಅತಿ ಕಡಿಮೆ ಸೇರ್ಪಡೆ
35,258(ಬೆಂ.ದಕ್ಷಿಣ ) 2,836(ಬಸವನಗುಡಿ)
Bengaluru: ಲಂಚಬಾಕ ಅಧಿಕಾರಿಗಳ ಮೇಲೆ ‘ಲೋಕಾ’ ದಾಳಿ
ಅತಿ ಹೆಚ್ಚು/ಕಡಿಮೆ ಮತದಾರ ಕೈಬಿಟ್ಟವಿಧಾನಸಭಾ ಕ್ಷೇತ್ರ
ಹೆಚ್ಚು ಕೈಬಿಟ್ಟಕೇತ್ರ ಕಡಿಮೆ ಕೈಬಿಟ್ಟಕೇತ್ರ
45,927(ಬೆಂ.ದಕ್ಷಿಣ) 11,788(ಮಲ್ಲೇಶ್ವರ)
ಆಧಾರ್ ಸಂಖ್ಯೆ ಜೋಡಣೆ ವಿವರ
ಜಿಲ್ಲೆ ಒಟ್ಟು ಮತದಾರರು ಆಧಾರ್ ಜೋಡಣೆ ಮತದಾರರು ಶೇಕಡಾ
ಬಿಬಿಎಂಪಿ(ಉತ್ತರ) 20,81,27 6,27,188 30.13
ಬೆಂಗಳೂರು(ನಗರ) 33,75,921 9,37,015 27.76
ಬಿಬಿಎಂಪಿ(ಕೇಂದ್ರ) 17,09,282 4,42,351 25.88
ಬಿಬಿಎಂಪಿ(ದಕ್ಷಿಣ) 19,49,322 3,93,612 20.19
