ಕರ್ನಾಟಕದಲ್ಲಿದ್ದಾರೆ 5.09 ಕೋಟಿ ಮತದಾರರು: ಆಯೋಗದಿಂದ ಮತದಾರರ ಕರಡು ಪಟ್ಟಿ ಬಿಡುಗಡೆ
ಮುಂಬರುವ 2023ರ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗವು ಬಿಡುಗಡೆ ಮಾಡಿದ್ದು, ಅದರನ್ವಯ ರಾಜ್ಯದಲ್ಲಿ ಒಟ್ಟು 5.09 ಕೋಟಿ ಮತದಾರರಿದ್ದಾರೆ. ಬುಧವಾರದಿಂದ ಡಿ.8ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಬೆಂಗಳೂರು (ನ.10): ಮುಂಬರುವ 2023ರ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗವು ಬಿಡುಗಡೆ ಮಾಡಿದ್ದು, ಅದರನ್ವಯ ರಾಜ್ಯದಲ್ಲಿ ಒಟ್ಟು 5.09 ಕೋಟಿ ಮತದಾರರಿದ್ದಾರೆ. ಬುಧವಾರದಿಂದ ಡಿ.8ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. 2023ರ ಜ.5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಬುಧವಾರ ವಾರ್ತಾ ಇಲಾಖೆಯ ವಾರ್ತಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಈ ವಿಷಯ ತಿಳಿಸಿದ್ದಾರೆ. ಕರಡು ಮತದಾರರ ಪಟ್ಟಿಯ ಪ್ರಕಾರ ಒಟ್ಟು 5,09,01,662 ಮತದಾರರಿದ್ದಾರೆ.
ಇದರಲ್ಲಿ 5,08,53,845 ಸಾಮಾನ್ಯ ಮತದಾರರಿದ್ದು, 46,817 ಸೇವಾ ಮತದಾರರಿದ್ದಾರೆ. ಸಾಮಾನ್ಯ ಮತದಾರರಲ್ಲಿ 2,56,39,736 ಪುರುಷರು ಮತ್ತು 2,52,09,619 ಮಹಿಳೆಯರು ಮತ್ತು 4,490 ಇತರೆ ಮತದಾರರಿದ್ದಾರೆ. ಬುಧವಾರದಿಂದ (ನ.9) ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಡಿ.12ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಡಿ.26ರಂದು ಆಕ್ಷೇಪಣೆಗಳ ವಿಲೇವಾರಿ ಮಾಡಲಾಗುತ್ತದೆ. 2023ರ ಜ.5ರಂದು ಮತದಾರರ ಪಟ್ಟಿಯ ಅಂತಿಮ ಪ್ರಕಟಣೆ ಮಾಡಲಾಗುತ್ತದೆ. ನ.12, 20 ಮತ್ತು ಡಿ.3, 4ರಂದು ವಿಶೇಷ ಪ್ರಚಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಭೂಕಂಪವಾದರೂ ಅಲುಗಾಡದು ಕೆಂಪೇಗೌಡ ಪ್ರತಿಮೆ: ಸಚಿವ ಅಶ್ವತ್ಥ್‌ನಾರಾಯಣ
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರು ಇದ್ದು, 6,41,466 ಮತದಾರರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರವು ಅತಿ ಕಡಿಮೆ 1,65,485 ಮತದಾರರನ್ನು ಹೊಂದಿದೆ. ಒಟ್ಟು 58,282 ಮತಗಟ್ಟೆಗಳ ಸಂಖ್ಯೆ ಇದೆ. ರಾಜ್ಯದಲ್ಲಿ ಒಟ್ಟು ಯುವ ಮತದಾರರ ಸಂಖ್ಯೆಯು 6,97,784 ರಷ್ಟಿದೆ. ಯುವ ಮತದಾರರ ಸಂಖ್ಯೆಯಲ್ಲಿ 2,95,860 ರಷ್ಟುಹೆಚ್ಚಳವಾಗಿದೆ. 18-19 ವಯಸ್ಸಿನ ಯುವಕ/ಯುವತಿಯರ ಹೆಸರುಗಳನ್ನು ಶೇ.100ರಷ್ಟುಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಹೆಚ್ಚಿನ ಪ್ರಚಾರ ಕೈಗೊಳ್ಳಲಾಗುತ್ತಿದೆ.
ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಮತದಾರರು ಮೃತರಾಗಿದ್ದರೆ, ವಲಸೆ ಹೋಗಿದ್ದರೆ, ಎರಡು ಕಡೆ ಹೆಸರುಗಳು ಇದ್ದರೆ ಅಂತಹ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಕ್ರಮ ಜರುಗಿಸಲಾಗುತ್ತಿದೆ. ವಿವಿಧ ಕಾರಣಗಳಿಂದಾಗಿ ಸುಮಾರು 27 ಲಕ್ಷ ಮತದಾರರನ್ನು ತೆಗೆದುಹಾಕಲಾಗಿದೆ ಎಂದು ವಿವರಿಸಿದರು. ಮತದಾರರ ಹೆಸರು ಸೇರ್ಪಡೆಗೆ ಅರ್ಜಿ ನಮೂನೆ 6, ಸಾಗರೋತ್ತರ ಭಾರತೀಯ ಮತದಾರರಿಂದ ಮತದಾರರ ಪಟ್ಟಿಯಲ್ಲಿ ನಮೂನೆ- 6ಎ ಅರ್ಜಿಯನ್ನು ಬಳಸಬೇಕು.
ಮತದಾರರ ಪಟ್ಟಿಯಲ್ಲಿರುವ ಮತದಾರರು ಸ್ವಯಂ ಪ್ರೇರಿತರಾಗಿ ಆಧಾರ್ ಅಥವಾ ಯಾವುದಾದರೂ ಒಂದು ದಾಖಲೆಗಳನ್ನು ಜೋಡಣೆ ಮಾಡಿ ದೃಢೀಕರಿಸಲು ನಮೂನೆ -6 ಬಿ, ಹೆಸರು ಸೇರ್ಪಡೆಯ ವಿರುದ್ಧ ಆಕ್ಷೇಪಣೆ, ಹೆಸರು ತೆಗೆದು ಹಾಕಲು ನಮೂನೆ-7, ವಿಧಾನಸಭಾ ಕ್ಷೇತ್ರದ ಒಳಗೆ/ಹೊರಗೆ ನಿವಾಸ ಬದಲಾವಣೆ, ತಿದ್ದುಪಡಿ, ಮೊಬೈಲ್ ಸಂಖ್ಯೆ ನಮೂದಿಸುವುದು, ಅಸ್ಪಷ್ಟಭಾವಚಿತ್ರಗಳನ್ನು ಬದಲಿಸುವುದು, ಮತದಾರರ ಪಟ್ಟಿಯಲ್ಲಿ ಅಂಗವಿಕಲ ವ್ಯಕ್ತಿಯ ಗುರುತನ್ನು ನಮೂದು ಮಾಡಲು ನಮೂನೆ 8 ಅನ್ನು ಬಳಕೆ ಮಾಡಬೇಕು ಎಂದು ಹೇಳಿದರು. ಇನ್ನು, ನೋಂದಣಿಯಾಗುವ ವೇಳೆ 80 ವರ್ಷಕ್ಕಿಂತ ಮೇಲ್ಪಟ್ಟಮತ್ತು ಅಂಗವಿಕಲ ಮತದಾರರು ಮಾಹಿತಿ ನೀಡಿದರೆ ಅವರಿಗೆ ಅಂಚೆಮತ ಚೀಟಿ ವ್ಯವಸ್ಥೆ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ವೋಟರ್ ಐಡಿಗೆ ಆಧಾರ್ ಜೋಡಣೆ ಕಡ್ಡಾಯವಲ್ಲ: ಗುರುತಿನ ಚೀಟಿಯೊಂದಿಗೆ ಆಧಾರ್ ಜೋಡಣೆ ಮಾಡಬೇಕು ಎಂಬುದು ಕಡ್ಡಾಯವಲ್ಲ. ಆದರೆ, ಆಧಾರ್ ಜೋಡಣೆಯ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸ್ಪಷ್ಟಪಡಿಸಿದ್ದಾರೆ. ಈವರೆಗೆ ಶೇ.68ರಷ್ಟುಗುರುತಿನ ಚೀಟಿಯೊಂದಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಶೇ.100ರಷ್ಟುಮಾಡಬೇಕು ಎಂಬ ಉದ್ದೇಶವು ಆಯೋಗಕ್ಕೆ ಇದೆ. ಬೆಂಗಳೂರಲ್ಲಿ ಕಡಿಮೆ ಪ್ರಮಾಣದಲ್ಲಿ ಆಗಿದ್ದು, ಶೇ.28ರಷ್ಟುಆಗಿದೆ. ಆದರೆ, ಆಧಾರ್ ಜೋಡಣೆ ಕಡ್ಡಾಯವಲ್ಲ. ಒಂದು ವೇಳೆ ಯಾರಾದರೂ ಜೋಡಣೆ ಮಾಡಲೇಬೇಕು ಎಂದು ಒತ್ತಾಯಿಸಿದರೆ 1950ಗೆ ಕರೆ ಮಾಡಿ ದೂರು ನೀಡಬಹುದಾಗಿದೆ. ಮಾ.31ರೊಳಗೆ ಜನತೆಯಲ್ಲಿ ಅರಿವು ಮೂಡಿಸಿ ಆಧಾರ್ ಜೋಡಣೆಯ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ಬಿಜೆಪಿ ಹಿಂದು ಆಕ್ರೋಶ: ಕಾಂಗ್ರೆಸ್ ಪ್ರತಿಕೃತಿ ದಹನ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ನೋಂದಣಿ ಮಾಡಲಾಗುತ್ತಿದ್ದು, ಒಂದು ಲಕ್ಷಕ್ಕಿಂತ ಹೆಚ್ಚು ಮಂದಿ ನೋಂದಣಿಯಾಗಿದ್ದಾರೆ. ಈ ಪೈಕಿ 4999 ಮಂದಿ ಅಧಿಕೃತವಾಗಿ ತಾವು ಲೈಂಗಿಕ ಅಲ್ಪಸಂಖ್ಯಾತರು ಎಂದು ಘೋಷಿಸಿಕೊಂಡಿದ್ದಾರೆ
-ಮನೋಜ್‌ಕುಮಾರ್ ಮೀನಾ, ಮುಖ್ಯ ಚುನಾವಣಾಧಿಕಾರಿ