ಕಬ್ಬನ್ ಪಾರ್ಕ್ ಮಾದರಿಯಲ್ಲಿ ಬೆಂಗಳೂರಿನ 153 ಎಕರೆ ವಿಸ್ತೀರ್ಣದಲ್ಲಿ ಮತ್ತೊಂದು ಬೃಹತ್ ಉದ್ಯಾನವನ ನಿರ್ಮಾಣವಾಗಲಿದೆ. ಈ ಉದ್ಯಾನವನದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ವಿವಿಧ ಸ್ಥಳೀಯ ಪ್ರಭೇದದ ಸಸ್ಯಗಳನ್ನು ಬೆಳೆಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರು (ಜೂ.02): ಕಬ್ಬನ್ ಪಾರ್ಕ್ ಮಾದರಿಯಲ್ಲಿ ಬೆಂಗಳೂರಿನ 153 ಎಕರೆ ವಿಸ್ತೀರ್ಣದಲ್ಲಿ ಮತ್ತೊಂದು ಬೃಹತ್ ಉದ್ಯಾನವನ ನಿರ್ಮಾಣವಾಗಲಿದೆ. ಈ ಉದ್ಯಾನವನದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ವಿವಿಧ ಸ್ಥಳೀಯ ಪ್ರಭೇದದ ಸಸ್ಯಗಳನ್ನು ಬೆಳೆಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಮಾದಪ್ಪನಹಳ್ಳಿ ನೆಡುತೋಪಿನಲ್ಲಿ ನಡೆದ ಅರಣ್ಯ ಇಲಾಖೆಯ ಆಂತರಿಕ ಕಾರ್ಯಕ್ರಮದಲ್ಲಿ ಪ್ರಸ್ತುತ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ವಶದಲ್ಲಿರುವ ಭೂಮಿಯನ್ನು ಅರಣ್ಯ ಇಲಾಖೆಗೆ ಹಿಂಪಡೆಯುವ ಸಮಾರಂಭದಲ್ಲಿ ಮಾತನಾಡಿದ ಅವರು ಉತ್ತರ ಬೆಂಗಳೂರಿನಲ್ಲಿ ಜನದಟ್ಟಣೆ ಮನಗಂಡು ವಿಸ್ತೃತ ಯೋಜನಾ ವರದಿ ತಯಾರಿಸಿ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿದೆ, ಈ ಉದ್ಯಾನವು ಮುಂಬರುವ ದಿನಗಳಲ್ಲಿ ಉತ್ತರ ಬೆಂಗಳೂರಿಗೆ ಮಹತ್ವದ ಶ್ವಾಸ ತಾಣವಾಗಲಿದೆ ಎಂದರು.

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದವರು ಇಲ್ಲಿ ನೀಲಗಿರಿ ಮರಗಳನ್ನು ಬೆಳೆಸಿದ್ದು. ಈ ಎಲ್ಲ ಮರಗಳನ್ನು ತೆರವು ಮಾಡಿ, ಸ್ಥಳೀಯ ಪ್ರಭೇದದ ಬಿಲ್ವ, ಮಹಾಬಿಲ್ವ, ಹೊನ್ನೆ, ನೇರಳೆ, ಮತ್ತಿ, ಆಲ, ಅರಳಿಯ ಜೊತೆಗೆ ಪಶ್ಚಿಮಘಟ್ಟದಲ್ಲಿ ಬೆಳೆಯುವ ವಿವಿಧ ಪ್ರಭೇದದ ಸಸ್ಯಗಳನ್ನೂ ಬೆಳೆಸಲು ಉದ್ದೇಶಿಸಲಾಗಿದೆ. ಮಾದಪ್ಪನಹಳ್ಳಿಯದ 153 ಎಕರೆ ಅರಣ್ಯ ಭೂಮಿಯ ಸುತ್ತ ಕಾಂಪೌಂಡ್ ಹಾಕಲಾಗಿದ್ದು, ಒತ್ತುವರಿ ಆಗದಂತೆ ರಕ್ಷಿಸಲಾಗಿದೆ. ಈ ಪ್ರದೇಶದಲ್ಲಿ ಇಂದಿರಾ ಗಾಂಧಿ ಬೃಹತ್ ಉದ್ಯಾನ, ವಿಶ್ವಗುರು ಬಸವಣ್ಣ ಔಷಧೀಯ ಸಸ್ಯ ವನ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಪಕ್ಷಿ ಲೋಕ, ನಾಡಪ್ರಭು ಕೆಂಪೇಗೌಡ ಕಿರು ಮೃಗಾಲಯ ಹಾಗೂ ವೃಕ್ಷೋದ್ಯಾನ ನಿರ್ಮಾಣ ಮಾಡಲು ಚಿಂತಿಸಲಾಗಿದೆ ಎಂದರು.

ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಲಾಲ್ ಬಾಗ್ ಇರುವ ಸ್ಥಳದಲ್ಲಿ ಒಂದು ಹೂವಿನ ತೋಟ ಮಾಡಿ ಅಲ್ಲಿ ಗೋಪುರ ನಿರ್ಮಿಸಿದ್ದರು. ನಂತರದ ದಿನಗಳಲ್ಲಿ ಅಂದರೆ 1760ರಲ್ಲಿ ಹೈದರಾಲಿ ಆ ಹೂತೋಟವನ್ನು ಲಾಲ್ ಬಾಗ್ ಆಗಿ ಅಭಿವೃದ್ಧಿ ಪಡಿಸಿದರು. ಇದು 240 ಎಕರೆ ಪ್ರದೇಶದಲ್ಲಿದ್ದು. ಲಾಲ್ ಬಾಗ್ ಅನ್ನು 265 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಬೆಂಗಳೂರಿನಲ್ಲಿರುವ ಮತ್ತೊಂದು ಬೃಹತ್ ಉದ್ಯಾನ ಕಬ್ಬನ್ ಪಾರ್ಕ್, ಅಂದಿನ ಮೈಸೂರು ಸಂಸ್ಥಾನದ ಕಮಿಷನರ್ ಆಗಿದ್ದ ಜಾನ್ ಮೀಡ್ ಅವರು ಮುಖ್ಯ ಎಂಜಿನಿಯರ್ ಆಗಿದ್ದ ರಿಚರ್ಜ್ ಸ್ಯಾಂಕಿ ಅವರಿಂದ 1870ರಲ್ಲಿ ಕಬ್ಬನ್ ಪಾರ್ಕ್ ವಿನ್ಯಾಸ ಮಾಡಿಸಿದ್ದರು. ಇಂದು 197 ಎಕರೆ ಪ್ರದೇಶದಲ್ಲಿ ಕಬ್ಬನ್ ಪಾರ್ಕ್ ಜನಾಕರ್ಷಣೆಯ ತಾಣವಾಗಿದೆ. ಆದಾದ ಬಳಿಕ ಬೆಂಗಳೂರಿನಲ್ಲಿ ಹಲವು ಸಣ್ಣ ಉದ್ಯಾನಗಳ ನಿರ್ಮಾಣವಾಗಿದೆಯಾದರೂ ಬೃಹತ್ ಉದ್ಯಾನ ನಿರ್ಮಾಣವಾಗಿಲ್ಲ ಎಂದರು.

ಒಂದೂವರೆ ಶತಮಾನದ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಾಣದ ಕಲ್ಪನೆ ಸಾಕಾರವಾಗುತ್ತಿದೆ. ಇಂದು ಅಧಿಕೃತವಾಗಿ ಈ ಭೂಮಿಯನ್ನು ಅರಣ್ಯ ಇಲಾಖೆಗೆ ಪಡೆಯಲಾಗಿದ್ದು, ನೀಲಗಿರಿ ತೆರವು ಮಾಡಿ, ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ, ಮುಂದಿನ 2 ತಿಂಗಳಲ್ಲಿ ಮಾನ್ಯ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರಿಂದ ಉದ್ಯಾನವನಕ್ಕೆ ಶಂಕುಸ್ಥಾಪನೆ ಮಾಡಿಸಲಾಗುವುದು. ಈ ಉದ್ಯಾನ ಅಭಿವೃದ್ಧಿ ಆದ ಬಳಿಕ ಇದೊಂದು ಪ್ರೇಕ್ಷಣೀಯ ಸ್ಥಳವಾಗಲಿದೆ. ಈ ಉದ್ಯಾನವನದ ನಿರ್ಮಾಣಕ್ಕೆ ಆರಂಭಿಕವಾಗಿ 20 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಮುಂದಿನ ಮೂರು ವರ್ಷದೊಳಗೆ ಈ ಉದ್ಯಾನ ಪೂರ್ಣಗೊಳಿಸಿ, ಉದ್ಘಾಟಿಸುವ ಗುರಿಯನ್ನು ಹೊಂದಲಾಗಿದೆ. ಯಲಹಂಕ ಸುತ್ತಮುತ್ತ ಇರುವ ನೂರಾರು ವಸತಿ ಬಡಾವಣೆಗಳ ಜನರಿಗೆ ಇದು ಉತ್ತಮ ಶ್ವಾಸತಾಣ ಮತ್ತು ಜನಾಕರ್ಷಣೆಯ ಕೇಂದ್ರವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿಸ್ ಲಿಮಿಟೆಡ್ ಅಧ್ಯಕ್ಷ ಮನೋಹರ್, ಅರಣ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಸುಭಾಷ್ ಮಾಲ್ಕಡೆ, ಕೆ.ಎಫ್.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಶಿರೂರ್, ಹಿರಿಯ ಅರಣ್ಯಾಧಿಕಾರಿಗಳಾದ ಸೀಮಾ ಗಾರ್ಗ್, ಶಾಶ್ವತಿ ಮಿಶ್ರಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.