ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯು ₹2,384 ಕೋಟಿ ಮೌಲ್ಯದ ಬೃಹತ್ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ವಂಚನೆ ಜಾಲವನ್ನು ಭೇದಿಸಿದೆ. ನಕಲಿ ಸಂಸ್ಥೆಗಳನ್ನು ಸೃಷ್ಟಿಸಿ, ಸ್ಕ್ರ್ಯಾಪ್ ಹೆಸರಿನಲ್ಲಿ ವಹಿವಾಟು ನಡೆಸಿದಂತೆ ಬಿಂಬಿಸಿ ಸರ್ಕಾರಕ್ಕೆ ವಂಚಿಸುತ್ತಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು (ಮೇ 13): ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆ (ವಿಚಕ್ಷಣಾ ದಳ) ಅಧಿಕಾರಿಗಳು ಬೃಹತ್ ತೆರಿಗೆ ವಂಚನೆಯ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬರೋಬ್ಬರಿ 2,384 ಕೋಟಿ ರೂಪಾಯಿಗಳ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಅಂತರರಾಜ್ಯ ಮಟ್ಟದ ದಂಧೆಯನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರು ಯಾರು?
ವಾಣಿಜ್ಯ ತೆರಿಗೆ ಇಲಾಖೆಯ ಜಾಲಕ್ಕೆ ಬಿದ್ದಿರುವ ಆರೋಪಿಗಳನ್ನು ಸಲೀಮುಲ್ಲಾ ಬೇಗ್ (59) ಮತ್ತು ಹಸೇನ್ ಬೇಗ್ (35) ಎಂದು ಗುರುತಿಸಲಾಗಿದೆ. ಇವರು ನಕಲಿ ದಾಖಲೆಗಳನ್ನು ಬಳಸಿ ಅನೇಕ ಸಂಸ್ಥೆಗಳನ್ನು ಸೃಷ್ಟಿಸಿ, ಅವುಗಳ ಮೂಲಕ ವಹಿವಾಟು ನಡೆಸಿದಂತೆ ಬಿಂಬಿಸಿ ಸರ್ಕಾರದಿಂದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದು ವಂಚಿಸುತ್ತಿದ್ದರು.
ವಂಚನೆಯ ಜಾಲ ಹೇಗಿತ್ತು?
- ಅಧಿಕಾರಿಗಳ ತನಿಖೆಯ ವೇಳೆ ಬರೋಬ್ಬರಿ 127 ನಕಲಿ ಸಂಸ್ಥೆಗಳ ಬೃಹತ್ ಜಾಲ ಪತ್ತೆಯಾಗಿದೆ. ಈ ಪೈಕಿ 72 ಸಂಸ್ಥೆಗಳು ನೇರವಾಗಿ ಸಂಶಯಾಸ್ಪದ ವಹಿವಾಟಿನಲ್ಲಿ ತೊಡಗಿದ್ದವು.
- ಸಲೀಮುಲ್ಲಾ ಬೇಗ್: ಈತ ಸುಮಾರು 2172 ಕೋಟಿ ರೂಪಾಯಿಗಳ ನಕಲಿ ವಹಿವಾಟು ತೋರಿಸಿ 382 ಕೋಟಿ ರೂಪಾಯಿಗಳ ನಕಲಿ ITC ಪಡೆದಿದ್ದ.
- ಹಸೇನ್ ಬೇಗ್: ಈತ 55 ಸಂಸ್ಥೆಗಳ ಮೂಲಕ 212 ಕೋಟಿ ವಹಿವಾಟು ನಡೆಸಿ 35 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದ.
- ಒಟ್ಟಾರೆಯಾಗಿ ಈ ಇಬ್ಬರಿಂದಲೇ ಸುಮಾರು 420 ಕೋಟಿ ರೂಪಾಯಿಗಳ ನಕಲಿ ITC ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.
ಸ್ಕ್ರ್ಯಾಪ್ ಹೆಸರಿನಲ್ಲಿ ಹಗರಣ!
ಈ ಜಾಲವು ಟಂಗ್‌ಸ್ಟನ್ ಕಾರ್ಬೈಡ್ ಸ್ಕ್ರ್ಯಾಪ್ (Tungsten Carbide scrap), ಇ-ವೇಸ್ಟ್ (E-waste) ಹಾಗೂ ಇತರ ಲೋಹದ ಸ್ಕ್ರ್ಯಾಪ್‌ಗಳ ಹೆಸರಿನಲ್ಲಿ ನಕಲಿ ಬಿಲ್ಲಿಂಗ್ ನಡೆಸುತ್ತಿತ್ತು. ವಾಸ್ತವದಲ್ಲಿ ಯಾವುದೇ ಸರಕುಗಳ ಸರಬರಾಜು ನಡೆಯುತ್ತಿರಲಿಲ್ಲ, ಕೇವಲ ಕಾಗದದ ಮೇಲೆ ಮಾತ್ರ ವಹಿವಾಟು ಸೃಷ್ಟಿಸಿ ಜಿಎಸ್‌ಟಿ ವಂಚನೆ ಮಾಡಲಾಗುತ್ತಿತ್ತು.
SKS ಟ್ರೇಡರ್ಸ್ ಮೇಲೆ ಅಧಿಕಾರಿಗಳ ಕಣ್ಣು:
ತನಿಖೆಯ ವೇಳೆ 'SKS ಟ್ರೇಡರ್ಸ್' ಎಂಬ ಸಂಸ್ಥೆಯ ಬೆಳವಣಿಗೆ ಅಧಿಕಾರಿಗಳ ಗಮನ ಸೆಳೆದಿದೆ. ಈ ಸಂಸ್ಥೆಯ ವಹಿವಾಟು ಕೇವಲ ಮೂರು ವರ್ಷಗಳಲ್ಲಿ 50 ಕೋಟಿಯಿಂದ 900 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿತ್ತು. ಆದರೆ ಈ ಭಾರಿ ಪ್ರಮಾಣದ ಏರಿಕೆಗೆ ಪೂರಕವಾದ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲದ ಕಾರಣ, ಇದು ನಕಲಿ ವಹಿವಾಟು ಎಂದು ಅಧಿಕಾರಿಗಳು ಖಾತರಿಪಡಿಸಿಕೊಂಡಿದ್ದಾರೆ.
ಏಳಕ್ಕೆ ಏರಿದ ಬಂಧಿತರ ಸಂಖ್ಯೆ:
ಜಿಎಸ್‌ಟಿ ಕಾಯ್ದೆಯ ಅಡಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪ್ರಸಕ್ತ ವರ್ಷದಲ್ಲಿ ಇಲಾಖೆಯು ಈವರೆಗೆ ಒಟ್ಟು 7 ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಕಳೆದ ಜನವರಿ ತಿಂಗಳಿನಲ್ಲಿಯೂ ಇದೇ ರೀತಿಯ 1,464 ಕೋಟಿ ವಹಿವಾಟಿನ ಹಗರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿತ್ತು. ಸದ್ಯ ಬಂಧಿತರಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ದಂಧೆಯಲ್ಲಿ ಇನ್ನೂ ದೊಡ್ಡ ಕೈಗಳು ಇರುವ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.


