ಏರೋನಿಕ್ಸ್ ಮೀಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯ ಅವಳಿ ಕೊಲೆ ಪ್ರಕರಣ ಸಂಬಂಧ ಮೃತರ ಎದುರಾಳಿ ಕಂಪನಿ ಮಾಲಿಕ ಅರುಣ್ ಕುಮಾರ್‌ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬೆಂಗಳೂರು (ಜು.14) : ಏರೋನಿಕ್ಸ್ ಮೀಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯ ಅವಳಿ ಕೊಲೆ ಪ್ರಕರಣ ಸಂಬಂಧ ಮೃತರ ಎದುರಾಳಿ ಕಂಪನಿ ಮಾಲಿಕ ಅರುಣ್ ಕುಮಾರ್‌ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬನ್ನೇರುಘಟ್ಟರಸ್ತೆಯ ಬಿಳೇಕಹಳ್ಳಿ ನಿವಾಸಿ ಅರುಣ್ ಕುಮಾರ್(Arun kumar ), ತನ್ನ ವ್ಯವಹಾರಕ್ಕೆ ಅಡ್ಡಿಯಾದರೂ ಎಂಬ ಕಾರಣಕ್ಕೆ ಏರೋನಿಕ್ಸ್ ಮೀಡಿಯಾ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ(Phaneendra subrahmanya Aeronics Media Company) ಹಾಗೂ ಸಿಇಒ ವಿನು ಕುಮಾರ್(Vinu kumar) ಅವರನ್ನು ಕಂಪನಿಯ ಉದ್ಯೋಗಿಗಳ ಮೂಲಕವೇ ಹತ್ಯೆ ಮಾಡಿಸಿದ್ದ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಈ ಅವಳಿ ಕೊಲೆ ನಡೆದ ಮರು ದಿನವೇ ಅನುಮಾನದ ಮೇರೆಗೆ ಅರುಣ್ ಕುಮಾರ್‌ನನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಗುರುವಾರ ಆತನನ್ನು ಬಂಧನ ಪ್ರಕ್ರಿಯೆಗೆ ಒಳಪಡಿಸಿದರು. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ 8 ದಿನ ಪೊಲೀಸ್ ಕಸ್ಟಡಿಗೆ ತನಿಖಾ ತಂಡ ಪಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಜೋಡಿ ಕೊಲೆ: ಜೋಕರ್ ಫೆಲಿಕ್ಸ್ & ಟೀಂ ಎಸ್ಕೇಪ್ ಪ್ಲಾನ್ ಬಿಚ್ಚಿಟ್ಟ ಸಿಸಿಟಿವಿಗಳು!
ವೃತ್ತಿ ವೈಷಮ್ಯಕ್ಕೆ ಬಲಿ:
ಹಲವು ವರ್ಷಗಳ ಹಿಂದೆ ಇಂಟರ್‌ನೆಟ್ ಸೇವೆ ಕಲ್ಪಿಸುವ ಜಿ-ನೆಟ್(G-Net) ಹೆಸರಿನ ಬ್ರಾಡ್ ಬ್ಯಾಡ್ ಕಂಪನಿಯನ್ನು ಅರುಣ್ ಕುಮಾರ್ ಆರಂಭಿಸಿದ್ದು, ಈ ಕಂಪನಿಯಲ್ಲೇ ಕೊಲೆಗೀಡಾದ ಫಣೀಂದ್ರ, ವಿನುಕುಮಾರ್, ಆರೋಪಿಗಳಾದ ಶಬರೀಶ್ ಅಲಿಯಾಸ್ ಫಿಲಿಕ್ಸ್, ಸಂತೋಷ್ ಕೆಲಸ ಮಾಡುತ್ತಿದ್ದರು. ಪ್ರಾರಂಭದಲ್ಲಿ ಎಲ್ಲರೂ ಆತ್ಮೀಯ ಒಡನಾಡಿಗಳಾಗಿದ್ದರು. ತಾವು ಉದ್ಯಮಿಗಳಾಗಿ ಬೆಳೆಯುವ ಮಹಾತ್ವಾಂಕ್ಷೆ ಹೊಂದಿದ್ದ ಫಣೀಂದ್ರ, ವಿನುಕುಮಾರ್ ಹಾಗೂ ಶ್ರೀಜಾ ಅವರು, ಜಿ-ನೆಟ್ ಕಂಪನಿಯಲ್ಲಿ ಕೆಲಸ ತೊರೆದು 2022ರ ನವೆಂಬರ್‌ನಲ್ಲಿ ಏರೋನಿಕ್ಸ್ ಮೀಡಿಯಾ ಕಂಪನಿ ಹೆಸರಿನಲ್ಲಿ ತಮ್ಮದೇ ಪ್ರತ್ಯೇಕ ಬ್ರಾಡ್ ಬ್ಯಾಂಡ್ ಕಂಪನಿಯನ್ನು ಸ್ಥಾಪಿಸಿದ್ದರು. ಇದು ಅರುಣ್ ಹಾಗೂ ಫಣೀಂದ್ರ ತಂಡ ನಡುವೆ ಮನಸ್ತಾಪಕ್ಕೆ ಕಾರಣವಾಯಿತು. ಬಳಿಕ ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ನೆಟ್ ಖರೀದಿ ವಿಚಾರದಲ್ಲಿ ಇಬ್ಬರ ನಡುವೆ ತಿಕ್ಕಾಟ ತಾರಕ್ಕೇರಿತು ಎನ್ನಲಾಗಿದೆ.
ತನ್ನ ಬ್ಯುಸಿನೆಸ್‌ಗೆ ಅಡ್ಡಿಯಾದರು ಎಂದು ಕೆರಳಿದ ಅರುಣ್ ಕುಮಾರ್, ಫಣೀಂದ್ರ ಹತ್ಯೆಗೆ ನಿರ್ಧರಿಸಿದ್ದ. ಇದಕ್ಕಾಗಿ ತನ್ನ ನಿಷ್ಠ ಭಂಟ ಫಿಲಿಕ್ಸ್ ಹಾಗೂ ಸಂತೋಷ್ ಜತೆ ಚರ್ಚಿಸಿ ಸಂಚು ರೂಪಿಸಿದ್ದ. ಪೂರ್ವ ನಿಯೋಜಿತ ಸಂಚಿನಂತೆ ಮಂಗಳವಾರ ಮಧ್ಯಾಹ್ನ ಫಣೀಂದ್ರ ಕಚೇರಿಗೆ ನುಗ್ಗಿದ ಹಂತಕರು, ಎಂಡಿ ಫಣೀಂದ್ರನನ್ನು ಗುರಿಯಾಗಿಸಿ ದಾಳಿ ನಡೆಸಿದರು. ಆದರೆ ಆ ವೇಳೆ ಎಂಡಿ ರಕ್ಷಣೆಗೆ ಬಂದ ಸಿಇಒ ವಿನುಕುಮಾರ್ ಮೇಲೂ ಹಲ್ಲೆ ನಡೆಸಿ ಭೀಕರವಾಗಿ ಕೊಂದು ಪರಾರಿಯಾಗಿದ್ದರು. ಹತ್ಯೆಗೈದ ಬಳಿಕ ಅರುಣ್ ಕುಮಾರ್‌ಗೆ ಹಂತಕರು ಕರೆ ಮಾಡಿ ತಪ್ಪಿಸಿಕೊಂಡಿದ್ದರು ಎಂದು ಮೂಲಗಳು ಹೇಳಿವೆ.
ಸಿಡಿಆರ್, ಸಿಬ್ಬಂದಿ ಹೇಳಿದ ಸುಳಿವು
ಅವಳಿ ಕೊಲೆ ಪ್ರಕರಣ ಸಂಬಂಧ ಫಣೀಂದ್ರ ಕಂಪನಿಯ ಉದ್ಯೋಗಿಗಳನ್ನು ಪೊಲೀಸರು ವಿಚಾರಣೆ ನಡೆಸಿದಾಗ ಅರುಣ್ ಮೇಲೆ ಅವರು ಶಂಕೆ ವ್ಯಕ್ತಪಡಿಸಿದ್ದರು. ಕೂಡಲೇ ಜಾಗೃತರಾದ ಪೊಲೀಸರು, ಅರುಣ್ ಹಾಗೂ ಫಿಲಿಕ್ಸ್ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಹತ್ಯೆ ಹಾಗೂ ಹತ್ಯೆ ನಂತರ ಪರಸ್ಪರ ಸಂಪರ್ಕದಲ್ಲಿದ್ದ ಸಂಗತಿ ಗೊತ್ತಾಯಿತು. ಈ ಸುಳಿವು ಆಧರಿಸಿ ಮಂಗಳವಾರ ರಾತ್ರಿಯೇ ಅರುಣ್ ಕುಮಾರ್‌ನನ್ನು ವಶಕ್ಕೆ ಪಡೆದ ಪೊಲೀಸರು, ಸುದೀರ್ಘವಾಗಿ ವಿಚಾರಣೆ ನಡೆಸಿದ ಬಳಿಕ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ತಪ್ಪಿಸಿಕೊಳ್ಳಲು ಫಿಲಿಕ್ಸ್‌ಗೆ ಹಣ ಕೊಟ್ಟಿದ್ದ ಅರುಣ್
ಫಣೀಂದ್ರ ಹತ್ಯೆ ಮಾಡಿದ ಬಳಿಕ ತಪ್ಪಿಸಿಕೊಳ್ಳಲು ಫಿಲಿಕ್ಸ್ ಹಾಗೂ ಆತನ ತಂಡಕ್ಕೆ .10 ಸಾವಿರವನ್ನು ಅರುಣ್ ಕುಮಾರ್ ನೀಡಿದ್ದ. ತನ್ನ ಬಾಸ್ ಅರುಣ್‌ಗೆ ಶಿವಮೊಗ್ಗ ಜಿಲ್ಲೆಯ ಫಿಲಿಕ್ಸ್ ನಿಷ್ಠನಾಗಿದ್ದು, ತನ್ನ ಶಿಷ್ಯನಿಗೆ ಅರುಣ್ ಆಗಾಗ್ಗೆ ಮೋಜು ಮಸ್ತಿಗಾಗಿ ಹಣಕಾಸು ನೆರವು ನೀಡುತ್ತಿದ್ದ. ಹೀಗಾಗಿ ತನ್ನ ಬಾಸ್‌ನ ಉದ್ಯಮಕ್ಕೆ ಅಡ್ಡಿಯಾದ ಫಣೀಂದ್ರ ಹತ್ಯೆಗೆ ಫಿಲಿಕ್ಸ್ ಹೊಂಚು ಹಾಕಿದ್ದ ಎಂದು ಮೂಲಗಳು ಮಾಹಿತಿ ನೀಡಿವೆ.
ಜಿ-ನೆಟ್ ಕಂಪನಿ ನೌಕರನ್ನು ಏರೋನಿಕ್ಸ್‌ಗೆ ಸೆಳೆದಿದ್ದ ಫಣೀಂದ್ರ, ವಿನು; ನಷ್ಟ ಪ್ರತಿಕಾರಕ್ಕೆ ಎಂಡಿ, ಸಿಇಒ ಹತ್ಯೆ!
ರಾಜಕೀಯದಲ್ಲಿ ಸಕ್ರಿಯ
ಬ್ರಾಡ್ ಬ್ಯಾಂಡ್ ಉದ್ಯಮದಲ್ಲಿ ಪ್ರಗತಿ ಕಂಡಿದ್ದ ಅರುಣ್, ರಾಜಕೀಯದಲ್ಲೂ ಪ್ರವರ್ಧಮಾನಕ್ಕೆ ಬರುವ ಆಸೆ ಹೊಂದಿದ್ದ. ಇದಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ (ಆಪ್) ಸೇರ್ಪಡೆಯಾಗಿ ಕೆಲಸ ಮಾಡುತ್ತಿದ್ದ. ಕೊನೆಗೆ ಆತನ ಸಂಘಟನಾ ಚಟುವಟಿಕೆಗಳಲ್ಲಿ ಗುರುತಿಸಿದ ಪಕ್ಷದ ನಾಯಕರು, ಅರುಣ್ ಕುಮಾರ್‌ನನ್ನು ಬೆಂಗಳೂರು ನಗರ ಘಟಕದ ಒಂದು ವಿಭಾಗಕ್ಕೆ ಉಪಾಧ್ಯಕ್ಷನಾಗಿ ನೇಮಿಸಿದ್ದರು. ಚುನಾವಣೆವರೆಗೆ ಪಕ್ಷದಲ್ಲಿ ಸಕ್ರಿಯವಾಗಿದ್ದ ಅರುಣ್‌ಕುಮಾರ್ ಬಳಿಕ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಮುಖ ರಾಜಕೀಯ ಪಕ್ಷವೊಂದರ ಅಭ್ಯರ್ಥಿ ಪರವಾಗಿ ತಟಸ್ಥವಾಗಿದ್ದ ಎಂದು ತಿಳಿದು ಬಂದಿದೆ.
