ಇಂದು ಬೆಂಗಳೂರು ಅಧುನಿಕತೆ ವಿಚಾರದಲ್ಲಿ ಅದೆಷ್ಟೇ ಬೆಳೆದಿರಬಹುದು. ಆದರೆ, ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಬೆಂಗಳೂರಿನ ಪ್ರಯಾಣ ಎಂದರೆ ಅದು ದುಸ್ಸಾಹಸದ ಮಾತು. ಈಗ ಬೆಂಗಳೂರಿಗೆ ತುರ್ತಾಗಿ ಅಗತ್ಯವಿರೋದು ಸಮೂಹ ಸಾರಿಗೆ ಮಾತ್ರ.
ಬೆಂಗಳೂರು (ಜು.19): ಮೆಟ್ರೋ, ಉಪನಗರ ರೈಲು, ಸರ್ಕಾರಿ ಬಸ್.. ಬೃಹತ್ ನಗರದ ಸಾರಿಗೆ ವಿಚಾರದಲ್ಲಿ ಈ ಮೂರು ಸಮೂಹ ಸಾರಿಗೆ ಮಾಧ್ಯಮಗಳು ಭಾರಿ ಅವಶ್ಯಕ. ಆದರೆ, ಬೆಂಗಳೂರಿನ ವಿಚಾರದಲ್ಲಿ ಹೋಲಿಕೆ ಮಾಡೋದರೆ, ಇದರಲ್ಲಿ ಯಾವುದೂ ಕೂಡ ಅಚ್ಚುಕಟ್ಟಾಗಿ ಇಲ್ಲ. ಮುಂದಿನ 100 ವರ್ಷಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಬೆಂಗಳೂರಿನ ಕಲ್ಪನೆಗಳು ಬೆಳೆಯುತ್ತಿಲ್ಲ. ಮೆಟ್ರೋ ಕಾಮಗಾರಿಗಳೂ ಕೂಡ ನಿಧಾನಕ್ಕೆ ಸಾಗುತ್ತಿದ್ದರೆ, ಬೆಂಗಳೂರು ಸಬರ್ಬನ್ ರೈಲು ಯೋಜನೆ ಎಲ್ಲಿಯವರೆಗೆ ಹೋಗಿದೆ ಅನ್ನೋ ಮಾಹಿತಿಯೇ ಇಲ್ಲ. ಇನ್ನು ಸರ್ಕಾರಿ ಬಸ್‌ಗಳು ಗಲ್ಲಿ ಗಲ್ಲಿಗೆ ತಲುಪಲು ಬೆಂಗಳೂರು ಟ್ರಾಫಿಕ್ ದೊಡ್ಡ ಅಡ್ಡಿಯಾಗಿದೆ. ಒಂದು ಬಸ್ ಹೊರಟು ನಿಂತರೆ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗುವ ಸ್ಥಿತಿ ಬಂದಿದೆ. ಈ ಎಲ್ಲವನ್ನೂ ನೋಡಿದರೆ, ಒಂದು ಸ್ಪಷ್ಟ ನಗರವನ್ನು ಕಟ್ಟುವ ನಿಟ್ಟಿನಲ್ಲಿ ಬೆಂಗಳೂರಿಗೆ ಮಾದರಿಯಾಗಬೇಕಿರುವುದು ಜಪಾನ್‌ನ ರಾಜಧಾನಿ ಟೋಕಿಯೋ. ಅದಕ್ಕೆ ಕಾರಣ ಬೆಂಗಳೂರು ಹಾಗೂ ಟೋಕಿಯೋ ಎರಡೂ ಕೂಡ ವಿಸ್ತೀರ್ಣದಲ್ಲಿ ಹೆಚ್ಚೂ ಕಡಿಮೆ ಒಂದೇ ಪ್ರಮಾಣದಲ್ಲಿದೆ. ಇನ್ನು ಸಬರ್ಬನ್ ರೈಲು ವ್ಯವ್ಯಸ್ಥೆಗೆ ಟೋಕಿಯೋ ಜೊತೆ ಭಾರತದ್ದೇ ಆದ ಮುಂಬೈ ನಗರ ಮಾದರಿಯಾಗಬೇಕು. ಈ ಕುರಿತಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಕೂಡ ವೈರಲ್ ಆಗುತ್ತಿದೆ.
ಬೆಂಗಳೂರು-ಟೋಕಿಯೋ ಸಮೂಹ ಸಾರಿಗೆ ಹೋಲಿಕೆ: ಜಪಾನ್ ರಾಜಧಾನಿ ಟೋಕಿಯೋ ನಗರ 2194 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದ್ದರೆ, ಬೆಂಗಳೂರು ನಗರ 2196 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಟೋಕಿಯೋದ ಜನಸಂಖ್ಯೆ ಬರೋಬ್ಬರಿ 3.6 ಕೋಟಿ ಆಗಿದ್ದರೆ, ಬೆಂಗಳೂರಿನಲ್ಲಿ 1.6 ಕೋಟಿ ಜನಸಂಖ್ಯೆ ಇದೆ. ಸಮೂಹ ಸಾರಿಗೆಗೆ ಟೋಕಿಯೋ ಬಳಸೋದು ಸಬರ್ಬನ್ ರೈಲು ಹಾಗೂ ಮೆಟ್ರೋ. ಒಟ್ಟಾರೆ ಟೋಕಿಯೋ ನಗರದಲ್ಲಿ ಈ ಎರಡೂ ಸಮೂಹಸಾರಿಗೆಗಳ ಜಾಲ 4715 ಕಿಲೋಮೀಟರ್ ಎಂದರೆ ನಿಮಗೆ ಅಚ್ಚರಿಯಾಗದೇ ಇರದು. ಟೋಕಿಯೋದಲ್ಲಿ ಪ್ರತಿದಿನ ರೈಲುಗಳಲ್ಲಿ ಅಂದಾಜು 4 ಕೋಟಿಗೂ ಅಧಿಕ ರೈಡ್‌ಗಳಾಗುತ್ತದೆ. ಇನ್ನು ಬಸ್‌ಗಳನ್ನು 5 ಲಕ್ಷ ಜನರು ಬಳಕೆ ಮಾಡುತ್ತಾರೆ. ಇಡೀ ನಗರದಲ್ಲಿ ಖಾಸಗಿ ವಾಹನಗಳ ಸಂಖ್ಯೆ ಕೇವಲ 30 ಲಕ್ಷ ಮಾತ್ರ. ಅದು ಇಡೀ ಜನಸಂಖ್ಯೆಯ ಕೇವಲ ಶೇ. 8ರಷ್ಟು ಪ್ರಮಾಣ. ಬಹುತೇಕ ಇಡೀ ಟೋಕಿಯೋ ಜನಸಂಖ್ಯೆ ರೈಲನ್ನೇ ನಂಬಿದ್ದಾರೆ. ಸಮೂಹ ಸಾರಿಗೆಯೊಂದಿಗೆ ನಡಿಗೆ ಹಾಗೂ ಸೈಕ್ಲಿಂಗ್‌ಅನ್ನು ಅಲ್ಲಿನ ಜನ ಇಷ್ಟಪಡುತ್ತಾರೆ.
ಇನ್ನು ಬೆಂಗಳೂರಿನ ಸಮೂಹ ಸಾರಿಗೆಗೆ ಇರುವ ಒಂದೇ ಮಾರ್ಗ ಮೆಟ್ರೋ. ಪ್ರಸ್ತುತ ಇದರ ನೆಟ್‌ವರ್ಕ್ 7 ಕಿಲೋಮೀಟರ್ ಆಗಿದ್ದು, ಅಂದಾಜು 6 ಲಕ್ಷ ರೈಡ್‌ಗಳು ಪ್ರತಿದಿನ ಆಗುತ್ತದೆ. ಇನ್ನು ಬಸ್‌ಗಳನ್ನು ಬಳಸುವವರ ಸಂಖ್ಯೆ 28 ಲಕ್ಷ. ಬೆಂಗಳೂರಿನಲ್ಲಿ 1.1 ಕೋಟಿ ಖಾಸಗಿ ವಾಹನಗಳಿವೆ. ಅಂದರೆ ನಗರದ ಜನಸಂಖ್ಯೆಯ ಶೇ. 73ರಷ್ಟು. ಖಾಸಗಿ ವಾಹನಗಳು ಅಗತ್ಯಕ್ಕಿಂತ ಹೆಚ್ಚು ನಗರದಲ್ಲಿದೆ. ಜನರು ಸಮೂಹ ಸಾರಿಗೆಗಿಂತ ಹೆಚ್ಚಾಗಿ ಖಾಸಗಿ ವಾಹನಗಳನ್ನೇ ಬಳಸುತ್ತಾರೆ.
ಬೆಂಗ್ಳೂರು ಸಬರ್ಬನ್ ರೈಲು ಯೋಜನೆ: ಮಾರ್ಗ ನಿರ್ಮಾಣ ಅಂತಿಮ
ಬೆಂಗಳೂರು-ಮುಂಬೈ ಸಬರ್ಬನ್ ರೈಲು ಹೋಲಿಕೆ: ದೇಶದ ವಾಣಿಜ್ಯ ರಾಜಧಾನಿ ಎನಿಸಿಕೊಂಡಿರುವ ಮುಂಬೈನಲ್ಲಿ ಅಂದಾಜು. 2.6 ಕೋಟಿ ಜನಸಂಖ್ಯೆ ಇದೆ. ಇನ್ನು ಬೆಂಗಳೂರಿನ ಜನಸಂಖ್ಯೆ 1.6 ಕೋಟಿ. ನಮಗಿಂತ ಒಂದೂವರೆ ಪಟ್ಟು ಹೆಚ್ಚು ಜನಸಂಖ್ಯೆ ಹೊಂದಿರುವ ಮುಂಬೈನಲ್ಲಿ ಅಂದಾಜು 43 ಲಕ್ಷ ಕಾರ್ ಹಾಗೂ ಬೈಕ್‌ಗಳು ಇರಬಹುದು. ಆದರೆ, ಬೆಂಗಳೂರಿನಲ್ಲಿ ಇರುವ ಖಾಸಗಿ ವಾಹನಗಳು (ಕಾರು-ಬೈಕ್) 1.1 ಕೋಟಿ.
ಬೆಂಗಳೂರಿಗರ ಬಹುಬೇಡಿಕೆಯ ಸಬರ್ಬನ್ ರೈಲಿಗೆ ಕೇಂದ್ರ ಸಂಪುಟ ಅಸ್ತು
ಮುಂಬೈ ಜನರ ಜೀವನಾಡಿಯಾಗಿರುವ ಸಬರ್ಬನ್ ರೈಲು ಪ್ರತಿದಿನ 3 ಸಾವಿರ ರೈಡ್‌ಗಳನ್ನು ಮಾಡುತ್ತವೆ. ಇದರಿಂದ ಪ್ರಯಾಣ ಮಾಡುವವ ಸಂಖ್ಯೆ ಬರೋಬ್ಬರಿ 90 ಲಕ್ಷ ಮಂದಿ. ಆದರೆ, ಬೆಂಗಳೂರು ಸಬರ್ಬನ್ ರೈಲು ಯೋಜನೆ ಇನ್ನೂ ಕಾರ್ಯಹಂತದಲ್ಲಿಯೇ ಇದೆ. ಸಬರ್ಬನ್ ರೈಲು, ಮೆಟ್ರೋ ಹಾಗೂ ಬಿಎಂಟಿಸಿ ಬಸ್‌ಗಳ ಸೇವೆಗಳು ಸಮ್ಮಿಳಿತ ಆಗುವವರೆಗೂ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗೋದಿಲ್ಲ.
