ಬೆಂಗಳೂರು(ಜ.14): ಬಹು ನಿರೀಕ್ಷೆಯ ಬೆಂಗಳೂರು ಉಪನಗರ ರೈಲು ಯೋಜನೆ ಅನುಷ್ಠಾನ ಸಂಬಂಧ ಸಿದ್ಧತೆ ಆರಂಭಿಸಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ( ಕೆ-ರೈಡ್‌) ಯೋಜನೆಯ ನಾಲ್ಕು ಕಾರಿಡಾರ್‌ ಪೈಕಿ ಮೊದಲ ಹಂತದಲ್ಲಿ ಬೈಯಪನಹಳ್ಳಿ-ಚಿಕ್ಕಬಾಣಾವಾರ (25.01 ಕಿ.ಮೀ.) ಮತ್ತು ಹೀಲಳಿಗೆ- ರಾಜಾನುಕುಂಟೆ (46.24 ಕಿ.ಮೀ.) ಕಾರಿಡಾರ್‌ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.

15,767 ಕೋಟಿ ರು. ಅಂದಾಜು ವೆಚ್ಚದ 148.17 ಕಿ.ಮೀ.ಯ ಸದರಿ ಯೋಜನೆಯ ಡಿಪಿಆರ್‌ಗೆ ಕಳೆದ ಅಕ್ಟೋಬರ್‌ನಲ್ಲಿ ಅನುಮೋದನೆ ನೀಡಿದ್ದ ಕೇಂದ್ರ ಸಚಿವ ಸಂಪುಟ ಆರ್ಥಿಕ ವ್ಯವಹಾರಗಳ ಸಮಿತಿ, ಯೋಜನೆಯ ಪ್ರಮುಖ ನಾಲ್ಕು ಕಾರಿಡಾರ್‌ ಪೈಕಿ ಆದ್ಯತೆ ಮೇರೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್‌) ರೈಲು ನಿಲ್ದಾಣ-ದೇವನಹಳ್ಳಿ (41.40 ಕಿ.ಮೀ.) ಕಾರಿಡಾರ್‌ ಕೈಗೆತ್ತಿಕೊಂಡು ಮೂರು ವರ್ಷದಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿತ್ತು. ಇದೀಗ ಕೆ-ರೈಡ್‌ ಸಂಸ್ಥೆ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಮೊದಲ ಹಂತದಲ್ಲಿ ಬೈಯಪನಹಳ್ಳಿ-ಚಿಕ್ಕ ಬಾಣಾವಾರ ಮತ್ತು ಹೀಲಳಿಗೆ- ರಾಜಾನುಕುಂಟೆ ಕಾರಿಡಾರ್‌ ಕೈಗೆತ್ತಿಕೊಳ್ಳಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಭೂಸ್ವಾಧೀನಕ್ಕೆ ಶೀಘ್ರದಲ್ಲೇ ಅಧಿಸೂಚನೆ

ಸ್ಪೆಷಲ್‌ ಪರ್ಪಸ್‌ ವೆಹಿಕಲ್‌(ಎಸ್‌ಪಿವಿ) ಮಾದರಿಯಡಿ ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ. ಅಂದರೆ, ಒಟ್ಟು ಯೋಜನಾ ವೆಚ್ಚದ ಪೈಕಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ ಶೇ.20ರಷ್ಟುಹಣ ಭರಿಸಲಿವೆ. ಉಳಿದ ಶೇ.60ರಷ್ಟುಹಣವನ್ನು ಕೆ-ರೈಡ್‌ ಸಂಸ್ಥೆ ಹಣಕಾಸು ಸಂಸ್ಥೆಗಳು ಅಥವಾ ಬ್ಯಾಂಕ್‌ಗಳಿಂದ ಸಾಲದ ರೂಪದಲ್ಲಿ ಪಡೆಯಲಿದೆ. ಸದರಿ ಯೋಜನೆ ಅನುಷ್ಠಾನಕ್ಕೆ 355 ಹೆಕ್ಟೇರ್‌ ಭೂಮಿ ಅಗತ್ಯವಿದ್ದು, ಈ ಪೈಕಿ 102 ಎಕರೆ ಖಾಸಗಿ ಭೂಮಿ ಸ್ವಾಧೀನ ಪಡೆಯಬೇಕಿದೆ. ಡಿಪಿಆರ್‌ ಅನ್ವಯ ಭೂಸ್ವಾಧೀನಕ್ಕೆ 1,470 ಕೋಟಿ ರು. ಅಗತ್ಯವಿದೆ. ಭೂಸ್ವಾಧೀನ ಸಂಬಂಧ ಈ ಮಾಸಾಂತ್ಯದ ವೇಳೆಗೆ ಕೆ-ರೈಡ್‌ ಸಂಸ್ಥೆ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ.

ಬೆಂಗಳೂರು ಸಬರ್ಬನ್‌ ರೈಲು ಸಾಕಾರದತ್ತ ಇನ್ನೊಂದು ಹೆಜ್ಜೆ

ಮೊದಲ ಹಂತದಲ್ಲಿ ಒಂದನೇ ಕಾರಿಡಾರ್‌ಗೆ ಆಗ್ರಹ

ಉಪ ನಗರ ರೈಲು ಯೋಜನೆಯ ಅನುಷ್ಠಾನದ ವೇಳೆ ಪ್ರಮುಖ ನಾಲ್ಕು ಕಾರಿಡಾರ್‌ ಪೈಕಿ ಕೆಎಸ್‌ಆರ್‌ ರೈಲು ನಿಲ್ದಾಣ-ದೇವನಹಳ್ಳಿ ಕಾರಿಡಾರ್‌ಗೆ ಪ್ರಥಮ ಆದ್ಯತೆ ನೀಡಬೇಕು. ಸದರಿ ಮಾರ್ಗವು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ಕ್ಕೆ ಸಂಪರ್ಕ ಕಲ್ಲಿಸುತ್ತದೆ. ಈ ಮಾರ್ಗದಲ್ಲಿ ನಿತ್ಯ 25 ಸಾವಿರಕ್ಕೂ ಅಧಿಕ ಏರ್‌ಪೋರ್ಟ್‌ ಸಿಬ್ಬಂದಿ ಸೇರಿದಂತೆ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಯಾವುದೇ ಸಂಚಾರ ದಟ್ಟಣೆ ಇಲ್ಲದೆ ನಗರದಿಂದ ವಿಮಾನ ನಿಲ್ದಾಣ ತಲುಪಲು ಅನುಕೂಲವಾಗುತ್ತದೆ. ಹೀಗಾಗಿ ಮೊದಲ ಹಂತದಲ್ಲಿ ಸದರಿ ಕಾರಿಡಾರ್‌ ಕೈಗೆತ್ತಿಕೊಳ್ಳಬೇಕು ಎಂಬ ಆಗ್ರಹವಿದೆ.

ಉಪನಗರ ರೈಲು ಯೋಜನೆ ಪ್ರಮುಖ ಕಾರಿಡಾರ್‌ಗಳು

* ಬೆಂಗಳೂರು ಸಿಟಿ ರೈಲು ನಿಲ್ದಾಣ-ದೇವನಹಳ್ಳಿ 41.40 ಕಿ.ಮೀ.
* ಬೈಯಪನಹಳ್ಳಿ ಟರ್ಮಿನಲ್‌-ಚಿಕ್ಕಬಾಣಾವಾರ 25 ಕಿ.ಮೀ.
* ಕೆಂಗೇರಿ-ವೈಟ್‌ಫೀಲ್ಡ್‌ 35.52 ಕಿ.ಮೀ.
* ಹೀಲಳಿಗೆ ನಿಲ್ದಾಣ-ರಾಜಾನುಕುಂಟೆ 46.24 ಕಿ.ಮೀ.

ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸೇವೆ ಕಲ್ಪಿಸುವುದು ಹಲವು ವರ್ಷಗಳ ಬೇಡಿಕೆಯಾಗಿದೆ. ಹೀಗಾಗಿ ಯೋಜನೆ ಅನುಷ್ಠಾನದ ವೇಳೆ ಮೊದಲ ಹಂತದಲ್ಲಿ ಆದ್ಯತೆ ಮೇರೆಗೆ ಕೆಎಸ್‌ಆರ್‌ ರೈಲು ನಿಲ್ದಾಣ-ದೇವನಹಳ್ಳಿ ಕಾರಿಡಾರ್‌ ಕೈಗೆತ್ತಿಕೊಳ್ಳಬೇಕು ಎಂದು ಕರ್ನಾಟಕ ರೈಲು ವೇದಿಕೆಯ ಸಂಚಾಲಕ ಕೃಷ್ಣಪ್ರಸಾದ್‌ ತಿಳಿಸಿದ್ದಾರೆ.