ದುರಂತದ ಬಳಿಕ ಎಚ್ಚೆತ್ತ ಬೆಂಗಳೂರು, 350 ಕಟ್ಟಡ ಧ್ವಂಸಕ್ಕೆ ಜಿಬಿಎ ಆಯುಕ್ತರ ನೋಟಿಸ್, ಶಿಥಿಲಾವಸ್ಥೆಯಲ್ಲಿರುವ ಕಾಂಪೌಂಡ್ ಹಗೂ ಕಟ್ಟಡಗಳು ಮಳೆಗೆ ಧರೆಗುರುಳಿ ಅನಾಹುತ ಸಂಭವಿಸುವ ಮೊದಲೇ ಧ್ವಂಸಗೊಳಿಸಲು ಸೂಚಿಸಲಾಗಿದೆ.
ಬೆಂಗಳೂರು (ಮೇ.08) ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಒಂದು ಮಳೆಗೆ ಭಾರಿ ಅನಾಹುತ ಸಂಭವಿಸಿತ್ತು. ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಬಳಿಯ ಕಾಂಪೌಂಡ್ ಕುಸಿದು 7 ಮಂದಿ ಮೃತಪಟ್ಟಿದ್ದರು. ಇತ್ತ ವಿದ್ಯುತ್ ಸ್ಪರ್ಶಿಸಿ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ದುರಂತ ಘಚನೆ ಬಳಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಚ್ಚೆತ್ತುಕೊಂಡಿದೆ. ಇದೀಗ ಶಿಥಿಲಾವಸ್ಥೆಯಲ್ಲಿರುವ ಕಾಂಪೌಂಡ್ ಹಾಗೂ ಕಟ್ಟಡಗಳನ್ನು ಧ್ವಂಸಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನೋಟಿಸ್ ನೀಡಿದೆ.
ಬೃಹತ್ ಬೆಂಗಳೂರಿನ 350 ಕಟ್ಟಡ ಧ್ವಂಸ ಮಾಡಲು ಜಿಬಿಎ ನೋಟಿಸ್
ಬೆಂಗಳೂರಿನಲ್ಲಿರುವ 350 ಕಟ್ಟಡಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಈ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದೆ. ಹೀಗಾಗಿ ತಕ್ಷಣವೇ ಈ ಕಟ್ಟಡಗಳನ್ನು ಧ್ವಂಸಗೊಳಿಸಲು ಸೂಚಿಸಲಾಗಿದೆ. ಗುರುತಿಸಿರುವ 350 ಕಟ್ಟಡಗಳ ಪೈಕಿ ಹಲವು ಕಟ್ಟಡಗಳಲ್ಲಿ ಜನರ ವಸತಿ ಇದೆ. ಕೆಲ ಕಟ್ಟಡಗಳಲ್ಲಿ ಅಂಗಡಿ ಮುಂಗಟ್ಟುಗಳಿವೆ. ಈ ಕಟ್ಟಡಗಳು ಅಪಾಯಕಾರಿಯಾಗಿದ್ದು, ಭಾರಿ ಮಳೆಗೆ ಅನಾಹುತ ಸೃಷ್ಟಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಹೀಗಾಗಿ ಈ 350 ಕಟ್ಟಡಗಳನ್ನು ಧ್ವಂಸಗೊಳಿಸಲು ಸೂಚಿಸಲಾಗಿದೆ.
ಜಿಬಿಎ ಆಯುಕ್ತರ ನೋಟಿಸ್
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಉರುಳಿದ ಮೇಲೆ ಶಿಥಿಲಾವಸ್ಥೆ ಕಟ್ಟಡಗಳ ತೆರವು ಕಾರ್ಯಾಚಣೆ ಆರಂಭಿಸಿದೆ. ಈ ಕುರಿತು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮಹತ್ವದ ನೋಟಿಸ್ ನೀಡಿದ್ದಾರೆ.ನೋಟಿಸ್ ಕಾಲವಾಧಿ ಒಳಗೆ ಶಿಥಿಲಾವಸ್ಥೆ ಕಟ್ಟಡ ಧ್ವಂಸಗೊಳಿಸಬೇಕು ಇಲ್ಲವೇ ಜಿಬಿಎ ತಂಡವೇ ಆ ಕೆಲಸ ಮಾಡಿ ಶುಲ್ಕ ವಿಧಿಸಲಿದೆ ಎಂದು ಮಹೇಶ್ವರ್ ರಾವ್ ಎಚ್ಚರಿಸಿದ್ದಾರೆ. ಮಳೆಯಲ್ಲಿ ಉರುಳಿಬಿದ್ದು ಜನರ ಸಾವು ನೋವಾಗುವ ಮುನ್ನವೇ ಎಚ್ಚೆತ್ತುಕೊಂಡ ಸಹಕರಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮನವಿ ಮಾಡಿದ್ದಾರೆ.
15 ಕಾಂಪೌಂಡ್ ತೆರೆವು
ಬೌರಿಂಗ್ ಆಸ್ಪತ್ರೆ ಬಳಿಯ ಕಾಂಪೌಂಡ್ ಕುಸಿತ ಘಟನೆ ಬಳಿಕ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಈಗಾಗಲೇ 15 ಶಿಥಿಲಾವಸ್ಥೆಯ ಕಾಂಪೌಂಡ್ ತೆರವುಗೊಳಿಸಿದ್ದಾರೆ.
ಬೆಂಗಳೂರು ದಕ್ಷಿಣ ಪಾಲಿಕೆಯಲ್ಲೇ ಅತಿ ಹೆಚ್ಚು ಹಳೇ ಕಟ್ಟಡ ಪತ್ತೆಯಾಗಿದೆ. ಹಳೇ ಕಟ್ಟಡಗಳು ಕುಸಿದು ಬೀಳುವ ಆತಂಕದಲ್ಲಿದ್ದರೂ ಕಾರ್ಯನಿರ್ವಹಿಸುತ್ತಿದೆ. ಇದು ಮತ್ತಷ್ಟು ಅಪಾಯಕ್ಕೆ ದಾರಿ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಪಾಲಿಕೆವಾರು ಶಿಥಿಲಾವಸ್ಥೆ ಕಟ್ಟಡಗಳ ಮಾಹಿತಿ ಹೀಗಿದೆ
- ಬೆಂಗಳೂರು ದಕ್ಷಿಣ ಪಾಲಿಕೆ - 106
- ಬೆಂಗಳೂರು ಉತ್ತರ ಪಾಲಿಕೆ - 84
- ಬೆಂಗಳೂರು ಕೇಂದ್ರ ಪಾಲಿಕೆ - 49
- ಬೆಂಗಳೂರು ಪೂರ್ವ ಪಾಲಿಕೆ - 51
- ಬೆಂಗಳೂರು ಪಶ್ಚಿಮ ಪಾಲಿಕೆ - 60


