ಬೆಂಗಳೂರು :  ಏಕ ಮುಖ ರಸ್ತೆಯಲ್ಲಿ ಹೋಗದಂತೆ ಟ್ರಾಫಿಕ್‌ ಕಾನ್‌ಸ್ಟೇಬಲ್‌ ನೀಡಿದ ಸೂಚನೆಗೆ ಸಮ್ಮತಿಸಿ ರಾಜ್ಯ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರು ಕಾರು ಬಿಟ್ಟು ನಡೆದುಕೊಂಡು ತಮ್ಮ ಸರ್ಕಾರಿ ನಿವಾಸಕ್ಕೆ ತೆರಳಿದ ಅಪರೂಪದ ಘಟನೆ ರೇಸ್‌ ಕೋರ್ಸ್‌ ರಸ್ತೆಯ ತಾಜ್‌ ವೆಸ್ಟೆಂಡ್‌ ಹೋಟೆಲ್‌ ಬಳಿ ಬುಧವಾರ ನಡೆಯಿತು.

ಹೈಗ್ರೌಂಡ್ಸ್‌ ಸಂಚಾರ ಠಾಣೆಯ ಕಾನ್‌ಸ್ಟೇಬಲ್‌ ಸಂತೋಷ್‌ ಎಂಬುವರೇ ಕರ್ತವ್ಯ ಪ್ರಜ್ಞೆ ಮರೆದಿದ್ದು, ಕಾನ್‌ಸ್ಟೇಬಲ್‌ ಅವರಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಹೋಟೆಲ್‌ನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಚಿವರು ಮರಳುವಾಗ ಈ ಘಟನೆ ನಡೆದಿದೆ.

ರೇಸ್‌ ಕೋರ್ಸ್‌ ರಸ್ತೆಯ ಸರ್ಕಾರಿ ನಿವಾಸದಲ್ಲಿ ನೆಲೆಸಿರುವ ಸಾ.ರಾ.ಮಹೇಶ್‌ ಅವರು, ತಮ್ಮ ಮನೆ ಪಕ್ಕದ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಬೆಳಗ್ಗೆ ಭೇಟಿಯಾಗಿದ್ದರು. ಈ ಭೇಟಿ ಬಳಿಕ ಸಚಿವರು ಮನೆಗೆ ಮರಳುತ್ತಿದ್ದರು. ಅದೇ ವೇಳೆ ಹೋಟೆಲ್‌ ಮುಂಭಾಗದಲ್ಲಿ ಕರ್ತವ್ಯ ನಿರತರಾಗಿದ್ದ ಕಾನ್‌ಸ್ಟೇಬಲ್‌ ಸಂತೋಷ್‌ ಅವರು, ತಕ್ಷಣವೇ ಸಚಿವರ ಕಾರನ್ನು ತಡೆದಿದ್ದಾರೆ. 

ಬಳಿಕ ‘ಸರ್‌, ಇದು ಏಕ ಮುಖ ಸಂಚಾರ ರಸ್ತೆ. ಹಾಗಾಗಿ ವಾಹನ ಹೋಗುವಂತಿಲ್ಲ’ ಎಂದು ಹೇಳಿದ್ದಾರೆ. ಆಗ ಮರು ಮಾತನಾಡದೆ ಸಚಿವರು ತಕ್ಷಣವೇ ಕಾರಿನಿಂದಿಳಿದು ನಡೆದುಕೊಂಡು ಮನೆಗೆ ತೆರಳಿದರು. ಬಳಿಕ ಅವರ ಸರ್ಕಾರಿ ಕಾರು, ಚಾಲುಕ್ಯ ವೃತ್ತದಲ್ಲಿ ತಿರುವು ಪಡೆದು ಮನೆಗೆ ಬಂದಿತು ಎಂದು ಅಧಿಕಾರಿಗಳು ಹೇಳಿದ್ದಾರೆ.