3 ತಿಂಗಳಲ್ಲಿ ರಾಜ್ಯದಲ್ಲಿ ಹಣ ನೀಡಿ 4 ಲಕ್ಷ ಮಂದಿ 3ನೇ ಡೋಸ್ ಹಾಕಿಸಿಕೊಂಡಿದ್ದು 3.35 ಲಕ್ಷ ಮಂದಿ ಬೆಂಗಳೂರಿನವರಾಗಿದ್ದಾರೆ. ಉಳಿದಂತೆ 60 ಸಾವಿರ ಮಂದಿ ರಾಜ್ಯದ ಇತರೆ ಭಾಗದವರಾಗಿದ್ದಾರೆ.
ಜಯಪ್ರಕಾಶ್ ಬಿರಾದಾರ್
ಬೆಂಗಳೂರು (ಜು.15): ಕೊರೋನಾ ಲಸಿಕೆ ಮೂರನೇ ಡೋಸ್‌ಗೆ ಶುಲ್ಕ ನಿಗದಿ ಪಡಿಸಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಕಾಸು ಕೊಟ್ಟು ಮುನ್ನೆಚ್ಚರಿಕಾ (ಮೂರನೇ) ಡೋಸ್ ಪಡೆದವರ ಪೈಕಿ ಶೇ.85ರಷ್ಟುಮಂದಿ ಬೆಂಗಳೂರಿಗರು! ನಗರದಲ್ಲಿ ಖಾಸಗಿ ಆಸ್ಪತ್ರೆಗಳು ಹೆಚ್ಚಿದ್ದ ಕಾರಣ ರಾಜ್ಯದಲ್ಲಿ ಮೂರನೇ ಡೋಸ್ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಮೂರನೇ ಡೋಸ್ ಲಭ್ಯವಿದ್ದ 130 ಆಸ್ಪತ್ರೆಗಳ ಪೈಕಿ ಬೆಂಗಳೂರಿನಲ್ಲಿಯೇ 110 ಆಸ್ಪತ್ರೆಗಳಿದ್ದವು. ಹೀಗಾಗಿಯೇ, ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಹಣ ನೀಡಿ ಲಸಿಕೆ ಪಡೆದ 3.97 ಲಕ್ಷ ಮಂದಿಯಲ್ಲಿ 3.35 ಲಕ್ಷ ಮಂದಿ ಬೆಂಗಳೂರಿನವರಾಗಿದ್ದಾರೆ. ಉಳಿದಂತೆ 60 ಸಾವಿರ ಮಂದಿ ರಾಜ್ಯದ ಇತರೆ ಭಾಗದವರಾಗಿದ್ದಾರೆ. ಮೂರನೇ ಅಲೆಯ ಬಳಿಕ ಬೆಂಗಳೂರಿನಲ್ಲಿ ಹೆಚ್ಚು ಸೋಂಕು ಪ್ರಕರಣಗಳು ಕಾಣಿಸಿಕೊಂಡಿರುವುದು ಸಹ ಸೋಂಕು ಪ್ರಕರಣಗಳು, ಬೆಂಗಳೂರಿನಲ್ಲಿ ಹೆಚ್ಚಿನ ಜನರು ಮುನ್ನೆಚ್ಚರಿಕೆ ಡೋಸ್ ಪಡೆಯಲು ಕಾರಣವಾಗಿವೆ. ಬಿಬಿಎಂಪಿ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ 2.1 ಲಕ್ಷ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಮತ್ತು 3.6 ಲಕ್ಷ ಮಂದಿ 60 ವರ್ಷ ಮೇಲ್ಪಟ್ಟವರು ಉಚಿತವಾಗಿ ಮೂರನೇ ಡೋಸ್ ಪಡೆದಿದ್ದಾರೆ.
ಶುಲ್ಕ ನಿಗದಿಯಿಂದ ಹಿನ್ನೆಡೆ: ಕಳೆದ ಏಪ್ರಿಲ್ 10ರಿಂದ ದೇಶಾದ್ಯಂತ ಮೂರನೇ ಡೋಸ್ ಆರಂಭಿಸಲಾಯಿತು. ಆರೋಗ್ಯ, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಉಚಿತ ಎಂದು ಘೋಷಿಸಲಾಗಿತ್ತು. ಆದರೆ, 18-59 ವರ್ಷದವರಿಗೆ ಮಾತ್ರ .225 ಶುಲ್ಕ ನಿಗದಿ ಪಡಿಸಿ, ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವಂತೆ ಸೂಚಿಸಲಾಗಿತ್ತು. ಹೀಗಾಗಿ 18- 59 ವಯೋಮಾನದ ಬಹುತೇಕ ಜನರು ಲಸಿಕೆಯಿಂದ ದೂರು ಉಳಿದಿದ್ದರು. ಮೂರನೇ ಡೋಸ್ ಹಿನ್ನಡೆಗೆ ಶುಲ್ಕ ನಿಗದಿಯೇ ಅತ್ಯಂತ ಪ್ರಮುಖ ಕಾರಣವಾಗಿತ್ತು. ರಾಜ್ಯದಲ್ಲಿ ಮೂರನೇ ಡೋಸ್‌ಗೆ ಅರ್ಹ (ಎರಡನೇ ಡೋಸ್ ಪಡೆದ ಒಂಬತ್ತು ತಿಂಗಳು ಪೂರೈಸಿದ) 18ರಿಂದ 59 ವರ್ಷದ 1.05 ಕೋಟಿ ಮಂದಿ ಇದ್ದರು. ಆದರೆ, ಇವರಲ್ಲಿ 3.97 ಲಕ್ಷ ಮಂದಿ (ಶೇ.4ರಷ್ಟು) ಮಾತ್ರವೇ ಖಾಸಗಿ ಆಸ್ಪತ್ರೆಗೆ ತೆರಳಿ ಶುಲ್ಕ ಪಾವತಿಸಿ ಲಸಿಕೆಯನ್ನು ಪಡೆದಿದ್ದರು.
Free Booster Dose: ಇಂದಿನಿಂದ ರಾಜ್ಯದಲ್ಲಿ ಉಚಿತ 3ನೇ ಡೋಸ್ ಕೋವಿಡ್ ಲಸಿಕೆ
ಬಿಬಿಎಂಪಿ ವ್ಯಾಪ್ತಿ ಲಸಿಕೆ ಅನುಮಾನ: ಒಂದೆಡೆ ಆರೋಗ್ಯ ಇಲಾಖೆಯು ಶುಕ್ರವಾರದಿಂದ ರಾಜ್ಯಾದ್ಯಂತ ‘ಕೊರೋನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನ’ ಆರಂಭಿಸುವುದಾಗಿ ತಿಳಿಸಿದೆ. ಆದರೆ, ಬಿಬಿಎಂಪಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅಭಿಯಾನ ಕುರಿತು ಮಾರ್ಗಸೂಚಿ ನೀಡಲಿಲ್ಲ. ಮಾರ್ಗಸೂಚಿ ಲಭ್ಯವಾಗದ ಕಾರಣ 18-59 ವರ್ಷದವರಿಗೆ ಉಚಿತವಾಗಿ ಮೂರನೇ ಡೋಸ್ ನೀಡುವ ಅಭಿಯಾನ ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಆಸ್ಪತ್ರೆಗಳಲ್ಲಿ ಆರಂಭವಾಗುವುದು ಅನುಮಾನವಾಗಿದೆ.
ಸಾವಿರದ ಗಡಿಯಲ್ಲೇ ಕೊರೋನಾ ಪ್ರಕರಣ: ಬೆಂಗಳೂರಿನಲ್ಲಿ ಗುರುವಾರ 1068 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.5.36 ರಷ್ಟಿದೆ. 974 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರದಿಯಾಗಿಲ್ಲ.
Booster Dose: 3ನೇ ಡೋಸ್ ಪಡೆದಿದ್ದು ಬರೀ 15% ಜನ!
ನಗರದಲ್ಲಿ ಸದ್ಯ 6252 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 54 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 11,876 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 2656 ಮಂದಿ ಮೊದಲ ಡೋಸ್, 5230 ಮಂದಿ ಎರಡನೇ ಡೋಸ್ ಮತ್ತು 3990 ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ.
ನಗರದಲ್ಲಿ 17,194 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 13811 ಆರ್‌ಟಿಪಿಸಿಆರ್ ಹಾಗೂ 3,383 ಮಂದಿಗೆ ರಾರಯಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲಾಗಿದೆ. ಗುರುವಾರ ನಗರದಲ್ಲಿ ಹೊಸದಾಗಿ ಕಂಟೈನ್ಮೆಂಟ್ ಪ್ರದೇಶ ಸೃಷ್ಟಿಯಾಗಿಲ್ಲ. ಪಶ್ಚಿಮ ವಲಯದಲ್ಲಿ ಒಂದು ಪ್ರದೇಶ ಕಂಟೈನ್ಮೆಂಟ್‌ನಿಂದ ಮುಕ್ತವಾಗಿದೆ. ನಗರದಲ್ಲಿ ಒಟ್ಟು 11 ಸಕ್ರಿಯ ಕಂಟೈನ್ಮೆಂಟ್ ಪ್ರದೇಶಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
