ಬೆಂಗಳೂರಿನ ಸಿಟಿ ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಬಂಗಾರಿ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಸ್ಥಳೀಯರಿಗೆ ನೆರವಾಗುತ್ತಿದ್ದ ಅವರನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಬಂಗಾರಿ ಅವರ ಅಗಲಿಕೆಗೆ ಪೊಲೀಸ್ ಇಲಾಖೆ ಮತ್ತು ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು (ಜೂ. 29): ಬೆಂಗಳೂರು ನಗರದ ಸಿಟಿ ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜನಸ್ನೇಹಿ ಕಾನ್ಸ್‌ಟೇಬಲ್ ಬಂಗಾರಿ ಎನ್ನುವವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇಂದು ಸಾವನ್ನಪ್ಪಿದ್ದಾರೆ. ಈ ಕಾನ್ಸ್‌ಸ್ಟೇಬಲ್ ಒಳ್ಳೆಯ ವ್ಯಕ್ತಿ ಎಂದು ಎಲ್ಲರಿಗೂ ಪರಿಚಿತವಾಗಿದ್ದರು.
ಬಂಗಾರಿ ಸರ್ ಹಲವು ವರ್ಷಗಳಿಂದ ಸಿಟಿ ಮಾರ್ಕೆಟ್‌ನಲ್ಲಿ ಸೇವೆ ಸಲ್ಲಿಸುತ್ತಾ ಸಣ್ಣ-ಪುಟ್ಟ ವ್ಯಾಪಾರಿಗಳಿಗೆ, ಆಟೋ ಚಾಲಕರಿಗೆ, ಗೂಡ್ಸ್ ವಾಹನ ಸವಾರರಿಗೆ, ಬಸ್ ಲಾಕರಿಗೆ ಸೇರಿದಂತೆ ಸ್ಥಳೀಯ ಜನರಿಗೆ ಬಹು ಪ್ರೀತಿಯ ಮತ್ತು ಸ್ನೇಹಪರತೆಯುಳ್ಳ ಪೊಲೀಸ್ ಅಧಿಕಾರಿ ಆಗಿದ್ದರು. ಪೊಲೀಸ್ ಇಲಾಖೆಗೂ ಬಂಗಾರಿ ಉತ್ತಮ ಸೇವೆ ಸಲ್ಲಿಸುವ ಪೊಲೀಸ್ ಅಧಿಕಾರಿ ಆಗಿದ್ದರು. ಇದೀಗ ಅವರಿಗೆ ಸುಮಾರು 35 ವರ್ಷ ವಯಸ್ಸಾಗಿದ್ದು, ಕಳೆದ 2 ವರ್ಷಗಳ ಹಿಂದಷ್ಟೇ ಮದುವೆ ಮಾಡಿಕೊಂಡಿದ್ದರು.
ಬಂಗಾರಿ ಕಳೆದ ಹಲವು ವರ್ಷಗಳಿಂದ ಸಿಟಿ ಮಾರ್ಕೆಟ್‌ನಲ್ಲಿ ಸಂಚಾರಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದು, ಸ್ಥಳೀಯ ಜನರೊಂದಿಗೆ ಸ್ನೇಹಪರತೆಯಿಂದ ಇರುತ್ತಿದ್ದ ಗುಣದಿಂದಲೇ ತುಂಬಾ ಮೆಚ್ಚುಗೆ ಗಳಿಸಿದ್ದರು. ಸದಾ ನೆರವಾಗುವ ಮನೋಭಾವ ಹೊಂದಿದ್ದರು. ಇವರ ವ್ಯಕ್ತಿತ್ವ, ಶಿಷ್ಟಾಚಾರ ಮತ್ತು ಕರ್ತವ್ಯ ನಿಷ್ಠೆಗೆ ಸಾರ್ವಜನಿಕರಿಗೂ ಮತ್ತು ಸಹಪಾಲಕರಿಗೂ ತೀವ್ರವಾದ ಅಭಿಮಾನವಿತ್ತು. ಇಂತಹ ಕಾನ್ಸ್‌ಟೇಬಲ್ ಇಂದು ನಮ್ಮನ್ನು ಅಗಲಿರುವುದು ಪೊಲೀಸ್ ಇಲಾಖೆಗೆ ದೊಡ್ಡ ನಷ್ಟವಾಗಿದೆ ಎಂದು ಸ್ಥಳೀಯ ನಾಗರಿಕರು ಮತ್ತು ಪೊಲೀಸ್ ಇಲಾಖೆ ಸಹ ಸಿಬ್ಬಂದಿ ನೋವು ವ್ಯಕ್ತಪಡಿಸಿದ್ದಾರೆ.
ಇನ್ನು ಮೃತ ಬಂಗಾರಿ ಸರ್ ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರ ಈಕಾಲಿಕ ವಿದಾಯದಿಂದ ಪತ್ನಿ ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳು ತೀವ್ರ ದುಃಖದಲ್ಲಿ ಮುಳುಗಿದ್ದಾರೆ. ಬಂಗಾರಿ ಅವರ ಸಾವಿನ ಸುದ್ದಿ ಪ್ರಕಟವಾದ ಕೂಡಲೇ ಬೆಂಗಳೂರು ಟ್ರಾಫಿಕ್ ಪೊಲೀಸರ ಮಧ್ಯೆ ಶೋಕದ ಛಾಯೆ ಮನೆಮಾಡಿದ್ದು, ಸಹೋದ್ಯೋಗಿಗಳು ಹಾಗೂ ಸ್ಥಳೀಯ ಮಾರುಕಟ್ಟೆ ನಿವಾಸಿಗಳು ಕಣ್ಣೀರಿಟ್ಟಿದ್ದಾರೆ.
