ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಕೆಮಿಕಲ್ ಕಂಪನಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಭಾನುವಾರವಾದರೂ ಸುಮಾರು 20 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿದೆ.

ಬೆಂಗಳೂರು (ಜೂ.28) ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಕೆಮಿಕಲ್ ಕಂಪನಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇಂದು (ಜೂ.28) ಸಂಜೆ 5.10ರ ಸುಮಾರಿಗೆ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಗೆ ವ್ಯಾಪಿಸಿದೆ. ಇಡೀ ಫ್ಯಾಕ್ಟರಿಗೆ ಆವರಿಸಿಕೊಂಡಿದೆ. ಆಸಿಡ್‌, ಟಿನ್ನರ್ ಸೇರಿದಂತೆ ಕೆಮಿಕಲ್ ತಯಾರಿಕಾ ಘಟಕವಾಗಿರುವ ಕಾರಣ ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಭಾನುವಾರ ರಜಾ ದಿನವಾಗಿರು ಕಾರಣ ಕೇವಲ 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಬೆಂಕಿ ಕಾಣಿಸಿಕೊಂಡ ಎಲ್ಲಾ ಕಾರ್ಮಿಕರು ಹೊರಗಿದ್ದ ಕಾರಣ ಅದೃಷ್ಠವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ದಿವ್ಯ ಇಂಪೋಟರ್ಸ್ ಕಂಪನಿಗೆ ಬೆಂಕಿಗೆ ಆಹುತಿಯಾಗಿದೆ. ಬೆಂಗಳೂರಿನ ಬಿಟಿಎಮ್ ಲೇಔಟ್ನ ಹರಿನಾಥ್ ಎಂಬುವಬರಿಗೆ ಸೇರಿದ ಕಂಪನಿ ಇದಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಭಾರಿ ಪ್ರಮಾಣದಲ್ಲಿ ಕೆಮಿಕಲ್ ಇರುವ ಕಾರಣ ಬೆಂಕಿ ನಿಯಂತ್ರಣಕ್ಕೆ ಬರದೆ ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಗ್ಯಾಸ್ ಲೇನ್ ಆಫ್ ಮಾಡಲು ಸಿಬ್ಬಂದಿ ಹರಸಾಹಸ

ಕೆಮಿಕಲ್ ಫ್ಯಾಕ್ಟರಿಯ ಬೆಂಕಿ ತೀವ್ರಗೊಳ್ಳುತ್ತಿದೆ. ಕಂಪನಿ ಒಳಗಡೆ ಗ್ಯಾಸ್ ಲೇನ್ ಇರುವ ಕಾರಣ ಆತಂಕ ಹೆಚ್ಚಾಗಿದೆ. ಗ್ಯಾಸ್ ಲೇನ್‌ಗೆ ಬೆಂಕಿ ತಗುಲಿದರೆ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಸಿಬ್ಬಂದಿಗಳು ಗ್ಯಾಸ್ ಲೈನ್ ಆಫ್ ಮಾಡಲು ಹರಸಾಹಸ ಪಡುತ್ತಿದ್ದಾರೆ. ಬೆಂಕಿ ತೀವ್ರತೆ ಹೆಚ್ಚಾಗುತ್ತಿರುವ ಕಾರಣ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯಾಸ ಪಡುತ್ತಿದ್ದಾರೆ.

ಹೆಚ್ಚುವರಿ ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಕೈಗಾರಿಕೆ ಸುತ್ತ ಮುತ್ತ ಇದೀಗ ಆತಂಕ ಎದುರಾಗಿದೆ. ಗ್ಯಾಸ್ ಲೇನ್‌ಗೆ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡರೆ ಭಾರಿ ಪ್ರಮಾಣದಲ್ಲಿ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಅಗ್ನಿಶಾಮಕ ದಳ ಹಾಗೂ ಕಂಪನಿ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.