Asianet Suvarna News Asianet Suvarna News

ಬೆಂಗಳೂರು ಸ್ಫೋಟ ಸಂಚು: ಶಂಕಿತ ಉಗ್ರರ ಬಳಿ ಸಿಕ್ಕಿದ್ದು ಫಾರಿನ್‌ ಗ್ರೆನೇಡ್‌!

ಸಿಲಿಕಾನ್ ಸಿಟಿಯಲ್ಲಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಜ್ಜಾಗಿದ್ದ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್‌-ಎ-ತೊಯ್ಬಾ (ಎಲ್‌ಇಟಿ)ದ ಐವರು ಶಂಕಿತ ಉಗ್ರರ ಬಳಿ ಪತ್ತೆಯಾದ ಗ್ರೆನೇಡ್‌ಗಳು ವಿದೇಶಿ ಮೂಲದ ಕಂಪನಿ ಉತ್ಪಾದಿತ ಗ್ರೆನೇಡ್‌ಗಳಾಗಿವೆ ಎಂಬ ಮಹತ್ವದ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Bengaluru blast plot Foreign grenade found with suspected terrorists gvd
Author
First Published Jul 30, 2023, 4:00 AM IST

ಬೆಂಗಳೂರು (ಜು.30): ಸಿಲಿಕಾನ್ ಸಿಟಿಯಲ್ಲಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಜ್ಜಾಗಿದ್ದ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್‌-ಎ-ತೊಯ್ಬಾ (ಎಲ್‌ಇಟಿ)ದ ಐವರು ಶಂಕಿತ ಉಗ್ರರ ಬಳಿ ಪತ್ತೆಯಾದ ಗ್ರೆನೇಡ್‌ಗಳು ವಿದೇಶಿ ಮೂಲದ ಕಂಪನಿ ಉತ್ಪಾದಿತ ಗ್ರೆನೇಡ್‌ಗಳಾಗಿವೆ ಎಂಬ ಮಹತ್ವದ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಗ್ರೆನೇಡ್‌ಗಳ ಮೂಲ ಪತ್ತೆ ಬೆನ್ನಲ್ಲೇ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಸಂಚನ್ನು ಕಾರ್ಯಗತಗೊಳಿಸುವ ಕಾರ್ಯಾಚರಣೆಯನ್ನು ವಿದೇಶದಿಂದಲೇ ಲಷ್ಕರ್‌ ಕಮಾಂಡರ್‌ಗಳು ನಿರ್ವಹಿಸಿರುವ ಸಾಧ್ಯತೆಗಳು ಕಂಡು ಬಂದಿವೆ. ಈ ಗ್ರೆನೇಡ್‌ಗಳು ಪಾಕಿಸ್ತಾನದಿಂದ ಶಂಕಿತ ಉಗ್ರರಿಗೆ ಪೂರೈಕೆಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಬೆಂಗಳೂರಿನ ಕೊಡಿಗೇಹಳ್ಳಿ ಮುಖ್ಯರಸ್ತೆಯ ಭದ್ರಪ್ಪ ಲೇಔಟ್‌ನಲ್ಲಿರುವ ಬಂಧಿತ ಶಂಕಿತ ಉಗ್ರ ಜಾಹೀದ್‌ ತಬ್ರೇಜ್‌ ಮನೆ ಮೇಲೆ ದಾಳಿ ನಡೆಸಿ ನಾಲ್ಕು ಜೀವಂತ ಹ್ಯಾಂಡ್‌ ಗ್ರೆನೇಡ್‌ಗಳನ್ನು ಸಿಸಿಬಿ ಜಪ್ತಿ ಮಾಡಿತ್ತು. ಈ ಗ್ರೆನೇಡ್‌ಗಳ ಮೂಲ ತಪಾಸಣೆ ನಡೆಸಿ ವರದಿ ನೀಡುವಂತೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಸಿಸಿಬಿ ಅಧಿಕಾರಿಗಳು ಕಳುಹಿಸಿದ್ದರು. ಪ್ರಾಥಮಿಕ ವರದಿಯಲ್ಲಿ ಗ್ರೆನೇಡ್‌ಗಳು ಸ್ಥಳೀಯವಾಗಿ ತಯಾರಾಗಿಲ್ಲ. ವಿದೇಶ ಮೂಲದ ಕಂಪನಿಗಳು ಉತ್ಪಾದಿತ ಗ್ರೆನೇಡ್‌ಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ‘ನಮ್ಮ ತನಿಖೆಯಲ್ಲಿ ಕೂಡ ಅವುಗಳು ಫಾರಿನ್‌ ಮೇಡ್‌ ಗ್ರೆನೇಡ್‌ಗಳು ಎಂಬುದು ಗೊತ್ತಾಗಿದೆ’ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ತುಮಕೂರು ಜಿಲ್ಲೆಗೆ ಮೆಟ್ರೋ ರೈಲು ತರುವ ಚಿಂತನೆ: ಸಚಿವ ಪರಮೇಶ್ವರ್‌

ಇನ್ನು ಹೆಬ್ಬಾಳ ಸಮೀಪದ ಸುಲ್ತಾನ್‌ ಪಾಳ್ಯದ ಶಂಕಿತ ಉಗ್ರ ಸೈಯದ್‌ ಸುಹೇಲ್‌ ಖಾನ್‌ ಮನೆಯಲ್ಲಿ 7 ನಾಡ ಪಿಸ್ತೂಲ್‌ಗಳು, 45 ಜೀವಂತ ಗುಂಡುಗಳು, ವಾಕಿಟಾಕಿ ಸೆಟ್ಸ್‌, ಡ್ಯಾಗರ್‌ ಹಾಗೂ 12 ಮೊಬೈಲ್‌ ಜಪ್ತಿಯಾಗಿದ್ದವು. ಮತ್ತೊಬ್ಬ ಶಂಕಿತ ಉಗ್ರ ಜಾಹೀದ್‌ ಮನೆಯಲ್ಲಿ ಪತ್ತೆಯಾದ ಗ್ರೆನೇಡ್‌ಗಳು ನಾಡ ಗ್ರೆನೇಡ್‌ಗಳಾಗಿರಬಹುದು (ದೇಶಿ ಗ್ರೆನೇಡ್‌) ಎಂದು ಆರಂಭದಲ್ಲಿ ಶಂಕೆ ವ್ಯಕ್ತವಾಗಿತ್ತು. ಆದರೆ ಆ ಗ್ರೆನೇಡ್‌ಗಳ ಮೇಲೆ ಚುಕ್ಕೆ ಗುರುತುಗಳಿದ್ದವು. ಅವುಗಳು ಫಾರಿನ್‌ ಮೇಡ್‌ ಗ್ರೆನೇಡ್‌ಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುನೈದ್‌ ಮೂಲಕ ಗ್ರೆನೇಡ್‌ ರವಾನೆ: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಎಲ್‌ಇಟಿ ಶಂಕಿತ ಉಗ್ರ, ಆರ್‌.ಟಿ.ನಗರದ ಮಹಮ್ಮದ್‌ ಜುನೈದ್‌ ಮೂಲಕವೇ ಆತನ ಸಂಪರ್ಕದಲ್ಲಿದ್ದ ಬಂಧಿತ ಐವರು ಶಂಕಿತ ಉಗ್ರರಿಗೆ ಗ್ರೆನೇಡ್‌ಗಳು, ಪಿಸ್ತೂಲ್‌ ಹಾಗೂ ಗುಂಡುಗಳು ರವಾನೆಯಾಗಿದ್ದವು. ಪಾಕಿಸ್ತಾನದ ಲಷ್ಕರ್‌ ಕಮಾಂಡರ್‌ಗಳ ಜತೆ ನೇರ ಸಂಪರ್ಕದಲ್ಲಿ ಜುನೈದ್‌ ಇದ್ದಾನೆ. 2008ರ ಬೆಂಗಳೂರು ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಕೇರಳ ಮೂಲದ ಲಷ್ಕರ್‌ ಶಂಕಿತ ಉಗ್ರ ನಸೀರ್‌ ಮೂಲಕವೇ ಪಾಕಿಸ್ತಾನದ ಕಮಾಂಡರ್‌ಗಳ ನಂಟು ಜುನೈದ್‌ಗೆ ಲಭ್ಯವಾಗಿದೆ. ಹೀಗಾಗಿ ಜುನೈದ್‌ ಮುಂದಿಟ್ಟು ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟಿಸಲು ಲಷ್ಕರ್‌ ಸಂಚು ನಡೆಸಿತ್ತು ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಮಾಜಿ ಸಚಿವ ಸುಧಾಕರ್‌

ಕುರಾನ್‌, ಅಲ್ಲಾ ಮೇಲೆ ಪ್ರಮಾಣ ಮಾಡಿಸಿದ್ದ!: ‘ನಿಮಗೆ ಕಳುಹಿಸುವ ಪಾರ್ಸೆಲ್‌ಗಳನ್ನು ನಾನು ಹೇಳುವವರೆಗೆ ತೆರೆದು ನೋಡಬಾರದು’ ಎಂದು ಬಂಧಿತ ಶಂಕಿತ ಐವರು ಉಗ್ರರಿಂದ ಅಲ್ಲಾ ಮತ್ತು ಕುರಾನ್‌ ಮೇಲೆ ಜುನೈದ್‌ ಪ್ರಮಾಣ ಮಾಡಿಸಿದ್ದ ವಿಷಯ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಈ ಸಂಗತಿಯನ್ನು ಶಂಕಿತ ಉಗ್ರರು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios