ಮಿಸ್ ಆಗಿ 10 ಸಾವಿರ ರೂಪಾಯಿ ಕಳಿಸಿದ ಪ್ರಯಾಣಿಕ, ವಾಪಾಸ್ ಕಳಿಸಿದ ಆಟೋ ಚಾಲಕ!
ರೋಡ್‌ನಲ್ಲಿ ಸಿಕ್ಕ ಒಂದು ರೂಪಾಯಿಯನ್ನೂ ಬಿಡದ ಜನ ಇರೋವಾಗ, ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ತನ್ನ ಆಟೋದಲ್ಲಿ ಪ್ರಯಾಣ ಮಾಡಿದ್ದ ಪ್ರಯಾಣಿಕ, ಮಿಸ್ ಆಗಿ 10 ಸಾವಿರ ರೂಪಾಯಿ ಕಳಿಸಿದ್ದ. ಈ ಹಣವನ್ನು ಆಟೋ ಚಾಲಕ ಅವರಿಗೆ ವಾಪಾಸ್ ಕಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ.
ಬೆಂಗಳೂರು (ಏ.11): ಆಟೋ ಚಾಲಕರ ಸಮುದಾಯಕ್ಕೆ ಹೆಮ್ಮೆ ತರುವಂಥ ಸುದ್ದಿ ಇದು. ಆಟೋ ಚಾಲಕನೊಬ್ಬ ಪ್ರಯಾಣಿಕ ತನಗೆ ಮಿಸ್ ಆಗಿ ಕಳಿಸಿದ್ದ 10 ಸಾವಿರ ರೂಪಾಯಿ ಮೊತ್ತವನ್ನು ಅವರಿಗೆ ವಾಪಾಸ್ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಆಟೋರಿಕ್ಷಾ ಚಾಲಕ 32 ವರ್ಷದ ಸಾದಿಕ್ ಪಾಶಾ ತನ್ನ ಪ್ರಾಮಾಣಿಕತೆಯ ಮೂಲಕವೇ ಇಂದು ತಮ್ಮ ಸಮುದಾಯದವರ ಮೆಚ್ಚುಗೆಗೆ ಕಾರಣರಾಗಿದ್ದಾರೆ. ಸೋಮವಾರ ಸಾದಿಕ್ ಪಾಶಾ ಅವರ ಆಟೋದಲ್ಲಿ ಪ್ರಯಾಣ ಮಾಡಿದ್ದ ಉದ್ಯಮಿಯೊಬ್ಬರು ಮಿಸ್ ಆಗಿ, ಸಾದಿಕ್ ಪಾಶಾ ಅವರ ಅಕೌಂಟ್‌ಗೆ 10 ಸಾವಿರ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದರು. ಆದರೆ, ಈ ಹಣವನ್ನು ಸಾದಿಕ್ ಪಾಶಾ ವಾಪಾಸ್ ಉದ್ಯಮಿಗೆ ನೀಡಿದ್ದಾರೆ. ರೈಡ್ ಬುಕ್ಕಿಂಗ್ ಆಪ್ ಮೂಲಕ ಮಾರ್ಚ್ 14 ರಂದು ನಾನು ಸಾದಿಕ್ ಪಾಶಾ ಅವ ಆಟೋ ಸೇವೆಯನ್ನು ಬಳಸಿಕೊಂಡಿದ್ದೆ. ಬಿಟಿಎಂ ಲೇಔಟ್‌ನ ಗಂಗೋತ್ರಿ ಸರ್ಕಲ್‌ನಿಂದ ಕಲಾಸಿಪಾಳ್ಯಕ್ಕೆ ಪ್ರಯಾಣ ಮಾಡಿದ್ದಲ್ಲದೆ, ಯುಪಿಐ ಅಪ್ಲಿಕೇಶನ್ ಮೂಲಕ ಅವರಿಗೆ ಹಣ ಪಾವತಿ ಮಾಡಿದ್ದೆ ಎಂದು ಉದ್ಯಮಿ ಜೋಸ್ ಹೇಳಿದ್ದಾರೆ. ಈ ಪ್ರಯಾಣ ಮುಗಿದು ಬಾಡಿಗೆಯ ಹಣ ಸಂದಾಯವಾದ ಬಳಿಕ, ಜೋಸ್ ತಮ್ಮ ಯುಪಿಐ ಅಪ್ಲಿಕೇಶನ್ ಮೂಲಕ ಇನ್ನೊಂದು ಹಣ ವರ್ಗಾವಣೆ ಮಾಡಿದ್ದರು. ಈ ಬಾರಿ ತನ್ನ ಸ್ನೇಹಿತರಾದ 'ಸಾದಿಕ್ ಪಾಶಾ' ಏನ್ನುವ ವ್ಯಕ್ತಿಗೆ 10 ಸಾವಿರ ಪಾವತಿ ಮಾಡಬೇಕಿತ್ತು. ಆದರೆ, ಅಟೋ ರಿಕ್ಷಾದ ಡ್ರೈವರ್‌ನ ಹೆಸರೂ ಕೂಡ ಸಾದಿಕ್ ಪಾಶಾ ಆಗಿತ್ತು.
ಆದರೆ, ತನ್ನ ಸ್ನೇಹಿತನಾಗಿರುವ ಸಾದಿಕ್ ಪಾಶಾಗೆ ಹಣ ಕಳಿಸುವ ಬದಲು ಜೋಸ್ ಅಟೋ ಚಾಲಕ ಸಾದಿಕ್ ಪಾಶಾಗೆ ಹಣ ವರ್ಗಾವಣೆ ಮಾಡಿದ್ದರು. ತಕ್ಷಣವೇ ಆಟೋ ಚಾಲಕನಿಗೆ ಹಣ ವರ್ಗಾವಣೆ ಆಗಿತ್ತು. ತಮ್ಮ ತಪ್ಪಿನ ಅರಿವಾದ ಕೂಡಲೇ ಜೋಸ್‌ಗೆ ಆಟೋರಿಕ್ಷಾ ಚಾಲಕನನ್ನು ತಲುಪುವ ಮಾರ್ಗ ಹೇಗೆ ಅನ್ನೋದೇ ಚಿಂತೆಯಾಗಿತ್ತು. ಯಾಕೆಂದರೆ ಸಾದಿಕ್ ಪಾಶಾ ಅವರ ಫೋನ್ ನಂಬರ್ ಕೂಡ ಜೋಸ್ ಬಳಿ ಇದ್ದಿರಲಿಲ್ಲ.
'ಈ ತಪ್ಪು ಆದ ಬಳಿಕ ನಾನು ಸ್ನೇಹಿತರೊಬ್ಬರನ್ನು ಸಂಪರ್ಕ ಮಾಡಿದೆ. ಅವರು ದಕ್ಷಿಣ ಬೆಂಗಳೂರು ವಲಯದಲ್ಲಿ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರೈಡ್ ಬುಕ್ಕಿಂಗ್ ಆಪ್‌ನಲ್ಲಿ ಇದ್ದ ಮಾಹಿತಿಗಳ ಮೂಲಕ ಆಟೋ ರಿಕ್ಷಾ ಚಾಲಕನ ಗುರುತು ಪತ್ತೆ ಮಾಡಲು ಅವರು ಯಶಸ್ವಿಯಾಗಿದ್ದರು. ಬಳಿಕ ಸಾದಿಕ್ ಪಾಶಾ ಅವರ ನಂಬರ್ ಪಡೆದುಕೊಂಡು ನಾನು ಅವರಿಗೆ ಕರೆ ಮಾಡಿ ಆಗಿರುವ ತಪ್ಪು ಹಣ ವರ್ಗಾವಣೆಯ ಬಗ್ಗೆ ಮಾಹಿತಿ ನೀಡಿದೆ. ಅವರು ಬಹಳ ಪ್ರಮಾಣಿಕವಾಗಿ ಈ ಹಣವನ್ನು ವಾಪಾಸ್ ಮಾಡಿದ್ದರಿಂದ ನನ್ನೆಲ್ಲಾ ಆತಂಕ ದೂರವಾಗಿದ್ದವು' ಎಂದು ಜೋಸ್ ಹೇಳಿದ್ದಾರೆ.
ಆಟೋ ಚಾಲಕರ ಕೈ ಹಿಡಿದ ಕುಮಾರಣ್ಣ: ಮಾಸಿಕ 2 ಸಾವಿರ ರೂ. ನೆರವು ಘೋಷಣೆ
ಈ ಕುರಿತಾಗಿ ಮಾತನಾಡಿರುವ ಆಟೋ ಚಾಲಕ ಸಾದಿಕ್ ಪಾಶಾ, ನಾನು ಆಟೋ ಟ್ರಿಪ್‌ಗಳಲ್ಲಿಯೇ ಬ್ಯುಸಿ ಆಗಿರುತ್ತೇನೆ. ನನ್ನ ಅಕೌಂಟ್‌ಗೆ 10 ಸಾವಿರ ಹಣ ಕ್ರೆಡಿಟ್ ಆಗಿರೋದು ಕೂಡ ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. 'ನನಗೆ ಜೋಸ್ ಅವರು ಕರೆ ಮಾಡಿ ವಿಚಾರ ತಿಳಿಸಿದಾಗ ಬಹಳ ಅಚ್ಚರಿಯಾಗಿತ್ತು. ನನ್ನಂಥ ಆಟೋ ಚಾಲಕರ ಪಾಲಿಗೆ 10 ಸಾವಿರ ಅನ್ನೋದು ಬಹಳ ದೊಡ್ಡ ಮೊತ್ತ ಈ ಹಣವನ್ನು ಗಳಿಸಲು ಎಷ್ಟು ದಿಗಳ ಕಾಲ ದುಡಿಯಬೇಕು ಅನ್ನೋದು ನನಗೆ ಗೊತ್ತಿದೆ. ನನ್ನ ಅಕೌಂಟ್ ಮಾಹಿತಿಯನ್ನು ನೋಡಿದ ಬಳಿಕ ಕಾಲ್ ಮಾಡುತ್ತೇನೆ ಎಂದು ಅವರಿಗೆ ಹೇಳಿದ್ದೆ. 30 ನಿಮಿಷಗಳ ಕಾಲ ನನ್ನ ಅಕೌಂಟ್ ಚೆಕ್ ಮಾಡಿದ ಬಳಿಕ ಅದರಲ್ಲಿ ಹೆಚ್ಚುವರಿ 10 ಸಾವಿರ ಇರೋದು ಪತ್ತೆಯಾಗಿತ್ತು. ನಾನು ತಕ್ಷಣವೇ ಅದನ್ನು ಅವರಿಗೆ ವಾಪಸ್ ಮಾಡಿದೆ' ಎಂದು 2013ರಲ್ಲಿ ತಂದೆಯ ಸಾವಿನ ಬಳಿಕ ಆಟೋ ರಿಕ್ಷಾ ಚಾಲನೆ ಮಾಡುತ್ತಿರುವ ಸಾದಿಕ್ ಪಾಶಾ ಹೇಳಿದ್ದಾರೆ.
ಮಿಲ್ಟ್ರಿ ಆಫೀಸರ್ ಅಂತ ಹೇಳಿ ಆಟೋ ಡ್ರೈವರ್‌ಗೆ ಪಂಗನಾಮ ಹಾಕಿದ ನಯವಂಚಕ..!
10 ಸಾವಿರ ಮೊತ್ತವನ್ನು ಗಳಿಸಲು ನನಗೆ ಕನಿಷ್ಠ ಎಂದರು ಎರಡು ವಾರ ಬೇಕಾಗುತ್ತದೆ. ವೃದ್ಧ ತಾಯಿ ನನ್ನೊಂದಿಗೆ ಇದ್ದಾರೆ. ತಮ್ಮ ಕೂಡ ನನ್ನೊಂದಿಗೆ ವಾಸವಿದ್ದಾನೆ. ಪತ್ನಿ, ಸಣ್ಣ ಮಗು ಹಾಗೂ ಮಗಳು ಇರುವ ಸಣ್ಣ ಕುಟುಂಬ ನಮ್ಮದು. ಇಡೀ ಮನೆಗೆ ನಾನೊಬ್ಬನೇ ದುಡಿಯುವ ವ್ಯಕ್ತಿ. ಅವರ ಈ ಹಣದ ಮೌಲ್ಯ ನನಗೆ ಗೊತ್ತಿತ್ತು' ಎಂದು ಹೇಳಿದ್ದಾರೆ.