ಒಂಬತ್ತು ತಿಂಗಳ ಮಗುವಿಗೆ ಕೋವಿಡ್ ಸೋಂಕು ತಗುಲಿದ್ದು, ಪೋಷಕರಿಗೆ ಯಾವುದೇ ಲಕ್ಷಣಗಳಿಲ್ಲ. ಶೀತ-ಕೆಮ್ಮು ಇದ್ದ ಅಕ್ಕಪಕ್ಕದವರಿಂದ ಸೋಂಕು ಹರಡಿರಬಹುದೆಂದು ವೈದ್ಯರು ಶಂಕಿಸಿದ್ದಾರೆ. ಮಗುವಿಗೆ ಜ್ವರ, ಉಸಿರಾಟದ ತೊಂದರೆ ಕಾಣಿಸಿಕೊಂಡ ಕೂಡಲೇ ಚಿಕಿತ್ಸೆ ನೀಡಲಾಗಿದೆ. ಶೀತ ಇರುವವರನ್ನು ಮಕ್ಕಳಿಂದ ದೂರವಿಡಬೇಕೆಂದು ಸಲಹೆ ನೀಡಿದ್ದಾರೆ.

ಬೆಂಗಳೂರು (ಮೇ 23): 'ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಳ್ಳುವುದು ಅಪರೂಪ, ಆದರೂ 9 ತಿಂಗಳ ಮಗುವಿಗೆ ಕೋವಿಡ್-19 ಸೋಂಕು ಬಂದಿದೆ ಎಂದರೆ ಅಚ್ಚರಿಯಾಗುತ್ತದೆ. ಆದರೆ, ಮಗುವಿಗೆ ಹೇಗೆ ಸೋಂಕು ಬಂದಿದೆ ಎಂಬುದನ್ನು ಪರಿಶೀಲನೆ ಮಾಡಿದಾಗ ಅಕ್ಕ-ಪಕ್ಕದ ಮನೆಯವರು ಮಗುವನ್ನು ಎತ್ತಿಕೊಂಡು ಆಡಿಸಲು ಬಂದವರೇ ಸೋಂಕು ಹರಡಿಸಿ ಹೋಗಿರಬಹುದು ಎಂದು ವಾಣಿ ವಿಲಾಸ ಆಸ್ಪತ್ರೆಯ ಪಿಡಿಯಾಟ್ರಿಕ್ ವಿಭಾಗದ ಮುಖ್ಯಸ್ಥೆ ಪ್ರೊ. ಡಾ. ಸಹನಾ ದೇವದಾಸ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ 9 ತಿಂಗಳ ಮಗುವಿಗೆ ಕೋವಿಡ್ ಸೋಂಹು ಹರಡಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಕಳೆದ ವಾರ 9 ತಿಂಗಳ ಮಗುವಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಇದಕ್ಕೆ ತಂದೆ-ತಾಯಿಗೆ ಯಾವುದೇ ಲಕ್ಷಣಗಳು ಇಲ್ಲದಿರುವುದು ವೈದ್ಯರನ್ನೇ ಅಚ್ಚರಿಗೊಳಿಸಿದೆ. ಈ ಪ್ರಕರಣದ ವಿಶೇಷತೆ ಏನೆಂದರೆ, ಮಗುವಿನ ತಂದೆ ಹಾಗೂ ತಾಯಿಗೆ ಯಾವುದೇ ಜ್ವರ, ಕೆಮ್ಮು ಅಥವಾ ನೆಗಡಿ ಇಲ್ಲದೆ, ಯಾವುದೇ ಪ್ರಯಾಣದ ಪುರಾವೆ ಇಲ್ಲದಿದ್ದರೂ ಮಗು ಸೋಂಕಿಗೆ ಒಳಗಾಗಿದೆ. ವೈದ್ಯರ ಪ್ರಾಥಮಿಕ ಶಂಕೆ, ಮಗುವನ್ನು ಆಟ ಆಡಿಸಲು ಬಂದ ಅಕ್ಕಪಕ್ಕದ ಮನೆಯ ಮಕ್ಕಳಿಂದ ಸೋಂಕು ಹರಿದಿರಬಹುದು ಎಂಬುದಾಗಿದೆ. ಅವರಲ್ಲಿ ಕೆಲವರಿಗೆ ಶೀತ-ಕೆಮ್ಮು ಇದ್ದಿತೆಂದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದರು.

ಮೇ 13 ರಂದು ಮಗುವಿಗೆ ಮೊದಲ ಬಾರಿ ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ತಕ್ಷಣವಾಗಿ ಪೀಡಿಯಾಟ್ರಿಕ್ ತಜ್ಞರನ್ನು ಸಂಪರ್ಕಿಸಿದ ಕುಟುಂಬವು, ಮೊದಲು ಹೊಸಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಾಣಿ ವಿಲಾಸ ಆಸ್ಪತ್ರೆಗೆ ರವಾನೆಯಾಯಿತು. ಈ ವೇಳೆ ಮಗುವಿಗೆ ಐಸೋಲೇಷನ್ ನಲ್ಲಿ ಚಿಕಿತ್ಸೆಯನ್ನು ನೀಡಲಾಗಿದೆ. ಮಕ್ಕಳಿಗೆ ಸೋಂಕು ಬಂದರೆ, ತಕ್ಷಣವೇ ವೈದ್ಯಕೀಯ ಸಲಹೆ ಪಡೆಯುವುದು ಅತೀ ಅವಶ್ಯಕ ಎಂದು ವೈದ್ಯರು ತಿಳಿಸಿದ್ದಾರೆ.

ಕೋವಿಡ್ ಸಮಯದಲ್ಲಿ ವಯೋವೃದ್ಧರು, ಬಿಪಿ, ಶುಗರ್ ಅಥವಾ ಹೃದಯ ಸಂಬಂಧಿ ಸಮಸ್ಯೆ ಹೊಂದಿರುವವರು ಮಕ್ಕಳೊಡನೆ ಹೆಚ್ಚು ಸಂಪರ್ಕದಲ್ಲಿರುವಾಗ ಎಚ್ಚರಿಕೆಯಿಂದಿರಬೇಕು. ಶೀತ-ಕೆಮ್ಮು ಇರುವವರನ್ನು ಮಗುಗಳಿಂದ ದೂರವಿರಿಸಿ.
- ಡಾ. ಸಹನಾ ದೇವದಾಸ್, ವಾಣಿ ವಿಲಾಸ ಆಸ್ಪತ್ರೆ

ಆರೋಗ್ಯ ಸಲಹೆ:
ಮಕ್ಕಳಿಗೆ ಜ್ವರ, ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಶೀತ-ಕೆಮ್ಮು ಇರುವವರು ಮಕ್ಕಳ ಬಳಿ ಹೋಗುವುದು ತಪ್ಪಿಸಬೇಕು.
ಆಗಾಗ್ಗೆ ಕೈ ತೊಳೆಯುವುದು, ಕ್ಲೀನ್ ಮಂಟೇನ್ ಮಾಡುವುದು ಮುಖ್ಯ.