ಬೆಂಗಳೂರಿನ 110 ಹಳ್ಳಿಗಳಿಗೆ ಜೂನ್ ವೇಳೆಗೆ 775 ಎಂಎಲ್‌ಡಿ ನೀರು ಪೂರೈಕೆ; ಸಿಎಂ ಸಿದ್ದರಾಮಯ್ಯ
ಬೆಂಗಳೂರಿಗೆ ನೀರು ಪೂರೈಕೆ ಮಾಡುತ್ತಿದ್ದ 6,900 ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ನಗರದ 110 ಹಳ್ಳಿಗಳಿಗೆ ಜೂನ್ ವೇಳೆಗೆ 775 ಎಂಎಲ್‌ಡಿ ನೀರು ಪೂರೈಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು (ಮಾ.18): ಪ್ರಸ್ತುತ ಬೆಂಗಳೂರಲ್ಲಿ1,470 ಎಂಎಲ್‌ಡಿ ನೀರು ಮಾತ್ರ ಕಾವೇರಿ ನದಿಯಿಂದ ಪೂರೈಕೆ ಆಗುತ್ತಿದೆ. ಉಳಿದದ್ದು 14,000 ಬೋರ್ ವೆಲ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ, ಬೇಸಿಗೆ ಆರಂಭಕ್ಕೂ ಮುನ್ನ 6,900 ಬೋರ್‌ವೆಲ್‌ಗಳು ಬತ್ತಿ ಹೋಗಿದ್ದರಿಂದ ನೀರು ಪೂರೈಕೆ ಸಮಸ್ಯೆಯಾಗಿದೆ. ಅದರಲ್ಲಿಯೂ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜೂನ್ ವೇಳೆ ಕಾವೇರಿ 5ನೇ ಹಂತದಿಂದ 75 ಎಂಎಲ್‌ಡಿ ಹೆಚ್ಚುವರಿ ನೀರನ್ನು ಪೂರೈಸಲಾಗುವುದು. ಆಗ ಬೆಂಗಳೂರಿಗೆ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು ಜಲ ಮಂಡಳಿ, ಬಿಬಿಎಂಪಿ ಹಾಗೂ ಇಂಧನ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂತರ ಸುದ್ದೊಗೋಷ್ಠಿ ನಡೆಸಿ ಮಾತನಾಡಿದರು. ಕಾವೇರಿ, ಕಬಿನಿಯಲ್ಲಿ ಕುಡಿಯುವ ನೀರಿಗೆ ಅಗತ್ಯ ಇರುವಷ್ಟು ನೀರನ್ನು ಸಂಗ್ರಹಿಸಿದ್ದೇವೆ. ಜೂನ್ ಅಂತ್ಯದವರೆಗೂ ಸಾಕಾಗುವಷ್ಟು ನೀರನ್ನು ಸಂಗ್ರಹಿಸಿದ್ದೇವೆ. ಕೆಆರ್‌ಎಸ್ ಜಲಾಶಯದಲ್ಲಿ 11.02 ಟಿಎಂಸಿ, ಕಬಿನಿಯಲ್ಲಿ 9.02 ಟಿಎಂಸಿ ನೀರು ಸಂಗ್ರಹವಿದೆ. ಜೊತೆಗೆ, 14000 ಸರ್ಕಾರಿ ಬೋರ್ ವೆಲ್ ಗಳಿಂದ ನೀರು ಪೂರೈಕೆ ಮಾಡುತ್ತಿದ್ದು, ಅದರಲ್ಲಿ 6900 ಕೊಳವೆ ಬಾವಿಗಳು ಬತ್ತಿ ಹೋಗಿವೆ. ಹೀಗಾಗಿ ಸಮಸ್ಯೆ ಆಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿಗೆ ನೀರು ಸರಬರಾಜು ವಸ್ತುಸ್ಥಿತಿ ಇಲ್ಲಿದೆ ನೋಡಿ... ಅಲ್ಲಲ್ಲಿ ಸಿಂಟೆಕ್ಸ್ ಫಿಕ್ಸ್ ಮಾಡಿ ನೀರು ಪೂರೈಕೆ!
ಇನ್ನು ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ಪೈಕಿ 55 ಹಳ್ಳಿಗಳಿಗೆ ತೀವ್ರ ನೀರಿನ ಸಮಸ್ಯೆ ಆಗಿದೆ. ಜೂನ್ ಅಂತ್ಯಕ್ಕೆ ಕಾವೇರಿ 5ನೇ ಹಂತದ ಕಾಮಗಾರಿ ಮುಕ್ತಾಯವಾಗಿ 775 MLD ಹೆಚ್ಚುವರಿ ನೀರು ಸಿಗತ್ತದೆ. ಇದು 110 ಹಳ್ಳಿಗಳಿಗೆ ಸರಬರಾಜು ಆಗುತ್ತದೆ. ಆಗ ಬೆಂಗಳೂರಿಗೆ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಇನ್ನು ಬೆಂಗಳೂರಿನಲ್ಲಿ 313 ಸ್ಥಳಗಳಲ್ಲಿ ಹೊಸದಾಗಿ ಬೋರ್ ವೆಲ್ ಕೊರೆಸುತ್ತಿದ್ದೇವೆ. ಜೊತೆಗೆ, 1200 ನಿಷ್ಕ್ರಿಯ ಬೋರ್ ಗಳಿಗೆ ಮರುಜೀವ ನೀಡಲಾಗುವುದು ಎಂದು ತಿಳಿಸಿದರು.
ನಗರದ ಕೊಳೆಗೇರಿಗಳು, ಎತ್ತರದ ಪ್ರದೇಶಗಳು ಹಾಗೂ ಬೋರ್ ವೆಲ್ ಮೇಲೆ ಅಬಲಂಬಿತ ಪ್ರದೇಶಗಳಲ್ಲಿ ಕರ್ನಾಟಕ ಹಾಲು ಒಕ್ಕೂಟ (KMF) ಸೇರಿ ಎಲ್ಲಾ ಖಾಸಗಿ ಟ್ಯಾಂಕರ್ ಗಳನ್ನು ಬಳಸಲು ಹೇಳಿದ್ದೇನೆ. ಇನ್ನು ಕಂಟ್ರೋಲ್ ರೂಮ್ ಗಳ ಸಂಖ್ಯೆ ಹೆಚ್ವಿಸಿ ದೂರುಬಂದ ತಕ್ಷಣ ಆ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಸೂಚಿಸಲಾಗಿದೆ. ಟಾಸ್ಕ್ ಫೋರ್ಸ್ ಹೆಚ್ವಿಸಿ ದೂರುಗಳಿಗೆ ತಕ್ಷಣ ಸ್ಪಂದಿಸಲು ಹೇಳಲಾಗಿದೆ. ಪಾರ್ಕ್ ಗಳಲ್ಲಿ ಕುಡಿಯುವ ನೀರು ಬಳಸದಂತೆ, ಶುದ್ದೀಕರಿಸಿದ ನೀರು ಬಳಸುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಹೊರ ಭಾಗದಲ್ಲಿರುವ ಕೆ.ಸಿ.ವ್ಯಾಲಿ ರೀತಿ ಬೆಂಗಳೂರಿನ ಕೆರೆಗಳನ್ನೂ ಭರ್ತಿ ಮಾಡುವಂತೆ ಸೂಚನೆ ನೀಡಲಾಗಿದೆ. ಬತ್ತಿ ಹೋಗಿರುವ ಪ್ರಮುಖ 14 ಕೆರೆಗಳನ್ನು ಭರ್ತಿ ಮಾಡಲು ಸೂಚನೆ ನೀಡಲಾಗಿದೆ. ಇದರಿಂದ ಅಂತರ್ಜಲ ಭರ್ತಿ ಆಗಿ ಬೋರ್ ವೆಲ್ ಗಳಿಗೆ ಮರುಜೀವ ಬರುತ್ತದೆ. ಬೆಂಗಳೂರಿಗೆ ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ. ಬೇಕಾದಷ್ಟು ಹಣವನ್ನು ಸರ್ಕಾರ ಮತ್ತು ಬಿಬಿಎಂಪಿ ಒದಗಿಸುತ್ತಿದೆ. ಪ್ರತಿ ದಿನ ಅಧಿಕಾರಿಗಳು ಸಭೆ ನಡೆಸಿ ವಾರಕ್ಕೊಮ್ಮೆ ಕ್ರಿಯಾಯೋಜನೆ ಸಿದ್ದಪಡಿಸುತ್ತಾರೆ ಎಂದು ಭರವಸೆ ನೀಡಿದರು.
ಬೆಂಗಳೂರಿನಲ್ಲಿ ನೀರಿನ ಸದ್ಬಳಕೆ, ಉಳಿತಾಯಕ್ಕೆ 4 ಆ್ಯಪ್ ಲೋಕಾರ್ಪಣೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್
ಭವಿಷ್ಯದಲ್ಲಿ ಎಂಥಾದ್ದೇ ಸಂದರ್ಭದಲ್ಲೂ ನೀರಿನ ಕೊರತೆ ಆಗದಂತೆ ತಜ್ಞರ ಸಮಿತಿಯನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ. ದೂರು ಬಂದರೆ ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿನವರು ಹೊಣೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಬೆಂಗಳೂರಿಗೆ 500 ಎಂಎಲ್‌ಸಿ ನೀರು ಕೊರತೆ ಇದೆ. ಈ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬೋರ್ ವೆಲ್ ಗಳ ಮೇಲೆ ಅವಲಂಬಿತ ಜನರಿಗೆ ನೀರಿನ ತೊಂದರೆ ಆಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.