Mallammaji Vijayothsava: ಜಗತ್ತಿನ ಮೊದಲ ಸ್ತ್ರೀಸೈನ್ಯ ಕಟ್ಟಿದ ವೀರವನಿತೆ ಬೆಳವಡಿ ಮಲ್ಲಮ್ಮ
ಜಗತ್ತಿನ ಮೊದಲ ಮಹಿಳಾ ಸೈನ್ಯವನ್ನು ಕಟ್ಟಿದ ಮಲ್ಲಮ್ಮಾಜಿ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಸಾಮರಸ್ಯದ ಕೊಂಡಿಯಾಗಿದ್ದಳು. ಸ್ವರಾಜ್ಯ, ರಾಷ್ಟ್ರ ನಿರ್ಮಾಣ ಅವಳ ಗುರಿಯಾಗಿತ್ತು. ಫೆಬ್ರವರಿ 28ರಂದು ವೀರಮಾತೆ ಬೆಳವಡಿ ರಾಣಿ ಮಲ್ಲಮ್ಮಾಜಿಯ 374ನೇ ವಿಜಯೋತ್ಸವ ದಿನ. ಆಕೆಯನ್ನು ಸ್ಮರಿಸಿಕೊಳ್ಳುವುದೇ ನಮ್ಮ ನಾಡಿಗೆ ಹೆಮ್ಮೆ.
ನಮ್ಮದು ರೋಚಕ ಇತಿಹಾಸವುಳ್ಳ ದೇಶ. ಈ ದೇಶವನ್ನು ವೀರಾಧಿವೀರರು ಆಳಿದ್ದು ಒಂದು ಕಥೆಯಾದರೆ ಅವರನ್ನೂ ಮೀರಿಸುವಂತೆ ವೀರವನಿತೆಯರು ಆಳಿದ್ದು ಇನ್ನೊಂದು ಕಥೆ. ಅಂಥವರಲ್ಲಿ ನಮಗೆ ಮೊದಲು ನೆನಪಾಗುವುದು ಬೆಳವಡಿಯ ರಾಣಿ ಮಲ್ಲಮ್ಮಾಜಿ.
ಪರಾಕ್ರಮಕ್ಕೆ ಇನ್ನೊಂದು ಹೆಸರಾದ ಬೆಳವಡಿಯ ರಾಣಿ ಮಲ್ಲಮ್ಮಾಜಿಯದ್ದು ಸೋದೆ ಮನೆತನ. ಸೋದೆಯ ರಾಜ ಮಧುಲಿಂಗ ನಾಯಕ. ಈತನ ಪತ್ನಿಯೇ ವೀರಮ್ಮಾಜಿ. ಸುಖ ಸಮೃದ್ಧಿ ನೆಲೆಸಿದ್ದ ಸೋದೆಯ ಮಧುಲಿಂಗ ದಂಪತಿಗೆ ಮಕ್ಕಳಾಗಿರಲಿಲ್ಲ. ನಂತರ ಸೊಪ್ಪಿ ಸಿದ್ಧಬಸವ ಎಂಬ ಮಹಾಯೋಗಿಯ ಸಲಹೆಯಂತೆ ವ್ರತಾಚರಣೆಯಿಂದ ಜನಿಸಿದವನೇ ಸದಾಶಿವ ನಾಯಕ. ಅದಾಗಿ ಎರಡು ವರ್ಷಗಳ ನಂತರ ಅಂದರೆ ಕ್ರಿಸ್ತಶಕ 1650ರಲ್ಲಿ ಮಧುಲಿಂಗ ದಂಪತಿಗೆ ಜನಸಿದ ಮಗುವೇ ಮಲ್ಲಮ್ಮಾಜಿ. ಲಾವಣ್ಯವತಿಯಾಗಿದ್ದ ಮಲ್ಲಮ್ಮಾಜಿ ಚಾಣಾಕ್ಷಳೂ ಅಪಾರ ಬುದ್ಧಿವಂತೆಯೂ ಆಗಿದ್ದಳಲ್ಲದೆ ಅದ್ಭುತ ಮಾತುಗಾರ್ತಿಯೂ ಆಗಿದ್ದಳು.
Davanagere: ಗಂಗಾರತಿ ಮಾದರಿ ಹರಿಹರದಲ್ಲಿ ತುಂಗಾರತಿ, ಏನಿದರ ವಿಶೇಷತೆ..?
ಮಲ್ಲಮ್ಮಾಜಿ ಯುದ್ಧಕಲೆ ನಿಪುಣಳಾಗಿದ್ದಳು. ಯುದ್ಧರಂಗಕ್ಕಿಳಿದರೆ ರಣಚಂಡಿಯಂತೆ ಹೋರಾಡುತ್ತಿದ್ದಳು. ಮಹಾನ್ ಹರಭಕ್ತೆಯಾಗಿದ್ದಳು. ಹರಪೂಜೆ ಗುರುಸೇವೆ ಮಾಡದೆ ಹನಿ ನೀರನ್ನೂ ಸೇವಿಸುತ್ತಿರಲಿಲ್ಲ. ಅಂಥ ಹರಭಕ್ತೆಗೆ ಹದಿನಾರು ತುಂಬಿದಾಗ ಬೆಳವಡಿಯ ರಾಜಕುಮಾರ ಈಶಪ್ರಭು ದೇಸಾಯಿಯೊಂದಿಗೆ ಮದುವೆ ಮಾಡಲಾಗುತ್ತದೆ. ಈಶಪ್ರಭು ಎಂಥ ಪರಾಕ್ರಮಿ ಎಂದರೆ 21 ಹುಲಿಗಳನ್ನು ಬೇಟೆಯಾಡಿ ಸಂಸ್ಥಾನದಲ್ಲಿ ಹೆಬ್ಬುಲಿ ಎನಿಸಿಕೊಂಡಿದ್ದವ. ಮಲ್ಲಮ್ಮಾಜಿಯನ್ನ ಈಶಪ್ರಭು ಯಾಕೆ ಮೆಚ್ಚಿಕೊಂಡನೆಂದರೆ ಆಕೆಯೂ ಹುಲಿಬೇಟೆಯಲ್ಲಿ ನಿಪುಣಳು.
ಮರಾಠರ ಬಗ್ಗುಬಡಿದ ಮಲ್ಲಮ್ಮ
ಕ್ರಿಸ್ತಶಕ 1676-78ರಲ್ಲಿ ಛತ್ರಪತಿ ಶಿವಾಜಿ ಕರ್ನಾಟಕ ದಂಡಯಾತ್ರೆ ಕೈಗೊಳ್ಳುತ್ತಾನೆ. ಮೊದಲೇ ಹಿಂದೂ ಹೃದಯ ಸಾಮ್ರಾಟನೆನಿಸಿದ್ದ ಶಿವಾಜಿಯನ್ನು ಕಂಡರೆ ಕರ್ನಾಟಕದ ಜನತೆಗೆ ಎಲ್ಲಿಲ್ಲದ ಪ್ರೀತಿ, ಅಕ್ಕರೆ. ಶಿವಾಜಿ ಕೊಪ್ಪಳದ ಕೋಟೆ ಗೆದ್ದು ಧಾರವಾಡದ ಹತ್ತಿರವಿರುವ ಹಾಗೂ ಬೆಳವಡಿ ಸಂಸ್ಥಾನಕ್ಕೆ ಸೇರಿದ್ದ ಯಾದವಾಡದಲ್ಲಿ ಬಿಡಾರ ಹೂಡುತ್ತಾನೆ. ಇದನ್ನು ತಿಳಿದ ಈಶಪ್ರಭು ದೇಸಾಯಿಗೆ ಶಿವಾಜಿಯನ್ನು ಸತ್ಕರಿಸಬೇಕೆನ್ನುವ ಆಸೆ ಹುಟ್ಟುತ್ತದೆ. ಅದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಾನೆ.
ಯಾದವಾಡದಲ್ಲಿ ಬೀಡು ಬಿಟ್ಟಿದ್ದ ಶಿವಾಜಿ ಸೈನಿಕರು ಬೆಳವಡಿಗೆ ಹತ್ತಿರವಿದ್ದ ಗೋಶಾಲೆಗೆ ನುಗ್ಗಿ ಗೋಪಾಲಕರನ್ನು ಹಾಲು ಕೇಳುತ್ತಾರೆ. ಆದರೆ ಅವರಿಗೆ ಕೊಡುವಷ್ಟುಹಾಲು ಗೋಪಾಲಕರ ಬಳಿ ಇರುವುದಿಲ್ಲ. ಆಗ ಸಿಟ್ಟಿಗೆದ್ದ ಶಿವಾಜಿ ಸೈನಿಕರು ಬೆಳವಡಿಯ ಗೋವುಗಳನ್ನು ಹೊತ್ತೊಯ್ಯುತ್ತಾರೆ. ಇದು ಬೆಳವಡಿಯ ರಾಣಿ ಮಲ್ಲಮ್ಮಾಜಿಯನ್ನು ಕೆರಳಿಸುತ್ತದೆ. ಏಕೆಂದರೆ ಹಿಂದೂಗಳಿಗೆ ಗೋವುಗಳೆಂದರೆ ಸಾಕ್ಷಾತ್ ಮಾತೆಯೇ ಸರಿ. ಅದರಲ್ಲೂ ಕೃಷಿಕ ಪಂಚಮಸಾಲಿಗಳಿಗೆ ಗೋವುಗಳೆಂದರೆ ಪಂಚಪ್ರಾಣ.
ಆಗ ಈಶಪ್ರಭು ಶಿವಾಜಿ ಸೈನಿಕರ ಆಕ್ರಮಣದಿಂದ ಕುಪಿತನಾಗಿ ಗೋವುಗಳನ್ನು ಮರಳಿ ಪಡೆಯಲು ದಂಡನಾಯಕನಾದ ಸಿದ್ದನಗೌಡ ಪಾಟೀಲನನ್ನು ಕಳಿಸುತ್ತಾನೆ. ಆತ ಶಿವಾಜಿ ಸೈನ್ಯದ ದಂಡನಾಯಕ ಸಕುಜಿಯಿಂದ ಹತನಾಗುತ್ತಾನೆ. ಇದರಿಂದ ಕ್ರುದ್ಧಗೊಂಡ ಈಶಪ್ರಭು ದೇಸಾಯಿ ತಾನೇ ಯುದ್ಧಕ್ಕೆ ಹೊರಡಲು ಸನ್ನದ್ಧನಾಗುತ್ತಾನೆ. ಇದನ್ನು ಗಮನಿಸಿದ ಮಲ್ಲಮ್ಮಾಜಿ ‘ನೀವು ಯುದ್ಧಕ್ಕೆ ಹೋಗಬೇಡಿ. ಗೋವುಗಳು ಮಾತೆಯಾದ್ದರಿಂದ ಅವುಗಳ ರಕ್ಷಣೆಗೆ ನಾನೇ ಹೊರಡುತ್ತೇನೆ’ ಎಂದು ಪ್ರತಿಜ್ಞೆ ಮಾಡುತ್ತಾಳೆ. ಐದುನೂರು ವರ್ಷಗಳ ಹಿಂದೆಯೇ ಬೆಳವಡಿ ಸಾಮ್ರಾಜ್ಯದಲ್ಲಿ ಒಂದು ಸ್ತ್ರೀಸೈನ್ಯ ಇತ್ತು. ಅದರಲ್ಲಿ ರಣಚಂಡಿಯಂಥ ಎರಡು ಸಾವಿರ ವೀರವನಿತೆಯರಿದ್ದರು. ಆ ಸ್ತ್ರೀ ಸೈನ್ಯಕ್ಕೆ ಮಲ್ಲಮ್ಮಾಜಿಯೇ ನೇತೃತ್ವ ವಹಿಸಿದ್ದಳು. ಸ್ತ್ರೀ ಸೈನ್ಯವನ್ನು ತೆಗೆದುಕೊಂಡು ಹೋದ ಮಲ್ಲಮ್ಮಾಜಿಯ ಖಡ್ಗದ ರುಚಿ ನೋಡಿದ ಮರಾಠ ಸೈನಿಕರು ಕದ್ದಿದ್ದ ಗೋವುಗಳನ್ನ ಹಿಂದಿರುಗಿಸಿ ಪ್ರಾಣ ಉಳಿಸಿಕೊಳ್ಳುತ್ತಾರೆ. ಇಡೀ ಬೆಳವಡಿಯಲ್ಲಿ ಮಲ್ಲಮ್ಮಾಜಿಯ ವಿಜಯೋತ್ಸವ ಮೊಳಗುತ್ತದೆ.
Hijab Row ಏಕರೂಪ ಸಂಹಿತೆ ಬಗ್ಗೆ ಅಂಬೇಡ್ಕರ್ ಹೇಳಿದ್ದೇನು?
28 ದಿನಗಳ ಘೋರ ಯುದ್ಧ
ಈ ನಡುವೆ ಶಿವಾಜಿ ಸೈನ್ಯದ ದಂಡನಾಯಕ ಸಕುಜಿ ಶಿವಾಜಿಯನ್ನ ದಾರಿತಪ್ಪಿಸುವ ಕೆಲಸ ಮಾಡುತ್ತಾನೆ. ನಮ್ಮ ಗೋವುಗಳನ್ನು ಅವರೇ ಕದ್ದೊಯ್ದಿದ್ದಾರೆ. ನಾವು ಅವುಗಳನ್ನ ಮರಳಿ ಪಡೆಯಲು ಯುದ್ಧಕ್ಕೆ ಹೊರಡಬೇಕು ಎಂದು ಹೇಳಿ ಬೆಳವಡಿಯ ಮೇಲೆ ಯುದ್ಧ ಹೂಡುತ್ತಾನೆ. ಈ ಯುದ್ಧ ಶಿವಾಜಿ ಸೈನ್ಯ ಮತ್ತು ಬೆಳವಡಿಯ ಸೈನ್ಯದ ನಡುವೆ 28 ದಿನಗಳ ಕಾಲ ನಡೆಯುತ್ತದೆ. ಯುದ್ಧದಲ್ಲಿ ಈಶಪ್ರಭುವಿಗೆ ಗಾಯವಾಗಿ ಕುದುರೆಯಿಂದ ಬಿದ್ದು ಗಾಯಗೊಳ್ಳುತ್ತಾನೆ. ಅಷ್ಟೊತ್ತಿಗೆ ಹೂಲಿ ಸೈನ್ಯ ಬಂದು ಬೆಳವಡಿಯ ಸೈನಿಕರ ಜೊತೆ ಸೇರಿ ಕಾದಾಡುತ್ತದೆ. ಹೆದರಿದ ಮರಾಠ ಸೈನ್ಯ ಅಲ್ಲಿಂದ ಕಾಲುಕೀಳುತ್ತದೆ. ನಂತರ ಸ್ವಲ್ಪ ದಿನಗಳಲ್ಲೇ ಗಾಯಗೊಂಡಿದ್ದ ಈಶಪ್ರಭು ಮರಣ ಹೊಂದುತ್ತಾನೆ. ಬೆಳವಡಿಯ ಸಂಪೂರ್ಣ ಜವಾಬ್ದಾರಿ ಮಲ್ಲಮ್ಮಾಜಿಯ ಹೆಗಲಿಗೆ ಬೀಳುತ್ತದೆ.
ಸ್ತ್ರೀ ಸೈನ್ಯದಿಂದ ಶಿವಾಜಿ ಮೇಲೆ ಆಕ್ರಮಣ
ಈ ನಡುವೆ ಬೆಳವಡಿಯ ಸರದಾರ ಶಾಂತಯ್ಯ ಸನ್ಯಾಸಿಯ ವೇಷ ಧರಿಸಿ ಶಿವಾಜಿಯ ಬಳಿಗೆ ಹೋಗಿ ಸಿದ್ಧಸಮುದ್ರದಲ್ಲಿ ತಾಯಿ ದ್ಯಾಮವ್ವ ನೆಲೆಸಿದ್ದಾಳೆ. ಅವಳ ದರ್ಶನದಿಂದ ನಿಮ್ಮ ಸಾಮ್ರಾಜ್ಯಕ್ಕೆ, ನಿಮಗೆ ಒಳಿತಾಗುತ್ತದೆ ಎಂದು ಹೇಳುತ್ತಾನೆ. ಶಿವಾಜಿಯು ಗುಡಿಗೆ ಬರುತ್ತಿರುವ ವಿಷಯವನ್ನು ಶಾಂತಯ್ಯ ರಾಣಿ ಮಲ್ಲಮ್ಮಾಜಿಗೆ ಬಂದು ತಿಳಿಸುತ್ತಾನೆ. ಮಲ್ಲಮ್ಮಾಜಿ ಛತ್ರಪತಿ ಶಿವಾಜಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ತನ್ನ ಎರಡು ಸಾವಿರ ರಣಚಂಡಿಯರ ಸೈನ್ಯದೊಂದಿಗೆ ದ್ಯಾಮವ್ವನ ಗುಡಿಯ ಬಳಿಗೆ ಬೆಂಕಿಬಿರುಗಾಳಿಯಂತೆ ಬರುತ್ತಾಳೆ. ಮಲ್ಲಮ್ಮಾಳ ದಾಳಿಗೆ ಶಿವಾಜಿ ದಿಕ್ಕೇ ತೋಚದೆ ಕಂಗಾಲಾಗುತ್ತಾನೆ. ಮಲ್ಲಮ್ಮಾಜಿಯು ರಣಚಂಡಿಯಂತೆ ತನ್ನತ್ತ ಶರವೇಗದಲ್ಲಿ ನುಗ್ಗಿ ಬರುವುದನ್ನು ನೋಡಿದ ಶಿವಾಜಿ ಸೈನಿಕರು ಆಕೆಯ ಕುದುರೆಯ ಕಾಲನ್ನು ಕತ್ತರಿಸುತ್ತಾರೆ. ಕುದುರೆ ಧರೆಗುರುಳಿದರೂ ಮಲ್ಲಮ್ಮಾಜಿ ತನ್ನ ಖಡ್ಗ ಬಿಡುವುದಿಲ್ಲ. ರಣಭೀಕರವಾಗಿ ಹೋರಾಡುತ್ತಾಳೆ. ಇದನ್ನು ಗಮನಿಸಿದ ಶಿವಾಜಿ ದಂಗುಬಡಿದುಹೋಗುತ್ತಾನೆ. ಈಕೆ ಮನುಷ್ಯಳಲ್ಲ ಸಾಕ್ಷಾತ್ ಜಗದಂಬೆ, ತುಳಜಾಭವಾನಿಯೇ ಸರಿ ಎಂದು ತಾನೇ ಕುದುರೆಯಿಂದ ಕೆಳಗಿಳಿದು ‘ಜಗದಂಬಾ ಮಾಂ ಪಾಹಿ ಪಾಹಿ ಚಾರು ಕುಮುದಾಕ್ಷಿ ಘನಮುಕ್ತಿ ಸುಖಮಿಹ ದೇಹಿ’ ಎಂದು ಸ್ತುತಿಸುತ್ತಾನೆ. ನನ್ನ ಅಪರಾಧವನ್ನು ಕ್ಷಮಿಸು ತಾಯಿ ಎಂದು ದೀನನಾಗಿ ಬೇಡಿಕೊಳ್ಳುತ್ತಾನೆ. ಆಗ ರಾಣಿ ಮಲ್ಲಮ್ಮಾಜಿ ಶಿವಾಜಿಯನ್ನು ಕ್ಷಮಿಸುತ್ತಾಳೆ.
Hijab Row: ಅನಪೇಕ್ಷಿತ ವಿವಾದ, ವೈಷಮ್ಯದ ಬೆಂಕಿಗೆ ಸೋಶಿಯಲ್ ಮೀಡಿಯಾ ತುಪ್ಪ
ಮಲ್ಲಮ್ಮಾಜಿ-ಶಿವಾಜಿ ಬಾಂಧವ್ಯ
ಮಲ್ಲಮ್ಮಾಜಿಯ ಮೇಲೆ ವಿನಾಕಾರಣ ಯುದ್ಧ ಮಾಡಿದ್ದ ಸಕುಜಿಯ ಕಣ್ಣುಕೀಳಿಸಿ ಆನೆ ಕಾಲಿನಿಂದ ತುಳಿಸಿ ಸಾಯಿಸುತ್ತಾನೆ ಶಿವಾಜಿ. ಯುದ್ಧದಿಂದಾಗಿ ಹಾನಿಯಾದ ಬೆಳವಡಿ ಕೋಟೆಯ ಪುನರ್ ನಿರ್ಮಾಣದ ವೆಚ್ಚವನ್ನು ಸ್ವತಃ ಶಿವಾಜಿಯೇ ಭರಿಸುತ್ತಾನೆ. ರಾಣಿ ಮಲ್ಲಮ್ಮಾಜೀ ಅಣ್ಣ ತಂಗಿಯ ಧ್ಯೋತಕವಾಗಿ ಛತ್ರಪತಿ ಶಿವಾಜಿ ಮಹಾರಾಜನಿಗೆ ಮುಂಗೈಗೆ ರಕ್ಷೆಯನ್ನು ಕಟ್ಟುತ್ತಾಳೆ,ಅಲ್ಲಿಯೇ ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತಾರೆ. ನಂತರ ಮಲ್ಲಮ್ಮಾಜಿಯ ಮಗ ನಾಗಭೂಷಣನ ಪಟ್ಟಾಭಿಷೇಕವನ್ನು ಖುದ್ದು ಶಿವಾಜಿಯೇ ನಿಂತು ಮಾಡಿಸುತ್ತಾನೆ. ನಂತರ ಬೆಳವಡಿ ಮತ್ತು ಮರಾಠಾ ರಾಜಮನೆತನಗಳ ನಡುವೆ ಗಾಢವಾದ ಸ್ವರಾಜ್ಯ ರಾಷ್ಟ್ರ ನಿರ್ಮಾಣ ಸಂಕಲ್ಪ ಬೆಳೆಯುತ್ತದೆ.
ಇದಾಗಿ ಎಷ್ಟೋ ಕಾಲದ ನಂತರ ಮಲ್ಲಮ್ಮಾಜಿ ತನ್ನ ಅರವತ್ತೇಳನೇ ವಯಸ್ಸಿನಲ್ಲಿ ಅಂದರೆ ಕ್ರಿಸ್ತಶಕ ಫೆಬ್ರವರಿ 19,1717ರಲ್ಲಿ ಲಿಂಗೈಕ್ಯಳಾಗುತ್ತಾಳೆ. ಜಗತ್ತಿನ ಮೊದಲ ಮಹಿಳಾ ಸೈನ್ಯವನ್ನು ಕಟ್ಟಿದ ಮಲ್ಲಮ್ಮಾಜಿ, ಶಾಸ್ತ್ರ ಸಂಪ್ರದಾಯಗಳಲ್ಲೇ ಮುಳುಗೇಳುತ್ತಿದ್ದ ಆಗಿನ ತಾಯಂದಿರ ಕೈಯಲ್ಲಿ ಶಸ್ತ್ರ ಶಕ್ತಿಯನ್ನು ತುಂಬಿದ ಛಲಗಾತಿಯಾಗಿದ್ದಳು. ಆಕೆ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಸಾಮರಸ್ಯದ ಕೊಂಡಿಯಾಗಿದ್ದಳು. ಸ್ವರಾಜ್ಯ, ರಾಷ್ಟ್ರ ನಿರ್ಮಾಣ ಅವಳ ಗುರಿಯಾಗಿತ್ತು. ಫೆಬ್ರವರಿ 28ರಂದು ವೀರಮಾತೆ ಬೆಳವಡಿ ರಾಣಿ ಮಲ್ಲಮ್ಮಾಜಿಯ 374ನೇ ವಿಜಯೋತ್ಸವ ದಿನ. ಆಕೆಯನ್ನು ಸ್ಮರಿಸಿಕೊಳ್ಳುವುದೇ ನಮ್ಮ ನಾಡಿಗೆ ದೊಡ್ಡ ಹೆಮ್ಮೆ.
- ಶ್ರೀ ವಚನಾನಂದ ಸ್ವಾಮೀಜಿ., ಹರಕ್ಷೇತ್ರ ಹರಿಹರ