Hijab Row: ಅನಪೇಕ್ಷಿತ ವಿವಾದ, ವೈಷಮ್ಯದ ಬೆಂಕಿಗೆ ಸೋಶಿಯಲ್ ಮೀಡಿಯಾ ತುಪ್ಪ
ಹಿಜಾಬ್ ವಿವಾದವು ಭುಗಿಲೇಳುವಂತೆ ಮಾಡಿದ್ದರಲ್ಲಿ ಸಾಮಾಜಿಕ ಜಾಲತಾಣದ ಪಾತ್ರ ಮಹತ್ತರವಾದದ್ದು. ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವೀಟರ್, ಟೆಲಿಗ್ರಾಂನಂತಹ ತಾಣಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕ್ಷೇತ್ರಗಳಾಗಿವೆ.
ಉಡುಪಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್-ಕೇಸರಿ ಶಾಲು ವಿವಾದದ ಬೆಂಕಿ ಇಂದು ರಾಜ್ಯಾದ್ಯಂತ ಹಬ್ಬಿ, ದೇಶ- ವಿದೇಶಗಳಲ್ಲೂ ಚರ್ಚೆ, ಪ್ರತಿಭಟನೆಗಳಿಗೆ ನಾಂದಿ ಹಾಡಿದೆ. ಹೈಕೋರ್ಟ್ ಮಧ್ಯಂತರ ಆದೇಶದ ಬಳಿಕವೂ ವಿವಾದ ತಣ್ಣಗಾಗಿಲ್ಲ.
ಹಿಜಾಬ್ ಪರ ವಿದ್ಯಾರ್ಥಿನಿಯರು, ಅವರ ಪೋಷಕರು ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ. ತರಗತಿ, ಪರೀಕ್ಷೆ ಬಹಿಷ್ಕಾರ ಮುಂದುವರಿದಿದೆ. ಶಿಕ್ಷಕರು-ವಿದ್ಯಾರ್ಥಿಗಳ ನಡುವೆ ಚಕಮಕಿಗಳಾಗಿವೆ. ಪ್ರತಿಭಟನೆ, ಹೊಯ್‌ಕೈಗಳು ಜರುಗಿವೆ. ಸಹಪಾಠಿಗಳೇ ಪರಸ್ಪರ ವಿರುದ್ಧ ನಿಲ್ಲುವಂತಾಗಿದೆ. ಒಟ್ಟಾರೆಯಾಗಿ ಸಣ್ಣ ಮಾತುಕತೆ, ರಾಜಿಯಲ್ಲಿ ಇತ್ಯರ್ಥವಾಗಬೇಕಿದ್ದ ವಿವಾದವೊಂದು ಪೆಡಂಭೂತವಾಗಿ ನಾನಾ ರೂಪದಲ್ಲಿ ಕಾಡುತ್ತಿದೆ. ಅದರ ದುಷ್ಪರಿಣಾಮ ಇಂತಿದೆ.
ಕೋವಿಡ್ ಬಳಿಕ ಹಿಜಾಬ್‌ನಿಂದ ತರಗತಿ ನಷ್ಟ
ಕೋವಿಡ್‌ನಿಂದಾಗಿ 2 ವರ್ಷದಿಂದ ವಿದ್ಯಾರ್ಥಿಗಳು ಸರಿಯಾಗಿ ಶಾಲಾ-ಕಾಲೇಜು ಮುಖ ನೋಡಿಲ್ಲ. ಕೋವಿಡ್ ಹತೋಟಿಗೆ ಬಂದ ಬಳಿಕ ಶಾಲಾ-ಕಾಲೇಜು ಪುನಾರಂಭಗೊಂಡಿವೆ. 15 ಮೇಲ್ಪಟ್ಟವರಿಗೆ ತರಾತುರಿಯಲ್ಲಿ ಲಸಿಕೆ ನೀಡಿ ಸೋಂಕು ನಿಯಂತ್ರಣಕ್ಕೆ ಸರ್ಕಾರ ದೊಡ್ಡ ಪ್ರಯತ್ನ ಮಾಡಿದೆ. ಎಲ್ಲ ಸಹಜ ಸ್ಥಿತಿಯತ್ತ ಮರಳುತ್ತಿರುವಾಗ ಹಿಜಾಬ್ ವಿವಾದ ಭುಗಿಲೆದ್ದಿದೆ. 1 ವಾರ ಶಾಲಾ-ಕಾಲೇಜುಗಳು ಬಂದ್ ಆಗಿ ತರಗತಿ ನಷ್ಟವಾಗಿದೆ. ಶಾಲಾ-ಕಾಲೇಜುಗಳು ಪುನಾರಂಭಗೊಂಡರೂ ಹಿಜಾಬ್ ಗೊಂದಲದಿಂದಾಗಿ ಪಾಠಕ್ಕೆ ಪದೇ ಪದೇ ಅಡ್ಡಿಯಾಗುತ್ತಿದೆ. ಹಿಜಾಬ್ ಧರಿಸಲು ಬಿಡದಿದ್ದರೆ ತರಗತಿ, ಪರೀಕ್ಷೆಗೆ ಬರುವುದಿಲ್ಲ ಎಂದು ಬಹಿಷ್ಕರಿಸಿ ಕೂತವರು ತಮ್ಮ ಶೈಕ್ಷಣಿಕ ಚಟುವಟಿಕೆಗೆ ಕಲ್ಲು ಹಾಕಿಕೊಂಡಿರುವುದು ಗಾಯದ ಮೇಲೆ ಬರೆ ಹಾಕಿದಂತಿದೆ.
ಶಾಲಾ- ಕಾಲೇಜುಗಳಲ್ಲಿ ಕದಡಿದ ವಾತಾವರಣ
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಜಾತಿ-ಧರ್ಮದ ಹಂಗಿಲ್ಲದೆ ಪಾಲ್ಗೊಳ್ಳುತ್ತಿದುದು ಹಿಂದೆಂದಿನಿಂದಲೂ ನಡೆದು ಬಂದ ಸಂಪ್ರದಾಯ. ಮಕ್ಕಳು, ಯುವಜನರ ಸ್ನೇಹ ಬಹುತೇಕ ಧರ್ಮಾತೀತವಾಗಿತ್ತು. ಆದರೆ, ಹಿಜಾಬ್ ವಿವಾದ ಇದೀಗ ಆ ಸ್ನೇಹಕ್ಕೆ ಕೊಳ್ಳಿ ಇಟ್ಟಿದೆ. ಸ್ನೇಹದ ನಡುವೆ ಧರ್ಮದ ಗೋಡೆ ಎದ್ದು ನಿಂತಿದೆ. ಹಿಜಾಬ್‌ಗೆ ಪ್ರತಿಯಾಗಿ ಕೇಸರಿ ಶಾಲು ಪ್ರತ್ಯಕ್ಷವಾಗಿದೆ. ಅದಕ್ಕೆ ಪ್ರತಿಯಾಗಿ ಕುಂಕುಮ, ಬಳೆ, ಓಲೆಗೆ ಪ್ರತಿರೋಧ ವ್ಯಕ್ತವಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿನ ಸಾಮರಸ್ಯಕ್ಕೆ ಧರ್ಮಾಂಧತೆಯ ಹುಳಿ ಬಿದ್ದಿದೆ.
ಶಿಕ್ಷಕ-ವಿದ್ಯಾರ್ಥಿಗಳ ನಡುವಣ ಬಾಂಧವ್ಯಕ್ಕೆ ಧಕ್ಕೆ
ಗುರುಭ್ಯೋ ನಮಃ ಎನ್ನುವ ನೆಲ ನಮ್ಮದು. ಆದರೆ, ಹಿಜಾಬ್ ವಿವಾದ ಅದಕ್ಕೂ ನಂಜು ಸೋಕಿಸಿದೆ. ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸಬೇಕೆಂಬ ಸರ್ಕಾರದ ಸೂಚನೆ ಶಿಕ್ಷಕ ಗಣವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಮವಸ್ತ್ರ, ವಸ್ತ್ರಸಂಹಿತೆ ಇರುವ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಉಡುಪು ತೊಡುವಂತಿಲ್ಲ ಎಂಬ ಆದೇಶ ಪಾಲನೆಗಾಗಿ ಪ್ರಾಂಶುಪಾಲರು, ಶಿಕ್ಷಕರು ಹರಸಾಹಸ ಪಡುತ್ತಿದ್ದಾರೆ. ಇದು ವಿದ್ಯಾರ್ಥಿಗಳು-ಶಿಕ್ಷಕರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ತಮಗೆ ಪಾಠ ಹೇಳುತ್ತಿದ್ದ ಶಿಕ್ಷಕರನ್ನೇ ಶತ್ರುಗಳಂತೆ ನೋಡುವ ಸನ್ನಿವೇಶಗಳು ಕಂಡು ಬಂದಿವೆ. ಕೆಲವೆಡೆ ಪೊಲೀಸ್ ಠಾಣೆಯ ಮೆಟ್ಟಿಲೇರುವವರೆಗೂ ಹೋದದ್ದಿದೆ. ಗುರು-ಶಿಷ್ಯರ ಅನ್ಯೋನ್ಯತೆಗೆ ಧಕ್ಕೆ ಆಗಿದೆ.
Hijab Row: ನಮಗೆ ಹಿಜಾಬ್‌ಗಿಂತ ಶಿಕ್ಷಣವೇ ಮುಖ್ಯ, ವಿದ್ಯಾರ್ಥಿನಿಯರ ಮಾದರಿ ನಡೆ
ಪೋಷಕರಿಗೆ ಮಕ್ಕಳ ಭವಿಷ್ಯದ ಕುರಿತು ತಲೆನೋವು
ಹಿಜಾಬ್ ವಿವಾದದ ಕರಿನೆರಳು ವಿದ್ಯಾರ್ಥಿಗಳ ಪೋಷಕರ ಮೇಲೂ ಬಿದ್ದಿದೆ. ಶಾಲೆಯಲ್ಲಿ, ಮನೆಯಲ್ಲಿ ಚರ್ಚೆ ಆಗಬೇಕಿರದ ವಿಷಯವೊಂದು ಮಕ್ಕಳ ಮನ ಹೊಕ್ಕಿದೆ. ಅನಗತ್ಯ ವಿವಾದವೊಂದು ತಮ್ಮ ಮಕ್ಕಳನ್ನು ಎಷ್ಟುಪ್ರಭಾವಿಸುತ್ತದೋ, ಅದರತ್ತ ಗಮನ ಹರಿಸುವ ಮಕ್ಕಳ ಭವಿಷ್ಯ ಎಲ್ಲಿ ಮಂಕಾಗಿ ಹೋಗುತ್ತದೋ ಎಂಬ ಚಿಂತೆಯಲ್ಲಿ ಪೋಷಕರಿದ್ದಾರೆ. ಹಿಜಾಬ್ ಪರ ಇರುವ ಪೋಷಕರಂತೂ ತಾವೇ ಸ್ವತಃ ಪ್ರತಿಟನೆಗೆ ಧುಮುಕಿ ವಿವಾದಕ್ಕೆ ಮತ್ತಷ್ಟುಕಾವು ನೀಡಿದ ಅನೇಕ ನಿದರ್ಶನಗಳು ಘಟಿಸಿವೆ. ಇನ್ನು ಕೆಲವು ಪೋಷಕರಂತೂ ಈ ಪರಿಸ್ಥಿತಿಯಲ್ಲಿ ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳುಹಿಸುವುದು ಸುರಕ್ಷಿತವಲ್ಲವೆಂದು ಹಿಂಜರಿಯುವುದೂ ಕಂಡು ಬಂದಿದೆ.
ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆಗೆ ಅಪಾಯ
ಹಿಜಾಬ್ ವಿವಾದದ ಬೆನ್ನಲ್ಲೇ ರಾಜ್ಯಾದ್ಯಂತ ಬಹುತೇಕ ಶಾಲಾ-ಕಾಲೇಜು ಆವರಣಗಳಲ್ಲಿ ಪ್ರತಿಭಟನೆ, ವಾಗ್ವಾದ ನಡೆದಿವೆ. ಹಿಜಾಬ್-ಕೇಸರಿ ಶಾಲು ಮೆರವಣಿಗೆಗಳೇ ಆದವು. ವಿದ್ಯಾಧಿದೇವತೆಯ ಗುಣಗಾನ ಆಗಬೇಕಿದ್ದ ಕಾಲೇಜುಗಳ ಆವರಣದಲ್ಲಿ ಅಲ್ಲಾಹು ಅಕ್ಬರ್, ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು. ಪೋಷಕರು, ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಇದಕ್ಕೆ ಸೇರಿಕೊಂಡರು. ಸಂಬಂಧವೇ ಇಲ್ಲದವರೆಲ್ಲ ಅಟಕಾಯಿಸಿ ಕ್ಯಾಂಪಸ್‌ನಲ್ಲಿ ರಾಡಿಯೆಬ್ಬಿಸಿದರು. ಶಿಕ್ಷಕರಷ್ಟೇ ಅಲ್ಲ, ಪೊಲೀಸರು, ಅಧಿಕಾರಿಗಳಿಗೂ ಕ್ಯಾರೇ ಅನ್ನಲಿಲ್ಲ. ಒಟ್ಟಾರೆಯಾಗಿ ರಾಜ್ಯದ ಶಾಂತಿ-ಸುವ್ಯವಸ್ಥೆಗೆ ಅನಿರೀಕ್ಷಿತ ಅಪಾಯವೊಂದು ಎದುರಾಯಿತು.
ಧಾರ್ಮಿಕ ತಳಹದಿಯಲ್ಲಿ ಸಾಮಾಜಿಕ ಧ್ರುವೀಕರಣ
ಮೊದಲೇ ಕೋಮು ಸೂಕ್ಷ್ಮವಾಗಿರುವ ನಮ್ಮ ದೇಶದಲ್ಲಿ ಹಿಜಾಬ್ ವಿವಾದ ಧಾರ್ಮಿಕ ತಳಹದಿಯಲ್ಲಿ ಮತ್ತಷ್ಟುಧ್ರುವೀಕರಣಕ್ಕೆ ಕಾರಣವಾದರೂ ಅಚ್ಚರಿಯಿಲ್ಲ. ಹಿಂದೂ, ಕ್ರೈಸ್ತ, ಮುಸಲ್ಮಾನ, ಬುದ್ಧ, ಪಾರಸಿ, ಜೈನ, ಸಿಖ್ ಧರ್ಮೀಯರು ಅನ್ಯೋನ್ಯವಾಗಿ ಬಾಳಬೇಕಾದ ದೇಶದಲ್ಲಿ ನಾಯಕರೆನ್ನಿಸಿಕೊಂಡವರು ಆಗಾಗ್ಗೆ ಧರ್ಮದ ಆಧಾರದಲ್ಲಿ ಒಡೆದಾಳುವ ಪ್ರಯತ್ನ ನಡೆಸುವುದು ಇಂದು-ನಿನ್ನೆಯದಲ್ಲ. ಆದರೆ, ಶೈಕ್ಷಣಿಕ ಸಂಸ್ಥೆಗಳ ಆವರಣದಿಂದ ಹೊರಗಿದ್ದ ಈ ಪಿಡುಗು ಇದೀಗ ಅಲ್ಲಿಗೂ ಕಾಲಿಟ್ಟಿರುವುದು ಸ್ಪಷ್ಟ. ಇದು ಅವರ ಮನೆಗಳಿಗೂ ಹಬ್ಬಿ ಧರ್ಮದ ಆಧಾರದಲ್ಲಿ ಸಮಾಜ ಮತ್ತಷ್ಟುಧ್ರುವೀಕರಣಗೊಳ್ಳುವ ಆತಂಕ ಹೆಚ್ಚಾಗಿದೆ.
ವೈಷಮ್ಯದ ಬೆಂಕಿಗೆ ಸೋಶಿಯಲ್ ಮೀಡಿಯಾ ತುಪ್ಪ
ಹಿಜಾಬ್ ವಿವಾದವು ಭುಗಿಲೇಳುವಂತೆ ಮಾಡಿದ್ದರಲ್ಲಿ ಸಾಮಾಜಿಕ ಜಾಲತಾಣದ ಪಾತ್ರ ಮಹತ್ತರವಾದದ್ದು. ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವೀಟರ್, ಟೆಲಿಗ್ರಾಂನಂತಹ ತಾಣಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕ್ಷೇತ್ರಗಳಾಗಿವೆ. ಜೈ ಶ್ರೀರಾಮ್, ಅಲ್ಲಾಹು ಅಕ್ಬರ್ ವಿಡಿಯೋಗಳಿರಬಹುದು, ವಿದ್ಯಾರ್ಥಿ-ಶಿಕ್ಷಕರ ಸಂಘರ್ಷ ಇರಬಹುದು, ಪೋಷಕರು-ಪೊಲೀಸರ ವಾಗ್ವಾದ ಇರಬಹುದು, ಇನ್ಯಾವುದೋ ರಾಜಕೀಯ-ಧಾರ್ಮಿಕ ನಾಯಕರ ಪ್ರಚೋದನಕಾರಿ ಹೇಳಿಕೆಗಳಿರಬಹುದು... ಇವೆಲ್ಲವೂ ಈ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿವೆ. ಇತರರನ್ನು ಪ್ರಚೋದಿಸುತ್ತಿವೆ. ವಿವಾದದ ಜ್ವಾಲೆಯನ್ನು ತೀವ್ರವಾಗಿಸುತ್ತಿವೆ.
ಹಿಂದೂ ಕಾರ್ಯಕರ್ತನ ಹತ್ಯೆ, ಶಿವಮೊಗ್ಗ ಉದ್ವಿಗ್ನ, ವೈರಲ್ ಆಗುತ್ತಿದೆ ಆ ಒಂದು ಪೋಸ್ಟ್!
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನಗತ್ಯವಾಗಿ ಕಪ್ಪುಚುಕ್ಕೆ
ಹಿಜಾಬ್ ವಿವಾದ ಅಂತಾರಾಷ್ಟ್ರೀಯ ಪ್ರತಿಕ್ರಿಯೆಗೆ ಕಾರಣವಾಗಿದೆ. ಪಾಕಿಸ್ತಾನ, ಅಮೆರಿಕ ಸೇರಿ ಅನೇಕ ದೇಶಗಳ ರಾಜಕೀಯ, ಧಾರ್ಮಿಕ ಮುಖಂಡರು ಇದಕ್ಕೆ ಮೂಗು ತೂರಿಸಿದ್ದಾರೆ. ಭಾರತದಲ್ಲೇನೋ ಭಾರೀ ಗಂಡಾಂತರ ಸಂಭವಿಸಿದೆ ಎಂಬಷ್ಟರ ಮಟ್ಟಿಗೆ ಹುಯಿಲೆಬ್ಬಿಸಿದ್ದಾರೆ. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಲಾಲಾ, ವಿಶ್ವಖ್ಯಾತ ಫುಟ್ಬಾಲಿಗ ಪೋಗ್ಬಾರಂಥವರೂ ತಮ್ಮದೂ ಒಂದಿರ್ಲಿ ಎಂಬಂತೆ ಹೇಳಿಕೆಗಳನ್ನು ನೀಡಿದ್ದಾರೆ. ಇಂತಹ ವಿಚಾರಗಳನ್ನು ನಿರ್ವಹಿಸಲು ನಮ್ಮ ದೇಶ ಹಾಗೂ ಅದರ ವ್ಯವಸ್ಥೆ ಸಮರ್ಥವಿದೆ. ಇದರಲ್ಲಿ ಯಾರೂ ತಲೆ ಹಾಕಬೇಕಿಲ್ಲ ಎಂದು ಭಾರತವೇನೋ ಖಡಾಖಂಡಿತವಾಗಿ ಸಾರಿದೆ. ಆದರೆ, ಮಸಿ ಯಾರೇ ಬಳಿದರೂ ಅಳಿಸಲು ಬಹಳವೇ ಸಮಯ ಬೇಕಾಗುತ್ತದೆ.