Davanagere: ಗಂಗಾರತಿ ಮಾದರಿ ಹರಿಹರದಲ್ಲಿ ತುಂಗಾರತಿ , ಏನಿದರ ವಿಶೇಷತೆ..?

ತುಂಗಾರತಿ ಹರಿಹರದ ಚಹರೆಯನ್ನೇ ಬದಲಾಯಿಸಲಿದೆ. ಸಹಸ್ರಾರು ಉದ್ಯೋಗ ಸೃಷ್ಟಿಯಾಗಲಿದೆ. ಒಂದು ತುಂಗಾರತಿಯಿಂದ ಹಲವು ಜನರ ಕನಸು ನನಸಾಗಲಿದೆ, ಹೊಟ್ಟೆತುಂಬಲಿದೆ. ನಮ್ಮ ಪ್ರಕಾರ, ತುಂಗಾರತಿ ಹೊಸ ಮನ್ವಂತರವನ್ನೇ ಹರಿಹರದಲ್ಲಿ ಸೃಷ್ಟಿಸಲಿದೆ. ಸಾಂಸ್ಕೃತಿಕ ಗತವೈಭವ ಮತ್ತೆ ಹರಿಹರದಲ್ಲಿ ಮೆರೆಯಲಿದೆ.

Specialty of Tungarati Mantapa In Harihara Davanagere hls

ನಮ್ಮ ದೇಶ ಪವಿತ್ರ ನದಿಗಳ ದೇಶ. ಗಂಗೆ, ಗೋದಾವರಿ, ಬ್ರಹ್ಮಪುತ್ರ, ಕಾವೇರಿ, ತಾಪಿ, ತುಂಗೆ, ಕೃಷ್ಣ, ನರ್ಮದಾ, ಯಮುನಾ ಸೇರಿದಂತೆ ನಾಲ್ಕುನೂರಕ್ಕೂ ಹೆಚ್ಚು ನದಿಗಳು ನಮ್ಮಲ್ಲಿ ಹರಿಯುತ್ತವೆ. ಒಂದಕ್ಕಿಂತ ಒಂದು ಸುಂದರ, ಒಂದಕ್ಕಿಂತ ಒಂದು ಅಮರ.

ಬಹುಶಃ ಹರಿದಲ್ಲೆಲ್ಲಾ ಅದ್ಭುತಗಳನ್ನು ಸೃಷ್ಟಿಸೋದು ನದಿಯೊಂದೇ ಇರಬೇಕು. ನದಿಗಳು ನಮ್ಮ ಭಾವದೊಂದಿಗೆ, ಭಕ್ತಿಯೊಂದಿಗೆ ದೈವದೊಂದಿದೆ ಅನಾದಿ ಕಾಲದಿಂದಲೂ ಬೆರೆತುಹೋಗಿವೆ. ಅವು ಕೇವಲ ಜಲಮೂಲಗಳಲ್ಲ ದೇಶದ ಜೀವನಾಡಿಗಳು. ಕಾರಣ ಇಷ್ಟೆ; ಸಕಲ ಜೀವರಾಶಿಗಳ ದಾಹ ನೀಗಿಸುವ ನದಿಗಳನ್ನು ಸೃಷ್ಟಿಸಿದವರು ಸಾಕ್ಷಾತ್‌ ದೇವರುಗಳು, ಇಲ್ಲ ದೇವಮುನಿಗಳು ಎಂದೇ ನಾವು ಭಾರತೀಯರು ನಂಬಿದ್ದೇವೆ. ಹಾಗಾಗಿ ನಾವು ನದಿಗಳನ್ನು ಭಯಭಕ್ತಿಯಿಂದ ಪೂಜಿಸುತ್ತೇವೆ.

ಮನಮೋಹಕ ಗಂಗಾರತಿ

ಉತ್ತರದಲ್ಲಿ ಹರಿವ ಗಂಗೆ ಶಿವನ ಜಡೆಯಿಂದ ಹುಟ್ಟಿದವಳು. ಆಕೆಗೆ ಪಾಪ ಕರ್ಮಗಳನ್ನು ತೊಳೆಯುವ ಶಕ್ತಿ ಇದೆ. ಅವಳು ಪಾಪನಾಶಿನಿ, ಪುಣ್ಯವಾಹಿನಿ ಎಂದು ನಂಬಿರುವುದರಿಂದಲೇ ನಾವು ಪವಿತ್ರ ಗಂಗೆಯಲ್ಲಿ ಮಿಯ್ಯುತ್ತೇವೆ. ನಿಮಗೆ ಗೊತ್ತಿದೆ, ಪವಿತ್ರ ಗಂಗೆಯ ತಟದಲ್ಲಿ ಗಂಗಾರತಿ ನಡೆಯುತ್ತದೆ. ಗಂಗಾ ಮಾತೆಗೆ ಅಭಿಮುಖವಾಗಿ ನಿಂತು ದೀಪದಾರತಿ ಮಾಡುವುದೇ ಗಂಗಾರತಿ. ಅದು ಎಷ್ಟುಮನಮೋಹಕವೆಂದರೆ ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ. ಗಂಗಾರತಿ ನೋಡುವುದೇ ಒಂದು ಪುಣ್ಯ. ಜಗತ್ತಿನ ಮೂಲೆಮೂಲೆಗಳಿಂದ ಗಂಗಾರತಿ ನೋಡಲೆಂದೇ ಭಕ್ತರು ಬರುತ್ತಾರೆ, ಕಣ್ತುಂಬಿಕೊಳ್ಳುತ್ತಾರೆ. ನಮ್ಮನ್ನೆಲ್ಲಾ ತನ್ನ ಮಡಿಲಲ್ಲಿಟ್ಟುಕೊಂಡು ಪೊರೆಯುವ ತಾಯಿ ಗಂಗಾ ಮಾತೆಗೆ ನಮನ ಸಲ್ಲಿಸುವ ಗಂಗಾರತಿಯಂಥ ಪೂಜೆ ಬಹುಶಃ ಜಗತ್ತಿನಲ್ಲಿ ಎಲ್ಲಿಯೂ ನಡೆಯಲ್ಲ. ನಮ್ಮಲ್ಲಿ ಮಾತ್ರ ಅಂಥದ್ದೊಂದು ದಿವ್ಯ ಸಂಪ್ರದಾಯವಿದೆ. ಭವ್ಯ ಸಂಪ್ರದಾಯವಿದೆ.

ನಮಾಮಿ ತುಂಗೆ ಸಾಕಾರ

ಹಿಂದೂ ಧರ್ಮದಲ್ಲಿ ಗಂಗಾರತಿಗೆ ಎಲ್ಲಿಲ್ಲದ ಪ್ರಾಶಸ್ತ್ಯ, ಹಾಗೆಯೇ ಉತ್ತರಕ್ಕೆ ಗಂಗೆಯ ರೀತಿ ದಕ್ಷಿಣ ಭಾರತಕ್ಕೆ ತುಂಗಾ ನದಿ ಪವಿತ್ರ ಎನಿಸಿದೆ. ಗಂಗಾ ಸ್ನಾನ-ತುಂಗಾ ಪಾನ ಎನ್ನುವ ಉಕ್ತಿಯೂ ಇದೆ. ಗಂಗಾತಟದಲ್ಲಿ ವರ್ಷಗಟ್ಟಲೇ ಕಳೆದ ನಾವು ಗಂಗಾರತಿಯನ್ನು ಅನೇಕ ಬಾರಿ ನೋಡಿದ್ದೇವೆ. ಗಂಗಾರತಿಯ ರೀತಿಯಲ್ಲಿಯೇ ತುಂಗಾರತಿಯನ್ನು ಏಕೆ ಆರಂಭಿಸಬಾರದು ಎನ್ನುವ ವಿಷಯ ನಮ್ಮ ಮನಸಿಗೆ ಬಂದಿತ್ತು. ಈ ಯೋಚನೆ ಬರುತ್ತಿದ್ದಂತೆ, ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಬಳಿಯಿರುವ ತುಂಗಾ ತಟದಲ್ಲಿ ತುಂಗಾರತಿಯನ್ನು ಆರಂಭಿಸಲು ಯೋಚಿಸಿದೆವು. ಜೊತೆಗೆ ಗಂಗೆಯಂತೆ ತುಂಗಾ ನದಿಯನ್ನೂ ಶುಚಿಗೊಳಿಸಬೇಕು ಎನ್ನುವ ಮಹತ್ವಾಕಾಂಕ್ಷೆ ಬಂದಾಗ ಭಕ್ತಗಣದೊಂದಿಗೆ ಸೇರಿ ತುಂಗಾ ನದಿಯನ್ನು ಶುಚಿಗೊಳಿಸುವ, ನಮಾಮಿ ತುಂಗೆ ಯೋಜನೆಗೆ ಚಾಲನೆ ನೀಡಿದೆವು.

ಇಲ್ಲಿ ನಮ್ಮ ಆಶಯ ಒಂದಿದೆ; ಪ್ರತಿನಿತ್ಯ ಸೂರ್ಯಾಸ್ತ ಸಂಧರ್ಭದಲ್ಲಿ ಗಂಗೋತ್ರಿ, ರುದ್ರಪ್ರಯಾಗ, ದೇವಪ್ರಯಾಗ, ಋುಷಿಕೇಶ, ಹರಿದ್ವಾರ, ಪ್ರಯಾಗರಾಜ್‌, ವಾರಣಾಸಿ ಸೇರಿದಂತೆ ನೂರಾರು ಪವಿತ್ರ ಗಂಗಾ ತಟಗಳಲ್ಲಿ ಗಂಗಾರತಿ ನಡೆಯುವ ರೀತಿಯಲ್ಲಿಯೇ ನಮ್ಮ ತುಂಗಾ ನದಿ ತಟದಲ್ಲೂ ತುಂಗಾರತಿ ಪ್ರಾರಂಭಿಸಬೇಕು. ಹೇಗೆ ಮನಮೋಹಕ ಗಂಗಾರತಿ ಲಕ್ಷಾಂತರ ಭಕ್ತರ ಹೃನ್ಮನ ಸೆಳೆಯುತ್ತದೋ ಹಾಗೆಯೇ ತುಂಗಾರತಿ ಕೂಡ ನಾಡಿನ ಭಕ್ತರ ಹೃನ್ಮನ ಸೆಳೆಯಬೇಕು ಅನ್ನುವುದು ನಮ್ಮ ಇಚ್ಛೆ.

ನಿಮಗೆ ಗೊತ್ತಿದೆ ಎಂದು ಭಾವಿಸಿದ್ದೇವೆ. ಹರಿಹರವನ್ನ ಕರ್ನಾಟಕದ ಮ್ಯಾಂಚೆಸ್ಟರ್‌ ಅಂತಾನೆ ಕರೆಯಲಾಗುತ್ತಿತ್ತು. ನಾಡಿನ ಮೂಲೆಮೂಲೆಗಳಿಂದ ಉದ್ಯೋಗ ಅರಸಿಕೊಂಡು ಹರಿಹರಕ್ಕೆ ಜನ ಬರುತ್ತಿದ್ದರು. ಆದರೆ ಕಾಲಕ್ರಮೇಣ ಕೈಗಾರಿಕೆಗಳು ಮುಚ್ಚಿದವು. ನಿರುದ್ಯೋಗ ಹೆಚ್ಚಾಗತೊಡಗಿತು. ನಾಡಿನ ನಕಾಶೆಯಲ್ಲಿದ್ದ ಮ್ಯಾಂಚೆಸ್ಟರ್‌ ಹೆಸರು ಶಾಶ್ವತವಾಗಿ ಅಳಿಸಿಹೋಯ್ತು. ಇದನ್ನೆಲ್ಲಾ ಏಕೆ ಹೇಳುತ್ತಿದ್ದೇವೆ ಅಂದರೆ ಹರಿಹರ ಮತ್ತೆ ಜಗತ್ತಿನ ಭೂಪಟದಲ್ಲಿ ಗುರುತಿಸಿಕೊಳ್ಳಬೇಕು. ಜಗತ್ತಿನ ವಿವಿಧ ಮೂಲೆಗಳಿಂದ ಇಲ್ಲಿಗೆ ಜನ ಬರಬೇಕು. ಹರಿಹರ ಭಕ್ತಿ ಕೇಂದ್ರ ಮಾತ್ರವಲ್ಲ ಬ್ಯುಸಿನೆಸ್‌ ಕೇಂದ್ರವೂ ಆಗಬೇಕು ಎನ್ನುವುದು ನಮ್ಮ ಅಭಿಲಾಷೆ. ಅದಕ್ಕಾಗಿಯೇ ನಾವು ತುಂಗಾರತಿಯನ್ನು ಪ್ರಾರಂಭಿಸಲು ಉತ್ಸುಕರಾಗಿದ್ದೇವೆ.

ತುಂಗಾರತಿಯಿಂದ ಉದ್ಯೋಗ

ನಮ್ಮ ಪ್ರಕಾರ ತುಂಗಾರತಿ ಹರಿಹರದ ಚಹರೆಯನ್ನೇ ಬದಲಾಯಿಸಲಿದೆ. ಸಹಸ್ರಾರು ಉದ್ಯೋಗ ಸೃಷ್ಟಿಯಾಗಲಿದೆ. ಭಕ್ತ ಸಮೂಹದ ಜೊತೆ ಜೊತೆಗೆ ಹೂವು, ಹಣ್ಣು ಮಾರುವವರು, ಕಾಯಿಪಲ್ಯೆ ಮಾರುವವರು, ಆಟಿಕೆ ಮಾರುವವರು, ದವಸ ಧಾನ್ಯ ಮಾರುವವರು, ಹೋಟೆಲ್‌ ಉದ್ಯಮ ಹಾಗೂ ವಿವಿಧ ಅಂಗಡಿ ಮುಂಗಟ್ಟುಗಳು ತಲೆ ಎತ್ತುತ್ತವೆ. ಒಂದು ತುಂಗಾರತಿಯಿಂದ ಹಲವು ಜನರ ಕನಸು ನನಸಾಗಲಿದೆ, ಹೊಟ್ಟೆತುಂಬಲಿದೆ. ನಮ್ಮ ಪ್ರಕಾರ, ತುಂಗಾರತಿ ಒಂದು ಹೊಸ ಮನ್ವಂತರವನ್ನೇ ಹರಿಹರದಲ್ಲಿ ಸೃಷ್ಟಿಸಲಿದೆ. ಸಾಂಸ್ಕೃತಿಕ ಗತವೈಭವ ಮತ್ತೆ ಹರಿಹರದಲ್ಲಿ ಮೆರೆಯಲಿದೆ.

ಹರಿಹರ ಅತ್ಯಂತ ಪುರಾತನ ಮತ್ತು ಪವಿತ್ರ ನಗರ. ಇಲ್ಲಿರುವ ಹರಿಹರೇಶ್ವರ ದೇವಸ್ಥಾನ ಸುಮಾರು ಎಂಟುನೂರು ವರ್ಷಗಳಷ್ಟುಹಳೆಯದು. ಶ್ರೀ ಶಂಕರಾಚಾರ್ಯರು ಹೆಜ್ಜೆ ಊರಿ ಹೋದಂಥ ಪರಮಪವಿತ್ರ ಸ್ಥಳ ಹರಿಹರ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿನಲ್ಲಿ ಮೋದಿಜಿಯವರು ಕೇದಾರನಾಥದಲ್ಲಿ ಶಂಕರಾಚಾರ್ಯರ ಮೂರ್ತಿ ಅನಾವರಣ ಮಾಡಿದ್ದರಲ್ಲ ಆ ಸಂದರ್ಭದಲ್ಲಿ ಶಂಕರಾಚಾರ್ಯರು ಭೇಟಿ ನೀಡಿದ್ದ ದೇಶದ ಎಪ್ಪತ್ತೈದು ಸ್ಥಳಗಳನ್ನ ಗುರುತಿಸಿದ್ದರು. ಅದರಲ್ಲಿ ಹರಿಹರದ ಹರಿಹರೇಶ್ವರ ದೇವಸ್ಥಾನವೂ ಒಂದು.

ಇನ್ನೊಂದು ಮಹತ್ವದ ಅಂಶವೆಂದರೆ ಹರಿಹರದಲ್ಲೇ ಅತ್ಯಂತ ಪುರಾತನವಾದ ಶ್ರೀರಾಮನ ಮೂರ್ತಿ ಸಿಕ್ಕಿದ್ದು. ಆ ಮೂರ್ತಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಿದೆ. ಹರಿಹರಕ್ಕೆ ಇನ್ನೊಂದು ವಿಶೇಷತೆ ಇದೆ. ತುಂಗಭದ್ರ ನದಿಯ ದಂಡೆಯಲ್ಲಿರುವ ಹರಿಹರ ನಗರ, ಹರಿ-ಹರ ಎರಡೂ ಹಿಂದೂ ದೇವತೆಗಳ ಸಂಯೋಜನೆಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಹರಿಹರೇಶ್ವರ ಮೂರ್ತಿಯು ಶಿವನ ದೇಹದ ಅರ್ಧಭಾಗ ಮತ್ತು ವಿಷ್ಣುವಿನ ದೇಹದ ಅರ್ಧಭಾಗದಿಂದ ಕೂಡಿದ್ದು, ಎರಡೂ ಸೇರಿ ಹರಿಹರೇಶ್ವರ ಎನಿಸಿದೆ. ಹರಿ ಎಂದರೆ ವಿಷ್ಣು ಮತ್ತು ಹರ ಎಂದರೆ ಶಿವ, ಹೊಯ್ಸಳರ ಕಾಲದಲ್ಲಿ ಹರಿಹರೇಶ್ವರ ದೇವಸ್ಥಾನ 12ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಪ್ರಸಿದ್ದ ದೇವಾಲಯ. ಹರಿಹರವನ್ನು ದಕ್ಷಿಣ ಕಾಶಿ ಎಂದೂ ಕರೆಯಲಾಗುತ್ತದೆ. ಇದು ಶೈವ ಮತ್ತು ವೈಷ್ಣವರ ಶ್ರದ್ಧಾಕೇಂದ್ರವಾಗಿದೆ, ಏಕತಾ ಕೇಂದ್ರವಾಗಿದೆ.

108 ಮಂಟಪಕ್ಕೆ ಶಿಲಾನ್ಯಾಸ

ಇಂಥ ಪರಮ ಪವಿತ್ರವಾದ ಹರಿಹರದಲ್ಲಿ ತುಂಗಾರತಿಗೆ ತುಂಗಾ ತಟವನ್ನು ಸಿದ್ಧಗೊಳಿಸಬೇಕು. ಮೂಲಸೌಕರ್ಯಕ್ಕಾಗಿ ಹಣ ವಿನಿಯೋಗಿಸಬೇಕು. ಅದಕ್ಕೆ ನಾಡಿನ ಹೆಮ್ಮೆಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮನಸ್ಸು ಮಾಡಿದ್ದಾರೆ. ತುಂಗಾರತಿ ಸಿದ್ಧಗೊಳಿಸಲು ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡುತಿದ್ದಾರೆ. ತಾವೇ ಖುದ್ದಾಗಿ ಭಾನುವಾರ ಹರಿಹರದ ರಾಘವೇಂದ್ರಸ್ವಾಮಿ ಮಠದ ತುಂಗಾನದಿಯ ತಟದಲ್ಲಿ ತುಂಗಾಭದ್ರಾ ಆರತಿ ಪ್ರಯುಕ್ತ 108 ಯೋಗ ಮಂಟಪಗಳಿಗೆ ಶಿಲಾನ್ಯಾಸ ಸಮಾರಂಭಕ್ಕೆ ಚಾಲನೆ ನೀಡಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮ. ಹೇಗೆ ಪ್ರಧಾನಿ ನರೇಂದ್ರ ಮೋದಿಯವರು ವಿದೇಶಿ ನಾಯಕರನ್ನು ಗಂಗಾರತಿಗೆ ಆಹ್ವಾನಿಸಿ ಗಂಗಾರತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗೊಳಿಸಿದರೋ, ಹಾಗೆ ತಾವೂ ತುಂಗಾರತಿಯನ್ನು ಹೆಸರುಗೊಳಿಸಬೇಕು ಅನ್ನುವುದು ನಮ್ಮ ಇಚ್ಛೆ.

ಗಂಗಾರತಿ ಕಲ್ಪನೆ ಬಂದಿದ್ದು ಹೇಗೆ?

ತುಂಗಾರತಿ ಈ ಮೊದಲು ನಮ್ಮ ಕನಸಾಗಿರಲಿಲ್ಲ. ಆದರೆ 2019ರ ಒಂದು ದಿನ ಮಠಕ್ಕೆ ವಿದೇಶದಿಂದ ವಿದ್ಯಾರ್ಥಿಗಳು ಬಂದಿದ್ದರು. ಯೋಗಾಭ್ಯಾಸದ ನಂತರ ಆ ವಿದ್ಯಾರ್ಥಿಗಳನ್ನು ನಮ್ಮ ತುಂಗಾ ತೀರಕ್ಕೆ ಏಕೆ ಕರೆದುಕೊಂಡು ಹೋಗಬಾರದು ಅಂತನಿಸಿತು. ನಾವು ವಿದೇಶಿ ವಿದ್ಯಾರ್ಥಿಗಳ ಜೊತೆ ತುಂಗಾ ತಟಕ್ಕೆ ಹೋದರೆ ಅಲ್ಲೇನಿದೆ. ಬರೀ ಕೊಳಕು, ಹೊಲಸು. ನೀವು ನಂಬಲ್ಲ ತಾಯಿ ತುಂಗೆಯ ಬಳಿಗೂ ನಾವು ಹೋಗಲಾಗಲಿಲ್ಲ. ಅಷ್ಟುಮಲಿನಗೊಂಡಿದ್ದಳು ತುಂಗೆ. ವಿದೇಶಿ ವಿದ್ಯಾರ್ಥಿಗಳು ಏಕೆ ಹೀಗೆ ಅಂತ ತುಂಗೆಯತ್ತ ಬೆರಳು ಮಾಡಿ ತೋರಿಸಿ ಅಸಹ್ಯ ಪಟ್ಟುಕೊಂಡರು.

ಇದು ನಮ್ಮ ಮನಸನ್ನು ಘಾಸಿಗೊಳಿಸಿತು. ಅಲ್ಲಿಂದ ಬಂದು ನಾವು ಹರಿಹರನ ದೇವಾಲಯಕ್ಕೆ ತೆರಳಿದೆವು. ಹರ ದರ್ಶನ ಮಾಡುತ್ತಲೇ ಒಂದು ಮಹಾನ್‌ ಸಂಕಲ್ಪ ಮನದಲ್ಲಿ ಹಾದು ಹೋಯ್ತು. ಅದೇ ತುಂಗೆಯನ್ನ ಸ್ವಚ್ಛಗೊಳಿಸುವುದು. ಸಂಕಲ್ಪದಂತೆ ಊರಿನ ಯುವಪಡೆಯನ್ನು ಸಂಘಟಿಸಿ ತುಂಗೆಯನ್ನು ಸ್ವಚ್ಛಗೊಳಿಸಿದೆವು. ಜನರಲ್ಲಿ ಜಾಗೃತಿ ಮೂಡಿಸಿದೆವು. ದೇವಸ್ಥಾನದಲ್ಲಿ ಪ್ರಾರ್ಥಿಸುತ್ತಿದ್ದ ಸಮಯದಲ್ಲೇ ಗಂಗಾರತಿಯ ದಿವ್ಯ ಬೆಳಕು ನಮ್ಮ ಕಣ್ಣಮುಂದೆ ಹಾದುಹೋಯ್ತು. ಏನೇ ಆಗಲಿ ಗಂಗಾರತಿ ರೀತಿ ತುಂಗಾರತಿ ಮಾಡಲೇಬೇಕು ಎಂಬ ದಿವ್ಯ ಸಂಕಲ್ಪವನ್ನು ಅಂದು ನಾವು ಮಾಡಿ ಅದನ್ನು ಸಾಕಾರಗೊಳಿಸಲು ಅಂದಿನಿಂದಲೇ ಪ್ರಾರಂಭ ಮಾಡಿದೆವು. ಅದರ ಫಲ ಇಂದು ನಮ್ಮ ಕಣ್ಣೆದುರಿಗಿದೆ. ಅಂದು ಮಾಡಿದ ಸಂಕಲ್ಪ ಮುಂದಿನ ದಿನಗಳಲ್ಲಿ ಹರಿಹರದ ದಿಕ್ಕನ್ನೇ ಬದಲಿಸಲಿದೆ.

- ಶ್ರೀ ವಚನಾನಂದ ಮಹಾಸ್ವಾಮೀಜಿ

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ, ಹರಿಹರ

Latest Videos
Follow Us:
Download App:
  • android
  • ios