Belagavi Winter Session: ರೈತರ ಪರ ನಿಂತ ಸರ್ಕಾರ: ಅಧಿವೇಶನ ಯಶಸ್ವಿ

ಸಚಿವ ಶಂಕರ ಪಾಟೀಲ್‌.ಬ.ಮುನೇನಕೊಪ್ಪ ಅವರು ಸಕ್ಕರೆ ಖಾತೆಯ ಹೊಣೆ ಹೊತ್ತ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. 

Belagavi Winter Session Successful For Government Standing for Farmers grg

ಬೆಳಗಾವಿ(ಡಿ.29):  ರಾಜ್ಯದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ ಬೆಳಗಾವಿ. ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದಾಗ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತದೆ ಎಂದರೆ ಕಬ್ಬು ಬೆಳೆಗಾರರಿಂದ ಒಂದಿಲ್ಲೊಂದು ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ ಸದ್ದು ಕೇಳಿ ಬರುತ್ತಿತ್ತು. ವಿಪಕ್ಷಗಳು ಪ್ರತಿ ಅಧಿವೇಶನದಲ್ಲಿಯೂ ಸದನದಲ್ಲಿ ಕಬ್ಬು ಬೆಳೆಗಾರರ ವಿಚಾರವನ್ನೇ ಅಸ್ತ್ರವಾಗಿ ಬಳಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದದ್ದು ಇತಿಹಾಸ. ಸಚಿವ ಶಂಕರ ಪಾಟೀಲ್‌.ಬ.ಮುನೇನಕೊಪ್ಪ ಅವರು ಸಕ್ಕರೆ ಖಾತೆಯ ಹೊಣೆ ಹೊತ್ತ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸಕ್ಕರೆ ಇಲಾಖೆಯಲ್ಲಿ ವಿನೂತನ ಕಾರ್ಯಕ್ರಮ ಮತ್ತು ಕಬ್ಬು ಬೆಳೆಗಾರರ ಪರವಾಗಿ ಸಚಿವರು ಹೊಂದಿರುವ ವಿಶೇಷ ಕಾಳಜಿಯಿಂದಾಗಿ ಇಂದು ಬೆಳಗಾವಿ ಅಧಿವೇಶನಕ್ಕೆ ಕಬ್ಬು ಬೆಳೆಗಾರರ ಪ್ರತಿಭಟನೆ ಬಿಸಿ ತಟ್ಟದೆ, ಯಶಸ್ವಿಯಾಗಿ ಮುಕ್ತಾಯಗೊಂಡು ಇತಿಹಾಸ ನಿರ್ಮಿಸಿದೆ. ಈ ಮೂಲಕ ಸರ್ಕಾರ ರೈತರ ಪರವಾಗಿ ಇದೆ ಎಂಬುದನ್ನು ತೋರಿಸಿದ್ದಾರೆ.

ಇನ್ನು ರೈತರ ಕಷ್ಟ ಅಲಿಸಲು ಕಾಲ್‌ ಸೆಂಟರ್‌, ಕಾರ್ಖಾನೆಗಳ ಪುನಶ್ಚೇತನಕ್ಕೆ ಕ್ರಮ, ಎಥೆನಾಲ್‌ ಉತ್ಪಾದನೆ, ಹೊಸ ಸಾಫ್‌್ಟವೇರ್‌ ಅಭಿವೃದ್ಧಿ, ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿಯಂತಹ ಸಚಿವರ ದಿಟ್ಟಕ್ರಮಕ್ಕೆ ರೈತರಿಂದ ಶ್ಲಾಘನೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಂತಹ ಕ್ರಾಂತಿಕಾರಿ ಕ್ರಮಗಳಿಗೆ ಮುಕ್ತಹಸ್ತ ನೀಡಿದ್ದು ಫಲ ನೀಡಿದೆ. ರೈತ ಹೋರಾಟದ ಹಿನ್ನೆಲೆಯಿಂದ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ ಸಕ್ಕರೆ ಸಚಿವ ಶಂಕರ ಪಾಟೀಲ್‌ ಬ.ಮುನೇನಕೊಪ್ಪ ಅವರ ಕಾರ್ಯ ವೈಖರಿಗೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ಸಕ್ಕರೆಯ ಉಪ ಉತ್ಪನ್ನದ ಲಾಭಾಂಶ ರೈತರಿಗೆ ಕೊಡಿ: ಸಚಿವ ಮುನೇನಕೊಪ್ಪ

ಶೇ.100 ಬಾಕಿ ಪಾವತಿ ಗುರಿ:

2021-22ನೇ ಹಂಗಾಮಿನಲ್ಲಿ ರಾಜ್ಯದ ಒಟ್ಟು 72 ಸಕ್ಕರೆ ಕಾರ್ಖಾನೆಗಳು 622.26 ಲಕ್ಷ ಮೆ.ಟನ್‌ ಕಬ್ಬನ್ನು ಅರೆದು, 59.78 ಲಕ್ಷ ಮೆ.ಟನ್‌ ಸಕ್ಕರೆ ಉತ್ಪಾದಿಸಿವೆ. ನುರಿಸಿದ ಕಬ್ಬಿಗೆ ಯಾವುದೇ ಬಾಕಿ ಉಳಿಸಿಕೊಳ್ಳದೆ ಕಾರ್ಖಾನೆಗಳು 19922.39 ಕೋಟಿ ರು. ಪಾವತಿಸಿವೆ. ಹೀಗೆ ಪಾವತಿ ಪ್ರಮಾಣವು ಶೇ.100.00 ರಷ್ಟಿದೆ. ಕೆಲವು ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್‌.ಆರ್‌.ಪಿ. ದರಕ್ಕಿಂತಲೂ ಹೆಚ್ಚಿನ ಕಬ್ಬಿನ ದರ ಪಾವತಿಸಿವೆ. ದೇಶದಲ್ಲೇ ಕಬ್ಬು ಬೆಳೆಯುವ 15 ರಾಜ್ಯಗಳ ಪೈಕಿ ಯಾವುದೇ ಬಾಕಿ ಇಲ್ಲದೆ ಬಾಕಿ ಪಾವತಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ - ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಎಂಬ ಜೋಡೆತ್ತುವಿನ ಶ್ರಮ ಶ್ಲಾಘನೀಯ.

ಕೇಂದ್ರ ಸರ್ಕಾರವು 2022-23ನೇ ಸಾಲಿನ ಸಕ್ಕರೆ ಹಂಗಾಮಿಗೆ ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು (Fair and Remunerative Price) ನಿಗದಿಗೊಳಿಸಿದ್ದು, ಶೇ.10.15ರಷ್ಟು ಸಕ್ಕರೆ ಇಳುವರಿಗೆ ಪ್ರತಿ ಮೆ.ಟನ್‌ ಕಬ್ಬಿಗೆ 3050 ರು. ದರ ನಿಗದಿಗೊಳಿಸಿದೆ.

ರಾಜ್ಯ ಸರ್ಕಾರ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಆದಾಯ ಹಂಚಿಕೆ ಮಾಡುವಾಗ ಸಕ್ಕರೆ, ಬಗಾಸ್‌, ಮೊಲಾಸಿಸ್‌ ಮತ್ತು ಪ್ರೆಸ್‌ಮಡ್‌ಗಳಿಂದ ಬರುವ ಆದಾಯವನ್ನು ಮಾತ್ರ ಪರಿಗಣಿಸುತ್ತಿತ್ತು. ಸಕ್ಕರೆ ಉದ್ಯಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಈ ವರ್ಷದಲ್ಲಿ ಎಫ್‌.ಆರ್‌.ಪಿ. ದರದ ಮೇಲೆ ಹೆಚ್ಚುವರಿಯಾಗಿ ಕಬ್ಬಿನ ಬಿಲ್ಲನ್ನು ಪಾವತಿಸಲು ಅನುಕೂಲವಾಗುವಂತೆ ಉಪ ಉತ್ಪನ್ನವಾದ ಎಥೆನಾಲ್‌ ಅನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಅದರಂತೆ ಪ್ರಥಮ ಕಂತಿನಲ್ಲಿ ಎಫ್‌.ಆರ್‌.ಪಿ. ಜೊತೆಗೆ ಪ್ರತಿ ಮೆ.ಟನ್‌ ಒಂದಕ್ಕೆ 50 ರು. ದರವನ್ನು ಹೆಚ್ಚುವರಿಯಾಗಿ, ಕಬ್ಬು ಬೆಳೆಗಾರ ರೈತರಿಗೆ ಈ ಸಾಲಿನಲ್ಲಿ ಒಟ್ಟಾರೆ 204 ಕೋಟಿ ರು. ಪಾವತಿಸಲು ಕ್ರಮಕೈಗೊಳ್ಳಲಾಗಿದೆ.

41 ನೂತನ ಕಾರ್ಖಾನೆಗೆ ಅರ್ಜಿ:

ರಾಜ್ಯದಲ್ಲಿ ಹೊಸದಾಗಿ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸುವ ಸಂಬಂಧ 41 ಉದ್ದಿಮೆದಾರರು ಅರ್ಜಿಯನ್ನು ಸಲ್ಲಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಬೆಳಗಾವಿಗೆ ಸಕ್ಕರೆ ನಿರ್ದೇಶನಾಲಯ:

ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಆ ಭಾಗದ ಸಾರ್ವಜನಿಕರಿಗೆ ರಾಜ್ಯದ ಆಡಳಿತವು ಹತ್ತಿರವಾಗಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸಕ್ಕರೆ ಸಚಿವ ಶಂಕರ ಪಾಟೀಲ್‌.ಬ.ಮುನೇನಕೊಪ್ಪ ಅವರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯವನ್ನು ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರ ಮಾಡಿದ್ದಾರೆ.

ಬೆಂಗಳೂರಿನಲ್ಲಿರುವ ನಿರ್ದೇಶನಾಲಯದಲ್ಲಿ ಹಳೇ ಮೈಸೂರು ಭಾಗದ ರೈತರು ಮತ್ತು ಕಾರ್ಖಾನೆಗಳು ಕೆಲಸ ಮಾಡಿಕೊಳ್ಳುವ ಅವಕಾಶವಿದೆ. ಬೆಂಗಳೂರು-ಬೆಳಗಾವಿ ಎರಡರಲ್ಲೂ ನಿರ್ದೇಶನಾಲಯ ಕಚೇರಿಗಳ ಕಾರ್ಯ ನಿರ್ವಹಣೆ, ಎಲ್ಲ ಭಾಗದ ರೈತರು ಕಾರ್ಖಾನೆಯವರ ಹತ್ತಿರಕ್ಕೆ ಸರ್ಕಾರಕ್ಕೆ ಹೋಗಿ ಕೆಲಸ ಮಾಡುತ್ತಿರುವ ಶ್ರೇಯ ಸಚಿವರಿಗೆ ಸಲ್ಲುತ್ತದೆ.

ಸಾಫ್ಟ್‌ವೇರ್‌ ಅಭಿವೃದ್ಧಿ:

ಸಕ್ಕರೆ ಕಾರ್ಖಾನೆಗಳು ಅರೆಯುವ ಕಬ್ಬಿನ ಪ್ರಮಾಣ, ಸಕ್ಕರೆ ಉತ್ಪಾದನೆ, ಇಳುವರಿ, ರೈತರ ಕಬ್ಬು ಬಿಲ್ಲು ಪಾವತಿ, ಬಾಕಿ ಪಾವತಿ, ಸಕ್ಕರೆ ಮತ್ತು ಸಕ್ಕರೆ ದಾಸ್ತಾನು ಹಾಗೂ ಇತರೆ ಉಪ ಉತ್ಪನ್ನಗಳಿಂದ ಬರುವ ಆದಾಯದ ಲೆಕ್ಕಾಚಾರ ಇನ್ನಿತರ ಮಾಹಿತಿಯನ್ನು ತ್ವರಿತವಾಗಿ ಪಡೆಯಬೇಕೆಂಬ ಉದ್ದೇಶದಿಂದ ಸಚಿವರು ನೀಡಿದ ಸಲಹೆ ಮೇರೆಗೆ ಆ್ಯಪ್‌ ಹಾಗೂ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗಿದೆ.

ಮೈಶುಗರ್‌ ಪುನಶ್ಚೇತನಕ್ಕೆ 50 ಕೋಟಿ ರು.:

ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಸ್ವಾಮ್ಯದ ಐತಿಹಾಸಿಕ ಮೈಶುಗರ್‌ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸಕ್ಕರೆ ಸಚಿವ ಶಂಕರ ಪಾಟೀಲ್‌ ಬ.ಮುನೇನಕೊಪ್ಪ ಅವರು ಇಚ್ಛಾಶಕ್ತಿ ಹೊಂದಿದ ಪರಿಣಾಮವಾಗಿ ಮೈಸೂರು ಸಕ್ಕರೆ ಕಂಪನಿಯನ್ನು ಸಾರ್ವಜನಿಕ ವಲಯದಲ್ಲಿಯೇ ಮುಂದುವರಿಸಿ, ಪುನಶ್ಚೇತನಗೊಳಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ 50 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ.

ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಪಣ:

ರಾಜ್ಯದ ಕೆಲವು ಸಕ್ಕರೆ ಕಾರ್ಖಾನೆಗಳು ಆರ್ಥಿಕ ಸಂಕಷ್ಟದಿಂದ ಬಂದ್‌ ಆಗಿದ್ದವು. ಶಂಕರ ಪಾಟೀಲ್‌.ಬ.ಮುನೇನಕೊಪ್ಪ ಅವರು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಕಬ್ಬು ಬೆಳೆಯುವ ರೈತರ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಪುನಶ್ಚೇತನಗೊಳಿಸಲು ತೀರ್ಮಾನಿಸಿದೆ.

ಈ ದಿಸೆಯಲ್ಲಿ ಮೈಸೂರಿನ ಕೆ.ಆರ್‌.ನಗರದಲ್ಲಿರುವ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 2022-23ನೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ ಎಲ್‌.ಆರ್‌.ಒ.ಟಿ ಆಧಾರದ ಮೇಲೆ ಮೇಲೆ ನಿರಾಣಿ ಶುಗ​ರ್ಸ್‌ ಲಿ., ಮುಧೋಳ ಇವರಿಗೆ 120 ಕೋಟಿ ರು. ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ. ಇದರಿಂದಾಗಿ ಕಳೆದ 10 ವರ್ಷಗಳಿಂದ ಸ್ಥಗಿತಗೊಂಡಿದ್ದ ಸಕ್ಕರೆ ಕಾರ್ಖಾನೆಯನ್ನು ಪುನಃಶ್ಚೇತನಗೊಳಿದ್ದು, ಆ ಮೂಲಕ ಕಬ್ಬು ಬೆಳೆಗಾರರ ರೈತರ ಮತ್ತು ಕಾರ್ಮಿಕರ ಹಿತವನ್ನು ಕಾಪಾಡಲಾಗಿದೆ. ಇದಲ್ಲದೆ, ಬೀದರ್‌ನ ಹುಮ್ನಾಬಾದ್‌ನಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ.

ಸರ್ಕಾರ ರೈತರ ಪರವಾಗಿ ಹೊಂದಿರುವ ಕಾಳಜಿ, ವಿನೂತನ ಕಾರ್ಯಕ್ರಮಗಳಿಂದಾಗಿ ಸುವರ್ಣಸೌಧದಲ್ಲಿ ಯಾವುದೇ ಗದ್ದಲ ಇಲ್ಲದೆ, ಯಶಸ್ವಿಯಾಗಿ ನಡೆದಿರುವ ಶ್ರೇಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ್‌.ಬ.ಮುನೇನಕೊಪ್ಪ ಅವರಿಗೆ ಸಲ್ಲುತ್ತದೆ.

ದೂರು-ದುಮ್ಮಾನಕ್ಕೆ ಕಾಲ್‌ಸೆಂಟರ್‌

ಇನ್ಮುಂದೆ ಕಬ್ಬು ಬೆಳೆಗಾರರು ಕಾರ್ಖಾನೆಗಳು ಬಾಕಿ ಪಾವತಿ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ಕ್ಷಣ ಮಾತ್ರದಲ್ಲಿ ಇಲಾಖೆಗೆ ಮಾಹಿತಿ ಲಭ್ಯವಾಗಲಿದೆ. ಹೌದು, ಕಬ್ಬು ಬೆಳೆಗಾರರಿಗೆ ಅನುಕೂಲವಾಗಬೇಕು ಎಂಬ ಕಾರಣಕ್ಕೆ ಸಕ್ಕರೆ ಸಚಿವ ಶಂಕರ ಪಾಟೀಲ್‌ ಬ.ಮುನೇನಕೊಪ್ಪ ಅವರು ಕಾಲ್‌ ಸೆಂಟರ್‌ ತೆರೆಯುವ ವಿನೂತನ ಪ್ರಯತ್ನಕ್ಕೆ ನಾಂದಿ ಹಾಡಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇನ್ನು ಸಂಕಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳ ಪುನಃಶ್ಚೇತನಗೊಳಿಸಲು 9 ಕಾರ್ಖಾನೆಗಳನ್ನು ಗುತ್ತಿಗೆ ಆಧಾರದ ಮೇಲೆ ಖಾಸಗಿಯವರಿಗೆ ನೀಡಲಾಗಿದೆ. ಪುನಃಶ್ಚೇತನಗೊಳಿಸಲು 9 ಕಾರ್ಖಾನೆಗಳನ್ನು ಗುತ್ತಿಗೆ ಆಧಾರದ ಮೇಲೆ ಖಾಸಗಿಯವರಿಗೆ ನೀಡಲಾಗಿದೆ.

ಎಥೆನಾಲ್‌ ಉತ್ಪಾದನೆಗೆ ವಿಶೇಷ ಕಾಳಜಿ

ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳು ಲಾಭಾಂಶ ನೊಡಬೇಕೆಂಬ ಕಾರಣಕ್ಕೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಎಥೆನಾಲ್‌ ಉತ್ಪಾದನೆಗೆ ಸಚಿವ ಶಂಕರ ಪಾಟೀಲ್‌ ಬ.ಮುನೇನಕೊಪ್ಪ ಅವರು ವಿಶೇಷ ಮುತುವರ್ಜಿ ವಹಿಸಿದ್ದಾರೆ.

2022ರಲ್ಲಿ ಪೆಟ್ರೋಲ್‌ನೊಂದಿಗೆ 10% ಮತ್ತು 2025ರಲ್ಲಿ 20% ಎಥನಾಲ್‌ಅನ್ನು ಪೆಟ್ರೋಲ್‌ನೊಂದಿಗೆ ಮಿಶ್ರಣ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿದೆ. ಈ ವರ್ಷ, ರಾಜ್ಯದ ಸಕ್ಕರೆ ಕಾರ್ಖಾನೆಗಳು 10% ಮಿಶ್ರಣಗುರಿಯನ್ನು ಸಾಧಿಸಿವೆ. ಪ್ರಸ್ತುತ 34 ಸಕ್ಕರೆ ಕಾರ್ಖಾನೆಗಳು ಡಿಸ್ಟಿಲರಿ/ಎಥೆನಾಲ್‌ ಘಟಕಗಳನ್ನು ಹೊಂದಿವೆ. ಇವುಗಳ ಸಾಮರ್ಥ್ಯ 4650ಕೆಎಲ್‌ಪಿಡಿ ಆಗಿದೆ. ಅಲ್ಲದೇ ಹಾಲಿ ಇರುವ ಸಕ್ಕರೆ ಕಾರ್ಖಾನೆಗಳ ಸಾಮರ್ಥ್ಯ ಹೆಚ್ಚಿಸಲು ಮತ್ತು ಹೊಸದಾಗಿ ಎಥೆನಾಲ್‌ ಘಟಕಗಳನ್ನು ಸ್ಥಾಪಿಸುವ ಸಂಬಂಧ ರಾಜ್ಯದ ಒಟ್ಟು 68 ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ.

ಬಾಗಲಕೋಟೆ: ರೈತರ ಮಗ್ಗಲು ಮುರಿಯುವ ಕಬ್ಬಿನ ಲಗಾನಿ..!

ಪೆಟ್ರೋಲ್‌ನೊಂದಿಗೆ ಎಥೆನಾಲ್‌ ಮಿಶ್ರಣ ಯೋಜನೆಯಡಿಯಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಹಾಗೂ ಡಿಸ್ಟಿಲರಿ ಹೊಂದಿರುವ ಘಟಕಗಳಿಗೆ ಎಥೆನಾಲ್‌ ಉತ್ಪಾದಿಸಲು ರಾಜ್ಯ ಸರ್ಕಾರದಿಂದ ವಿಶೇಷ ನೀತಿ ರೂಪಿಸಲಾಗಿದೆ. ಅಷ್ಟುಮಾತ್ರವಲ್ಲದೆ, ಸಕ್ಕರೆ ಕಾರ್ಖಾನೆಗಳಲ್ಲಿ ಸ್ಯಾನಿಟೈಸರ್‌ ಉತ್ಪಾದಿಸಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದ್ದು ವಿಶೇಷ.

ಕಬ್ಬು ಬೆಳೆಗಾರರ ಬಾಕಿ ಪಾವತಿ ಸೇರಿದಂತೆ ಸಚಿವರು ಇಲಾಖೆಯಲ್ಲಿ ಹಲವು ಕ್ರಮಕೈಗೊಂಡಿದ್ದಾರೆ. ಸದನದಲ್ಲಿ ಇಲಾಖೆಯ ಯಾವುದೇ ಪ್ರಶ್ನೆಗೆ ಹಿಂಜರಿಕೆಯಲ್ಲದೆ, ಉತ್ತರಿಸುವ ಅವರ ಪರಿ ಅವರು ಉತ್ತಮ ಕಾರ್ಯವೈಖರಿಗೆ ಸಾಕ್ಷಿ ಅಂತ ಕರ್ನಾಟಕ ರಾಜ್ಯ ರೈತ ಸಂಘ - ರೈತಬಣ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷ, ಮಂಡ್ಯ ಜಿಲ್ಲೆ, ಬೆಳೆಗಾರ ಇ.ಎನ್‌.ಕೃಷ್ಣೇಗೌಡ ಇಂಗಲಗುಪ್ಪೆ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios