ಕಾರ್ಖಾನೆಯವರು, ಕಬ್ಬು ಕಟಾವ್‌ ಗ್ಯಾಂಗ್‌ನವರಿಂದ ಜಂಟಿಯಾಗಿ ರೈತರ ಶೋಷಣೆ

ಶ್ರೀನಿವಾಸ ಬಬಲಾದಿ

ಲೋಕಾಪುರ(ನ.19): ಇತ್ತ ಫಸಲು ಬಂದ ಕಬ್ಬು ಕಟಾವು ಆಗದೇ, ಅತ್ತ ಸಕ್ಕರೆ ಕಾರ್ಖಾನೆಯವರು ಕಟಾವಿಗೆ ಗ್ಯಾಂಗ್‌ ಕಳುಹಿಸಲು ಮೀನಮೇಷ ಎಣಿಸಿದ ಸಂದರ್ಭದಲ್ಲಿ ಕಾರ್ಖಾನೆಗೆ ಅಲೆದಾಡಿ ಸುಸ್ತಾಗಿ ರೈತರು ಕಬ್ಬಿಗೆ ಬೆಂಕಿ ಇಟ್ಟ ಉದಾಹರಣೆಗಳು ಸಾಕಷ್ಟಿವೆ. ಲಗಾನಿ ಕೂಡದ ಹೊರತು ಕಬ್ಬು ಕಟಾವು ಮಾಡುವುದಿಲ್ಲ ಎಂಬ ಕಾರ್ಖಾನೆಯವರ ಮತ್ತು ಕಬ್ಬು ಕಟಾವ್‌ ಗ್ಯಾಂಗ್‌ನವರ ಧೋರಣೆ ರೈತನನ್ನು ಪ್ರತಿಬಾರಿ ಅಸಹಾಯಕತೆಗೆ ತಳ್ಳುವುದು ಸುಳ್ಳಲ್ಲ.

ಬಾಗಲಕೋಟ, ಬೆಳಗಾವಿ ಜಿಲ್ಲೆಗಳಲ್ಲಿರುವಷ್ಟು ಸಕ್ಕರೆ ಕಾರ್ಖಾನೆಗಳು ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಇಲ್ಲ. ಕಬ್ಬು ಬೆಳೆಗಾರರು ಒಂದಲ್ಲ ಒಂದು ಸಂಕಟದಿಂದ ತೊಳಲಾಡುತ್ತಲೇ ಇದ್ದಾರೆ. ಎಲ್ಲವೂ ಸರಿಯಾಗಿದೆ. ಕಬ್ಬು ಫಸಲು ಸರಿಯಾಗಿ ಬಂದಿದೆ ಎಂದರೆ ಮತ್ತೊಂದು ಸಮಸ್ಯೆ ಧುತ್ತೆಂದು ಒಕ್ಕರಿಸಿರುತ್ತದೆ.

ಬಾದಾಮಿಯಲ್ಲಿಯೇ ಸಿದ್ದರಾಮಯ್ಯ ಸ್ಪರ್ಧಿಸುವಂತೆ ಸ್ಥಳೀಯರ ಒತ್ತಡ: ಜಮೀರ್ ಅಹಮದ್‌

ಮಹಾರಾಷ್ಟ್ರ ಗಡಿ ರಾಜ್ಯದಿಂದ ರಾಜ್ಯಕ್ಕೆ ಬರುತ್ತಿದ್ದ ಗ್ಯಾಂಗ್‌ಗಳ ಸಂಖ್ಯೆ ಈಗ ಕಡಿಮೆಯಾಗಿದೆ. ತಮ್ಮ ಹೊಲದಲ್ಲಿ ಬೆಳೆದ ಕಬ್ಬು ಸರಿಯಾದ ಸಮಯಕ್ಕೆ ಕಟಾವು ಆಗಬೇಕೆಂದರೆ ಗ್ಯಾಂಗ್‌ ಲೀಡರ್‌ ಕೇಳಿದಷ್ಟುಹಣವನ್ನು ರೈತರು ನೀಡಲೇಬೇಕು. ಇಲ್ಲದಿದ್ದರೆ ಒಂಬತ್ತನೇ ತಿಂಗಳಲ್ಲಿ ಕಟಾವು ಆಗಬೇಕಾದ ಕಬ್ಬಿನ ಫಸಲು 18 ತಿಂಗಳವರೆಗೂ ಕಟಾವಾಗದೇ ಹಾಗೆ ಉಳಿದು ಬಿಡುವ ಭೀತಿ ಇರುತ್ತದೆ.

ಖಾಸಗಿ ಸಕ್ಕರೆ ಕಾರ್ಖಾನೆಗಳ ಕ್ಷೇತ್ರಾಧಿಕಾರಿ, ಮೇಲಧಿಕಾರಿಗಳವರೆಗೂ ಈ ಗ್ಯಾಂಗ್‌ನವರ ಲಾಬಿ ನಡೆಯುತ್ತದೆ. ಗ್ಯಾಂಗ್‌ನವರು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಾರೆ. ಈ ರೀತಿ ಅಧಿಕಾರಿಗಳು ಹಾಗೂ ಗ್ಯಾಂಗ್‌ನವರು ಸೇರಿ ರೈತರನ್ನು ಶೋಷಿಸುವುದಕ್ಕೆ ಪರೋಕ್ಷವಾಗಿ ಕಾರ್ಖಾನೆಗಳ ಮಾಲೀಕರ ಬೆಂಬಲವೂ ಇರುತ್ತದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಪ್ರಸ್ತುತ ಜಿಲ್ಲೆಯಲ್ಲಿ ಸಕಾಲಕ್ಕೆ ಕಬ್ಬು ಕಟಾವು ಆಗಬೇಕು. ಕಬ್ಬಿನ ತೂಕ ಹೆಚ್ಚಿಗೆ ಬರಬೇಕು. ಕಬ್ಬಿಗೆ ಸಮರ್ಪಕವಾದ ಬೆಲೆ ದೊರಕಿ, ಒಂದಿಷ್ಟುಲಾಭ ಬಂದರೆ ಮಾಡಿದ ಸಾಲ ನಿವಾರಿಸಬಹುದು ಎಂಬ ನಿರೀಕ್ಷೆಯಲ್ಲಿ ವಿವಿಧೆಡೆ ರೈತರು ಹೋರಾಟ ನಡೆಸಿರುವದು ಸುಳ್ಳಲ್ಲ. ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ಸಭೆ ನಡೆದು ಟನ್‌ ಕಬ್ಬಿಗೆ .2700ರಿಂದ .2900ರವರೆಗೆ ದರ ನಿಗದಿ ಮಾಡಿದ್ದರೂ ಈ ದರಕ್ಕೆ ಇನ್ನು ಕೆಲವು ಕಾರ್ಖಾನೆಯವರು ಒಪ್ಪಿಗೆ ಸೂಚಿಸಲ್ಲ. ಪೈಪೋಟಿಗಿಳಿದ ಕೆಲವು ಕಾರ್ಖಾನೆಯವರು ಟನ್‌ ಕಬ್ಬಿಗೆ .3100 ದರ ನೀಡಿದಂತೆ ಮಾಡಿ ಲಗಾನಿ ಹೊರೆಯನ್ನು ರೈತರ ಮೇಲೆ ಹೊರಿಸುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಬಿಜೆಪಿ ಶಾಸಕ ಯತ್ನಾಳ ನಕಲಿ ಹಿಂದುತ್ವವಾದಿ: ತೆಗ್ಗಿ

ಲಗಾನಿ ಎಂದರೇನು; ಲಗಾನಿ ಎಷ್ಟು ಕೊಡಬೇಕು?

ಕಬ್ಬು ಕಟಾವು ಮಾಡುವ ಗ್ಯಾಂಗ್‌ನವರಿಗೆ ಪ್ರತಿ ಟ್ರಿಪ್‌ಗೆ ನೀಡುವ ಹಣಕ್ಕೆ ಲಗಾನಿ ಎಂದು ಕರೆಯುತ್ತಾರೆ. ಹಾಗೆಯೇ ಕಬ್ಬು ತುಂಬಿಕೊಂಡು ಹೊಲದಿಂದ ಕಾರ್ಖಾನೆಗೆ ತೆರಳುವ ಚಾಲಕನಿಗೂ ನೀಡುವ ಹಣಕ್ಕು ಕೂಡ ಅಗಾನಿ ಎಂದು ಹೇಳುತ್ತಾರೆ. ಈ ಹಿಂದೆ .100 ವಾಹನ ಚಾಲಕರಿಗೆ ಭತ್ಯೆ(ಲಗಾನಿ) ನೀಡುತ್ತಿದ್ದರೆ, ಈಗ ಪ್ರತಿ ಟ್ರಿಪ್‌ಗೆ .500ರಿಂದ .600 ಬೇಡಿಕೆ ಇಡುತ್ತಿದ್ದಾರೆ. ಹಾಗೆಯೇ ಕಟಾವು ಗ್ಯಾಂಗ್‌ನವರು ಪ್ರತಿ ಟ್ರಿಪ್‌ಗೆ .1500ರಿಂದ .2000 ಲಗಾನಿಗೆ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ, ಒಂದು ಎಕರೆಯಲ್ಲಿ ರೈತರು ಕಬ್ಬು ಬೆಳೆದಿದ್ದರೆ .10000ದಿಂದ .15000 ವರೆಗೆ ಲಗಾನಿ ರೂಪದಲ್ಲಿಯೇ ರೈತರು ನೀಡಬೇಕಾದ ಅನಿವಾರ್ಯತೆ ತಂದೊಡ್ಡಲಾಗಿದೆ.

ಒಂದು ಬಾರಿ ಲೋಡ್‌ ಮಾಡಲು ಕಬ್ಬು ಕಟಾವು ಮಾಡುವ ಗ್ಯಾಂಗ್‌ಗಳು ಎಕರೆಗೆ .7ರಿಂದ .10 ಸಾವಿರ ಬೇಡಿಕೆ ಇಡುತ್ತಲಿವೆ. ಇನ್ನು ಕದ್ದು ಕಾರ್ಖಾನೆಗೆ ಹೋಗಿ ಬಿಲ್ಲು ಬರುವುದು. ಯಾವಾಗಲೋ ಏನೋ ಕಬ್ಬು ಹೊತ್ತು ವಾಹನವನ್ನು ಕಾರ್ಖಾನೆಗೆ ಮುಟ್ಟಿಸುವ ಚಾಲಕನಿಗೆ ಪ್ರತಿ ಟ್ರಿಪ್‌ಗೆ .500ರಿಂದ .600 ಹಾಗೂ ತಿಂಡಿ, ಊಟ ನೀಡಲೇಬೇಕು. ಕಬ್ಬು ಕಟಾವು ಮಾಡಿದ ಕೂಲಿ ಹೊರೆಯ ಜೊತೆ ಕಟಾವು ಮಾಡುವ ವೇಳೆಯಲ್ಲಿ ಕೊಡುವ ಲಗಾನಿಯೂ ರೈತನಿಗೆ ಹೊರೆಯೂ ಹೆಚ್ಚಿದೆ. ಲಗಾನಿ ಹೊರೆಯನ್ನು ತಪ್ಪಿಸಲು ಪರ್ಯಾಯವೆಂಬಂತೆ ಕಬ್ಬು ಕಟಾವು ಯಂತ್ರಗಳನ್ನು ಅಲ್ಲಲ್ಲಿ ಬಳಸುತ್ತಿದ್ದರೂ, ಇದರ ಪ್ರಮಾಣವು ಇನ್ನೂ ವ್ಯಾಪಕವಾಗಿ ಹೆಚ್ಚಬೇಕಿದೆ ಎಂಬ ಆಗ್ರಹಗಳು ಕೇಳಿಬಂದಿವೆ.