Belagavi Violence: ರಾಷ್ಟ್ರ ನಾಯಕರ ಅವಮಾನ ಸಹಿಸಲ್ಲ: ಪುಂಡರ ಮೇಲೆ ಗೂಂಡಾ ಕಾಯ್ದೆ, ದೇಶದ್ರೋಹ ಕೇಸ್: ಸಿಎಂ
*ಎಂಇಎಸ್ ಪುಂಡರ ಮೇಲೆ ಗೂಂಡಾ ಕಾಯ್ದೆ, ದೇಶದ್ರೋಹ ಕೇಸ್
*ಎಂಇಎಸ್ ನಿಷೇಧಿಸಲು ಇರುವ ಅವಕಾಶಗಳ ಪರಿಶೀಲನೆ: ಸಿಎಂ
*ಸುವರ್ಣಸೌಧದಲ್ಲಿ ಚನ್ನಮ್ಮ, ರಾಯಣ್ಣ ಪ್ರತಿಮೆ ಸ್ಥಾಪನೆ
ವಿಧಾನಸಭೆ (ಡಿ. 21): ಸ್ವಾತಂತ್ರ್ಯ ಹೋರಾಟಗಾರರು , ಸಮಾಜ ಸುಧಾರಕರ ಪ್ರತಿಮೆಗಳನ್ನು ಧ್ವಂಸಗೊಳಿಸುವ ಮತ್ತು ವಿರೂಪಗೊಳಿಸುವಂತಹವರ ವಿರುದ್ಧ ದೇಶದ್ರೋಹ ಮೊಕದ್ದಮೆ (Treason) ದಾಖಲು ಮಾಡುವುದಾಗಿ ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಇದೇ ವೇಳೆ, ಸಂಗೊಳ್ಳಿ ರಾಯಣ್ಣ ಪ್ರತಿಮೆ (Krantiveera Sangolli Rayanna) ವಿರೂಪಗೊಳಿಸಿದ ಹಾಗೂ ಶಿವಾಜಿ ಪ್ರತಿಮೆಗೆ (Chhatrapati Shivaji Maharaj) ಮಸಿ ಬಳಿದವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸೂಚಿಸಿದೆ. ಇದೇ ವೇಳೆ, ಎಂಇಎಸ್ (MES) ನಿಷೇಧ ಕುರಿತು ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಲಾಗುವುದು. ನಿರ್ಬಂಧ ವಿಧಿಸಲು ಸಾಧ್ಯವಾಗದಿದ್ದರೆ ಸಂಪೂರ್ಣ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದೆ.
ದೇಶದ್ರೋಹ ಮೊಕದ್ದಮೆ ದಾಖಲು!
ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಪ್ರಕರಣ ಸಂಬಂಧ ಸೋಮವಾರ (ಡಿ. 20) ಸದನದಲ್ಲಿ ಒಕ್ಕೊರಲದಿಂದ ಶಾಸಕರು ವ್ಯಾಪಕ ಟೀಕೆ ವ್ಯಕ್ತಪಡಿಸಿದರು. ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೇಶದ ಮಹಾನ್ ಪುರುಷರ ಪ್ರತಿಮೆಗಳನ್ನು ಆಗಾಗ್ಗೆ ವಿರೂಪಗೊಳಿಸುವುದು, ಧ್ವಂಸ ಮಾಡುವಂತಹ ಪ್ರಕರಣಗಳು ನಡೆಯುತ್ತಿವೆ. ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಪ್ರತಿಮೆಗಳನ್ನು ಧ್ವಂಸ, ವಿರೂಪಗೊಳಿಸುವಂತಹ ಕುಕೃತ್ಯ ಎಸಗಿದವರ ವಿರುದ್ಧ ದೇಶದ್ರೋಹ ಮೊಕದ್ದಮೆ ದಾಖಲಿಸಲಾಗುವುದು ಎಂದು ಪ್ರಕಟಿಸಿದರು.
ಗೂಂಡಾ ಕಾಯ್ದೆಗೆ ಕ್ರಮ:
ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಮತ್ತು ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವುದು ಖಂಡನೀಯ. ಘಟನೆ ಸಂಬಂಧ ಈಗಾಗಲೇ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಬಂಧಿತರ ಟ್ರ್ಯಾಕ್ ದಾಖಲೆಗಳನ್ನು ತೆಗೆಸಿ ಪ್ರಮುಖವಾಗಿರುವ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ, ಅವರ ವಿರುದ್ಧವೂ ದೇಶದ್ರೋಹ ಮೊಕದ್ದಮೆ ದಾಖಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಬೊಮ್ಮಾಯಿ ತಿಳಿಸಿದರು.
ವಿಕೃತ ಮನಸ್ಸುಗಳು ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಅಶಾಂತಿ ಮೂಡಿಸುವ ದುರುದ್ದೇಶದಿಂದ ಪೂರ್ವನಿಯೋಜಿತವಾಗಿ ಕೃತ್ಯಗಳನ್ನು ಎಸಗಲಾಗುತ್ತಿದೆ. ಸಮಾಜದಲ್ಲಿ ಕಿಚ್ಚು ಹೊತ್ತಿಸಿ ರೊಚ್ಚಿಗೇಳಿಸುವ ದುರುದ್ದೇಶ ಕಿಡಿಗೇಡಿಗಳಲ್ಲಿದೆ. ಇಂತಹ ಕಿಡಿಗೇಡಿಗಳ ವಿರುದ್ಧ ರಕ್ಷಣಾತ್ಮಕ ನಿಲುವು ಕೈಗೊಂಡರೆ ಸಮಾಜದ ಮೇಲೆ ಅತ್ಯಾಚಾರ ನಡೆಯುತ್ತದೆ. ಹೀಗಾಗಿ ದಿಟ್ಟನಿರ್ಧಾರ ಕೈಗೊಳ್ಳುವುದು ಅನಿವಾರ್ಯ ಎಂದು ಹೇಳಿದರು.
ಭಾವನಾತ್ಮಕವಾಗಿ ಬಳಸಿಕೊಂಡು ಗಡಿ ತಂಟೆ!
ಭಾಷಾವಾರು ಪ್ರಾಂತ್ಯಗಳನ್ನು ಸ್ಥಾಪನೆ ಮಾಡಿದ ಬಳಿಕವೂ ಮಹಾರಾಷ್ಟ್ರವು ಗಡಿ ತಂಟೆಯನ್ನು ಜೀವಂತವಾಗಿಡುವ ಪ್ರಯತ್ನಗಳನ್ನು ನಡೆಸಿಕೊಂಡೇ ಬರುತ್ತಿದೆ. ಗಡಿ ಸಂಬಂಧ ಮಹಾಜನ್ ವರದಿ ಅಂತಿಮ ಎಂದು ಭಾವಿಸಿದರೂ ಮಹಾರಾಷ್ಟ್ರವು ತನ್ನ ಕ್ಯಾತೆ ಬಿಡುತ್ತಿಲ್ಲ. ರಾಜಕಾರಣಿಗಳಿಗೂ ಗಡಿ ವಿವಾದ ಬಂಡವಾಳವಾಯಿತು. ಎರಡು ರಾಜ್ಯದಲ್ಲಿಯೂ ಎರಡೂ ರಾಜ್ಯಗಳ ಭಾಷಿಕರು ನೆಲೆಸಿ ಜೀವನ ನಡೆಸುತ್ತಿದ್ದಾರೆ. ಅವರನ್ನು ಭಾವನಾತ್ಮಕವಾಗಿ ಬಳಸಿಕೊಂಡು ಗಡಿ ತಂಟೆಯನ್ನು ಎಂಇಎಸ್ ರಾಜಕೀಯವಾಗಿ ಜೀವಂತವಾಗಿಡುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸವು ಖಂಡನೀಯ ಎಂದು ಮುಖ್ಯಮಂತ್ರಿಗಳು ಎಂಇಎಸ್ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು.
ಎಂಇಎಸ್ ನಿಷೇಧಿಸುವ ಬಗ್ಗೆ ಪರಿಶೀಲನೆ:
ಸದನದಲ್ಲಿಸದಸ್ಯರು ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು (ಎಂಇಎಸ್) ನಿರ್ಬಂಧಿಸುವ ಬಗ್ಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಲಾಗುವುದು. ರಾಜ್ಯದಲ್ಲಿ ನಿರ್ಬಂಧ ವಿಧಿಸಲು ಸಾಧ್ಯವಾಗದಿದ್ದರೂ ಸಂಪೂರ್ಣವಾಗಿ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ನೆಲ, ಜಲ ಗಟ್ಟಿಗೊಳಿಸುವ ಕೆಲಸ ಮಾಡಲಾಗುವುದು. ಅಶಾಂತಿ ಮೂಡಿಸುವ ಕೆಲಸದಲ್ಲಿ ತೊಡಗಿರುವವರಿಗೆ ತಕ್ಕಪಾಠ ಕಲಿಸಲಾಗುವುದು. ಅಲ್ಲದೇ, ರಾಜ್ಯದಲ್ಲಿ ನಡೆದಿರುವ ಘಟನೆ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಲಾಗುವುದು ಎಂದರು.
ಸುವರ್ಣಸೌಧದಲ್ಲಿ ಚನ್ನಮ್ಮ, ರಾಯಣ್ಣ ಪ್ರತಿಮೆ ಸ್ಥಾಪನೆ
ವಿಧಾನಸಭೆ: ಎಂಇಎಸ್ ಪುಂಡಾಟಿಕೆಗೆ ತಿರುಗೇಟು ನೀಡಲು ಗಡಿ ಜಿಲ್ಲೆ ಬೆಳಗಾವಿಯಲ್ಲಿನ ಸುವರ್ಣ ವಿಧಾನಸೌಧ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವ ಪ್ರಕರಣ ಸಂಬಂಧ ಸೋಮವಾರ ಸದನದಲ್ಲಿ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ನಿರ್ಧಾರ ಪ್ರಕಟಿಸಿದರು.
ಮಹಾರಾಷ್ಟ್ರದ 40 ಗ್ರಾಪಂಗಳು ಒಪ್ಪಿದರೆ ರಾಜ್ಯಕ್ಕೆ ಸೇರ್ಪಡೆ: ಸಿಎಂ
ನೆರೆರಾಜ್ಯ ಮಹಾರಾಷ್ಟ್ರದ ಜತ್ ತಾಲೂಕಿನ 40 ಗ್ರಾಮಪಂಚಾಯಿಗಳು ತಮಗೆ ನ್ಯಾಯ ಸಿಗದ ಕಾರಣ ಕರ್ನಾಟಕಕ್ಕೆ ಸೇರಿಸಿ ಎಂದು ನಿರ್ಣಯ ಕೈಗೊಂಡಿದ್ದು, ಒಪ್ಪಿದರೆ ರಾಜ್ಯಕ್ಕೆ ಸೇರಿಸಿಕೊಂಡು ಸಕಲ ಅಭಿವೃದ್ಧಿ ಕೈಗೊಳ್ಳಲು ಸಿದ್ಧವಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಹಾರಾಷ್ಟ್ರದಲ್ಲಿ ಎಂಇಎಸ್ ಬೆಂಬಲ ಕುಂದಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಬೆಂಬಲ ಪುನರ್‌ಸ್ಥಾಪನೆಗೆ ಪ್ರಯತ್ನ ನಡೆಸುತ್ತಿದೆ. ಜತ್ ತಾಲೂಕಿನ 40 ಗ್ರಾಮಪಂಚಾಯತ್‌ಗಳು ಕರ್ನಾಟಕಕ್ಕೆ ಸೇರಿಕೊಳ್ಳುವ ಬಗ್ಗೆ ನಿರ್ಣಯ ಕೈಗೊಂಡಿವೆ. ಕಾನೂನಾತ್ಮಕವಾಗಿ ಒಪ್ಪಿಗೆ ಸಿಕ್ಕರೆ ರಾಜ್ಯಕ್ಕೆ ಸೇರಿಸಿಕೊಂಡು ಗ್ರಾಮ ಪಂಚಾಯತ್‌ಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.
ಇದನ್ನೂ ಓದಿ:
1) Belagavi Violence ಎಂಇಎಸ್ ನಿಷೇಧಿಸದಿದ್ದರೆ ಕರ್ನಾಟಕ ಬಂದ್, ಸರ್ಕಾರಕ್ಕೆ ಡೆಡ್‌ಲೈನ್ ನೀಡಿದ ಕನ್ನಡ ಸಂಘಟನೆ!
2) Shivaji statue vandalism ಕುಡಿದ ಅಮಲಿನಲ್ಲಿ ಉಕ್ಕಿಬಂತು ರೋಷ, ಮತ್ತೊಂದು ಶಿವಾಜಿ ಪ್ರತಿಮೆ ಧ್ವಂಸ!
3) Karnataka Anti Conversion Bill ಸಂಪುಟ ಒಪ್ಪಿಗೆ ನೀಡಿದ ಮತಾಂತರ ನಿಷೇಧ ಮಸೂದೆಯಲ್ಲೇನಿದೆ?