ಬೆಂಗಳೂರು :  ಗಾಳಿಯಲ್ಲಿ ತೇವಾಂಶವಿರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಆ ತೇವಾಂಶದಿಂದ ನೂರಾರು ಲೀಟರ್‌ ಶುದ್ಧ ಕುಡಿಯುವ ನೀರು ಉತ್ಪಾದಿಸಿ ಬಳಸುವುದು ಗೊತ್ತಿದೆಯೇ..?

ವಾತಾವರಣದಲ್ಲಿರುವ ತೇವಾಂಶದಿಂದ ‘ಶುದ್ಧ ಮಿನರಲ್‌ ಕುಡಿಯುವ ನೀರು’ ಉತ್ಪಾದಿಸುವ ‘ಅಟ್ಮಾಸ್ಪಿಯರ್‌ ವಾಟರ್‌ ಜನರೇಟರ್‌’ (ಎಡಬ್ಲ್ಯೂಜಿ) ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ಅಭಿವೃದ್ಧಿಪಡಿಸಿದೆ.

ಭಾರತದಲ್ಲೇ ಮೊದಲ ಬಾರಿಗೆ ಬಿಇಎಲ್‌ ಇಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಏರೋ ಇಂಡಿಯಾ-2019ರ ವೈಮಾನಿಕ ಪ್ರದರ್ಶನದಲ್ಲಿ ಪ್ರಸ್ತುತಪಡಿಸಿದೆ.

ವಾತಾವರಣದಲ್ಲಿ ಗಾಳಿಯೊಂದಿಗೆ ವಿಲೀನವಾಗಿರುವ ತೇವಾಂಶವನ್ನು ಪ್ರತ್ಯೇಕಗೊಳಿಸಿ ತೇವಾಂಶವನ್ನು ‘ಎಚ್‌2ಒ’ (ನೀರು) ಆಗಿ ಪರಿವರ್ತಿಸುವ ಹಾಗೂ ಮಾನವ ಶರೀರಕ್ಕೆ ಅಗತ್ಯವಿರುವಂತೆ ಶುದ್ಧ ಕುಡಿಯುವ ನೀರಾಗಿ ಪರಿವರ್ತಿಸಿ ನೀಡುವ ತಂತ್ರಜ್ಞಾನವನ್ನು ಇದು ಒಳಗೊಂಡಿದೆ.

ಚಳಿ, ಮಳೆ, ಬಿಸಿಲು ಎನ್ನದೆ ಗಡಿ ಕಾಯುವ ಸೈನಿಕರು ಗಡಿ ಭಾಗದಲ್ಲಿ ಶುದ್ಧ ನೀರು ಸಿಗದೆ ಪರದಾಡುತ್ತಾರೆ. ಅಂತಹ ಪ್ರದೇಶದಲ್ಲಿ ವಾತಾವರಣದಿಂದಲೇ ದಿನಕ್ಕೆ 1 ಸಾವಿರ ಲೀಟರ್‌ವರೆಗೆ ಶುದ್ಧ ಕುಡಿಯುವ ನೀರು ಉತ್ಪಾದನೆ ಮಾಡಲಾಗುವುದು. ಈ ಮೂಲಕ ಸೈನಿಕರಿಗೆ ನೀರೊದಗಿಸುವುದನ್ನು ಪ್ರಮುಖ ಉದ್ದೇಶವನ್ನಾಗಿರಿಸಿಕೊಂಡು ಈ ಸಾಧನ ಅಭಿವೃದ್ಧಿಪಡಿಸಿದ್ದು, ಇವುಗಳ ಮಾರಾಟಕ್ಕೆ ಭಾರತೀಯ ಸೇನೆ ಜತೆ ಮಾತುಕತೆಯನ್ನೂ ನಡೆಸಲಾಗುತ್ತಿದೆ.

ಡಬ್ಲ್ಯೂಎಚ್‌ಒ ಮಾನ್ಯತೆ:

ವಾತಾವರಣದಲ್ಲಿರುವ ತೇವಾಂಶದಿಂದ ಶುದ್ಧ, ಸುರಕ್ಷಿತ ಹಾಗೂ ಮಾನವ ಬಳಕೆಗೆ ಯೋಗ್ಯವಾದ ನೀರನ್ನೇ ಈ ಯಂತ್ರ ನೀಡುತ್ತದೆ. ಶೇ.100 ರಷ್ಟುವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರವೇ ನೀರನ್ನು ಉತ್ಪಾದಿಸುತ್ತದೆ. ಯಂತ್ರವು 30, 100, 500, 1000 ಲೀಟರ್‌ವರೆಗಿನ ನಾಲ್ಕು ಸಾಮರ್ಥ್ಯದ ಯಂತ್ರಗಳಲ್ಲಿ ಲಭ್ಯವಿದೆ. ವಾತಾವರಣದಲ್ಲಿ ತೇವಾಂಶ ಕಡಿಮೆ ಇದ್ದರೆ ನೀರಿನ ಉತ್ಪಾದನೆ ತುಸು ವಿಳಂಬವಾಗುತ್ತದೆಯೇ ಹೊರತು ನೀರು ಉತ್ಪಾದನೆ ನಿಲ್ಲುವುದಿಲ್ಲ ಎನ್ನುತ್ತಾರೆ ಬಿಇಎಲ್‌ ಅಧಿಕಾರಿಗಳು.