ನವದೆಹಲಿ: ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ‘ಪ್ರಧಾನಿ- ಕಿಸಾನ್‌’ ಯೋಜನೆ ಘೋಷಿಸಿರುವ ಕೇಂದ್ರ ಸರ್ಕಾರ, ಇದರಡಿ ಮೊದಲ ಎರಡು ಕಂತುಗಳನ್ನು ಲೋಕಸಭೆ ಚುನಾವಣೆ ಒಳಗೆ ರೈತರ ಖಾತೆಗೆ ಜಮೆ ಮಾಡಲು ಮುಂದಾಗಿದೆ.

ವಾರ್ಷಿಕ 6 ಸಾವಿರ ರು.ಗಳನ್ನು ರೈತರ ಬ್ಯಾಂಕ್‌ ಖಾತೆಗೆ 2 ಸಾವಿರ ರು.ಗಳಂತೆ 3 ಕಂತುಗಳಲ್ಲಿ ಜಮೆ ಮಾಡುವ ಯೋಜನೆ ಇದಾಗಿದೆ. ಮಾ.31ರೊಳಗೆ ಮೊದಲ ಕಂತಿನಲ್ಲಿ 2 ಸಾವಿರ ರು. ವರ್ಗಾವಣೆಗೆ ಸಿದ್ಧತೆಯೂ ಪ್ರಾರಂಭವಾಗಿದೆ. ಇದೀಗ ಎರಡನೇ ಕಂತಿನ ಮೊತ್ತವನ್ನೂ ಲೋಕಸಭೆ ಚುನಾವಣೆ ಒಳಗಾಗಿ ಜಮೆ ಮಾಡಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಅಲ್ಲಿಗೆ ರೈತರಿಗೆ ಚುನಾವಣೆ ಒಳಗಾಗಿ ಒಟ್ಟು 4 ಸಾವಿರ ರು. ಸೇರಿದಂತಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಫಲಾನುಭವಿಗಳ ಆಯ್ಕೆ ಪೂರ್ಣಗೊಂಡ ಬಳಿಕ ಮೊದಲ ಕಂತಿನ ಹಣ ವರ್ಗಾವಣೆಯಾಗುವುದರಿಂದ 2ನೇ ಕಂತಿನಲ್ಲಿ ನಗದು ಜಮೆಗೆ ಸಮಸ್ಯೆಯಾಗುವುದಿಲ್ಲ. ಚಾಲ್ತಿಯಲ್ಲಿರುವ ಯೋಜನೆ ಇದಾಗುವುದರಿಂದ ನೀತಿ ಸಂಹಿತೆ ಕೂಡ ಅಡ್ಡಿಯಾಗುವುದಿಲ್ಲ. ಆದರೆ ನೀತಿ ಸಂಹಿತೆ ಘೋಷಣೆಯಾದ ಬಳಿಕ ಹೊಸದಾಗಿ ಫಲಾನುಭವಿಗಳನ್ನು ಸೇರ್ಪಡೆ ಮಾಡಲು ಆಗುವುದಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.

ಎಸ್ಪಿ- ಬಿಎಸ್ಪಿ ಮೈತ್ರಿ ಏರ್ಪಟ್ಟಿರುವ ಹಾಗೂ ದೇಶದಲ್ಲೇ ಅತಿ ಹೆಚ್ಚು ರೈತರು ಇರುವ ಉತ್ತರಪ್ರದೇಶ ಸರ್ಕಾರ ಈ ತಿಂಗಳ ಮಧ್ಯಭಾಗದಲ್ಲೇ ಫಲಾನುಭವಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸುವ ವಿಶ್ವಾಸದಲ್ಲಿದೆ.