ಬೆಂಗಳೂರು (ನ.05):  ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸದೇ ಪೊಲೀಸರು ದಾಳಿ ಮಾಡಿರುವುದು ಕಾನೂನು ಬಾಹಿರ ಎಂಬ ವಾದವನ್ನು ತಳ್ಳಿ ಹಾಕಿರುವ ಹೈಕೋರ್ಟ್‌, ಸಂಭವಿಸಬಹುದಾದ ಅಪರಾಧ ಕೃತ್ಯದ ಕುರಿತು ಮಾಹಿತಿ ದೊರೆತ ತಕ್ಷಣ ಅಂತಹ ಕೃತ್ಯ ತಡೆಯಲು ಪೊಲೀಸರು ಮುಂದಾಗಬೇಕೇ ವಿನಾ ಎಫ್‌ಐಆರ್‌ ದಾಖಲಿಸುವುದು ಮುಖ್ಯ ಅಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ಅಪರಾಧ ಕೃತ್ಯ ನಡೆಯುತ್ತಿದೆ ಅಥವಾ ನಡೆಯಲಿದೆ ಎಂಬ ಖಚಿತ ಹಾಗೂ ರಹಸ್ಯ ಮಾಹಿತಿ ಸಿಕ್ಕರೆ, ಸ್ಥಳಕ್ಕೆ ತೆರಳಿ ಕೃತ್ಯ ತಡೆದು ಆರೋಪಿಯನ್ನು ಬಂಧಿಸಿ ಸಾಕ್ಷ್ಯ ಸಂಗ್ರಹಿಸುವುದು ಪೊಲೀಸರ ಮೊದಲ ಕರ್ತವ್ಯವಾಗುತ್ತದೆ ಎಂದು ತಿಳಿಸಿದೆ.

ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೇರಳದ ಕಣ್ಣೂರು ಮೂಲದ ತಸ್ಲೀಮ್‌, ಹಸೀಬ್‌ ಹಾಗೂ ರಸೀಕ್‌ ಅಲಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ರೀತಿ ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ಕುಮಾರ್‌ ಅವರಿದ್ದ ಪೀಠ, ಮೂವರೂ ಆರೋಪಿಗಳ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌: ಏಳು ಜನರ ಬಂಧನ ...

ಕಾನೂನುಬಾಹಿರ ದಾಳಿ:  ಪ್ರಕರಣದ ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು, ಪೊಲೀಸರು ತಮಗೆ ಮಾಹಿತಿ ಸಿಕ್ಕ ಕೂಡಲೇ ಎಫ್‌ಐಆರ್‌ ದಾಖಲಿಸದೇ ದಾಳಿ ನಡೆಸಿರುವುದು ಕಾನೂನು ಬಾಹಿರ ಕ್ರಮವಾಗಿದೆ. ದಾಳಿಯಲ್ಲಿ ಯಾವುದೇ ಮಾದಕ ವಸ್ತು ಸಹ ಪತ್ತೆಯಾಗಿಲ್ಲ. ವಶಪಡಿಸಿಕೊಂಡ ವಸ್ತುಗಳ ಕುರಿತು 15 ದಿನಗಳ ಒಳಗೆ ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ಎನ್‌ಡಿಪಿಎಸ್‌ ಕಾಯ್ದೆ ಅನ್ವಯಿಸುವುದಿಲ್ಲ. ಆದ್ದರಿಂದ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

ಪೊಲೀಸರ ಪರ ವಾದ ಮಂಡಿಸಿದ ಸರ್ಕಾರಿ ವಕೀಲೆ ಕೆ.ಪಿ. ಯಶೋಧಾ, ದಾಳಿ ವೇಳೆ ಆರೋಪಿಗಳ ಮನೆಯಲ್ಲಿ ಮಾದಕ ವಸ್ತು ಪತ್ತೆಯಾಗಿದ್ದು, ಎಲ್ಲ ಪ್ರಕ್ರಿಯೆಗಳನ್ನೂ ಕಾನೂನು ಪ್ರಕಾರವೇ ನಡೆಸಲಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ನಿಗದಿತ ಅವಧಿಯೊಳಗೆ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟರೂ ಕೋರೊನಾ ಕಾರಣದಿಂದ ವರದಿ ಸಿಗುವುದು ವಿಳಂಬವಾಗಿದೆ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಬೇಕೆಂದು ಮನವಿ ಮಾಡಿದ್ದರು.

ವಾದ ಆಲಿಸಿದ ನ್ಯಾಯಪೀಠ, ಪೊಲೀಸರು ಕೈಗೊಂಡ ಕ್ರಮದಲ್ಲಿ ಯಾವುದೇ ಲೋಪ ಕಂಡು ಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಮೂವರೂ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ

ಕೇಂದ್ರ ಅಪರಾಧ ವಿಭಾಗದ ಪೊಲೀಸರು ಕಳೆದ ಜೂ.11ರಂದು ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯ ಬಿಟಿಎಂ 2ನೇ ಹಂತದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿ 6 ಮಂದಿ ಯುವಕರಿಂದ ಹಾಗೂ ಎಲ್‌ಎಸ್‌ಡಿ ಸ್ಟ್ರಿಫ್ಸ್‌, ಗಾಂಜಾ, ಎಂಡಿಎಂಎ, ಎಕ್ಸ್‌ಟೆಸಿ ಮಾತ್ರೆಗಳಿದ್ದವು ಎನ್ನಲಾದ ಬ್ಯಾಗ್‌ ಪಶಪಡಿಸಿಕೊಂಡಿದ್ದರು. ಆರು ಮಂದಿಯ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳ ಪೈಕಿ ಮೂವರು ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.