ಹುಬ್ಬಳ್ಳಿ(ನ.05): ಶಾರ್ಜಾದಲ್ಲಿ ನಡೆದ ಐಪಿಎಲ್‌ ಟೂರ್ನಿಯ ಲೀಗ್‌ ಟಿ- 20 ಕ್ರಿಕೆಟ್‌ ಪಂದ್ಯಾವಳಿ ವೇಳೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಇಂಡಿಯನ್‌ ಮತ್ತು ಸನ್‌ರೈಸಸ್‌ ಹೈದ್ರಾಬಾದ್‌ ನಡುವಿನ ಪಂದ್ಯದ ವೇಳೆ ಎರಡು ಪ್ರತ್ಯೇಕ ಬೆಟ್ಟಿಂಗ್‌ ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಿ 2.66 ಲಕ್ಷ ವಶಪಡಿಸಿಕೊಂಡಿದ್ದಾರೆ. ಗೋಕುಲ ಪೊಲೀಸ್‌ ಠಾಣಾ ವ್ಯಾಪ್ತಿಯ ರುದ್ರಗಂಗಾ ಲೇಔಟ್‌ ಹತ್ತಿರ ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದ ಹಳೇ ಹುಬ್ಬಳ್ಳಿ ಪ್ರಶಾಂತ ಕಾಲನಿಯ ಪರಶುರಾಮ ಜಗನ್ನಾಥಸಾ ಲದವಾ, ಹುಬ್ಬಳ್ಳಿಯ ನಾಯಕ ಮಿಸ್ಕಿನ್‌ ಎಂಬುವರನ್ನು ಬಂಧಿಸಲಾಗಿದ್ದು, ಅವರಿಂದ 1.30 ಲಕ್ಷ ಹಾಗೂ ಮೊಬೈಲ್‌ ವಶಪಡಿಸಿಕೊಂಡಿದ್ದಾರೆ. ಗೋಕುಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿದ್ದಾರೆ.

ಹುಬ್ಬಳ್ಳಿ ಅಶೋಕನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಹುಬ್ಬಳ್ಳಿ ಶಕ್ತಿ ಕಾಲನಿ ಜೆ.ಕೆ. ಸ್ಕೂಲ್‌ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1000ಗೆ 1000 ಕೊಡುವುದಾಗಿ ಹೇಳಿ ಮೊಬೈಲ್‌ ಪೋನ್‌ಗಳ ಮುಖಾಂತರ ಅಕ್ರಮ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಹುಬ್ಬಳ್ಳಿಯ ಆರೀಫ್‌ ರೆಹತುಮಲ್ಲಾ ಸಾತೇನಹಳ್ಳಿ, ವಿಶಾಲ ರಾಜುಸಾ ಬಾಂಡಗೆ ಅವರನ್ನು ಬಂಧಿಸಿ ಮೂರು ಮೊಬೈಲ್‌ ಹಾಗೂ 1,36,260 ನಗದು ವಶಕ್ಕೆ ತೆಗೆದುಕೊಂಡಿದ್ದಾರೆ. ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಿಕೆಟ್‌ ಬೆಟ್ಟಿಂಗ್‌: 21 ಲಕ್ಷ ಹಣ ವಶ, ಐವರ ಬಂಧನ

ಕೇಶ್ವಾಪುರ:

ಇನ್ನು ರಾ​ಯಲ್‌ ಚಾ​ಲೆಂಜರ್ಸ್‌ ಬೆಂಗ​ಳೂರು (​ಆ​ರ್‌​ಸಿ​ಬಿ) ಮತ್ತು ಡೆಲ್ಲಿ ಕ್ಯಾ​ಪಿ​ಟಲ್ಸ್‌ ತಂಡ​ಗಳ ನ​ಡು​ವಿನ ಪಂದ್ಯದಲ್ಲಿ ಬೆ​ಟ್ಟಿಂಗ್‌​ನಲ್ಲಿ ತೊ​ಡ​ಗಿದ್ದ ಮೂ​ವ​ರನ್ನು ಕೇ​ಶ್ವಾ​ಪೂರ ಪೊ​ಲೀ​ಸರು ಬಂಧಿಸಿ 1.34 ಲ​ಕ್ಷ ನ​ಗದು ವ​ಶ​ಪ​ಡಿ​ಸಿ​ಕೊಂಡಿ​ದ್ದಾರೆ. ಜ​ನತಾ ಕಾಲನಿ ಸ​ರ್ಕ​ಲ್‌​ನಲ್ಲಿ ಬೆ​ಟ್ಟಿಂಗ್‌​ನಲ್ಲಿ ತೊ​ಡ​ಗಿದ್ದ ಆ​ರ್‌.​ಸಿ. ​ಕಾಲ​ನಿಯ ಶಿ​ವ​ರಾ​ಮ​ಕೃಷ್ಣ ನಾ​ಚ​ರಯ್ಯ, ರಾ​ಜೇಂದ್ರ ಪ್ರ​ಭು​ದಾಸ ಮತ್ತು ರಾ​ಜ​ರಾವ ಜೋ​ಸೆಫ್‌ ಅ​ವ​ರನ್ನು ಬಂಧಿ​ಸ​ಲಾ​ಗಿದೆ. ಎ​ರಡು ಮೊ​ಬೈಲ್‌ ಪೋ​ನ್‌​ಗ​ಳನ್ನು ವ​ಶಕ್ಕೆ ಪ​ಡೆ​ದು​ಕೊ​ಳ್ಳ​ಲಾ​ಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಧಾರವಾಡದಲ್ಲಿ ನಾಲ್ವರ ಬಂಧನ

ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಸಕ್ರಿಯವಾಗಿದ್ದ ನಾಲ್ವರನ್ನು ಉಪನಗರ ಠಾಣೆ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ. ಹೊಸ ಬಸ್‌ ನಿಲ್ದಾಣದ ಬಳಿ ದುಬೈನ ಶಾರ್ಜಾದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಸನ್‌ ರೈಸರ್ಸ್‌ ಹೈದ್ರಾಬಾದ್‌ ತಂಡಗಳ ನಡುವೆ ನಡೆಯುತ್ತಿದ್ದ ಪಂದ್ಯಾವಳಿ ಮೇಲೆ, ಮಾಳಾಪೂರದ ಲತೀಫ್‌ ತಂಬೋಲಿ ಹಾಗೂ ಗಾಂಧಿಚೌಕ್‌ ರಸೂಲಪೂರ ನಿವಾಸಿ ಇಜಾಜ್‌ ಅಹ್ಮದ್‌ ಮನಿಯಾರ ಎಂಬುವವರನ್ನು ಬಂಧಿಸಿ 15,100 ನಗದು ಹಾಗೂ ಎರಡು ಮೊಬೈಲ್‌ ವಶಕ್ಕೆ ಪಡೆದಿದ್ದಾರೆ. ಇನ್ನು, ಹಳೇ ಡಿವೈಎಸ್ಪಿ ವೃತ್ತದ ಬಳಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮಾಳಾಪುರದ ರಿಯಾಜಖಾನ್‌ ರೌಫಖಾನ್‌ ಹಾಗೂ ಅಲ್ಲಾಭಕ್ಷ ನವಲೂರ ಎಂವವರನ್ನು ಬಂಧಿಸಿ 25 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸಿಪಿ ಅನುಶಾ ತಿಳಿಸಿದ್ದಾರೆ.