ಕೊರೋನಾ ಟೆಸ್ಟ್‌ಗೆ ಒಪ್ಪದಿದ್ದರೆ 3 ವರ್ಷ ಜೈಲು, ಭಾರೀ ದಂಡ!| ಸೋಂಕು ನಿಯಂತ್ರಣಕ್ಕೆ ಕಾನೂನು ಅಸ್ತ್ರ ಪ್ರಯೋಗ| ಸರ್ಕಾರ ಸೂಚಿಸಿದವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ| ಮಹತ್ವದ ಆದೇಶ| ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ ಬಳಕೆ
ಬೆಂಗಳೂರು(ಅ.07): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ಕಠಿಣ ಆದೇಶವೊಂದನ್ನು ಹೊರಡಿಸಿದೆ. ಸರ್ಕಾರದಿಂದ ಗುರುತಿಸಲ್ಪಡುವ ವ್ಯಕ್ತಿಗಳು ಕೊರೋನಾ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಮಂಗಳವಾರ ಆದೇಶಿಸಿದೆ. ಆದೇಶ ಪಾಲಿಸದವರಿಗೆ 50 ಸಾವಿರ ರು.ವರೆಗೆ ದಂಡ ಹಾಗೂ 6 ತಿಂಗಳಿಂದ 3 ವರ್ಷದವರೆಗೆ ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸಲಾಗಿದೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಹೊಸ ಆದೇಶ ಹೊರಡಿಸಿದೆ. ಆದೇಶದ ಪ್ರಕಾರ, ‘ಕೋವಿಡ್ ಧೃಢವಾಗಿರುವ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರು, ಜ್ವರದ ಲಕ್ಷಣವಿರುವ ವ್ಯಕ್ತಿಗಳು, ಉಸಿರಾಟ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು, ಕೋವಿಡ್-19 ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ಸಿಬ್ಬಂದಿ, ಕಂಟೈನ್‌ಮೆಂಟ್ ಮತ್ತು ಬಫರ್ ವಲಯದಲ್ಲಿನ ವ್ಯಕ್ತಿಗಳು ಮತ್ತು ಆರೋಗ್ಯ ಇಲಾಖೆಯಿಂದ ಗುರುತಿಸಲ್ಪಟ್ಟವ್ಯಕ್ತಿಗಳು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕು’ ಎಂದು ತಿಳಿಸಲಾಗಿದೆ.
ಡಿಸಿಗಳಿಗೆ ಜಾರಿಯ ಹೊಣೆ:
ಈ ಆದೇಶವನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ - 2020ರ 4ನೇ ವಿಧಿಯಡಿ ಹೊರಡಿಸಲಾಗಿದ್ದು, ಆದೇಶ ಜಾರಿಯ ಹೊಣೆಯನ್ನು ಜಿಲ್ಲಾಧಿಕಾರಿಗಳು ಅಥವಾ ಮುನಿಸಿಪಲ್ ಕಮಿಷನರ್ ಅವರಿಗೆ ವಹಿಸಲಾಗಿದೆ. ಈ ಸುಗ್ರೀವಾಜ್ಞೆ ಪ್ರಕಾರ, ಸರ್ಕಾರ ಸೂಚಿಸಿದರೂ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳದವರಿಗೆ 50 ಸಾವಿರ ರು.ವರೆಗೆ ದಂಡ ಹಾಗೂ 6 ತಿಂಗಳಿಂದ 3 ವರ್ಷದವರೆಗೆ ಶಿಕ್ಷೆ ವಿಧಿಸುವ ಅವಕಾಶವಿದೆ.
ನಿರಾಕರಣೆಯಿಂದ ಹಿನ್ನಡೆ:
ಕೊರೋನಾ ಸೋಂಕು ಪತ್ತೆ ಹಚ್ಚುವ ಪರೀಕ್ಷೆಗೆ ಕೆಲವರು ನಿರಾಕರಿಸುತ್ತಿರುವುದು ರಾಜ್ಯದ ಕೊರೋನಾ ನಿಯಂತ್ರಣ ಕ್ರಮಕ್ಕೆ ತೀವ್ರ ಹಿನ್ನಡೆ ತಂದಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಸರಿಯಾದ ಸಮಯದಲ್ಲಿ ಕೊರೋನಾ ಸೋಂಕನ್ನು ಪತ್ತೆ ಹಚ್ಚುವುದರಿಂದ ಸೋಂಕಿತನ ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳಿಗೆ ಸೋಂಕು ಹರಡುವುದನ್ನು ತಡೆಯಬಹುದು. ಹಾಗೆಯೇ ಸೋಂಕು ಪತ್ತೆ ಹಚ್ಚಲು ಮತ್ತು ಸೋಂಕಿತರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಇದರಿಂದ ಮರಣದ ದರ ಕಡಿಮೆಯಾಗಲಿದೆ ಎಂದು ಸರ್ಕಾರವು ತನ್ನ ಆದೇಶದಲ್ಲಿ ತಿಳಿಸಿದೆ.
