ರೈತ ಮಹಿಳೆ ಮಾತಿಗೆ ಓಕೆ ಎಂದು ಮಾತಿನಂತೆ ನಡೆದುಕೊಂಡ ಕೌರವ..!
* ಆಕೆ ಕೇಳಿದಕ್ಕೆ ಓಕೆ ಎಂದು ಮಾತಿನಂತೆ ನಡೆದುಕೊಂಡ ಕೌರವ
* ಮಾತು ಕೊಟ್ಟು ಅದರಂತೆ ನಡೆದುಕೊಂಡು ಮಾದರಿಯಾದ ಸಚಿವ ಬಿಸಿ ಪಾಟೀಲ್
* ಕೊಟ್ಟ ಮಾತಿನಂತೆ ಮಹಾದೇವಕ್ಕ ಅವರಿಗೆ ಹೊಸ ಟ್ರಾಕ್ಟರ್ ಹಸ್ತಾಂತರ
ವರದಿ: ಪ್ರವೀಣ್ಕುಮಾರ್ ಸಲಗನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು.
ಹಾವೇರಿ/ಬೆಂಗಳೂರು, (ಮಾ.19): ಸಾಮಾನ್ಯವಾಗಿ ರಾಜಕಾರಣಿಗಳು ವೇದಿಕೆ ಮೇಲೆ ಕೊಡುವ ಮಾತು. ಮರೆತ ಮಾತಾಗುವುದೇ ಜಾಸ್ತಿ. ಆದರೆ, ಕೌರವ ಖ್ಯಾತಿಯ ಕೃಷಿ ಸಚಿವ ಬಿ.ಸಿ ಪಾಟೀಲ್, ಮಾತು ಕೊಟ್ಟು ಅದರಂತೆ ನಡೆದುಕೊಂಡು ಮಾದರಿ ಆಗಿದ್ದಾರೆ.
ಹೌದು...ವೇದಿಕೆಗಳಲ್ಲಿ ಮಾತು ಕೊಡುವವರು ಇವರನ್ನು ಅನುಸರಿಸಲೇಬೇಕು ಎಂಬಂತೆ ನಡೆದುಕೊಂಡಿದ್ದಾರೆ.
ರೈತರ ಮಕ್ಕಳ ಸ್ಕಾಲರ್‌ಶಿಪ್‌ಗೆ ಪಹಣಿ ಬೇಕಿಲ್ಲ: ಸಚಿವ ಬಿ.ಸಿ.ಪಾಟೀಲ್
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದ ಮಹಾದೇವಕ್ಕ 5 ಎಕರೆ 23 ಗುಂಟೆಯಲ್ಲಿ ಗಮನಾರ್ಹ ಕೃಷಿ ಸಾಧನೆ ಮಾಡುತ್ತಿದ್ದಾರೆ. ಪತಿ ಇಲ್ಲ, ಗಂಡು ಮಕ್ಕಳಿಲ್ಲ ಆದರೆ, ಈಕೆಯೇ ಮುಂದೆ ನಿಂತು ಎಲ್ಲಾ ಕೃಷಿ ಚಟುವಟಿಕೆ ಮಾಡುತ್ತಾ ಸುತ್ತಲ ಹಳ್ಳಿಯವರು ಮೆಚ್ಚುವಂತೆ ಕೃಷಿ ಕಾಯಕ ನಡೆಸುತ್ತಿದ್ದಾರೆ.
ಮಹಾದೇವಕ್ಕ ಅವರನ್ನ ಗುರುತಿಸಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ರೈತ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿತು. ಬೆಂಗಳೂರಿನ ಅಶೋಕ ಹೋಟೆಲ್ನಲ್ಲಿ ಫೆಬ್ರವರಿ 24ರಂದು ಕೃಷಿ ಸಚಿವ ಬಿ.ಸಿ ಪಾಟೀಲ್, ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ನಟಿ ತಾರಾ ಅವರಿಂದ ರೈತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅದೇ ವೇದಿಕೆಯಲ್ಲಿ ಮಹದೇವಕ್ಕ ಟ್ರಾಕ್ಟರ್ ಸಾಲ ಕೊಡಿಸುವಂತೆ ಸಚಿವರ ಮುಂದೆ ಬೇಡಿಕೆ ಇಟ್ಟರು. ಆಗ ವೇದಿಕೆಯಲ್ಲಿದ್ದ ಸಚಿವರು ಮಾತನಾಡುತ್ತಾ ವೈಯಕ್ತಿಕವಾಗಿ 2 ಲಕ್ಷ ಕೊಟ್ಟು, ರೈತ ಸ್ವಸಹಾಯ ಸಂಘಗಳಿಗೆ ನೀಡುವ ಯೋಜನೆಯಲ್ಲಿ ಸರ್ಕಾರದಿಂದ 8 ಲಕ್ಷ ಸೇರಿಸಿ ಟ್ರಾಕ್ಟರ್ ಕೊಡಿಸುವ ಮಾತು ಕೊಟ್ಟಿದ್ದರು. ಅದರಂತೆ ಇಂದು(ಶನಿವಾರ) ಹಿರೇಕೆರೂರಿನಲ್ಲಿ ಸಚಿವರು ತಮ್ಮ ಮಾತಿನಂತೆ ಮಹಾದೇವಕ್ಕ ಅವರಿಗೆ ಹೊಸ ಟ್ರಾಕ್ಟರ್ ಹಸ್ತಾಂತರಿಸಿದರು. ಈ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡರು.
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭಕ್ಕೆ ಟ್ರಾಕ್ಟರ್ ಸ್ವೀಕರಿಸಿದ ಮಹಾದೇವಕ್ಕ ಕೃತಜ್ಞತೆ ಸಲ್ಲಿಸಿದರು. ಇಂತಹ ಸೇವಾ ಕಾರ್ಯಕ್ಕೆ ವೇದಿಕೆ ಒದಗಿಸಿ ಪ್ರೇರಣೆಯಾಗಿದ್ದಕ್ಕೆ ಕೃಷಿ ಸಚಿವ ಬಿ.ಸಿ ಪಾಟೀಲ್ ಕೂಡ ಏಷ್ಯಾನೆಟ್ ಮತ್ತು ಕನ್ನಡಪ್ರಭ ತಂಡಕ್ಕೆ ಧನ್ಯವಾದ ಸಲ್ಲಿಸಿದರು.
ಯಾರು ಈ ರೈತ ಮಹಿಳೆ ಮಹಾದೇವಕ್ಕ..?
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದವರು ಈ ಮಹದೇವಕ್ಕ. ಕುಟುಂಬದಲ್ಲಿ ಗಂಡು ಮಕ್ಕಳು ಇಲ್ಲದ ಕಾರಣ ಕುಟುಂಬದ ನಿರ್ವಹಣೆಗಾಗಿ ಕೃಷಿ ಕಾಯರ್ದಲ್ಲಿ ತೊಡಗಿದ್ದಾರೆ. ತಮ್ಮ 5ಎಕರೆ 23 ಗುಂಟೆ ಭೂಮಿಯನ್ನೇ ನಂಬಿಕೊಂಡು ಕೃಷಿಗೆ ಇಳಿದು ಗಂಡಸಿನ ಸರಿಸಮನಾಗಿ ನಿಂತು ಕೃಷಿ ಕಾಯಕದಲ್ಲಿ ಸೈ ಎನಿಸಿಕೊಂಡಿರೋ ಗಟ್ಟಿಗಿತ್ತಿ.
ಮೊದಲು ಎತ್ತುಗಳನ್ನು ಬಳಸಿ ಕೃಷಿ ಮಾಡುತ್ತಿದ್ದ ಮಹದೇವಕ್ಕ 5 ವರ್ಷಗಳ ಹಿಂದೆ ಟ್ರಾಕ್ಟರ್ ತೆಗೆದುಕೊಂಡು ಟ್ರ್ಯಾಕ್ಟರ್ ಚಾಲನೆ ಕಲಿತಿದ್ದಾರೆ. ಆದರೆ ಇತ್ತೀಚೆಗೆ ಆರ್ಥಿಕ ತೊಂದರೆ ಆಗಿ ಟ್ರಾಕ್ಟರ್ ಮಾರಿದ್ದರು. ಜಮೀನಿನಲ್ಲಿ ಹಲವು ಬಗೆಯ ಬೆಳೆ ಬೆಳೆಯುತ್ತಾ ಪುರುಷರೇ ನಾಚುವಂತೆ ಕೃಷಿಯಲ್ಲಿ ಕಾಯಕ ಮುಂದುವರೆಸಿದ್ದಾರೆ. ಅಡಿಕೆ, ಬಾಳೆ, ಗೋವಿನಜೋಳ, ಹಾಗೂ ಸಿರಿಧಾನ್ಯಗಳನ್ನ ಬೆಳೆದು ಇಳುವರಿ ಪಡೆದು ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾರೆ. ಇವರ ಈ ಸಾಧನೆಯನ್ನ ಗುರುತಿಸಿ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ 2022ರ ರೈತ ಮಹಿಳೆ ಹೆಸರಿನಲ್ಲಿ ರೈತ ರತ್ನ ಪ್ರಶಸ್ತಿಯನ್ನ ನೀಡಿ ಸನ್ಮಾನಿಸಿದೆ.