ಬೆಂಗಳೂರು(ಆ.03): ಕೊರೋನಾ ಸೋಂಕು ಸೇರಿದಂತೆ ಬೇರೆ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಳಿಕ ಮೃತದೇಹ ನೀಡಲು ಚಿಕಿತ್ಸಾ ವೆಚ್ಚವೆಂದು 4 ಲಕ್ಷ ಪಾವತಿಸಬೇಕು ಎಂದು ಖಾಸಗಿ ಆಸ್ಪತ್ರೆಯೊಂದು ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ.

ಗ್ಯಾಸ್ಟ್ರಿಕ್‌ ಮತ್ತು ಥೈರಾಯಿಡ್‌ ಸಮಸ್ಯೆಯಿಂದ ಬಳಲುತ್ತಿದ್ದ ಸುಮಾರು 48 ವರ್ಷದ ಮಹಿಳೆಯನ್ನು ಜುಲೈ 22 ರಂದು ಕೋಣನಕುಂಟೆಯ ಕ್ಯೂರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಜುಲೈ 29ರಂದು ಮಹಿಳೆಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತ ಪಟ್ಟರು.

ಕೊರೋನಾ ಸೋಂಕಿತರಿಗೆ ಶೇ.50 ಹಾಸಿಗೆ ಮೀಸಲಿಡದ ಆಸ್ಪತ್ರೆಗಳಿಗೆ ಬಿಬಿಎಂಪಿ ಚಾಟಿ

9 ದಿನಗಳ ಕಾಲ ಚಿಕಿತ್ಸೆ ನೀಡಿರುವ ಆಸ್ಪತ್ರೆ ಸಿಬ್ಬಂದಿ 3 ಲಕ್ಷವನ್ನು ಮೃತರ ಸಂಬಂಧಿಕರಿಂದ ಪಡೆದುಕೊಂಡಿದ್ದರು. ಅಲ್ಲದೆ, ಇನ್ನು 1 ಲಕ್ಷ ಪಾವತಿಸುವಂತೆ ಒತ್ತಡ ಹಾಕಿದ್ದಾರೆ ಎಂದು ಮೃತರ ಮಗ ಧ್ವನಿ ಸುರಳಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೆ, ಆಸ್ಪತ್ರೆಯಲ್ಲಿ ಹಾಸಿಗೆ ಕೊಡಿಸಲು ಮಧ್ಯವರ್ತಿಯೊಬ್ಬರಿಗೆ 20 ಸಾವಿರ ನೀಡಿರುವುದಾಗಿ ಅವರು ಆರೋಪಿಸಿದ್ದಾರೆ.

ಸೋಂಕಿತ ಮಗುವಿನೊಂದಿಗೆ ತಾಯಿ ಇರಲು ಲಂಚ ಕೇಳಿದ ಬಿಬಿಎಂಪಿ ಸಿಬ್ಬಂದಿ: ಆರೋಪ

ನಗರದ ವೆಂಕಟೇಶ್ವರನಗರದ ಮನೆಯೊಂದರಲ್ಲಿ ಗಂಡ ಮತ್ತು ಒಂದೂವರೆ ವರ್ಷದ ಮಗುವಿಗೆ ಸೋಂಕು ದೃಢಪಟ್ಟಿದೆ. ಆದರೆ, ತಾಯಿಗೆ ನೆಗೆಟಿವ್‌ ಬಂದಿದ್ದು, ಅವರನ್ನು ಮನೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಸೋಂಕಿತ ಗಂಡ ಮತ್ತು ಮಗುವನ್ನು ಬಿಬಿಎಂಪಿ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವನ್ನು ಬಿಟ್ಟಿರಲಾಗದ ತಾಯಿ, ಮನೆಯಲ್ಲಿಯೇ ಮಗುವನ್ನು ಐಸೋಲೇಷನ್‌ ಮಾಡಿ ಚಿಕಿತ್ಸೆ ನೀಡುವಂತೆ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಮಗುವಿನೊಂದಿಗೆ ಆಸ್ಪತ್ರೆಯಲ್ಲಿ ಇರಲು ಅವಕಾಶ ಕೊಡಿ ಎಂದು ಮಹಿಳೆ ಮನವಿ ಮಾಡಿದ್ದಾರೆ. ಈ ವೇಳೆ 6 ಸಾವಿರ ಪಾವತಿಸಿದರೆ ಅವಕಾಶ ನೀಡುವುದಾಗಿ ಬಿಬಿಎಂಪಿ ಸಿಬ್ಬಂದಿ ಹೇಳಿದ್ದಾರೆ ಎನ್ನಲಾಗಿದೆ.

ಪೌರ ಕಾರ್ಮಿಕರಿಗೆ ಟೆಸ್ಟ್‌: 156 ಮಂದಿಗೆ ಪಾಸಿಟಿವ್‌

ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ 4,838 ಪೌರಕಾರ್ಮಿಕರನ್ನು ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಸೋಂಕಿತರ ಸಂಖ್ಯೆ 156 ಏರಿಕೆಯಾಗಿದೆ. ಜು.30ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ, ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗುತ್ತಿರುವ ಪಾಲಿಕೆ ಪೌರಕಾರ್ಮಿಕರು, ಮೇಲ್ವಿಚಾರಕರು, ಆಟೋ ಚಾಲಕರು, ಸಹಾಯಕರಿಗೆ ರಾರ‍ಯಪಿಡ್‌ ಆ್ಯಂಟಿಜೆನ್‌ ಕೊರೋನಾ ಸೋಂಕು ಪರೀಕ್ಷೆಗೆ ನಡೆಸಲಾಗುತ್ತಿದೆ. ಈ ಪೈಕಿ ಈವರೆಗೆ ಒಟ್ಟು 4838 ಮಂದಿಗೆ ಸೋಂಕು ಪರೀಕ್ಷೆ ನಡೆಸಲಾಗಿತ್ತು. 156 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

ಈ ಪೈಕಿ ಬಿಬಿಎಂಪಿಯ ಪೂರ್ವದಲ್ಲಿ 41 ಮಂದಿಗೆ, ಪಶ್ಚಿಮ ವಲಯ 33, ದಕ್ಷಿಣ ವಲಯ 9, ಯಲಹಂಕ ವಲಯ 20, ಬೊಮ್ಮನಹಳ್ಳಿ ವಲಯ 9, ಆರ್‌.ಆರ್‌.ನಗರ 39 ಹಾಗೂ ದಾಸರಹಳ್ಳಿ ವಲಯದಲ್ಲಿ 5 ಮಂದಿಗೆ ಸೋಂಕು ದೃಢಪಟ್ಟಿದೆ. ಆದರೆ, ಮಹದೇವಪುರ ವಲಯದಲ್ಲಿ ಕಾರ್ಮಿಕರಿಗೆ ಸೋಂಕು ದೃಢಪಟ್ಟಿಲ್ಲ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.