ಬೆಂಗಳೂರು(ಆ.03): ಸರ್ಕಾರ ಆದೇಶ ನಿರ್ಲಕ್ಷ್ಯ ಮಾಡಿದ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದು ಪಡಿಸಿ ಪ್ರಕರಣ ದಾಖಲಿಸುವುದಕ್ಕೆ ಬಿಬಿಎಂಪಿ ಮುಂದಾದ ಮೇಲೆ ಎಚ್ಚೆತ್ತುಕೊಂಡಿರುವ ನಗರದ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆದೇಶದಂತೆ ಶೇ.50 ರಷ್ಟು ಹಾಸಿಗೆಗಳನ್ನು ಕೊರೋನಾ ಸೋಂಕಿತರ ಚಿಕಿತ್ಸೆಗೆ ನೀಡುವುದಕ್ಕೆ ಮುಂದಾಗುತ್ತಿವೆ.

ಸರ್ಕಾರ ಸೂಚಿಸಿದ ಸೋಂಕಿತರಿಗೆ ಚಿಕಿತ್ಸೆ ನೀಡಲು ಶೇ.50 ರಷ್ಟು ಹಾಸಿಗೆಗಳನ್ನು ಮೀಸಲಿಡುವಂತೆ ನಗರದ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಆದೇಶಿಸಿ ಒಂದು ತಿಂಗಳಾದರೂ ಶೇ.10 ಕ್ಕಿಂತ ಕಡಿಮೆ ಹಾಸಿಗೆಗಳನ್ನು ನೀಡುವ ಮೂಲಕ ಆದೇಶ ಧಿಕ್ಕರಿಸಿತ್ತು. ಇದರಿಂದ ಅನಿವಾರ್ಯವಾಗಿ ಬಿಬಿಎಂಪಿ 15 ದಿನಗಳಿಂದ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಹಾಸಿಗೆ ನೀಡುವಂತೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿತ್ತು. 4 ದಿನಗಳ ಹಿಂದೆ ಹಾಸಿಗೆ ನೀಡದ ದಕ್ಷಿಣ ವಲಯದ 19 ಆಸ್ಪತ್ರೆಗಳ ಪರವಾನಗಿ ತಾತ್ಕಾಲಿಕ ರದ್ದು ಮಾಡಿದೆ. ಈಗ 5 ಪ್ರತಿಷ್ಠಿತ ಆಸ್ಪತ್ರೆಗಳ ವಿರುದ್ಧ ದೂರು ದಾಖಲಿಸುತ್ತಿದೆ.

ಬೆಂಗ್ಳೂರಲ್ಲಿ ನಿಲ್ಲದ ಖಾಸಗಿ ಆಸ್ಪತ್ರೆಗಳ ಮೊಂಡುತನ: ಬೆಡ್ ಸಿಗದೇ ವೃದ್ಧ ಸಾವು

ಹೀಗಾಗಿ, ಎಚ್ಚೆತ್ತುಕೊಂಡ ನಗರದ ಖಾಸಗಿ ಆಸ್ಪತ್ರೆಗಳು ಸರ್ಕಾರದ ಆದೇಶದಂತೆ ಶೇ.50 ರಷ್ಟು ಹಾಸಿಗೆಗಳನ್ನು ಕೊರೋನಾ ಸೋಂಕಿತರ ಚಿಕಿತ್ಸೆ ನೀಡುವುದಕ್ಕೆ ಮುಂದಾಗುತ್ತಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಒಟ್ಟು 305 ಖಾಸಗಿ ಆಸ್ಪತ್ರೆಗಳು ಕೊರೋನಾ ಸೋಂಕಿತರ ಚಿಕಿತ್ಸೆಗೆ ಶೇ.50 ರಷ್ಟು ಆಧಾರದಲ್ಲಿ 7,792 ಹಾಸಿಗೆಗಳನ್ನು ಸರ್ಕಾರಕ್ಕೆ ನೀಡಬೇಕು. ಆದರೆ, ಬಿಬಿಎಂಪಿ ಅಧಿಕಾರಿಗಳು ಹೇಳುವಂತೆ ಈವರೆಗೆ ಸುಮಾರು ಕೇವಲ ಶೇ.32 ಅಂದರೆ 2,500 ಹಾಸಿಗೆಗಳನ್ನು ಮಾತ್ರ ಒಪ್ಪಿಸಿವೆ. ಉಳಿದ ಶೇ.68ರಷ್ಟುಹಾಸಿಗೆಗಳು ನೀಡದೆ, ನಿರ್ಲಕ್ಷ್ಯವಹಿಸುತ್ತಿವೆ ಎಂಬ ಆರೋಪ ಕೇಳಿ ಬರುತ್ತಿವೆ.

ದೂರು ಹಿಂಪಡೆಯಲು ಸಾಕ್ರ ಮನವಿ: 

ಸರ್ಕಾರ ನಿಗದಿ ಮಾಡಿದ ಹಾಸಿಗೆ ಕೊಡದ ಸಾಕ್ರ ಆಸ್ಪತ್ರೆ ವಿರುದ್ಧ ಬಿಬಿಎಂಪಿ ಶನಿವಾರ ದೂರು ದಾಖಲಿಸಿತ್ತು. ಕೂಡಲೇ ಎಚ್ಚೆತ್ತ ಆಸ್ಪತ್ರೆ ಮಾಲಿಕರು ತಮ್ಮಲ್ಲಿರುವ 234 ಹಾಸಿಗೆಯಲ್ಲಿ 117 ಹಾಸಿಗೆ ಕೊಡಲು ಮುಂದಾಗಿದ್ದಾರೆ. ಇದರಲ್ಲಿ 91 ಐಸೋಲೇಷನ್‌, 14 ಐಸಿಯು ಹಾಗೂ 12 ವೆಂಟಿಲೇಟರ್‌ ಸಹಿತ ಹಾಸಿಗೆ ಕೊಡುತ್ತೇವೆ, ದೂರು ವಾಪಾಸ್‌ ಪಡೆಯುವಂತೆ ಮನವಿ ಮಾಡಿದೆ.

ಪರವಾನಗಿ ರದ್ದು ಮಾಡದಂತೆ ಮನವಿ

ನಗರದ ನೃಪತುಂಗ ರಸ್ತೆಯ ಸೆಂಟ್‌ ಮಾರ್ಥಾಸ್‌, ಶಂಕರಪುರದ ರಂಗದೊರೈ ಮೆಮೋರಿಯಲ್‌ ಆಸ್ಪತ್ರೆ, ಕ್ವೀನ್ಸ್‌ ರಸ್ತೆಯ ಶಿಫಾ ಆಸ್ಪತ್ರೆ, ಕನ್ನಿಂಗ್‌ ಹ್ಯಾಮ್‌ ರಸ್ತೆಯ ಫೋರ್ಟಿಸ್‌ ಹಾಗೂ ಸಾಕ್ರ ಆಸ್ಪತ್ರೆ ಮೇಲೆ ವಿಪತ್ತು ನಿವರ್ಹಣಾ ಕಾಯ್ದೆಯಡಿ ದೂರು ದಾಖಲಿಸಲಾಗಿದೆ. ಜತೆಗೆ ದಕ್ಷಿಣ ವಲಯದ ಬಸವನಗುಡಿ, ವಿಜಯನಗರ, ಪದ್ಮನಾಭನಗರ, ಚಿಕ್ಕಪೇಟೆ ಮತ್ತು ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದ 19 ಆಸ್ಪತ್ರೆ ಪರವಾನಗಿ ರದ್ದುಗೊಳಿಸಲಾಗಿದೆ. ಹೀಗಾಗಿ, ಹಲವು ಆಸ್ಪತ್ರೆಗಳು ಪರವಾನಗಿ ರದ್ದು ಮಾಡದಂತೆ ಈಗಾಗಲೇ ಬಿಬಿಎಂಪಿಗೆ ಪತ್ರದ ಮೂಲಕ ಮನವಿ ಮಾಡಿವೆ.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕ್ಕದ್ದು ಅಥವಾ ದೊಡ್ಡದು ಎಂಬ ತಾರತಮ್ಯವಿಲ್ಲದೆ ಕೋವಿಡ್‌ ಚಿಕಿತ್ಸೆಗೆ ಶೇ.50 ಹಾಸಿಗೆ ಸರ್ಕಾರಕ್ಕೆ ಒಪ್ಪಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರು ತಿಳಿಸಿದ್ದಾರೆ.