ಗುತ್ತಿಗೆದಾರರಿಗೆ ಬಿಬಿಎಂಪಿ ಅಧಿಕಾರಿಗಳ ಸಾಥ್| ಕೋಟ್ಯಂತ ರು. ಅವ್ಯವಹಾರ| ತನಿಖೆಗೆ ಆಗ್ರಹಿಸಿ ಸರ್ಕಾರಕ್ಕೆ ಮೇಯರ್ ಗೌತಮ್ ಕುಮಾರ್ ಪತ್ರ|ನಿಯಮಬಾಹಿರವಾಗಿ ಗುತ್ತಿಗೆದಾರರೊಂದಿಗೆ ಭಾಗಿಯಾಗಿ ಪಾಲಿಕೆಗೆ ಕೋಟ್ಯಂತರ ರು. ನಷ್ಟ ಉಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು|
ಬೆಂಗಳೂರು(ಆ.15): ಕೆಲ ಗುತ್ತಿಗೆದಾರರು ನಕಲಿ ದಾಖಲೆ ಸಲ್ಲಿಸಿ ಬಿಬಿಎಂಪಿಯ ವಿವಿಧ ಕಾಮಗಾರಿಗಳ ಗುತ್ತಿಗೆ ಪಡೆದಿದ್ದು, ಇದರಲ್ಲಿ ಪಾಲಿಕೆಯ ಕೆಲ ಅಧಿಕಾರಿಗಳು ಕೈಜೋಡಿಸಿದ್ದು ಕೋಟ್ಯಂತರ ರು. ಅವ್ಯವಹಾರ ನಡೆದಿದೆ ಎಂದು ಮೇಯರ್ ಗೌತಮ್ ಕುಮಾರ್ ಆರೋಪಿಸಿದ್ದಾರೆ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌ಗೆ ಪತ್ರ ಬರೆದಿರುವ ಅವರು, ಪಾಲಿಕೆ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಗುತ್ತಿಗೆ ನೀಡುವಾಗ ಕೆಲ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಟೆಂಡರ್ ವೇಳೆ ಗುತ್ತಿಗೆದಾರರು ನಕಲಿ ದಾಖಲೆ ಸಲ್ಲಿಸಿದರೂ ತಾಂತ್ರಿಕ ಬಿಡ್ ಮೌಲ್ಯಮಾಪನದ ವೇಳೆ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಅಲ್ಲದೆ, ಗುತ್ತಿಗೆದಾರರೊಂದಿಗೆ ಕೈಜೋಡಿಸಿ ಕೆಲವು ನಕಲಿ ಬಿಲ್‌ಗಳನ್ನು ಸೃಷ್ಟಿಸಿದ್ದಾರೆ. ಇದರಿಂದ ಪಾಲಿಕೆಯ ರಸ್ತೆ, ಮೂಲಭೂತ ಸೌಕರ್ಯ ವಿಭಾಗ ಹಾಗೂ ಬೃಹತ್ ನೀರುಗಾಲುವೆ ವಿಭಾಗದಲ್ಲಿ ನೂರಾರು ಕೋಟಿ ರು. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ನಿಯಮಬಾಹಿರವಾಗಿ ಗುತ್ತಿಗೆದಾರರೊಂದಿಗೆ ಭಾಗಿಯಾಗಿ ಪಾಲಿಕೆಗೆ ಕೋಟ್ಯಂತರ ರು. ನಷ್ಟ ಉಂಟು ಮಾಡಿರುವ ಈ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಕಲಿ ದಾಖಲೆ ಸಲ್ಲಿಸಿ ಗುತ್ತಿಗೆ ಪಡೆದು ಕಳಪೆ ಗುಣಮಟ್ಟದ ಕಾಮಗಾರಿ ಮಾಡಿರುವ ಗುತ್ತಿಗೆದಾರರ ಗುತ್ತಿಗೆ ಪರವಾನಗಿ ರದ್ದುಗೊಳಿಸಿ, ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿದ್ದಾರೆ.
ಹಸಿ ಕಸ ನಿರ್ವಹಣೆ: 45 ಗುತ್ತಿಗೆದಾರರಿಗೆ ಬಿಬಿಎಂಪಿ ಕಾರ್ಯಾದೇಶ
ಅಕ್ರಮದ ಬಗ್ಗೆ ಸರ್ಕಾರಕ್ಕೆ ಮಾಹಿತಿ
ರಾಜರಾಜೇಶ್ವರಿನಗರ, ಮಹದೇವಪುರ, ಬೊಮ್ಮನಹಳ್ಳಿ. ಯಲಹಂಕ ವಲಯಗಳಲ್ಲಿ ರಸ್ತೆ, ಪಾದಚಾರಿ ಮಾರ್ಗದ ಕಾಮಗಾರಿ, ಚರಂಡಿ ಅಭಿವೃದ್ಧಿ, ರಸ್ತೆ ಡಾಂಬರೀಕರಣ, ರಾಜಕಾಲುವೆ ಅಭಿವೃದ್ಧಿ, ನವನಗರೋತ್ಥಾನ ಯೋಜನೆ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಎ. ಅಭಿಜಿತ್, ಚೆನ್ನಾರೆಡ್ಡಿ, ಯೋಗೀಶ್ ಸೇರಿದಂತೆ ಇನ್ನೂ ಕೆಲ ಗುತ್ತಿಗೆದಾರರು ನಕಲಿ ದಾಖಲೆ, ತಪ್ಪು ಮಾಹಿತಿ ನೀಡಿ ಅಕ್ರಮವಾಗಿ ಗುತ್ತಿಗೆ ಪಡೆದಿದ್ದಾರೆ. ಇದಕ್ಕೆ ಸಂಬಂಧ ಪಟ್ಟಎಲ್ಲ ದಾಖಲೆಗಳನ್ನೂ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಗೌತಮ್ ಕುಮಾರ್ ತಿಳಿಸಿದ್ದಾರೆ.
2 ದಿನದಲ್ಲಿ ವರದಿಗೆ ಸೂಚನೆ
ಈ ಪ್ರಕರಣದಲ್ಲಿ ನಕಲಿ ದಾಖಲೆ ಸಲ್ಲಿಸಿದ ಗುತ್ತಿಗೆದಾರಿಗೆ ಅನುಮೋದನೆ ನೀಡಿರುವ ಅಧಿಕಾರಿಗಳನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ನಕಲಿ ದಾಖಲೆ ಎಂಬುದು ಗೊತ್ತಿದ್ದರೂ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಈ ಅನುಮೋದನೆ ನೀಡಿದ ಎಲ್ಲ ಸಹಾಯಕ ಎಂಜಿನಿಯರ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪ್ರಕರಣ ಸಂಬಧ ಎರಡು ದಿನಗಳಲ್ಲಿ ವರದಿ ನೀಡುವಂತೆ ಮುಖ್ಯ ಎಂಜಿನಿಯರ್‌ಗೆ ಸೂಚನೆ ನೀಡಲಾಗಿದೆ. ಅಲ್ಲದೆ ಈ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸಿ, ಎಫ್‌ಐಆರ್ ದಾಖಲಿಸುವುದಾಗಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದರು.
