ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಸೆ.10):ಬಿಬಿಎಂಪಿ ಪುನರ್‌ ರಚನಾ ಸಮಿತಿ ನವೆಂಬರ್‌ ಅಂತ್ಯದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲ್ಲಿದ್ದು, ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದರೆ ಡಿಸೆಂಬರ್‌ ಅಂತ್ಯದೊಳಗೆ ಬಿಬಿಎಂಪಿಯ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಬೆಂಗಳೂರು ಪ್ರತ್ಯೇಕ ಕಾಯ್ದೆ ರಚನಾ ಜಂಟಿ ಸಲಹಾ ಸಮಿತಿ, ಬಿಬಿಎಂಪಿ ಪುನರ್‌ ರಚನಾ ಸಮಿತಿ ನಿಗದಿತ ಅವಧಿಯಲ್ಲಿ ಸಲ್ಲಿಸುವ ವರದಿಗೆ ಸರ್ಕಾರ ಅನುಮೋದನೆ ನೀಡಿದರೆ ಬಿಬಿಎಂಪಿಯ ಹೊಸ 225 ವಾರ್ಡ್‌ಗಳಿಗೆ ಡಿಸೆಂಬರ್‌ ವೇಳೆಗೆ ಚುನಾವಣೆ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಬಿಎಂಪಿ ಪುನರ್‌ ರಚನೆ ಮತ್ತು ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ರಚನೆಗೆ ಸಂಬಂಧಿಸಿದಂತೆ ಶಾಸಕ ಎಸ್‌.ರಘು ಅಧ್ಯಕ್ಷತೆಯಲ್ಲಿ ರಚಿಸಲಾದ ಜಂಟಿ ಸದನ ಸಮಿತಿ ಒಟ್ಟು 80 ಅಂಶಗಳನ್ನು ಇಟ್ಟುಕೊಂಡು ಬಿಬಿಎಂಪಿಗೆ ಹೊಸ ಕಾಯ್ದೆ ಹಾಗೂ ಪುನರ್‌ ರಚನೆ ಪ್ರಕ್ರಿಯೆ ನಡೆಸುತ್ತಿದೆ. ಮೇಯರ್‌ ಹಾಗೂ ಉಪ ಮೇಯರ್‌ ಅಧಿಕಾರ ಅವಧಿಯನ್ನು 12 ತಿಂಗಳಿನಿಂದ 30 ತಿಂಗಳಿಗೆ (1 ವರ್ಷದಿಂದ ಎರಡೂವರೆ ವರ್ಷಕ್ಕೆ) ಏರಿಕೆ ಮಾಡುವುದು. ಪಾಲಿಕೆ ವಾರ್ಡ್‌ ಸಂಖ್ಯೆಗಳನ್ನು 198ರಿಂದ 225ಕ್ಕೆ ಏರಿಕೆ ಮಾಡುವುದು ಹಾಗೂ ಬಿಬಿಎಂಪಿ ಆಯುಕ್ತರ ಅಧಿಕಾರ ಹೆಚ್ಚಿಸುವ ನಿಟ್ಟಿನಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ, ಪಾಲಿಕೆಯ ವ್ಯಾಪ್ತಿ 800 ಚದರ ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.

'ಬಿಬಿಎಂಪಿ ಚುನಾವಣೆ ಮುಂದೂಡಿದ್ರೆ ಹೈಕೋರ್ಟ್‌ಗೆ ಮೊರೆ'

ಪಾಲಿಕೆಯ ಸದ್ಯ ಇರುವ 12 ಸ್ಥಾಯಿ ಸಮಿತಿಗಳನ್ನು 8ಕ್ಕೆ ಇಳಿಕೆ ಮಾಡುವುದಕ್ಕೆ ತೀರ್ಮಾನಿಸಲಾಗಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಅಪೀಲು ಸ್ಥಾಯಿ ಸಮಿತಿಯನ್ನು ವಿಲೀನಗೊಳಿಸುವುದು. ತೋಟಗಾರಿಕೆ ಸ್ಥಾಯಿ ಸಮಿತಿಗೆ ಮಾರುಕಟ್ಟೆಸ್ಥಾಯಿ ಸಮಿತಿಯನ್ನು, ಶಿಕ್ಷಣ ಸ್ಥಾಯಿ ಸಮಿತಿಗೆ ಸಮಾಜಿಕ ನ್ಯಾಯ ಸ್ಥಾಯಿ ಸಮಿತಿಯನ್ನು ಹಾಗೂ ನಗರ ಯೋಜನೆ ಸ್ಥಾಯಿ ಸಮಿತಿಗೆ ವಾರ್ಡ್‌ ಮಟ್ಟದ ಸ್ಥಾಯಿ ಸಮಿತಿಯನ್ನು ವಿಲೀನಗೊಳಿಸಲು ತೀರ್ಮಾನಿಸಲಾಗಿದೆ.
ಜತೆಗೆ ಸ್ಥಾಯಿ ಸಮಿತಿ ಸದಸ್ಯ ಸಂಖ್ಯೆಯನ್ನು 11ರಿಂದ 15ಕ್ಕೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಆದರೆ, ಅಧ್ಯಕ್ಷರ ಅಧಿಕಾರ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡುವ ತೀರ್ಮಾನ ಮಾಡಿಲ್ಲ.

ಇನ್ನು ಪಾಲಿಕೆಯ ಎಂಟು ವಲಯಗಳನ್ನು ಐದಕ್ಕೆ ಇಳಿಕೆ ಮಾಡಬೇಕಾ ಅಥವಾ 10ಕ್ಕೆ ಏರಿಕೆ ಮಾಡಬೇಕಾ ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ವಲಯಗಳನ್ನು ಐದಕ್ಕೆ ಇಳಿಕೆ ಮಾಡುವುದಾದರೆ ಪ್ರಧಾನ ಕಾರ್ಯದರ್ಶಿ ಹಂತದ ಐಎಎಸ್‌ ಅಧಿಕಾರಿ ನೇಮಕ ಮಾಡುವುದು ಅಥವಾ ವಲಯ ಸಂಖ್ಯೆಯನ್ನು 10ಕ್ಕೆ ಏರಿಕೆ ಮಾಡುವುದಾದರೆ ಹಿರಿಯ ಕೆಎಎಸ್‌ ಅಧಿಕಾರಿ ನೇಮಕ ಮಾಡುವ ಸಂಬಂಧ ಚರ್ಚೆ ನಡೆಸಲಾಗುತ್ತಿದೆ. ಆದರೆ ಅಂತಿಮ ತೀರ್ಮಾನವಾಗಿಲ್ಲ.
ಇನ್ನು ವಾರ್ಡ್‌ಗಳನ್ನು 198ರಿಂದ 225ಕ್ಕೆ ಏರಿಕೆ ಮಾಡುವುದು ಮತ್ತು ವಿಂಗಡಣೆ ಮಾಡುವುದನ್ನು ಜನಸಂಖ್ಯೆ ಹಾಗೂ ವ್ಯಾಪ್ತಿ ಆಧಾರದ ಮೇಲೆ ಮಾಡಲು ತೀರ್ಮಾನಿಸಲಾಗಿದ್ದು, ಹೊರ ವಲಯ ಹಾಗೂ ಕೇಂದ್ರ ಭಾಗದ ಹೇಗೆ ಮಾಡಬೇಕು ಎಂಬುದರ ಚರ್ಚೆ ನಡೆಸಲಾಗುತ್ತಿದೆ.

ನವೆಂಬರ್‌ ಅಂತ್ಯದೊಳಗೆ 225 ವಾರ್ಡ್‌ಗಳ ವಿಂಗಡಣೆ, ಮತದಾರ ಪಟ್ಟಿಪರಿಷ್ಕರಣೆ ಹಾಗೂ ಮೀಸಲಾತಿ ಪಟ್ಟಿಅಂತಿಮ ಪಡಿಸಲಾಗುವುದು ಎಂದು ಜಂಟಿ ಸದನ ಸಮಿತಿ ಅಧ್ಯಕ್ಷ ಎಸ್‌.ರಘು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ನವೆಂಬರ್‌ ಅಂತ್ಯದೊಳಗೆ 225 ವಾರ್ಡ್‌ಗೆ ವಿಂಗಡಣೆ, ಮೀಸಲಾತಿ ಪಟ್ಟಿಎಲ್ಲವನ್ನು ಅಂತಿಮಗೊಳಿಸಲಾಗುವುದು. ಡಿಸೆಂಬರ್‌ ವೇಳೆಗೆ ಬಿಬಿಎಂಪಿ ಚುನಾವಣೆ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಿಬಿಎಂಪಿ 2020 ವಿಧೇಯಕ ಪುನರ್‌ ರಚನಾ ಜಂಟಿ ಶಾಸಕಾಂಗ ಸಮಿತಿಯ ಅಧ್ಯಕ್ಷ ಎಸ್‌.ರಘು ಅವರು ತಿಳಿಸಿದ್ದಾರೆ.

ನ್ಯಾಯಾಲಯಕ್ಕೆ ಮನವರಿಕೆ ಯತ್ನ

ಚುನಾವಣೆ ನಡೆಸುವ ಕುರಿತು ಈಗಾಗಲೇ ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ಹೀಗಾಗಿ, ಸರ್ಕಾರ ತ್ವರಿತವಾಗಿ ಹೊಸ ಕಾಯ್ದೆ ಹಾಗೂ ಪುನರ್‌ ರಚನೆ ಕುರಿತು ಕೋರ್ಟ್‌ಗೆ ಮಾಹಿತಿ ನೀಡಿ ಡಿಸೆಂಬರ್‌ ವೇಳೆಗೆ ಚುನಾವಣೆ ನಡೆಸುವುದಾಗಿ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಿದೆ. ಒಂದು ವೇಳೆ ಕೋರ್ಟ್‌ ಒಪ್ಪಿದರೆ ಡಿಸೆಂಬರ್‌ ವೇಳೆಗೆ 225 ವಾರ್ಡ್‌ಗೆ ಚುನಾವಣೆ ನಡೆಯಲಿದೆ. ಇಲ್ಲವಾದರೆ ಹಿಂದಿನ 198 ವಾರ್ಡ್‌ಗೆ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ.