ಬೆಂಗಳೂರು[ಫೆ.25]: ನಗರದ ಬೀಡಾಡಿ ಹಂದಿ ಹಿಡಿದು ಮಾರಾಟ ಮಾಡಿ ಬಿಬಿಎಂಪಿ .90 ಸಾವಿರ ರುಪಾಯಿ ಆದಾಯ ಗಳಿಸಿದೆ!

ನಗರದಲ್ಲಿ ಹಂದಿ ಸಾಕಾಣಿಕೆಗೆ ಅವಕಾಶವಿಲ್ಲದಿದ್ದರೂ ಕೆಲವು ಪ್ರದೇಶದಲ್ಲಿ ಅನಧಿಕೃತವಾಗಿ ಹಂದಿ ಸಾಕಾಣಿಕೆ ಮಾಡಲಾಗುತ್ತಿದೆ. ಕಳೆದ ಏಪ್ರಿಲ್‌ನಿಂದ ಈ ವರೆಗೆ ಒಟ್ಟು 70 ಬೀಡಾಡಿ ಹಂದಿಗಳನ್ನು ಹಿಡಿದು ಮಾರಾಟ ಮಾಡಲಾಗಿದೆ. ಹಂದಿಗಳನ್ನು ಕೆ.ಜಿ ಲೆಕ್ಕದಲ್ಲಿ ಮಾರಾಟ ಮಾಡಲಾಗಿದೆ. 70 ಹಂದಿಗಳು 1,280 ಕೆ.ಜಿ ತೂಕ ಇದ್ದು, .70 ಕೆ.ಜಿಯಂತೆ ಮಾರಾಟ ಮಾಡಲಾಗಿದ್ದು, ಇದರಿಂದ ಬಿಬಿಎಂಪಿಗೆ .89,600 ಆದಾಯ ಬಂದಿದೆ ಎಂದು ಬಿಬಿಎಂಪಿ ಪಶುಪಾಲನಾ ವಿಭಾಗದ ನಿರ್ದೇಶಕ ಡಾ| ಶಶಿಕುಮಾರ್‌ ಮಾಹಿತಿ ನೀಡಿದ್ದಾರೆ.

ನಗರದ ಕೇಂದ್ರ ಭಾಗದಲ್ಲಿ ಹಂದಿಗಳ ಹಾವಳಿ ಕಡಿಮೆಯಾಗಿದೆ. ಆದರೆ, ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳ ವ್ಯಾಪ್ತಿಯಲ್ಲಿ ಹಂದಿ ಹಾವಳಿ ಹೆಚ್ಚಾಗಿದೆ ಎಂದು ತಿಳಿಸಿದರು. ಇನ್ನು 2019-20ನೇ ಸಾಲಿನಲ್ಲಿ 994 ಸಾಕು ನಾಯಿಗಳಿಗೆ ಮಾಲಿಕರು ಶುಲ್ಕ ಪಾವತಿಸಿ ಪರವಾನಗಿ ಪಡೆದುಕೊಂಡಿದ್ದಾರೆ. ಇದರಿಂದ .94,926, ರಸ್ತೆ, ಜಂಕ್ಷನ್‌ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಸುತ್ತಾಡುವ ಬೀಡಾಡಿ ದನಗಳನ್ನು ಹಿಡಿದು ಹರಾಜು ಹಾಕಿರುವುದು ಮತ್ತು ಮಾಲಿಕರಿಗೆ ವಿಧಿಸಿದ ದಂಡದಿಂದ .91,800 ಆದಾಯ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ