ಬೆಂಗಳೂರು(ಜೂ.26): ನಗರದಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಯಾವುದೇ ವ್ಯಕ್ತಿಗೆ ಸೋಂಕು ದೃಢಪಟ್ಟ ಮಾಹಿತಿ ಸಿಗುತ್ತಿದ್ದಂತೆ, ನೇರವಾಗಿ ವ್ಯಕ್ತಿಯ ಮನೆಗೆ ತೆರಳಿ ಪರೀಕ್ಷಿಸಿ ಕೋವಿಡ್‌ ಆರೈಕೆ ಕೇಂದ್ರಕ್ಕೆ ಸೇರಿಸಬೇಕೆ ಅಥವಾ ಕೋವಿಡ್‌ ಆಸ್ಪತ್ರೆಗೆ ಸೇರಿಸಬೇಕೇ ಎಂದು ನಿರ್ಧರಿಸಿ ಆರು ಗಂಟೆಯಲ್ಲಿ ದಾಖಲಿಸಲಾಗುವುದು ಎಂದು ಬಿಬಿಎಂಪಿ ಅಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ತಿಳಿಸಿದ್ದಾರೆ. 

ನಗರದಲ್ಲಿ ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಅಧಿಕಾರಿಗಳ ಜೊತೆ ನಡೆಸಿದ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ 200 ಅಥವಾ 250 ಆ್ಯಂಬುಲೆನ್ಸ್‌ಗಳನ್ನು ಖರೀದಿ ಮಾಡಲಾಗುವುದು ಎಂದರು.

ಕೊರೋನಾ ಕಾಟ: ಬೆಂಗಳೂರಲ್ಲಿ ICU ಸೇರ್ಪಡೆ ಭಾರೀ ಏರಿಕೆ, ಹೆಚ್ಚಿದ ಆತಂಕ

ಈಗ ಸೋಂಕಿತರ ಆರೋಗ್ಯ ಪರೀಕ್ಷಾ ವಿಧಾನವನ್ನೂ ಬದಲಾಯಿಸಿಕೊಳ್ಳಲಾಗಿದೆ. ಇನ್ನು ಮುಂದೆ ಸೋಂಕು ದೃಢಪಟ್ಟವರನ್ನು ಮನೆಯಲ್ಲಿಯೇ ಪರೀಕ್ಷಿಸಿ ಕೋವಿಡ್‌ ಆರೋಗ್ಯ ಕೇಂದ್ರ ಇಲ್ಲವೇ ಆಸ್ಪತ್ರೆಗೆ ದಾಖಲು ಮಾಡಲಾಗುವುದು. ಸೋಂಕಿನ ಲಕ್ಷಣ ಇಲ್ಲದವರ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಹಜ್‌ ಭವನ ಹಾಗೂ ಶ್ರೀ ರವಿಶಂಕರ ಗುರೂಜಿ ಆಶ್ರಮದ ಆರ್ಯುವೇದಿಕ್‌ ಆಸ್ಪತ್ರೆಯಲ್ಲಿ ತಲಾ 400 ಹಾಸಿಗೆ ಸಿದ್ಧಪಡಿಸಲಾಗಿದೆ. ಇವು ಕೋವಿಡ್‌ ಸೋಂಕಿತರ (ಸೋಂಕಿನ ಲಕ್ಷಣ ಇಲ್ಲದವರ) ಆರೈಕೆಗೆ ಮುಕ್ತವಾಗಿವೆ. ಮುಂದಿನ ದಿನಗಳಲ್ಲಿ ಕೋವಿಡ್‌ ಆರೈಕೆ ಕೇಂದ್ರಗಳನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸದ್ಯಕ್ಕೆ 1,300 ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಮೂರು ಸಾವಿರಕ್ಕೆ ಏರಿಸಲಾಗುವುದು ಎಂದು ವಿವರಿಸಿದರು.