ಬಿಎಂಟಿಸಿ 'ಶಕ್ತಿ' ಯೋಜನೆಯಲ್ಲಿ ಬೃಹತ್ ವಂಚನೆ! ಮಹಿಳೆಯರ ಉಚಿತ ಟಿಕೆಟ್ ಬಳಸಿ, ತಮ್ಮದೇ ಕ್ಯೂಆರ್ ಕೋಡ್ ಮೂಲಕ ಕಂಡಕ್ಟರ್‌ಗಳು ಲಕ್ಷಾಂತರ ಲೂಟಿ ಮಾಡಿದ್ದು ಹೇಗೆ? ಪೂರ್ತಿ ವಿವರ ತಿಳಿಯಿರಿ.
ಬೆಂಗಳೂರು (ಜ.21): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಶಕ್ತಿ' ಯೋಜನೆಯನ್ನೇ ಬಂಡವಾಳ ಮಾಡಿಕೊಂಡ ಬಿಎಂಟಿಸಿ ಕಂಡಕ್ಟರ್‌ಗಳು, ಪ್ರಯಾಣಿಕರಿಗೆ ಮತ್ತು ಇಲಾಖೆಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಬಸ್‌ನಲ್ಲಿರುವ ಅಧಿಕೃತ ಕ್ಯೂಆರ್ ಕೋಡ್ ಬದಲಿಸಿ, ಟಿಕೆಟ್ ಹಣವನ್ನು ನೇರವಾಗಿ ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ಹಾಕಿಸಿಕೊಳ್ಳುತ್ತಿದ್ದ ನೌಕರರ ಜಾಲವನ್ನು ಬಿಎಂಟಿಸಿ ತನಿಖಾ ದಳ ಪತ್ತೆಹಚ್ಚಿದೆ. ಹೀಗೆ ವಂಚನೆ ಮಾಡಿದ ನಾಲ್ವರು ಕಂಡಕ್ಟರ್‌ಗಳನ್ನು ಸಾರಿಗೆ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ.
ವಂಚನೆಯ ಮಾದರಿ: ಶಕ್ತಿ ಟಿಕೆಟ್, ಪುರುಷರಿಂದ ಹಣ!
ಈ ಹಗರಣದ ಹಿಂದಿರುವ ಕಿಲಾಡಿ ಬುದ್ಧಿ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಕಂಡಕ್ಟರ್‌ಗಳು ಸ್ತ್ರೀಯರಿಗೆ ನೀಡುವ 'ಮಹಿಳೆಯರಿಗೆ ಉಚಿತ ಟಿಕೆಟ್' (ಶಕ್ತಿ ಯೋಜನೆ) ಅನ್ನು ಪುರುಷರಿಗೂ ವಿತರಿಸುತ್ತಿದ್ದರು. ಆ ಟಿಕೆಟ್ ಮೇಲೆ ಕನ್ನಡದಲ್ಲಿ 'ಮಹಿಳೆಯರಿಗೆ ಉಚಿತ ಟಿಕೆಟ್' ಎಂದು ಮುದ್ರಿತವಾಗಿರುತ್ತದೆ. ಆದರೆ, ಕನ್ನಡ ಓದಲು ಬಾರದ ಪರಭಾಷೆಯ ಪುರುಷ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು, ಅವರಿಗೆ ಈ ಉಚಿತ ಟಿಕೆಟ್ ನೀಡಿ ಪೂರ್ಣ ಹಣವನ್ನು ವಸೂಲಿ ಮಾಡುತ್ತಿದ್ದರು.
ಹಣವನ್ನು ನಗದು ರೂಪದಲ್ಲಿ ಪಡೆಯುವ ಬದಲು, ತಾವು ತಯಾರಿಸಿಕೊಂಡಿದ್ದ ಪೇಟಿಎಂ ಅಥವಾ ಫೋನ್-ಪೇ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವಂತೆ ಪ್ರಯಾಣಿಕರಿಗೆ ಸೂಚಿಸುತ್ತಿದ್ದರು. ಇದರಿಂದ ಸರ್ಕಾರಕ್ಕೆ ಸಲ್ಲಬೇಕಿದ್ದ ಟಿಕೆಟ್ ಹಣ ನೇರವಾಗಿ ಕಂಡಕ್ಟರ್‌ಗಳ ಜೇಬು ಸೇರುತ್ತಿತ್ತು.
ಪತ್ತೆಯಾದ ಕಿಲಾಡಿಗಳು ಇವರೇ ನೋಡಿ:
ಬಿಎಂಟಿಸಿ ತನಿಖಾಧಿಕಾರಿಗಳು ನಡೆಸಿದ ಆಕಸ್ಮಿಕ ತಪಾಸಣೆ ವೇಳೆ ಈ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಬಂಧಿತ ಕಂಡಕ್ಟರ್‌ಗಳ ಖಾತೆ ಹಿಸ್ಟರಿ ಪರಿಶೀಲಿಸಿದಾಗ ದೋಚಿದ ಹಣದ ಮೊತ್ತ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.
- ಮಂಜೇಗೌಡ: 54,358 ರೂಪಾಯಿ ಹಣವನ್ನು ಸ್ವಂತ ಖಾತೆಗೆ ಹಾಕಿಸಿಕೊಂಡಿದ್ದಾನೆ.
- ಸುರೇಶ್: ಇವನ ಖಾತೆಗೆ 47,257 ರೂಪಾಯಿ ಜಮೆಯಾಗಿದೆ.
- ಸುಪ್ರಿಯಾ (ಮಹಿಳಾ ಕಂಡಕ್ಟರ್): ಇವರು ಕೂಡಾ ಕಮ್ಮಿ ಇಲ್ಲ ಎನ್ನುವಂತೆ 33,000 ರೂಪಾಯಿ ಲಪಟಾಯಿಸಿದ್ದಾರೆ.
- ಅಶ್ವಕ್ ಖಾನ್: 3,206 ರೂಪಾಯಿಗಳನ್ನು ಅಕ್ರಮವಾಗಿ ಪಡೆದಿದ್ದಾನೆ.
ಹಗರಣ ಬಯಲಾಗಿದ್ದು ಹೇಗೆ?
ಬಿಎಂಟಿಸಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಬಸ್‌ನಲ್ಲಿ ತಪಾಸಣೆ ನಡೆಸುತ್ತಿದ್ದಾಗ, ಪುರುಷ ಪ್ರಯಾಣಿಕರ ಕೈಯಲ್ಲಿ 'ಶಕ್ತಿ' ಯೋಜನೆಯ ಪಿಂಕ್ ಟಿಕೆಟ್‌ಗಳು ಇರುವುದು ಕಂಡುಬಂದಿದೆ. ಅಧಿಕಾರಿಗಳು ಕೂಡಲೇ ಆ ಪ್ರಯಾಣಿಕರನ್ನು ವಿಚಾರಿಸಿದಾಗ, "ನಾವು ಕಂಡಕ್ಟರ್ ಕೊಟ್ಟ ಕ್ಯೂಆರ್ ಕೋಡ್‌ಗೆ ಹಣ ಪಾವತಿಸಿದ್ದೇವೆ" ಎಂದು ಉತ್ತರಿಸಿದ್ದಾರೆ. ಅಧಿಕಾರಿಗಳು ಆ ಕ್ಯೂಆರ್ ಕೋಡ್ ಪರಿಶೀಲಿಸಿದಾಗ ಅದು ಬಿಎಂಟಿಸಿ ಅಧಿಕೃತ ಖಾತೆಯ ಬದಲಿಗೆ ಕಂಡಕ್ಟರ್‌ನ ವೈಯಕ್ತಿಕ ಖಾತೆಗೆ ಲಿಂಕ್ ಆಗಿರುವುದು ಸಾಬೀತಾಗಿದೆ.
ಸದ್ಯ ಬಿಎಂಟಿಸಿ ಈ ಎಲ್ಲಾ ಕಂಡಕ್ಟರ್‌ಗಳನ್ನು ಅಮಾನತು ಮಾಡಿದ್ದು, ಇದೀಗ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಜೊತೆಗೆ, ಸಾರಿಗೆ ಇಲಾಖೆಯಾದ್ಯಂತ ಕ್ಯೂಆರ್ ಕೋಡ್ ವ್ಯವಸ್ಥೆಯ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಲು ಆದೇಶಿಸಿದೆ.


