ಉಕ್ರೇನ್‌ನಲ್ಲಿ ಮೃತಪಟ್ಟ ಕನ್ನಡಿಗ ನವೀನ್, ಸಾಂತ್ವನ ಹೇಳಿದ ಬೊಮ್ಮಾಯಿ, ಸಿದ್ದರಾಮಯ್ಯ
* ರಷ್ಯಾ-ಉಕ್ರೇನ್ ಯುದ್ಧದಲ್ಲಿ ಕರ್ನಾಟಕದ ವಿದ್ಯಾರ್ಥಿ ಬಲಿ
* ರಷ್ಯಾ ನಡೆಸಿದ ಶೆಲ್ ದಾಳಿಗೆ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ಸಾವು
* ಉಕ್ರೇನ್‌ನಲ್ಲಿ ಎಂಬಿಬಿಎಸ್ ಮಾಡುತ್ತಿದ್ದ ವಿದ್ಯಾರ್ಥಿ
ಬೆಂಗಳೂರು, (ಮಾ.01): ರಷ್ಯಾ ನಡೆಸಿದ ದಾಳಿಗೆ ಉಕ್ರೇನ್‌ನಲ್ಲಿದ್ದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಸಾವನ್ನಪಿದ್ದಾರೆ. ವಿಷಯ ತಿಳಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವೀನ್ ತಂದೆ ಶೇಖರಗೌಡ ಅವರಿಗೆ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.
ದೇವರು ನವೀನ್ ಅವರ ಆತ್ಮಕ್ಕೆ ಶಾಂತಿ ನೀಡಲಿ. ನೀವು ಧೈರ್ಯದಿಂದಿರಿ. ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆದಿದೆ. ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.
Ukraine-Russia War: ಕ್ಷಿಪಣಿ ದಾಳಿಗೆ ಬಲಿಯಾದ ನವೀನ್ ಮೃತದೇಹ ಭಾರತಕ್ಕೆ ತರೋದು ಅನುಮಾನ!
"
ಮಗನ ಬಗ್ಗೆ ದುಃಖದಿಂದ ಮಾತನಾಡಿದ ಶೇಖರಗೌಡ ಅವರು, ಇಂದು ಮುಂಜಾನೆ ತಮ್ಮ ಮಗ ದೂರವಾಣಿ ಕರೆ ಮಾಡಿದ್ದ. ಪ್ರತಿದಿನ ಎರಡು ಮೂರು ಬಾರಿ ದೂರವಾಣಿ ಮೂಲಕ ಮಾತಾಡುತ್ತಿದ್ದ ಎಂದು ವಿವರಿಸಿದರು.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಬೊಮ್ಮಾಯಿ, ಉಕ್ರೇನ್ ನಲ್ಲಿ ಶೆಲ್ ಗಳ ದಾಳಿಗೆ ಕರ್ನಾಟಕದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದು ಒಂದು ದುರಂತದ ಸಂಗತಿ, ಈ ಕುರಿತು ನವೀನ್ ಅವರ ತಂದೆ ಶೇಖರಗೌಡ ಅವರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದೇನೆ. ನವೀನ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಉಳಿದ ವಿಧ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.
ಇನ್ನು ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಹಾವೇರಿ ಮೂಲದ ನವೀನ್ ಎಂಬಾತ ಉಕ್ರೇನ್‌ನಲ್ಲಿ ರಷ್ಯಾ ದಾಳಿಗೆ ಬಲಿಯಾಗಿದ್ದಾನೆ ಎಂದು ತಿಳಿದು ತುಂಬಾ ದುಃಖವಾಗಿದೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿ ವಿಶ್ವಗುರು ಅಂತಾರೆ. ಆದರೆ ವಿದೇಶಾಂಗ ನೀತಿ ಹಳಿ ತಪ್ಪಿದೆ. ನಮ್ಮಲ್ಲಿ ವೈದ್ಯಕೀಯ ಸೀಟುಗಳ ಅಭಾವವಿದೆ. ಹಾಗಾಗಿ ವಿದೇಶಕ್ಕೆ ಓದಲು ಹೋಗಿದ್ದಾರೆ. ಅವರಿಗೆ ರಕ್ಷಣೆ ಕೊಟ್ಟು ಕರೆತರುವ ಕೆಲಸ ಸರ್ಕಾರದ್ದು. ಉಳಿದ ವಿದ್ಯಾರ್ಥಿಗಳನ್ನ ದೇಶಕ್ಕೆ ಕತೆತರಬೇಕು ಎಂದು ಆಗ್ರಹಿಸಿದರು
ಸಾವನ್ನಪ್ಪಿರುವ ನವೀನ್ ಸಿಎಂ ಜಿಲ್ಲೆಯವರು. ಸಿಎಂ ಜಿಲ್ಲೆಯವರು ಅನ್ನುವುದಕ್ಕಿಂತ ನಮ್ಮ ಕನ್ನಡಿಗರು. ಅವರಿಗೆ ಸಾಂತ್ವನ ಹೇಳುವ ಕೆಲಸ ಮೊದಲು ಮಾಡಲಿ. ನಮ್ಮಎಲ್ಲಾ ವಿದ್ಯಾರ್ಥಿಗಳು ಧೈರ್ಯವಾಗಿರಬೇಕು ಎಂದು ಹೇಳಿದರು.
ರಷ್ಯಾದ ಪಡೆಗಳು ಸೋಮವಾರ ಉಕ್ರೇನ್‌ನ ಎರಡನೇ ಅತಿದೊಡ್ಡ ನಗರದ ಮೇಲೆ ಬಾಂಬ್ ದಾಳಿಯನ್ನು ಮುಂದುವರೆಸಿದ್ದು, ಉಭಯ ದೇಶಗಳ ನಡುವಿನ ಮಾತುಕತೆಗಳು ವಿಫಲವಾಗಿದ್ದು ಈಗ ಬಂಡ ಮಾಹಿತಿಯ ಪ್ರಕಾರ ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ನವೀನ್ ಮತ್ತು ಅವನ ಸ್ನೇಹಿತ ಪಶ್ಚಿಮ ಗಡಿಯ ಎಲ್ವಿವ್‌ಗೆ ತೆರಳಲು ರೈಲು ನಿಲ್ದಾಣಕ್ಕೆ ತೆರಳಿದ್ದರು ಎಂದು ವರದಿಯಾಗಿದೆ.
ಮುಂದುವರಿದ ದಾಳಿಗಳ ನಡುವೆ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ವಿದ್ಯಾರ್ಥಿಗಳಿಗೆ ಕೀವ್‌ನಿಂದ ತಕ್ಷಣ ತೊರೆಯುವಂತೆ ಸೂಚಿಸಿದೆ. ಏತನ್ಮಧ್ಯೆ, ಖಾರ್ಕಿವ್‌ನಲ್ಲಿಯೂ ಭಾರೀ ಗುಂಡಿನ ದಾಳಿ ಪ್ರಾರಂಭವಾಗಿದೆ. ರಷ್ಯಾ ಖಾರ್ಕಿವ್ ಪ್ರಧಾನ ಕಛೇರಿಯ ಮೇಲೆ ಕ್ಷಿಪಣಿ ದಾಳಿ ಮಾಡಿತು. ಈ ದಾಳಿಯಲ್ಲಿ ಕಟ್ಟಡಗಳೆಲ್ಲ ಧ್ವಂಸಗೊಂಡಿವೆ. ಖಾರ್ಕಿವ್ ನಗರವನ್ನು ರಷ್ಯಾ ಭಾನುವಾರ ವಶಪಡಿಸಿಕೊಂಡಿದೆ. ಕೀವ್ ಅನ್ನು ನಿಯಂತ್ರಿಸಲು ರಷ್ಯಾ ಅತಿದೊಡ್ಡ ಮಿಲಿಟರಿ ತಂಡವನ್ನು ಕಳುಹಿಸಿದೆ.
ಕಳೆದ ಆರು ದಿನಗಳಿಂದ ರಷ್ಯಾದ ಉಕ್ರೇನ್ ಮೇಲಿನ ದಾಳಿಗಳ ನಡುವೆ, ಸಿಲುಕಿರುವ ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಭಾರತವು ವೇಗವಾಗಿ ಕೆಲಸ ಮಾಡುತ್ತಿದೆ. ಉಕ್ರೇನ್ ಬಿಕ್ಕಟ್ಟಿನ ಕುರಿತು ಪ್ರಧಾನಿ ಮೋದಿ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಮರಳಿ ಕರೆತರಲು ಆಪರೇಷನ್ ಗಂಗಾ ನಡೆಸುತ್ತಿರುವ ಬಗ್ಗೆ ಅವರು ಮಾಹಿತಿ ನೀಡಿದರು. ಸೋಮವಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆರಂಭಿಕ ಸಲಹೆಯನ್ನು ನೀಡಿದ ನಂತರ ಭಾರತವು 8,000 ಕ್ಕೂ ಹೆಚ್ಚು ನಾಗರಿಕರನ್ನು ಸ್ಥಳಾಂತರಿಸಿದೆ ಎಂದು ವರದಿ ಮಾಡಿದೆ.